BEML New Vehicle: ಬೆಮೆಲ್‌ನಿಂದ ಬಂತು ಭಾರೀ ಗಾತ್ರದ ಮೋಟಾರ್ ಗ್ರೇಡರ್; ಯಾವುದಕ್ಕೆಲ್ಲಾ ಬಳಸಬಹುದು ನೋಡಿ
BEML New Vehicle: ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮೆಲ್ ಸಂಸ್ಥೆಯ ಮೈಸೂರು ಘಟಕವು ದೇಶೀಯವಾಗಿ ವಿನ್ಯಾಸಗೊಳಿಸಲಾದ ಮೋಟಾರ್ ಗ್ರೇಡರ್ ಬಿಜಿ 1205 ಅನ್ನು ಬಿಡುಗಡೆ ಮಾಡಿದೆ.

BEML New Vehicle: ಭಾರತದಲ್ಲಿ ಬೃಹತ್ ಕಾಮಗಾರಿಗಳಿಗೆ ಈಗ ಬಗೆಬಗೆಯ ವಾಹನ ರೂಪದ ಯಂತ್ರೋಪಕರಣಗಳುಂಟು. ಈಗಾಗಲೇ ಜೆಸಿಬಿಯಂತಹ ಯಂತ್ರೋಪಕರಣಗಳನ್ನು ನೀವು ನೋಡಿರಬಹುದು. ಇವುಗಳೊಂದಿಗೆ ಹೊಸ ಸೇರ್ಪಡೆಗೊಂಡಿದೆ ನೂತನ ವಾಹನ. ಅದು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್( ಬಿಇಎಂಎಲ್)ನ ಮೈಸೂರಿನ ಘಟಕವು ರೂಪಿಸಿರುವ ವಿಭಿನ್ನ ಯಂತ್ರೋಪಕರಣ. ಭಾರತದ ಗಣಿಗಾರಿಕೆ ವಲಯವನ್ನು ಬಲಪಡಿಸಲು ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮೆಲ್ ಲಿಮಿಟೆಡ್ ದೇಶೀಯವಾಗಿ ವಿನ್ಯಾಸಗೊಳಿಸಲಾದ ಮೋಟಾರ್ ಗ್ರೇಡರ್ ಬಿಜಿ 1205 ಅನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಕಳೆದ ಒಂದು ದಶಕದಿಂದ ಭಾರತದಲ್ಲಿ ಚರ್ಚೆಯಲ್ಲಿರುವ ಭಾರತ ಸರ್ಕಾರದ ಆತ್ಮನಿರ್ಭರ ಯೋಜನೆಗೆ ಪೂರಕವಾಗಿಯೇ ಈ ವಾಹನವನ್ನು ರೂಪಿಸಿ ಬಳಕೆಗೆ ಒದಗಿಸಲಾಗುತ್ತಿದೆ.
ಭಾರತದ ಪ್ರಮುಖ ಗಣಿಗಾರಿಕೆ ಮತ್ತು ನಿರ್ಮಾಣ ಸಲಕರಣೆ ತಯಾರಕರಲ್ಲಿ ಬೆಮೆಲ್ ಸಂಸ್ಥೆಯು ಕಾಲಕಾಲಕ್ಕೆ ಹೊಸ ಹೊಸ ಯಂತ್ರೋಪಕರಣಗಳನ್ನು ಒದಗಿಸುತ್ತಿದೆ. ಬೆಮೆಲ್‌ನ ಪ್ರಮುಖ ಉತ್ಪಾದನಾ ಘಟಕಗಳಲ್ಲಿ ಒಂದಾದ ಮೈಸೂರಿನ ಸಂಕೀರ್ಣದಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಿದ ಮೋಟಾರ್ ಗ್ರೇಡರ್ ಬಿಜಿ 1205 ವಾಹನವನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಸಮಾರಂಭದಲ್ಲಿ ಬೆಮೆಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್, ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (SECL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರೀಶ್ ದುಹಾನ್ ಮತ್ತು ಬೆಮೆಲ್‌ನ ನಿರ್ದೇಶಕರು ಮತ್ತು ಅಧಿಕಾರಿಗಳು ಭಾಗಿಯಾದರು. ಗಣ್ಯರ ಸಮ್ಮುಖದಲ್ಲಿ ಉಪಕರಣಗಳ ಬಳಕೆಗೆ ಚಾಲನೆ ನೀಡಿದರು.
4-ಅಡಿ ಪ್ರಭಾವಶಾಲಿ ಬ್ಲೇಡ್‌ನೊಂದಿಗೆ ಸಜ್ಜುಗೊಂಡಿರುವ ಬಿಜಿ1205 ಅನ್ನು ಗಣಿಗಾರಿಕೆ ಕ್ಷೇತ್ರದ ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸಲು ಸೂಕ್ಷ್ಮವಾಗಿಯೇ ರಚಿಸಲಾಗಿದೆ. ಸಿಂಗ್ರೌಲಿಯಲ್ಲಿರುವ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್, ಬಿಲಾಸ್‌ಪುರ ಮತ್ತು ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (NCL) ನಂತಹ ಪ್ರದೇಶಗಳಲ್ಲಿ ಹೆಚ್ಚಿನ ತೀವ್ರತೆಯ ಕಾರ್ಯಾಚರಣೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಉಪಕರಣವಿದು. ಹೆಚ್ಚಿನ ಸಾಮರ್ಥ್ಯದ ಡಂಪರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ದಕ್ಷ ರಸ್ತೆ-ಹಾಕುವ ಯಂತ್ರೋಪಕರಣಗಳ ಹೆಚ್ಚುತ್ತಿರುವ ಅಗತ್ಯಕ್ಕೆ ಅನುಗುಣವಾಗಿದೆ. ಉತ್ತಮ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ, ಬಜಿ 1205 ಉತ್ಪಾದಕತೆಯನ್ನು ಹೆಚ್ಚಿಸಲು, ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳ ಸುಸ್ಥಿರತೆಗೆ ಗಮನಾರ್ಹವಾಗಿ ಕೊಡುಗೆ ನೀಡಲು ಸಿದ್ಧವಾಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಪ್ರಮುಖ ಬಹು-ತಂತ್ರಜ್ಞಾನ 'ಶೆಡ್ಯೂಲ್ ಎ' ಕಂಪನಿಯಾದ ಬೆಮೆಲ್ ಲಿಮಿಟೆಡ್, ರಕ್ಷಣಾ, ರೈಲು, ವಿದ್ಯುತ್, ಗಣಿಗಾರಿಕೆ ಮತ್ತು ನಿರ್ಮಾಣ ಸೇರಿದಂತೆ ಭಾರತದ ಪ್ರಮುಖ ವಲಯಗಳಿಗೆ ಸೇವೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಮೆಲ್ ಮುಖ್ಯವಾಗಿ ಮೂರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ: ರಕ್ಷಣಾ ಮತ್ತು ಏರೋಸ್ಪೇಸ್, ಗಣಿಗಾರಿಕೆ ಮತ್ತು ನಿರ್ಮಾಣ, ಮತ್ತು ರೈಲು ಮತ್ತು ಮೆಟ್ರೋ. ಬೆಂಗಳೂರು, ಕೋಲಾರ ಚಿನ್ನದ ಗಣಿ (ಕೆಜಿಎಫ್), ಮೈಸೂರು ಮತ್ತು ಪಾಲಕ್ಕಾಡ್‌ನಲ್ಲಿರುವ ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದ್ದು, ಬಲವಾದ ಆರ್ ಅಂಡ್ ಡಿ ಮೂಲಸೌಕರ್ಯ ಮತ್ತು ರಾಷ್ಟ್ರವ್ಯಾಪಿ ಮಾರಾಟ ಮತ್ತು ಸೇವಾ ಜಾಲವನ್ನು ಹೊಂದಿದೆ. ಆರು ದಶಕಗಳ ಪರಂಪರೆಯೊಂದಿಗೆ, ಬೆಮೆಲ್ ಭೂ ಚಲನೆ, ಸಾರಿಗೆ ಮತ್ತು ನಿರ್ಮಾಣ ಉಪಕರಣಗಳ ತಯಾರಿಕೆ, ಚಾಲನಾ ಶ್ರೇಷ್ಠತೆ ಮತ್ತು ನಾವೀನ್ಯತೆಯೊಂದಿಗೆ ಈಗಿನ ಅಗತ್ಯತೆಗಳಿಗೆ ಅನುಗುಣವಾಗಿ ಯಂತ್ರೋಪಕರಣ, ಸೇವೆ ಒದಗಿಸುವ ಸಂಸ್ಥೆಯಾಗಿ ರೂಪುಗೊಂಡಿದೆ.
ಈ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಬೆಮೆಲ್ ಅಧ್ಯಕ್ಷ ಶಾಂತನು ರಾಯ್, ಹೊಸ ಯಂತ್ರೋಪಕರಣವು ಗಣಿಗಾರಿಕೆ ವಲಯದ ಭವಿಷ್ಯಕ್ಕೆ ಪೂರಕವಾಗುವಂತಹ ಆಧುನಿಕ ಉಪಕರಣಗಳನ್ನು ನಿರ್ಮಿಸಲು ನಮ್ಮ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಯ ದ್ಯೋತಕ ಎನ್ನಿಸಿದೆ. ತಾಂತ್ರಿಕ ನಾವೀನ್ಯತೆಗಾಗಿ ಮಾತ್ರವಲ್ಲದೆ ಗಣಿಗಾರಿಕೆ ಉದ್ಯಮದಲ್ಲಿ ನಮ್ಮ ಪಾಲುದಾರರನ್ನು ಸಬಲೀಕರಣಗೊಳಿಸುವ ಸಮರ್ಪಣೆಯನ್ನು ಪ್ರತಿಬಿಂಬಿಸುವ ಹೆಮ್ಮೆಯ ಕ್ಷಣವೂ ಹೌದು. ಭಾರತದ ಗಣಿಗಾರಿಕೆ ಮೂಲಸೌಕರ್ಯವನ್ನು ಬಲಪಡಿಸುವ ಈ ಐಕಾನಿಕ್ ಉಪಕರಣವನ್ನು ಅಭಿವೃದ್ಧಿಪಡಿಸಲು ನೀಡಿದ ಬೆಂಬಲ ಮತ್ತು ಅವಕಾಶಕ್ಕಾಗಿ ಸಿಇಸಿಎಲ್ ನಾವು ಆಭಾರಿ ಎಂದರು.
ಭಾರತದ ಗಣಿಗಾರಿಕೆ ವಲಯವು ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸಲು ಆಧುನೀಕರಿಸಿದ ಉಪಕರಣಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಸಾಕ್ಷಿಯಾಗುತ್ತಿದ್ದಂತೆ ಬಿಜಿ 1205 ವಲಯದ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಮತ್ತು ಆಮದು ಮಾಡಿಕೊಂಡ ಗಣಿಗಾರಿಕೆ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಕೋಲ್ ಇಂಡಿಯಾ ಲಿಮಿಟೆಡ್‌ನ ದೃಷ್ಟಿಕೋನವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರೊಂದಿಗೆ ಬೆಮೆಲ್ ಸ್ಥಳೀಯ ಉತ್ಪಾದನೆಯಲ್ಲಿ ತನ್ನ ನಾಯಕತ್ವವನ್ನು ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸುವುದನ್ನು ಮುಂದುವರಿಸಿದೆ ಎಂದರು ಹರೀಶ್ ದುಹಾನ್.
