ಬೆಂಗಳೂರು: ನಾಗರಬಾವಿ ಬಡಾವಣೆಯ ಮಾಳಗಾಳದಲ್ಲಿ 120 ಕೋಟಿ ರೂ ಮೌಲ್ಯದ ಒತ್ತುವರಿ ಆಸ್ತಿ ವಶಪಡಿಸಿಕೊಂಡ ಬಿಡಿಎ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ನಾಗರಬಾವಿ ಬಡಾವಣೆಯ ಮಾಳಗಾಳದಲ್ಲಿ 120 ಕೋಟಿ ರೂ ಮೌಲ್ಯದ ಒತ್ತುವರಿ ಆಸ್ತಿ ವಶಪಡಿಸಿಕೊಂಡ ಬಿಡಿಎ

ಬೆಂಗಳೂರು: ನಾಗರಬಾವಿ ಬಡಾವಣೆಯ ಮಾಳಗಾಳದಲ್ಲಿ 120 ಕೋಟಿ ರೂ ಮೌಲ್ಯದ ಒತ್ತುವರಿ ಆಸ್ತಿ ವಶಪಡಿಸಿಕೊಂಡ ಬಿಡಿಎ

BDA Anti-Encroachment Drive: ಬೆಂಗಳೂರು ಯಶವಂತಪುರ ಹೋಬಳಿ ನಾಗರಬಾವಿ ಲೇಔಟ್‌ನ ಮಾಳಗಾಳದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ತಂಡ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು. ಗುರುವಾರ 120 ಕೋಟಿ ರೂ ಮೌಲ್ಯದ ಒತ್ತುವರಿ ಭೂಮಿ ವಶಪಡಿಸಿ, ಅಲ್ಲಿದ್ದ ಕಟ್ಟಡಗಳನ್ನು ನೆಲಸಮಮಾಡಿದರು. (ವರದಿ-ಎಚ್.‌ ಮಾರುತಿ, ಬೆಂಗಳೂರು)

ಬೆಂಗಳೂರು: ನಾಗರಬಾವಿ ಬಡಾವಣೆಯ ಮಾಳಗಾಳದಲ್ಲಿ 120 ಕೋಟಿ ರೂ ಮೌಲ್ಯದ ಒತ್ತುವರಿ ಆಸ್ತಿಯನ್ನು ಬಿಡಿಎ ವಶಪಡಿಸಿಕೊಂಡಿದೆ.
ಬೆಂಗಳೂರು: ನಾಗರಬಾವಿ ಬಡಾವಣೆಯ ಮಾಳಗಾಳದಲ್ಲಿ 120 ಕೋಟಿ ರೂ ಮೌಲ್ಯದ ಒತ್ತುವರಿ ಆಸ್ತಿಯನ್ನು ಬಿಡಿಎ ವಶಪಡಿಸಿಕೊಂಡಿದೆ.

BDA Anti-Encroachment Drive: ಬೆಂಗಳೂರು ನಗರದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಗುರುವಾರದ (ಜನವರಿ 23) ಕಾರ್ಯಾಚರಣೆಯಲ್ಲಿ ನಾಗರಬಾವಿ ಬಡಾವಣೆಯ ಮಾಳಗಾಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆ, ಶೆಡ್‌ಗಳನ್ನು ತೆರವು ಮಾಡಿ 120 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶ ಪಡಿಸಿಕೊಂಡಿದೆ.

ಮಾಳಗಾಳ ಗ್ರಾಮದಲ್ಲಿ ಬಿಡಿಎ ಆಸ್ತಿ ಒತ್ತುವರಿ ತೆರವು

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಮಾಳಗಾಳ ಗ್ರಾಮ ಅಥವಾ ನಾಗರಬಾವಿ ಬಡಾವಣೆಯಲ್ಲಿ 2 ಎಕರೆ 16 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ 25 ಸಿಮೆಂಟ್‌ ಶೀಟ್‌ನ ಮನೆಗಳು, ಎರಡು ಆರ್‌ಸಿಸಿ ಮನೆ ಹಾಗೂ ಇತರ ಕಟ್ಟಡಗಳನ್ನು ತೆರವುಗೊಳಿಸಿದೆ.

ಒತ್ತುವರಿ ತೆರವು ಮಾಡುವಂತೆ ಬಿಡಿಎ ಅಧಿಕಾರಿಗಳು ಮೂರ್ನಾಲ್ಕು ಬಾರಿ ನೋಟಿಸ್‌ ನೀಡಿದ್ದರೂ ತೆರವು ಮಾಡಿರಲಿಲ್ಲ. ಆದ್ದರಿಂದ ಗುರುವಾರ ಬೆಳಿಗ್ಗೆ ನಾಲ್ಕು ಜೆಸಿಬಿ, ಒಂದು ಹಿಟಾಚಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿ ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ.

ಬಿಡಿಎ ಆಸ್ತಿ ಅತಿಕ್ರಮಿಸಿ ಕಟ್ಟಡ ನಿರ್ಮಿಸಿದಾತ ನಾಪತ್ತೆ

ಈ ಪ್ರದೇಶದಲ್ಲಿ ಉತ್ತರ ಕರ್ನಾಟದ 20 ಕುಟುಂಬಗಳು ಸಿಮೆಂಟ್‌ ಶೀಟ್‌ ಮನೆಗಳಲ್ಲಿ ವಾಸಿಸುತ್ತಿದ್ದವು. ಕಟ್ಟಡ ನಿರ್ಮಾಣ ಕೆಲಸದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವರು, ದಿಢೀರ್ ಕಾರ್ಯಾಚರಣೆಯಿಂದ ಅವರ ಪರಿಸ್ಥಿತಿ ದಿಕ್ಕು ತೋಚದಂದಾಗಿತ್ತು. ತಮ್ಮ ಮನೆಗಳು ಧ್ವಂಸವಾಗುತ್ತಿರುವುದನ್ನು ಕಂಡು ಕಣ್ಣೀರಿಟ್ಟರು. ಮೊದಲೇ ಮಾಹಿತಿ ನೀಡಿದ್ದರೆ ಮನೆಗಳನ್ನು ಖಾಲಿ ಮಾಡಿ ಬೇರೆ ಕಡೆ ಹೋಗುತ್ತಿದ್ದೆವು. ಮನೆಯ ಸಾಮಗ್ರಿಗಳನ್ನು ಹೊರಗೆ ಹಾಕಿದ್ದಾರೆ. ಇದರಿಂದ ಏನು ಮಾಡಬೇಕು ತಿಳಿಯುತ್ತಿಲ್ಲ. ತಿಂಗಳಿಗೆ 4 ಸಾವಿರ ರೂ. ಬಾಡಿಗೆ ಕೊಡುತ್ತಿದ್ದೆವು. ಈಗ ಮಾಲೀಕ ನಾಪತ್ತೆಯಾಗಿದ್ದಾನೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು..

ಮಕ್ಕಳು ಇಲ್ಲಿಯೇ ಸಮೀಪವಿದ್ದ ಶಾಲೆಗೆ ಹೋಗುತ್ತಿದ್ದರು. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ. ಈಗ ದಿನಸಿ ಮತ್ತಿತರ ಸಾಮಗ್ರಿಗಳನ್ನು ರಸ್ತೆ ಪಕ್ಕದಲ್ಲಿಯೇ ಇಟ್ಟುಕೊಂಡಿದ್ದೇವೆ. ಮಲಗಲು ಸ್ಥಳವಿಲ್ಲ. ನಮ್ಮ ಜತೆ ವಯೋವೃದ್ಧರು, ಅಂಗವಿಕಲರು, ಅನಾರೋಗ್ಯ ಪೀಡಿತರು ಇದ್ದಾರೆ. ಈಗ ಹೋಗುವುದಾದರೂ ಎಲ್ಲಿಗೆ ಎಂದು ಕಣ್ಣೀರಿಡುತ್ತಿದ್ದರು.

ಬಿಡಿಎಗೆ ಸೇರಿದ ಪ್ರದೇಶದಲ್ಲಿ ಅಕ್ರಮವಾಗಿ ಮನೆ ಹಾಗೂ ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ಆರು ತಿಂಗಳ ಹಿಂದೆಯೇ ಈ ಜಾಗದಲ್ಲಿ ಸರ್ವೇ ನಡೆಸಿ ಬೇಲಿ ಹಾಕಿದ್ದೆವು. ಒತ್ತುವರಿ ತೆರವು ಮಾಡುವಂತೆ ಹಲವು ಬಾರಿ ಸೂಚನೆ ನೀಡಲಾಗಿತ್ತು. ಆದರೂ ಯಾರೊಬ್ಬರೂ ತೆರವು ಮಾಡಿರಲಿಲ್ಲ. ಇದು ಅವರದ್ದೇ ತಪ್ಪು. ನಿಯಮಾವಳಿಗಳ ಪ್ರಕಾರವೇ ಕಾರ್ಯಾಚರಣೆ ನಡೆಸಿ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಸವರೆಡ್ಡಿ ತಿಳಿಸಿದ್ದಾರೆ. ಬಿಡಿಎಗೆ ಸೇರಿದ ಈ ಪ್ರದೇಶವನ್ನು ವ್ಯಕ್ತಿಯೊಬ್ಬ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದ್ದ. ಪ್ರತಿ ಮನೆಗೆ ತಲಾ ರೂ. 4 ರಿಂದ 5 ಸಾವಿರ ಬಾಡಿಗೆ ಪಡೆಯುತ್ತಿದ್ದ. ಬಾಡಿಗೆ ನಿವಾಸಿಗಳಿಂದ ಮುಂಗಡ ಹಣವನ್ನು ಪಡೆದು ಈಗ ನಾಪತ್ತೆಯಾಗಿದ್ದಾನೆ ಎಂದು ಅವರು ಹೇಳಿದರು.

ಕಳೆದವಾರವೂ ನಾಗರಬಾವಿ ಬಡಾವಣೆ ಮಾಚೋಹಳ್ಳಿಯಲ್ಲಿ ಬಿಡಿಎ ಕಾರ್ಯಾಚರಣೆ

ಬಿಡಿಎ ಅಧಿಕಾರಿಗಳ ತಂಡ ಕಳೆದ ವಾರವೂ ನಾಗರಬಾವಿ ಲೇಔಟ್‌ನ ಮಾಚೋಹಳ್ಳಿ ಪ್ರದೇಶದಲ್ಲಿ ಧ್ವಂಸ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಅಲ್ಲಿ ಅತಿಕ್ರಮಿತ ಜಾಗದಲ್ಲಿದ್ದ 50 ಗ್ರಾನೈಟ್ ಕಾರ್ಖಾನೆಗಳು, 200 ಶೆಡ್‌ಗಳನ್ನು ನೆಲಸಮ ಮಾಡಿತ್ತು. ಇದಲ್ಲದೆ, 1 ಕಿಲೋಮೀಟರ್ ಮುಖ್ಯ ರಸ್ತೆಯ ಉದ್ದಕ್ಕೂ ಬಿಡಿಎ ಜಾಗದಲ್ಲಿದ್ದ ಹಲವಾರು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿತು.

(ವರದಿ- ಎಚ್ ಮಾರುತಿ, ಬೆಂಗಳೂರು)

Whats_app_banner