ಬೆಂಗಳೂರು ಏರ್‌ಶೋಗೆ ಇಂದು ತೆರೆ; ಲೋಹದ ಹಕ್ಕಿ ಹಾರಾಟ ವೀಕ್ಷಣೆಗೆ ಕೊನೆಯ ಅವಕಾಶ, ಇಂದು ಹಾರಾಟ ನಡೆಸುವ ವಿಮಾನಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಏರ್‌ಶೋಗೆ ಇಂದು ತೆರೆ; ಲೋಹದ ಹಕ್ಕಿ ಹಾರಾಟ ವೀಕ್ಷಣೆಗೆ ಕೊನೆಯ ಅವಕಾಶ, ಇಂದು ಹಾರಾಟ ನಡೆಸುವ ವಿಮಾನಗಳಿವು

ಬೆಂಗಳೂರು ಏರ್‌ಶೋಗೆ ಇಂದು ತೆರೆ; ಲೋಹದ ಹಕ್ಕಿ ಹಾರಾಟ ವೀಕ್ಷಣೆಗೆ ಕೊನೆಯ ಅವಕಾಶ, ಇಂದು ಹಾರಾಟ ನಡೆಸುವ ವಿಮಾನಗಳಿವು

ಆಗಸದಲ್ಲಿ ಮೈನವಿರೇಳಿಸುವ ವೈಮಾನಿಕ ಪ್ರದರ್ಶನ ವೀಕ್ಷಿಸಲು ಇಂದು ಕೊನೆಯ ದಿನವಾಗಿದೆ. ಇಂದು ಕೂಡಾ ಎರಡು ಹಂತಗಳಲ್ಲಿ ವೈಮಾನಿಕ ಪ್ರದರ್ಶನಗಳು ನಡೆಯುತ್ತವೆ. ಕೊನೆಯ ದಿನ ಲಕ್ಷಾಂತರ ಜನರು ಬರುವ ನಿರೀಕ್ಷೆ ಇದೆ.

ಬೆಂಗಳೂರು ಏರ್‌ಶೋಗೆ ಇಂದು ತೆರೆ; ಲೋಹದ ಹಕ್ಕಿ ಹಾರಾಟ ವೀಕ್ಷಣೆಗೆ ಕೊನೆಯ ಅವಕಾಶ
ಬೆಂಗಳೂರು ಏರ್‌ಶೋಗೆ ಇಂದು ತೆರೆ; ಲೋಹದ ಹಕ್ಕಿ ಹಾರಾಟ ವೀಕ್ಷಣೆಗೆ ಕೊನೆಯ ಅವಕಾಶ (AFP)

ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯಾದ ಅತಿ ದೊಡ್ಡ ಏರ್‌ಶೋಗೆ ಇಂದು (ಫೆ. 14) ತೆರೆ ಬೀಳಲಿದೆ. ಕಳೆದ 4 ದಿನಗಳಿಂದ ಯಲಂಹಂಕಾದ ವಾಯುನೆಲೆಯಲ್ಲಿ ನಡೆಯುತ್ತಿರುವ 15ನೇ ಏರೋ ಇಂಡಿಯಾ, ಫೆ.14ರ ಶುಕ್ರವಾರ ಸಂಜೆ ಮುಕ್ತಾಯಗೊಳ್ಳಲಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ವೀಕ್ಷಿಸಲು ಈ ದಿನ ಕೊನೆಯ ಅವಕಾಶವಾಗಿದೆ. ಐದು ದಿನಗಳ ಕಾಲ ನಡೆಯುವ ಈ ಏರ್‌ಶೋನಲ್ಲಿ ಕೊನೆಯ ಎರಡು ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಅವಕಾಶ ಕಲ್ಪಿಸಲಾಗಿದೆ. ಇಂದು ಕೊನೆಯ ದಿನವಾಗಿರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ.

ಎರಡು ಹಂತಗಳಲ್ಲಿ ವೈಮಾನಿಕ ಪ್ರದರ್ಶನಗಳು ನಡೆಯುತ್ತವೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12‌ ಗಂಟೆಯವರೆಗೆ ಮೊದಲ ಹಂತ, ಮಧ್ಯಾಹ್ನ 2.30ರಿಂದ ಸಂಜೆ 4.40ರವರೆಗೆ ಎರಡನೇ ಹಂತದ ವಿಮಾನ ಹಾರಾಟಗಳು ನಡೆಯಲಿವೆ.

ಏರ್‌ಶೋ ವೀಕ್ಷಿಸಬೇಕಾದರೆ ಭದ್ರತಾ ತಪಾಸಣೆಗಳನ್ನು ಕಟ್ಟುನಿಟ್ಟಾಗಿರುತ್ತದೆ. ಹೀಗಾಗಿ ಸಂದರ್ಶಕರು ಮಾನ್ಯವಾಗಿರುವ ಯಾವುದಾದರೂ ಸರ್ಕಾರಿ ಐಡಿಯನ್ನು ಹೊಂದಿರಬೇಕು.

ಟಿಕೆಟ್‌ ಪಡೆಯಬೇಕು

ಏರ್‌ ಶೋ ವೀಕ್ಷಿಸಬೇಕಾದರೆ ಮುಂಚಿತವಾಗಿ ಪಾಸ್‌ ಪಡೆಯಬೇಕು. ಏರೋ ಇಂಡಿಯಾದ ಅಧಿಕೃತ ವೆನ್‌ಸೈಟ್‌ನಲ್ಲಿ "Visitor Registration" ವಿಭಾಗಕ್ಕೆ ಭೇಟಿ ನೀಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಜನರಲ್ ವಿಸಿಟರ್ ಪಾಸ್ ಪಡೆದವರು ಫೆ. 13-14ರಂದು ಪ್ರದರ್ಶನ ಮತ್ತು ಎಡಿವಿಎ ಎರಡಕ್ಕೂ ಪ್ರವೇಶ ಪಡೆಯಬಹುದು. ಇದಕ್ಕೆ ಭಾರತೀಯರಿಗೆ 2,500 ರೂ. ದರ‌ ನಿಗದಿಪಡಿಸಲಾಗಿದೆ. ಎಡಿವಿಎ ಪಾಸ್ ವೆಚ್ಚವು 1,000 ಆಗಿದ್ದು, ಫೆ. 11ರಿಂದ 14ರವರೆಗೆ ವಾಯು ಪ್ರದರ್ಶನ ವೀಕ್ಷಣೆ ಪ್ರದೇಶಕ್ಕೆ ಪ್ರವೇಶಿಸಬಹುದು.

ಏರ್‌ಶೋ ನೋಡಲು ತೆರಳುವವರು ತಮ್ಮ ಪಾಸ್ ಅಥವಾ ಟಿಕೆಟ್‌ನಲ್ಲಿ ನಮೂದಾಗಿರುವ ಕ್ಯೂಆರ್ ಕೋಡ್‌ನಲ್ಲಿ ಉಲ್ಲೇಖಿಸಿರುವಂತೆ, ಗೊತ್ತುಪಡಿಸಿದ ಮಾರ್ಗವನ್ನೇ ಅನುಸರಿಸಬೇಕು. ನಿಯೋಜಿತ ಮಾರ್ಗದ ಹೊರತಾಗಿ ಬೇರೆ ಮಾರ್ಗವನ್ನು ಅನುಮತಿಸಲಾಗುವುದಿಲ್ಲ.

ಪಾರ್ಕಿಂಗ್ ಮಾರ್ಗಸೂಚಿ ಅನುಸರಿಸಿ

ಏರ್‌ಶೋ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಿದೆ. ಹೀಗಾಗಿ‌ ಟ್ರಾಫಿಕ್‌ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಒಳ್ಳೆಯದು. ಪಾರ್ಕಿಂಗ್ ಪಾಸ್ ಹೊಂದಿರುವವರು ವಿಮಾನ ನಿಲ್ದಾಣ ರಸ್ತೆಯನ್ನು ತೆಗೆದುಕೊಂಡು, ಐಎಎಫ್ ಹುಣಸೇಮಾರನಹಳ್ಳಿಯ ಫ್ಲೈಓವರ್ ದಾಟಿ ಯು-ಟರ್ನ್ ತೆಗೆದುಕೊಳ್ಳಬೇಕು. ಸರ್ವಿಸ್ ರಸ್ತೆ ಮೂಲಕ ಗೇಟ್ ಸಂಖ್ಯೆ 05ಕ್ಕೆ ಎಂಟ್ರಿ ಕೊಡಬೇಕು. ನಿರ್ಗಮಿಸುವಾಗ ರೇವಾ ಕಾಲೇಜು ಜಂಕ್ಷನ್ ಮೂಲಕ ಗೇಟ್ ಸಂಖ್ಯೆ 05ಎ ಬಳಸಬೇಕು. ಪಾರ್ಕಿಂಗ್ ಪಾಸ್ ಇಲ್ಲದವರಾದರೆ, ಜಿಕೆವಿಕೆ ಕ್ಯಾಂಪಸ್ ಅಥವಾ ಜಕ್ಕೂರು ವಾಯುನೆಲೆಯಲ್ಲಿ ವಾಹನ ನಿಲುಗಡೆ ಮಾಡಬಹುದು. ಅಲ್ಲಿಂದ ಉಚಿತ ಬಿಎಂಟಿಸಿ ಶಟಲ್ ಬಸ್ಸುಗಳು ಲಭ್ಯವಿರುತ್ತವೆ.

ಇಂದು ಹಾರಾಟ ನಡೆಸುವ ವಿಮಾನಗಳು

ಕೊನೆಯ ದಿನವಾದ ಇಂದು ಅಮೆರಿಕದ ಎಫ್‌ 35, ರಷ್ಯಾದ ಎಸ್‌ಯು 57, ಭಾರತದ ತೇಜಸ್‌, ಅಮೆರಿಕದ ಎಫ್‌ 16, ಎಸ್‌ಯು 30 ಸೇರಿದಂತೆ ಸೂರ್ಯಕಿರಣ ವಿಮಾನಗಳು ಬಾನಂಗಳದಲ್ಲಿ ಶಕ್ತಿ ಪ್ರದರ್ಶನ ಮಾಡಲಿವೆ.

ಆಗಸದಲ್ಲಿ ಮೈನವಿರೇಳಿಸುವ ವೈಮಾನಿಕ ಪ್ರದರ್ಶನ ವೀಕ್ಷಿಸಲು ಕೊನೆಯ ದಿನವಾದ ಇಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ. ಹೀಗಾಗಿ ಇಂದು ಕೂಡಾ ನಗರದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುವ ಸಾಧ್ಯತೆ ಇದೆ.

 

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner