Metro vs BMTC: ನಮ್ಮ ಮೆಟ್ರೋ ಪಾಸ್‌ಗೆ ವರ್ಷಕ್ಕೆ 41,600 ರೂ; ಬಿಎಂಟಿಸಿ ಎಸಿ ಪಾಸ್ 24,000; ದುಪ್ಪಟ್ಟು ದರ, ಪ್ರಯಾಣಿಕರು ಶಿಫ್ಟ್
ನಮ್ಮ ಮೆಟ್ರೋ ಪ್ರಯಾಣಿಕರು ಬೆಂಗಳೂರು ನಗರದ ಬಿಎಂಟಿಸಿ ಎಸಿ ಬಸ್ ಪ್ರಯಾಣಿಕರು ವಾರ್ಷಿಕವಾಗಿ ಮಾಡುವ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ಮೆಟ್ರೋ ಪ್ರಯಾಣಕ್ಕಾಗಿ ವ್ಯಯಿಸುತ್ತಿದ್ದಾರೆ. ಮೆಟ್ರೋಗಿಂತ ಬಸ್ ಪ್ರಯಾಣವು ಅಗ್ಗವಾಗಿದ್ದು, ಜನರು ಅದರತ್ತ ಒಲವು ತೋರಿಸುತ್ತಿದ್ದಾರೆ.

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಮೆಟ್ರೋ ರೈಲು ಪ್ರಯಾಣ ಸಾಮಾನ್ಯವಾಗಿ ಅಗ್ಗವಾಗಿರುತ್ತದೆ. ಆದರೆ ನಮ್ಮ ಮೆಟ್ರೋ ಪ್ರಯಾಣವು ಭಾರತದಲ್ಲೇ ಅತ್ಯಂತ ದುಬಾರಿ ಎನಿಸಿದೆ. ಪ್ರಯಾಣ ದರವನ್ನು ಏರಿಕೆ ಮಾಡಿರುವ ಬೆನ್ನಲ್ಲೇ, ನಮ್ಮ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಇದೇ ವೇಳೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಕಾರಣವೂ ಇದೆ.
ನಮ್ಮ ಮೆಟ್ರೋ ಪ್ರಯಾಣಿಕರು ನಗರದ ಬಿಎಂಟಿಸಿ ಎಸಿ ಬಸ್ ಪ್ರಯಾಣಿಕರು ವಾರ್ಷಿಕವಾಗಿ ಮಾಡುವ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ಮೆಟ್ರೋ ಪ್ರಯಾಣಕ್ಕಾಗಿ ವ್ಯಯಿಸುತ್ತಿದ್ದಾರೆ. ಬಸ್ ಪ್ರಯಾಣವು ಅಗ್ಗವಾಗಿದ್ದು, ಜನರು ಅದರತ್ತ ಒಲವು ತೋರಿಸುತ್ತಿದ್ದಾರೆ.
ಮೆಟ್ರೋ ಪ್ರಯಾಣ ದರ ಏರಿಸಿದ ನಂತರ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಹಲವರು ಬಿಎಂಟಿಸಿ ಬಸ್ ಅವಲಂಬಿಸಿದ್ದಾರೆ. ಹಲವಾರು ಪ್ರಯಾಣಿಕರು ಈ ಎರಡು ಸಮೂಹ ಸಾರಿಗೆ ವ್ಯವಸ್ಥೆ ನಡುವೆ ವೆಚ್ಚಗಳಲ್ಲಿ ಆಗುವ ವ್ಯತ್ಯಾಸದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ದರಗಳಲ್ಲಿ ಭಾರಿ ವ್ಯತ್ಯಾಸ
ದೂರದ ಪ್ರಯಾಣಕ್ಕಾಗಿ ಮೆಟ್ರೋವನ್ನು ಅವಲಂಬಿಸುವ ಮತ್ತು ಪ್ರತಿ ವಾರ ಐದು ದಿನಗಳ ಪಾಸ್ ಖರೀದಿಸಿ ಹೋಗುವವರು ವರ್ಷಕ್ಕೆ 41,600 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಮೆಟ್ರೋ ಪಾಸ್ ಬಿಎಂಟಿಸಿಗಿಂತ ದುಬಾರಿ. ಬಿಎಂಟಿಸಿಯ ಮಾಸಿಕ ಪಾಸ್ 2,000 ರೂ.ಗಳಿಗೆ ಲಭ್ಯವಿದೆ. ಅಂದರೆ ವರ್ಷಕ್ಕೆ ಹೆಚ್ಚೆಂದರೆ 24,000 ರೂಪಾಯಿ ಒಳಗೆ ವಾರ್ಷಿಕ ಖರ್ಚು ಮುಗಿಯುತ್ತದೆ. ಇದಲ್ಲದೆ, ಬಿಎಂಟಿಸಿಯ ಮಾಸಿಕ ಎಸಿ ಪಾಸ್ ಪಡೆದ ಪ್ರಯಾಣಿಕರಿಗೆ ಎಲ್ಲಾ ಬಸ್‌ಗಳಲ್ಲಿ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಯು ವಜ್ರ ಬಸ್‌ಗಳನ್ನು ಹೊರತುಪಡಿಸಿ) ತಿಂಗಳ ಎಲ್ಲಾ ದಿನಗಳಲ್ಲಿ ಹಲವು ಬಾರಿ ಪ್ರಯಾಣಿಸಬಹುದು.
ಬಿಎಂಆರ್‌ಸಿಎಲ್ ಪ್ರಸ್ತುತ ಒಂದು, ಮೂರು ಮತ್ತು ಐದು ದಿನಗಳವರೆಗೆ ಮಾತ್ರ ಪಾಸ್‌ಗಳನ್ನು ನೀಡುತ್ತದೆ. ಇದು ಪ್ರಯಾಣಿಕರಿಗೆ ದುಬಾರಿಯಾಗುತ್ತವೆ. "ಅಲ್ಪಾವಧಿಯ ಪಾಸ್‌ಗಳಿಂದ ಮೆಟ್ರೋ ರೈಲುಗಳಲ್ಲಿ ನಿಯಮಿತ ಮತ್ತು ದೂರದ ಪ್ರಯಾಣಿಕರು ದುಬಾರಿ ಮೊತ್ತ ಪಾವತಿಸಬೇಕಾಗಿ ಬರುತ್ತದೆ" ಎಂದು ಕಾಡುಗೋಡಿ ನಿವಾಸಿ ವರುಣ್ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.
ಮೆಟ್ರೋ vs ಬಿಎಂಟಿಸಿ ಪ್ರಯಾಣ ವೆಚ್ಚ
- ನಮ್ಮ ಮೆಟ್ರೋ ಮೂಲಕ ನಗರದ ಒಂದು ಬದಿಯಿಂದ ಮತ್ತೊಂದು ಕಡೆಗೆ ವಾರಕ್ಕೆ ಐದು ದಿನ ಪ್ರಯಾಣಿಸಲು ಆಗುವ ವೆಚ್ಚದ ವಿವರ ಇಲ್ಲಿದೆ.
- ದೂರದ ಪ್ರಯಾಣ (ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟ ಅಥವಾ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್) ದಿನಕ್ಕೆ 180 ರೂ.
- ಐದು ದಿನಗಳ ಪಾಸ್‌ಗೆ 800 ರೂ. (750 ರೂ. ದರ + 50 ರೂ. ಠೇವಣಿ). ಈ ವೆಚ್ಚವು ದಿನಕ್ಕೆ 160 ರೂ. ಬೀಳುವುದರಿಂದ ಸ್ವಲ್ಪ ಕಡಿಮೆಯಾಗುತ್ತದೆ.
- ಒಂದು ವರ್ಷಕ್ಕೆ (52 ವಾರಗಳು) ಲೆಕ್ಕ ಹಾಕಿದರೆ 41,600 ರೂ.ಗಳಾಗುತ್ತದೆ.
ಬಿಎಂಟಿಸಿ ಬಸ್
ಎಸಿ ಬಸ್ ಮಾಸಿಕ ಪಾಸ್ (ತಿಂಗಳ ಎಲ್ಲಾ ದಿನಗಳಲ್ಲಿ ಅನಿಯಮಿತ ಪ್ರಯಾಣ) - 2,000 ರೂ.
ಒಂದು ವರ್ಷಕ್ಕೆ ಆಗುವ ಒಟ್ಟು ವೆಚ್ಚ 24,000 ರೂ.
ಎಸಿ ಅಲ್ಲದ ಬಸ್ ಪಾಸ್ ಇನ್ನೂ ಅಗ್ಗ. ಇದರ ಬೆಲೆ ತಿಂಗಳಿಗೆ ರೂ. 1,200 ರೂ. ಮಾತ್ರ. ಅಂದರೆ ವರ್ಷಕ್ಕೆ 14,400 ರೂ.
ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ನಿತ್ಯ ಸರಾಸರಿ 1 ಲಕ್ಷ ಏರಿಕೆ
ಮೆಟ್ರೋ ಪ್ರಯಾಣ ದರ ಏರಿಸಿದ ಬೆನ್ನಲ್ಲೇ, ನಿತ್ಯ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳ ಮೊರೆ ಹೋಗುತ್ತಿದ್ದಾರೆ. ಪ್ರತಿನಿತ್ಯ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಸರಾಸರಿ ಒಂದು ಲಕ್ಷದಷ್ಟು ಹೆಚ್ಚಳವಾಗಿದೆ. ಫೆ.9ರಂದು ನಮ್ಮ ಮೆಟ್ರೋ ದರ ಏರಿಕೆ ಜಾರಿಗೆ ಬಂದಿತ್ತು. ಅದಕ್ಕೂ ಹಿಂದೆ ಒಂದು ತಿಂಗಳ ಎಲ್ಲಾ ಸೋಮವಾರ ದಿನ ಪ್ರಯಾಣಿಸಿದ ಪ್ರಯಾಣಿಕರ ಸರಾಸರಿ ಸಂಖ್ಯೆ 36.24 ಲಕ್ಷ ಇತ್ತು. ದರ ಏರಿಕೆ ಬಳಿಕ ಮೊದ ಸೋಮವಾರವೇ 37.22 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಹೆಚ್ಚು ಕಡಿಮೆ 1 ಲಕ್ಷ ಹೆಚ್ಚಳವಾಗಿದೆ.
ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆ
ದರ ಏರಿಕೆ ಬಳಿಕ, ಮೆಟ್ರೋ ಹತ್ತಲು ಜನರು ಹಿಂದೇಟು ಹಾಕುತ್ತಿದ್ದಾರೆ. ರಜಾದಿನವಾದ ಭಾನುವಾರ ಮೆಟ್ರೋದಲ್ಲಿ ಸಾಮಾನ್ಯವಾಗಿ ಸರಾಸರಿ 7 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಆದರೆ, ಫೆ.9ರಂದು 6.23 ಲಕ್ಷ ಜನ ಮಾತ್ರ ಪ್ರಯಾಣಿಸಿದ್ದರು. ದರ ಏರಿಕೆ ಮುನ್ನ ಸೋಮವಾರದಿಂದ ಶುಕ್ರವಾರದವರೆಗೆ ಪ್ರಯಾಣಿಕರ ಸರಾಸರಿ ಸಂಖ್ಯೆ 8.5 ಲಕ್ಷವಿತ್ತು. ದರ ಏರಿಕೆ ಬಳಿಕ ಈ ಪ್ರಮಾಣ 7.63ಕ್ಕೆ ಇಳಿದಿದೆ. ಸರಾಸರಿ 1 ಲಕ್ಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಮೇಲ್ನೋಟಕ್ಕೆ ಈ ಪ್ರಯಾಣಿಕರು ಬಿಎಂಟಿಸಿಯತ್ತ ವಾಲಿರುವುದು ಕಂಡುಬರುತ್ತಿದೆ.
