ಬೆಂಗಳೂರನ್ನಾವರಿಸಿತು ಮುಂಜಾನೆ ಮಂಜು, ವಿಳಂಬವಾಯಿತು 10 ವಿಮಾನ ಹಾರಾಟ, ಆಗಸದಲ್ಲೇ ಸುತ್ತು ಹೊಡೆದ ಇಂಡಿಗೋ, ವಾಹನ ಸವಾರರ ಪರದಾಟ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ನವೆಂಬರ್ 11) ಮಂಜು ಮುಸುಕಿದ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಕನಿಷ್ಠ 10 ವಿಮಾನ ಹಾರಾಟ ವಿಳಂಬವಾಯಿತು. ರಸ್ತೆ ಸಂಚಾರಕ್ಕೆ ಬಂದರೆ, ಕೆಲವು ಕಡೆ ವಾಹನ ಸವಾರರಿಗೂ ಸಂಚಾರ ಕಷ್ಟವೆನಿಸಿ ನಿಧಾನಗತಿಯ ಟ್ರಾಫಿಕ್ ಇತ್ತು.
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಸುತ್ತಮುತ್ತ ಇಂದು (ನವೆಂಬರ್ 11) ಕೂಡ ದಟ್ಟ ಮಂಜು ಆವರಿಸಿತ್ತು. ಹೀಗಾಗಿ 10 ವಿಮಾನ ಹಾರಾಟ ವಿಳಂಬವಾಯಿತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಮಾಹಿತಿ ಪ್ರಕಾರ, ಚಳಿಗಾಲದಲ್ಲಿ ವಿಶೇಷವಾಗಿ ಮುಂಜಾನೆ ಮಂಜು ಮುಸುಕಿದ ವಾತಾವರಣ ಇರುವಾಗ ವಿಮಾನ ಹಾರಾಟ ಸಮಯದಲ್ಲಿ 20 ರಿಂದ 30 ನಿಮಿಷಗಳ ವಿಳಂಬ ಇರುತ್ತದೆ. ಬೆಂಗಳೂರು ಮಂಜು ಮುಸುಕಿದ ವಾತಾವರಣಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾದಲ್ಲೂ ಅನೇಕರು ಅಪ್ಢೇಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಸೌತ್‌ಫಸ್ಟ್ ತಾಣ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಇಳಿಯಬೇಕಾಗಿದ್ದ ವಿಮಾನ ಕೆಲ ನಿಮಿಷ ಮೇಲೆಯೇ ಹಾರಾಟ ನಡೆಸಿ ಕೊನೆಗೆ ಹೈದರಾಬಾದ್ ನಿಲ್ಧಾಣಕ್ಕೆ ಹೋಗಿ ಇಳಿಯಿತು.
ಮಂಜು ಮುಸುಕಿದ ಬೆಂಗಳೂರು; ಕನಿಷ್ಠ 10 ವಿಮಾನ ಹಾರಾಟ ವಿಳಂಬ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಸುತ್ತಮುತ್ತ ಇಂದು (ನವೆಂಬರ್ 11) ಮುಂಜಾನೆ ದಟ್ಟ ಮಂಜು ಆವರಿಸಿತ್ತು. ಹೀಗಾಗಿ 10 ವಿಮಾನ ಹಾರಾಟ ವಿಳಂಬವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಸೌತ್ ಫಸ್ಟ್ ವರದಿ ಪ್ರಕಾರ, ಬೆಂಗಳೂರಿನಲ್ಲಿ ಇಳಿಯಬೇಕಾಗಿದ್ದ ಇಂಡಿಗೋ ವಿಮಾನ ಹೈದರಾಬಾದ್‌ನಲ್ಲಿ ಇಳಿದಿದೆ. ಬೆಳಗ್ಗೆ 7.20ಕ್ಕೆ ಹೈದರಾಬಾದ್‌ನಿಂದ ಹೊರಟ ವಿಮಾನ 8.20ಕ್ಕೆ ಬೆಂಗಳೂರಿನಲ್ಲಿ ಇಳಿಯಬೇಕಾಗಿತ್ತು. ಆದರೆ ಮಂಜು ಆವರಿಸಿದ ಕಾರಣ 45 ನಿಮಿಷ ಆಗಸದಲ್ಲೇ ಹಾರಾಡಿ ಬಳಿಕ ಹೈದರಾಬಾದ್‌ಗೆ ಹಿಂದಿರುಗಿ ಅಲ್ಲೇ ಇಳಿದಿದೆ. ವಿಮಾನದಲ್ಲಿದ್ದವರು ಸುರಕ್ಷಿತರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಮಂಜು ಮುಸುಕಿದ ವಾತಾವರಣ
ನಮ್ಮ ಬೆಂಗಳೂರಲ್ಲಿ ಚಳಿ ವಾತಾವರಣ ಶುರುವಾಗಿದೆ. ಮುಂಜಾನೆ ಸಮಯದಲ್ಲಿ ದಟ್ಟ ಮಂಜು ಆವರಿಸತೊಡಗಿದ್ದು, ರಸ್ತೆ ಕಾಣದಂತಹ ಪರಿಸ್ಥಿತಿ ಇದೆ. ಇಂದು ಬೆಳಗ್ಗೆಯೂ ಇಂಥದ್ದೇ ವಾತಾವರಣ ಇತ್ತು ಎಂದು ಕರ್ನಾಟಕ ಪೋರ್ಟ್‌ಫೋಲಿಯೋ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ
ನಾಳೆ (ನವೆಂಬರ್ 12) ಬೆಳಗ್ಗೆವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮುಂಜಾನೆ ಮಂಜು, ಒಣಹವೆ ಇರಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ದಟ್ಟವಾಗಿ ಇರಲಿದ್ದು, ಚಳಿ ಹೆಚ್ಚಾಗಿರಲಿದೆ ಎಂದುಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ತಿಳಿಸಿತ್ತು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿತ್ತು.