Auto-rickshaw driver arrest: ಬೆಂಗಳೂರಿನಲ್ಲಿ ರಾಪಿಡೋ ಬೈಕ್‌ ಚಾಲಕನಿಗೆ ಕಿರುಕುಳ ನೀಡಿದ ಆಟೋ ಚಾಲಕನ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Auto-rickshaw Driver Arrest: ಬೆಂಗಳೂರಿನಲ್ಲಿ ರಾಪಿಡೋ ಬೈಕ್‌ ಚಾಲಕನಿಗೆ ಕಿರುಕುಳ ನೀಡಿದ ಆಟೋ ಚಾಲಕನ ಬಂಧನ

Auto-rickshaw driver arrest: ಬೆಂಗಳೂರಿನಲ್ಲಿ ರಾಪಿಡೋ ಬೈಕ್‌ ಚಾಲಕನಿಗೆ ಕಿರುಕುಳ ನೀಡಿದ ಆಟೋ ಚಾಲಕನ ಬಂಧನ

ಬೆಂಗಳೂರಿನ ಇಂದಿರಾನಗರದಲ್ಲಿ ರಾಪಿಡೋ ಬೈಕ್‌ ಚಾಲಕನಿಗೆ ಕಿರುಕುಳ ನೀಡಿರುವ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ರಾಪಿಡೋ ಬೈಕ್‌ ಚಾಲಕನಿಗೆ ಕಿರುಕುಳ ನೀಡಿದ ಆಟೋ ಚಾಲಕನ ಬಂಧನ
ಬೆಂಗಳೂರಿನಲ್ಲಿ ರಾಪಿಡೋ ಬೈಕ್‌ ಚಾಲಕನಿಗೆ ಕಿರುಕುಳ ನೀಡಿದ ಆಟೋ ಚಾಲಕನ ಬಂಧನ

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಇಂದಿರಾನಗರದಲ್ಲಿ ರಾಪಿಡೋ ಬೈಕ್‌ ಚಾಲಕನಿಗೆ ಕಿರುಕುಳ ನೀಡಿರುವ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಇಂದಿರಾನಗರ ಮೆಟ್ರೋ ನಿಲ್ದಾಣ ಸಮೀಪ ಆಟೋ ಚಾಲಕನು ರಾಪಿಡೋ ಚಾಲಕನಿಗೆ ಕಿರುಕುಳ ನೀಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಸೋಷಿಯಲ್‌ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್‌ ಆದ ತಕ್ಷಣ ಆಟೋ ಚಾಲಕನ ವಿರುದ್ಧ ದೂರು ದಾಖಲಿಸಲಾಗಿತ್ತು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೂರ್ವ ವಿಭಾಗದ ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಭೀಮ ಶಂಕರ್‌ ಎಸ್‌ ಅವರು ಮಾಹಿತಿ ನೀಡಿದ್ದಾರೆ.

"ಈ ವಿಡಿಯೋ ತೆಗೆದ ಚಾಲಕನ ವಿರುದ್ಧ ದೂರು ದಾಖಲಿಸಿದ್ದೇವೆ. ಇಂದಿರಾನಗರ ಪೊಲೀಸರ ಪ್ರಯತ್ನದ ಫಲವಾಗಿ ಆ ಆಟೋ ಚಾಲಕನನ್ನು ಗುರುತಿಸಲಾಗಿದೆ. ಇದೀಗ ಆತನನ್ನು ಬಂಧಿಸಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ದ್ವಿಚಕ್ರ ವಾಹನದ ಚಾಲಕ ದೇಶದ ಈಶಾನ್ಯ ಭಾಗದವನು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಆಟೋ ಚಾಲಕನು ಇತ್ತೀಚೆಗೆ ಇಂದಿರಾನಗರದ ಮೆಟ್ರೋ ನಿಲ್ದಾಣದ ಬಳಿ ರಾಪಿಡೋ ಬೈಕ್‌ ಚಾಲಕನಿಗೆ ಕಿರುಕುಳ ನೀಡಿದ್ದನು. ಬೈಕ್‌ ರೈಡರ್‌ನ ಫೋನ್‌ ತೆಗೆದು ನೆಲಕ್ಕೆ ಎಸೆಯುವ ದೃಶ್ಯವೂ ವಿಡಿಯೋದಲ್ಲಿದೆ.

ಆ ವಿಡಿಯೋದಲ್ಲಿ ಚಾಲಕನು ವೀಕ್ಷಕರನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆ. "ಸ್ನೇಹಿತರೇ ಕ್ರಮ ರಾಪಿಡೋ ದಂಧೆ ಹೇಗೆ ನಡೆಯುತ್ತಿದೆ ನೋಡಿ. ಈ ಸಹೋದ್ಯೋಗಿ ಬೇರೆ ದೇಶದಿಂದ ಬಂದು ರಾಜನಂತೆ ಬೈಕ್‌ ಓಡಿಸುತ್ತಿದ್ದಾನೆ. ವೈಟ್‌ ಬೋರ್ಡ್‌ ಹೊಂದಿದ್ದರೂ ಹುಡುಗಿಯನ್ನು ಈಗಷ್ಟೇ ಡ್ರಾಪ್‌ ಮಾಡಲು ಬಂದಿದ್ದಾನೆ" ಎಂದು ಆಟೋ ಚಾಲಕ ವಿಡಿಯೋದಲ್ಲಿ ಹೇಳಿದ್ದಾನೆ.

"ಆಟೋ ಇಲಾಖೆ ಎಷದಟು ಹಾಳಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇಲಾಖೆಯು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ" ಇತ್ಯಾದಿ ಮಾತುಗಳನ್ನು ಹೇಳುತ್ತ ಬೈಕ್‌ ರೈಡರ್‌ ಮೇಲೆ ಕೈಯೆತ್ತುತ್ತಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿತ್ತು.

ಈ ಆಟೋದವರು ಕರೆದ ಕಡೆ ಬರಲ್ಲ, ಟ್ರಾಫಿಕ್ ರೂಲ್ಸ್ ಅಂದ್ರೆ ಇವ್ರಿಗೆ ಗೊತ್ತಿಲ್ಲ... ಮೊದಲು ಈ ಆಟೋ ಬ್ಯಾನ್ ಮಾಡಬೇಕು ಎಂದು ಟ್ವಿಟ್ಟರ್‌ನಲ್ಲಿ ಈ ವಿಡಿಯೋಗೆ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಇಂತಹ ಹೋರಾಟಗಾರರು ಬಡವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದರು.

ಬೆಂಗಳೂರಿನಲ್ಲಿ ರಾಪಿಡೋ ಬೈಕ್‌ ಚಾಲಕರು ಮತ್ತು ರಿಕ್ಷಾ ಚಾಲಕರ ನಡುವೆ ಸಂಘರ್ಷದ ವಾತಾವರಣ ಏರ್ಪಟ್ಟಿದೆ. ಆಟೋ ನಿಲ್ದಾಣಗಳ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ರಾಪಿಡೋ ಚಾಲಕರು ಹೆದರುತ್ತಿದ್ದಾರೆ. ಆಟೋ ಚಾಲಕರ ಇಂತಹ ದುರ್ವರ್ತನೆ ಆಗಾಗ ವರದಿಯಾಗುತ್ತಿದ್ದು, ರಾಪಿಡೋ ಚಾಲಕರು ಆತಂಕದಲ್ಲಿಯೇ ಬೈಕ್‌ ಓಡಿಸುತ್ತಿದ್ದಾರೆ.

ರಾಪಿಡೋ ಸೇವೆಯು ಕಡಿಮೆ ದರಕ್ಕೆ ದೊರಕುವುದರಿಂದ ಮತ್ತು ಹೆಚ್ಚು ತ್ವರಿತವಾಗಿ ಪ್ರಯಾಣಿಸಲು ಸಾಧ್ಯವಿರುವುದರಿಂದ ಹೆಚ್ಚಿನ ಜನರು ರಾಪಿಡೋ ಸೇವೆ ಪಡೆಯುತ್ತಿದ್ದಾರೆ. ಆಟೋ ಚಾಲಕರು ದುಬಾರಿ ಮೊತ್ತ ಕೇಳುವುದರಿಂದ ಆಟೋಕ್ಕಿಂತ ರಾಪಿಡೋ ವಾಸಿ ಎಂದು ಕೆಲವು ಜನರು ಭಾವಿಸುತ್ತಿದ್ದಾರೆ.

ವಿಶೇಷವಾಗಿ ಹೆಚ್ಚು ದೂರಕ್ಕೆ ಪ್ರಯಾಣಿಸಬೇಕಿದ್ದರೆ ಆಟೋ ತುಂಬಾ ದುಬಾರಿಯಾಗುತ್ತದೆ. ಆದರೆ, ರಾಪಿಡೋದಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ಮೆಟ್ರೋ, ರೈಲು ಇಳಿದ ತಕ್ಷಣ ಇವರ ಸೇವೆ ಪಡೆಯಬಹುದು ಎಂದು ಹೆಚ್ಚಿನವರು ರಾಪಿಡೋ ಬೈಕ್‌ ಹತ್ತುತ್ತಿದ್ದಾರೆ.

 

Whats_app_banner