ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿ ಎಲೆಕ್ಟ್ರಿಕ್ ಏಸಿ ಬಸ್‌ಗಳ ಸಂಚಾರ; ಮೇ ತಿಂಗಳಿಂದಲೇ ನೀವು ಓಡಾಡಬಹುದು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿ ಎಲೆಕ್ಟ್ರಿಕ್ ಏಸಿ ಬಸ್‌ಗಳ ಸಂಚಾರ; ಮೇ ತಿಂಗಳಿಂದಲೇ ನೀವು ಓಡಾಡಬಹುದು

ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿ ಎಲೆಕ್ಟ್ರಿಕ್ ಏಸಿ ಬಸ್‌ಗಳ ಸಂಚಾರ; ಮೇ ತಿಂಗಳಿಂದಲೇ ನೀವು ಓಡಾಡಬಹುದು

ನೀವು ಆಗಾಗ ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಮಾಡ್ತೀರಾ, ಹಾಗಾದರೆ ನಿಮಗಿಲ್ಲಿದೆ ಗುಡ್‌ನ್ಯೂಸ್‌. ಮೇ ತಿಂಗಳಿಂದ ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಲಿದೆ.

ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿನ್ನು ಎಲೆಕ್ಟ್ರಿಕ್ ಏಸಿ ಬಸ್‌ಗಳ ಸಂಚಾರ; ಮೇ ತಿಂಗಳಿಂದ ಓಡಾಟ ಶುರು (ಸಾಂದರ್ಭಿಕ ಚಿತ್ರ)
ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದಲ್ಲಿನ್ನು ಎಲೆಕ್ಟ್ರಿಕ್ ಏಸಿ ಬಸ್‌ಗಳ ಸಂಚಾರ; ಮೇ ತಿಂಗಳಿಂದ ಓಡಾಟ ಶುರು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಮಾರ್ಗದಲ್ಲಿ ಸಂಚಾರ ಮಾಡುವವರಿಗೆ ಶುಭಸುದ್ದಿ. ಇನ್ನು ಮುಂದೆ ಈ ಮಾರ್ಗದಲ್ಲಿ ನೀವು ಎಲೆಕ್ಟ್ರಿಕ್ ಏಸಿ ಬಸ್‌ಗಳಲ್ಲಿ ಸಂಚಾರ ಮಾಡಬಹುದು. ಮೇ ತಿಂಗಳಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗುವವರು ಮತ್ತು ಅಲ್ಲಿಂದ ಬರುವವರು ವಿದ್ಯುತ್ ಚಾಲಿತ ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿಮಾನ ನಿಲ್ದಾಣದ ಆವರಣದಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನು ಮುಂದುವರೆಸಿದೆ.

ಟರ್ಮಿನಲ್ 2 ರಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಪಾರ್ಕಿಂಗ್ ಜಾಗದಲ್ಲಿ ಚಾರ್ಚಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಸೌಲಭ್ಯವು ಏಕಕಾಲದಲ್ಲಿ ಮೂರು ಬಸ್‌ಗಳಿಗೆ ಚಾಜ್ ಮಾಡುವ ಅವಕಾಶ ಕಲ್ಪಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಲು ಸುಮಾರು 45 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ ಮತ್ತು ಇದು ದಿನವಿಡೀ ಓಡಾಟ ಮಾಡಲು ಸಾಕು ಎನ್ನುವಷ್ಟಿರುತ್ತದೆ.

320 ಬಸ್‌ಗಳಿಗೆ ಆರ್ಡರ್‌

ಬಿಎಂಟಿಸಿ ಅಶೋಕ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಓಮ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್‌ಗೆ 320 ಬಸ್‌ಗಳಿಗೆ ಆರ್ಡರ್ ನೀಡಿದ್ದು, ಈಗಾಗಲೇ 58 ಬಸ್‌ಗಳು ಸಂಚಾರಕ್ಕೆ ಸಿದ್ಧವಾಗಿವೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ವಿಶೇಷ ನಿಧಿಯಲ್ಲಿ ರೂ. 150 ಕೋಟಿಗಳನ್ನು ಬಳಸಿಕೊಂಡು ನಿಗಮವು ಈ ಬಸ್‌ಗಳನ್ನು ಒಟ್ಟು ವೆಚ್ಚದ ಒಪ್ಪಂದ (GCC) ಅಡಿಯಲ್ಲಿ ಗುತ್ತಿಗೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್‌ಗಳು ಸೇಪರ್ಡೆಯಾಗುವ ಸಾಧ್ಯತೆ ಇದೆ.

ಒಪ್ಪಂದದಡಿಯಲ್ಲಿ ವರ್ಷದಲ್ಲಿ 350 ದಿನ ದಿನಕ್ಕೆ 225 ಕಿಲೋಮೀಟರ್ ಓಡಾಟ ಮಾಡುವಂತಿರಬೇಕು. ಪ್ರತಿ ಬಸ್ ಪೂರ್ಣ ಚಾರ್ಜ್‌ನಲ್ಲಿ 200 ಕಿಮೀ ವರೆಗೆ ಪ್ರಯಾಣಿಸಬಹುದು, ಇದು 60-70 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಬಸ್ ನಿರ್ವಹಣೆ ಮತ್ತು ಚಾಲಕ ನಿಯೋಜನೆಗೆ ತಯಾರಕರು ಸಹ ಜವಾಬ್ದಾರರಾಗಿರುತ್ತಾರೆ.

ಈ ಡಿಪೊಗಳಲ್ಲಿ ಚಾರ್ಜಿಂಗ್ ವ್ಯವಸ್ಥೆ

58 ಇ-ಬಸ್‌ಗಳನ್ನು ಡಿಪೋ ಸಂಖ್ಯೆ 18 (ಐಟಿಪಿಎಲ್) ಗೆ ನಿಯೋಜಿಸಲಾಗಿದ್ದು, ಕಾಡುಗೋಡಿ ಬಸ್ ನಿಲ್ದಾಣದಿಂದ ಬನಶಂಕರಿ, ಮೆಜೆಸ್ಟಿಕ್ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಮತ್ತು ಹೊಸಕೋಟೆಯಿಂದ ಅತ್ತಿಬೆಲೆ ಮಾರ್ಗದಲ್ಲಿ ಸಂಚಾರ ನಡೆಸುತ್ತವೆ.

ಬಿಎಂಟಿಸಿ ಇತರ ಮೂರು ಡಿಪೋಗಳನ್ನು ಗುರುತಿಸಿದೆ - ಸುಭಾಷನಗರ (7), ಕತ್ರಿಗುಪ್ಪೆ (13) ಮತ್ತು ಎಚ್‌ಎಸ್‌ಆರ್ ಲೇಔಟ್ (25) - ಅಲ್ಲಿ ಈ ಇ-ಬಸ್‌ಗಳನ್ನು ಪೂರ್ಣ ಪ್ರಮಾಣದ ಚಾರ್ಜಿಂಗ್‌ ವ್ಯವಸ್ಥೆ ಮಾಡಲಾಗುತ್ತದೆ.

ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಜಿಟಿ ಪ್ರಭಾಕರ ರೆಡ್ಡಿ ಅವರ ಪ್ರಕಾರ, ಎಸಿ ಇ-ಬಸ್‌ಗಳು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೂ, ಹಠಾತ್ ಬ್ರೇಕಿಂಗ್, ವೇಗವರ್ಧನೆ ಮತ್ತು ಘೋಷಣೆಯಂತಹ ತಾಂತ್ರಿಕ ಸಮಸ್ಯೆಗಳೂ ಇವೆ. ತಯಾರಕರು ಚಾಲಕರನ್ನು ಆನ್‌ಬೋರ್ಡ್ ಮಾಡಲು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ, ಇದರ ಪರಿಣಾಮವಾಗಿ ಬಸ್‌ಗಳ ನಿಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ತಿಳಿಸಿದೆ.

ವೋಲ್ವೋ ಬಸ್‌ಗಳು ಏನಾಗಲಿವೆ?

ಬಿಎಂಟಿಸಿ ತನ್ನ ಹಳೆಯ ಮತ್ತು ದುಬಾರಿ ವೋಲ್ವೋ ಫ್ಲೀಟ್ ಅನ್ನು ಬದಲಾಯಿಸಲು ಎಸಿ ಇ-ಬಸ್‌ಗಳನ್ನು ತನ್ನ ಫ್ಲೀಟ್‌ಗೆ ಸೇರಿಸುತ್ತಿದೆ.

ಒಂದು ಕಾಲದಲ್ಲಿ 560 ವೋಲ್ವೋ ಬಸ್‌ಗಳನ್ನು ಹೊಂದಿದ್ದ ನಿಗಮದಲ್ಲಿ ಈಗ 308 ವಜ್ರ ಮತ್ತು 142 ವಾಯು ವಜ್ರ ಬಸ್‌ಗಳು ಸೇರಿದಂತೆ 450 ಮಾತ್ರ ಉಳಿದಿದೆ ಎಂದು ವೋಲ್ವೋ ವಿಭಾಗದ ಉಸ್ತುವಾರಿ ಹೊಂದಿರುವ ಹಿರಿಯ ಅಧಿಕಾರಿಯೊಬ್ಬರು ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ಎಸಿ ಎಲೆಕ್ಟ್ರಿಕ್‌ ಬಸ್‌ಗಳು ಒಂದು ತಿಂಗಳೊಳಗೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಓಡಲು ಪ್ರಾರಂಭಿಸುತ್ತವೆ ಮತ್ತು ಹಂತ ಹಂತವಾಗಿ ಕಾರ್ಯ ಆರಂಭಿಸಿ ಅಂತಿಮವಾಗಿ ವೋಲ್ವೋ ಫ್ಲೀಟ್ ಅನ್ನು ಬದಲಾಯಿಸುತ್ತವೆ ಎಂದು ಅಧಿಕಾರಿ ದೃಢಪಡಿಸಿದರು.

ವಾಯು ವಜ್ರ (ವಿಮಾನ ನಿಲ್ದಾಣ) ಬಸ್‌ಗಳು ಕಾರ್ಯನಿರ್ವಹಿಸಲು ಪ್ರತಿ ಕಿ.ಮೀ.ಗೆ 84 ರೂ. ವೆಚ್ಚವಾಗುತ್ತದೆ, ಆದರೆ ಪ್ರತಿ ಕಿ.ಮೀ.ಗೆ 72.33 ರೂ. ಮಾತ್ರ ಗಳಿಸುತ್ತವೆ. ಟೆಕ್ ಕಾರಿಡಾರ್‌ಗಳು ಮತ್ತು ಇತರ ಪ್ರೀಮಿಯಂ ಮಾರ್ಗಗಳಲ್ಲಿ ಸೇವೆ ಸಲ್ಲಿಸುವ ವಜ್ರ ಬಸ್‌ಗಳು ಪ್ರತಿ ಕಿ.ಮೀ.ಗೆ 90 ರೂ.ಗಳಿಗಿಂತ ಹೆಚ್ಚು ವೆಚ್ಚವಾಗುತ್ತವೆ, ಆದರೆ ಕೇವಲ 50.81 ಕಿ.ಮೀ. ಆದಾಯ ತರುತ್ತವೆ.

ಇದಕ್ಕೆ ವ್ಯತಿರಿಕ್ತವಾಗಿ, ಬಿಎಂಟಿಸಿ ಎಸಿ ಇ-ಬಸ್‌ಗೆ ಪ್ರತಿ ಕಿ.ಮೀ.ಗೆ ಕೇವಲ 65.8 ರೂ. ಪಾವತಿಸುತ್ತದೆ ಮತ್ತು ಕಂಡಕ್ಟರ್ ವೇತನಕ್ಕಾಗಿ ಪ್ರತಿ ಕಿ.ಮೀ.ಗೆ 14-15 ರೂ. ಖರ್ಚು ಮಾಡುತ್ತದೆ. ಸದ್ಯ ಬಿಎಂಟಿಸಿಯಲ್ಲಿ 6,875 ಬಸ್‌ಗಳಿದ್ದು, ಇದರಲ್ಲಿ 1,369 ಎಲೆಕ್ಟ್ರಿಕ್ ಬಸ್‌ಗಳಾಗಿವೆ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.