ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್‌ವೇ ಟ್ರಾಫಿಕ್ ಜಾಮ್; ವಿರಳ ವಿಮಾನ ಸಂಚಾರ ದಟ್ಟಣೆ; ವೈರಲ್ ವಿಡಿಯೋ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್‌ವೇ ಟ್ರಾಫಿಕ್ ಜಾಮ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ವಿರಳ ವಿಮಾನ ಸಂಚಾರ ದಟ್ಟಣೆ ಸನ್ನಿವೇಶ ಸೃಷ್ಟಿಯಾಗಿತ್ತು ಎಂಬುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಆ ವಿವರ ಇಲ್ಲಿದೆ.
ಬೆಂಗಳೂರು: ಸಂಚಾರ ದಟ್ಟಣೆ ಅಥವಾ ಟ್ರಾಫಿಕ್ ಜಾಮ್ ಬೆಂಗಳೂರು ನಗರಕ್ಕೆ ಮತ್ತು ಬೆಂಗಳೂರಿಗರಿಗೆ ಹೊಸದಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ನಿತ್ಯವೂ ಈ ಬಗ್ಗೆ ವಿಷಯಗಳು, ಸುದ್ದಿಗಳು ಸಿಕ್ಕೇ ಸಿಗುತ್ತವೆ. ಹೊಸ ಸುದ್ದಿ ಏನಿದೆ ಅಂತೀರಾ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್‌ವೇ ಟ್ರಾಫಿಕ್ ಜಾಮ್ ಅನುಭವಕ್ಕೆ ಬಂದಿದೆ ಎಂಬುದು ಸದ್ಯದ ಚರ್ಚೆಯ ವಿಚಾರ. ವಿಮಾನ ಪ್ರಯಾಣಿಕರೊಬ್ಬರು ರನ್‌ವೇ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದು, ಆ ವಿಡಿಯೋ ಎಲ್ಲರ ಗಮನಸೆಳೆಯತೊಡಗಿದೆ. ಸಾಲುಗಟ್ಟಿ ನಿಂತ ವಿಮಾನಗಳು. ಅದರ ಹಿಂದೆ ಸೇರುತ್ತಿದ್ದ ಈ ಪ್ರಯಾಣಿಕರು ಕುಳಿತಿದ್ದ ವಿಮಾನ ಎಂಬುದು 11 ಸೆಕೆಂಡ್ ವಿಡಿಯೋ ನೋಡಿದಾಗ ಮನವರಿಕೆಯಾಗುತ್ತದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಈ ವಿಡಿಯೋ ಶೇರ್ ಆಗಿದೆ.
ಕೆಐಎನಲ್ಲಿ ರನ್‌ವೇ ಟ್ರಾಫಿಕ್ ಎಂಬ ಶೀರ್ಷಿಕೆಯ ವೈರಲ್ ವಿಡಿಯೋ
ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಕರ್ನಾಟಕ ಪೋರ್ಟ್‌ಫೋಲಿಯೋ ಎಂಬ ಖಾತೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ರನ್‌ವೇ ಟ್ರಾಫಿಕ್ ಕುರಿತ ವಿಡಿಯೋ ನಿನ್ನೆ (ನವೆಂಬರ್ 8) ರಾತ್ರಿ ಶೇರ್ ಆಗಿದೆ. "ಬೆಂಗಳೂರು ರಸ್ತೆ ಸಂಚಾರ ದಟ್ಟಣೆಗೆ ಹೆಸರುವಾಸಿ. ಆದರೆ ಇಂದು ಬೆಂಗಳೂರು ವಿಮಾನ ನಿಲ್ದಾಣದ ರನ್‌ವೇ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಅನುಭವಿಸಿದೆ. ಹೆಚ್ಚಿನ ಸಂಖ್ಯೆಯ ವಿಮಾನಗಳು ಸರದಿಯಲ್ಲಿ ನಿಂತು, ಟೇಕ್ ಆಫ್ ಆಗಲು ಕಾಯುತ್ತಿದ್ದವು. ಈ ಸ್ಥಿತಿಯು ವಿರಳ ರನ್‌ವೇ 'ಟ್ರಾಫಿಕ್ ಜಾಮ್' ಅನ್ನು ಸೃಷ್ಟಿಸಿತು. ವಿಮಾನ ನಿಲ್ದಾಣದ ರನ್‌ವೇಯಲ್ಲಿ ಈ ಅಸಾಮಾನ್ಯ ದೃಶ್ಯವು ಹೆಚ್ಚುತ್ತಿರುವ ವಾಯು ಯಾನ ದಟ್ಟಣೆ ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಪ್ರಯಾಣಿ ಚಟುವಟಿಕೆಯನ್ನು ಎತ್ತಿ ತೋರಿಸುತ್ತದೆ, ಇದು ನಗರದ ಕ್ಷಿಪ್ರ ಬೆಳವಣಿಗೆ ಮತ್ತು ಪ್ರಮುಖ ಪ್ರಯಾಣ ಕೇಂದ್ರವಾಗಿ ಅದರ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ" ಎಂಬ ವಿವರಣೆಯೂ ಇದೆ.
ಈ ಪೋಸ್ಟ್ ನೋಡಿದ ಕೆಲವರು ಇದಕ್ಕೆ ಪ್ರತಿಕ್ರಿಯಿಸಿದ್ದು ಸೂರ್ಯ ಎಂಬುವವರು, “ಏರ್‌ಲೈನ್ಸ್ ಸಮಯಕ್ಕೆ ಸರಿಯಾಗಿ ನಿರ್ಗಮಿಸದಿದ್ದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ನಿಗದಿತ ಸಮಯಕ್ಕೆ ವಿಮಾನ ಹಾರಾಟ ನಡೆಸಬೇಕು. ಅದರ ಸಮಯ ಮೀರಿದರೆ ಆ ಸ್ಲಾಟ್ ಮುಚ್ಚಬೇಕು. ಹೀಗೆ ಸಮಯದ ಸ್ಲಾಟ್‌ಗಳನ್ನು ಖಚಿತವಾಗಿ ಅನುಸರಿಸಿದಾಗ ಮಾತ್ರವೇ ಸುಗಮ ಚಾಲನೆಯನ್ನು ಖಚಿತಪಡಿಸುವುದು ಸಾಧ್ಯ" ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು, ಈ ರೀತಿ ವಿಮಾನ ನಿಲ್ಧಾಣಗಳಲ್ಲಿ ರನ್‌ವೇ ಟ್ರಾಫಿಕ್ ಕಾಣುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಇಂತಹ ರನ್‌ವೇ ಟ್ರಾಫಿಕ್ ಜಾಮ್ ಆಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ಅಕ್ಟೋಬರ್ 17ರಂದು 782 ವಿಮಾನ ಹಾರಾಟ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 17 ರಂದು ಸಾರ್ವಕಾಲಿಕ ಗರಿಷ್ಠ ವಿಮಾನ ಸಂಚಾರ / ಹಾರಾಟ ದಾಖಲಾಗಿದೆ. ಒಂದೇ ದಿನ 782 ವಿಮಾನಗಳ ಆಗಮನ ಮತ್ತು ನಿರ್ಗಮನ ದಾಖಲಾಗಿದೆ. ಇದು ವಿಮಾನ ನಿಲ್ದಾಣ ಉದ್ಘಾಟನೆಯಾಗಿ 16 ವರ್ಷಗಳ ಅವಧಿಯ ಗರಿಷ್ಠ ದಾಖಲೆ. ಭಾರತದ ಅತಿ ಹೆಚ್ಚು ವಿಮಾನ ಸಂಚಾರ ದಟ್ಟಣೆ ಇರುವ ಮೂರನೇ ವಿಮಾನ ನಿಲ್ಧಾಣ ಬೆಂಗಳೂರು ಕೆಐಎ. ಇದು 2008ರ ಮೇ 24ರಂದು ಕಾರ್ಯಾಚರಣೆ ಆರಂಭಿಸಿದೆ ಎಂದು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ. ಈ ತಿಂಗಳಿನ ಹಿಂದಿನ ಒಂದೇ ದಿನದ ಗರಿಷ್ಠ ವಿಮಾನ ಆಗಮನ/ ನಿರ್ಗಮನ ದಾಖಲೆಯು ಅಕ್ಟೋಬರ್ 11 ರಂದು ದಾಖಲಾಗಿದೆ. ಅಂದು 770 ವಿಮಾನಗಳು ಬಂದು ಹೋಗಿದ್ದವು. ಕೋವಿಡ್ ಸಂಕಷ್ಟಕ್ಕೆ ಮೊದಲು 2019ರ ಜನವರಿ 11 ರಂದು ಒಂದೇ ದಿನ 750 ವಿಮಾನ ಬಂದು ಹೋಗಿದ್ದವು ಎಂದು ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.
ಒಂದೇ ಒಂದು ಟರ್ಮಿನಲ್ ಮತ್ತು ರನ್‌ವೇಯೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಿತ್ತು. ಮೊದಲ ವರ್ಷ 90 ಲಕ್ಷ ಪ್ರಯಾಣಿಕರು ಬಂದು ಹೋಗಿದ್ದರು. ಈಗ ಎರಡು ರನ್‌ವೇ ಮತ್ತು ಎರಡು ಟರ್ಮಿನಲ್‌ಗಳಿವೆ. ಈ ವರ್ಷ 4 ಕೋಟಿ ಪ್ರಯಾಣಿಕರ ಆಗಮನ, ನಿರ್ಗಮನವನ್ನು ನಿರೀಕ್ಷಿಸಲಾಗುತ್ತಿದೆ. ಕಳೆದ ಸೆಪ್ಟೆಂಬರ್ 1ರಂದು ಬೆಂಗಳೂರಿನಿಂದ 100 ಸ್ಥಳಗಳಿಗೆ ವಿಮಾನ ಹಾರಾಟ ಸಂಪರ್ಕದ ದಾಖಲೆ ನಿರ್ಮಾಣವಾಗಿದೆ.