ಬೆಂಗಳೂರು: 52 ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಶೀಟ್ ಬಳಕೆ ಪತ್ತೆ, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ರು ಆರೋಗ್ಯ ಸಚಿವ
ಕರ್ನಾಟಕದ 251 ಹೋಟೆಲ್‌ಗಳಲ್ಲಿ ಇಡ್ಲಿ ಸ್ಯಾಂಪಲ್ ಸಂಗ್ರಹಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ 52 ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಶೀಟ್ ಬಳಸಿ ಇಡ್ಲಿ ಬೇಯಿಸಿರುವುದು ಗಮನಕ್ಕೆ ಬಂದಿದೆ. ಇನ್ನು ಪ್ಲಾಸ್ಟಿಕ್ ಶೀಟ್ ಬಳಸುವಂತೆ ಇಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರು: ಇಡ್ಲಿ ಪ್ರಿಯರ ಮಟ್ಟಿಗೆ ಇದು ಕಳವಳಕಾರಿ ಸುದ್ದಿ, ಕರ್ನಾಟಕದ 52 ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಪಾಲಿಥೀನ್ ಕವರ್ (ಪ್ಲಾಸ್ಟಿಕ್ ಶೀಟ್) ಬಳಸುತ್ತಿರುವುದು ಕಂಡುಬಂದಿದೆ. ಪ್ಲಾಸ್ಟಿಕ್ ಶೀಟ್‌ಗಳು ವಿಶೇಷವಾಗಿ ತೆಳುವಾದ ಪಾಲಿಥೀನ್ ಕವರ್ ಬಹಳ ಅಪಾಯಕಾರಿ ಎಂದು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ಮೂಲಕ ಇಡ್ಲಿ ಸ್ಯಾಂಪಲ್‌ಗಳಲ್ಲಿ ಕಾರ್ಸಿನೋಜೆನ್ ಅಂಶ ಇರುವುದು ಬಹಿರಂಗವಾದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ ಈ ವಿಚಾರ ತಿಳಿಸಿದರು.
ಕರ್ನಾಟಕದ 251 ಕಡೆ ಇಡ್ಲಿ ಸ್ಯಾಂಪಲ್ ಸಂಗ್ರಹಿಸಿದ ಆಹಾರ ಇಲಾಖೆ
ಆಹಾರ ಇಲಾಖೆ ಅಧಿಕಾರಿಗಳು ಕರ್ನಾಟಕ 251 ಕಡೆ ಇಡ್ಲಿ ಸ್ಯಾಂಪಲ್ ಸಂಗ್ರಹಿಸಿದ್ದರು. ಈ ಪೈಕಿ 52 ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಪಾಲಿಥೀನ್ ಶೀಟ್ (ಪ್ಲಾಸ್ಟಿಕ್ ಶೀಟ್) ಬಳಸುತ್ತಿರುವುದು ಕಂಡುಬಂದಿದೆ. ಪ್ಲಾಸ್ಟಿಕ್ ಶೀಟ್‌ಗಳು ವಿಶೇಷವಾಗಿ ತೆಳುವಾದ ಪಾಲಿಥೀನ್ ಶೀಟ್‌ನಲ್ಲಿ ಕಾರ್ಸಿನೋಜೆನ್ ಅಂಶಗಳಿರುವುದು ಈಗಾಗಲೇ ಬಹಿರಂಗವಾಗಿದೆ. ಆದ್ದರಿಂದ ಹೋಟೆಲ್ ಇಂಡಸ್ಟ್ರಿಯಲ್ಲಿ ಆಹಾರ ತಯಾರಿಕೆಗೆ ಈ ರೀತಿ ಪ್ಲಾಸ್ಟಿಕ್ ಶೀಟ್ ಬಳಸುವುದಕ್ಕೆ ತಡೆಯೊಡ್ಡಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಈ ಹಿಂದೆ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸುವ ಟ್ರೇಗೆ ಬಟ್ಟೆಯನ್ನು ಬಳಸುತ್ತಿದ್ದರು. ಹೋಟೆಲ್‌ನವರು ಬಟ್ಟೆಯ ಬದಲು ಪ್ಲಾಸ್ಟಿಕ್ ಶೀಟ್ ಬಳಸುತ್ತಿರುವ ವಿಚಾರ ಇತ್ತೀಚೆಗೆ ಗಮನಕ್ಕೆ ಬಂತು. ಹಾಗಾಗಿ ನಮ್ಮ ಇಲಾಖೆಯ ಅಧಿಕಾರಿಗಳು ವಿವಿಧ ಕಡೆಗೆ ಹೋಗಿ ಸ್ಯಾಂಪಲ್ ಸಂಗ್ರಹಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ, ಕೊನೆಗೆ 251 ಹೋಟೆಲ್‌ಗಳಿಂದ ಇಡ್ಲಿ ಸ್ಯಾಂಪ್ ಸಂಗ್ರಹಿಸಲಾಗಿತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾಗಿ ವರದಿ ಹೇಳಿದೆ.
ಹೋಟೆಲ್‌ನವರಿಗೆ ಗೊತ್ತಿದ್ದರೆ ಅವರು ಪ್ಲಾಸ್ಟಿಕ್ ಶೀಟ್ ಬಳಸುತ್ತಿರಲಿಲ್ಲ - ಸಚಿವ
ಪ್ಲಾಸ್ಟಿಕ್ ಶೀಟ್ (ಪಾಲಿಥೀನ್ ಶೀಟ್)ಗಳಲ್ಲಿ ಕಾರ್ಸಿನೋಜೆನ್ ಅಂಶಗಳಿವೆ. ಅದು ಶರೀರಕ್ಕೆ ಸೇರಿದರೆ ಕ್ಯಾನ್ಸರ್ ಉಂಟಾಗುತ್ತದೆ ಎಂಬ ಅಂಶ ಹೋಟೆಲ್ ಉದ್ಯಮದವರಿಗೆ ಗೊತ್ತಿದ್ದರೆ ಅವರು ಈ ರೀತಿ ಮಾಡುತ್ತಿರಲಿಲ್ಲ. ಇಡ್ಲಿ ಬೇಯಿಸುವಾಗ ಪ್ಲಾಸ್ಟಿಕ್ ಶೀಟ್ ಹಾಕಿ ಬೇಯಿಸಿದರೆ ಅದರಲ್ಲಿದ್ದ ರಾಸಾಯನಿಕ ಅಂಶ ಇಡ್ಲಿ ಸೇರುತ್ತದೆ ಎಂಬುದು ಅವರ ಅರಿವಿಗೆ ಬಂದಿರಲಿಕ್ಕಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆದಾಗ್ಯೂ, ಪ್ಲಾಸ್ಟಿಕ್ ಶೀಟ್ ಬಳಸುವುದು ಸರಿಯಲ್ಲ. ತಿಂಡಿ ತಿನ್ನುವುದಕ್ಕಾಗಲೀ, ಇಡ್ಲಿ ಬೇಯಿಸುವುದಕ್ಕಾಗಲೂ ಪ್ಲಾಸ್ಟಿಕ್ ಶೀಟ್ ಬಳಸುವುದು ಸರಿಯಾಧ ಕ್ರಮವಲ್ಲ. ಆರೋಗ್ಯಕ್ಕೂ ಅಪಾಯಕಾರಿ ಎಂದು ಅವರು ಹೇಳಿದರು.