ಬೆಂಗಳೂರಿನಲ್ಲಿ ಬ್ಯುಸಿನೆಸ್ ಕ್ಲಾಸ್ ಆಟೋ; ಗಾಜಿನ ವಿಂಡೋ ನೋಡಿ ಮುಂಬೈನ 1BHK ಫ್ಲಾಟ್‌ನಂತಿದೆ ಎಂದ ನೆಟ್ಟಿಗರು-bengaluru auto with sliding upvc window photo goes viral in social media as people compare it to 1bhk flat in mumbai jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಬ್ಯುಸಿನೆಸ್ ಕ್ಲಾಸ್ ಆಟೋ; ಗಾಜಿನ ವಿಂಡೋ ನೋಡಿ ಮುಂಬೈನ 1bhk ಫ್ಲಾಟ್‌ನಂತಿದೆ ಎಂದ ನೆಟ್ಟಿಗರು

ಬೆಂಗಳೂರಿನಲ್ಲಿ ಬ್ಯುಸಿನೆಸ್ ಕ್ಲಾಸ್ ಆಟೋ; ಗಾಜಿನ ವಿಂಡೋ ನೋಡಿ ಮುಂಬೈನ 1BHK ಫ್ಲಾಟ್‌ನಂತಿದೆ ಎಂದ ನೆಟ್ಟಿಗರು

ಸಿಲಿಕಾನ್‌ ಸಿಟಿ ಬೆಂಗಳೂರು ರಾಷ್ಟ್ರ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡುತ್ತಿರುತ್ತದೆ. ಇದೀಗ ನಗರದ ಬ್ಯುಸಿನೆಸ್‌ ಕ್ಲಾಸ್‌ ಆಟೊ ರಿಕ್ಷಾವೊಂದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಬೆಂಗಳೂರಿನ ಆಟೋ ಗಾಜಿನ ವಿಂಡೋ ನೋಡಿ ಮುಂಬೈನ 1BHK ಫ್ಲಾಟ್‌ನಂತಿದೆ ಎಂದ ನೆಟ್ಟಿಗರು
ಬೆಂಗಳೂರಿನ ಆಟೋ ಗಾಜಿನ ವಿಂಡೋ ನೋಡಿ ಮುಂಬೈನ 1BHK ಫ್ಲಾಟ್‌ನಂತಿದೆ ಎಂದ ನೆಟ್ಟಿಗರು

ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೊಂದು ವೈರಲ್ ಪೋಸ್ಟ್‌ಗಳು ಕಾಣಸಿಗುತ್ತವೆ. ಇದರಲ್ಲಿ ಕೆಲವೊಂದು ಹಾಸ್ಯಗಳು, ಗಂಭೀರ ಅಂಶಗಳು ಸೇರಿದಂತೆ ವೈವಿಧ್ಯಮಯ ಅಂಶಗಳನ್ನು ಕಾಣಬಹುದು. ಇಲ್ಲಿ ನಾವು ಹೇಳಲು ಹೊರಟಿರುವುದು ನಮ್ಮ ಬೆಂಗಳೂರಿಗೆ ಸಂಬಂಧಿಸಿ ವೈರಲ್‌ ಪೋಸ್ಟ್‌ ಒಂದರ ಬಗ್ಗೆ. ಉದ್ಯಾನ ನಗರಿಯ ಆಟೋ ಹತ್ತಿದ ಯುವತಿಯೊಬ್ಬರು, ಇಲ್ಲಿನ 'ಬ್ಯುಸಿನೆಸ್ ಕ್ಲಾಸ್' ಆಟೊ ರಿಕ್ಷಾ ನೋಡಿ ಅಚ್ಚರಿಪಟ್ಟಿದ್ದಾರೆ. ಟ್ರಾಫಿಕ್‌ ಸಮಸ್ಯೆಯಿಂದಾಗಿ ಬೆಂಗಳೂರು ನಗರವು ಹಲವರಿಗೆ ಕಿರಕಿರಿಯಾಗಿರಬಹುದು. ಆದರೆ, ಈ ಐಷಾರಾಮಿಯಾಗಿ ಕಾಣುವ ಆಟೋ ನೋಡಿ ಮುಂಬೈ, ದೆಹಲಿಯ ಜನರಿಗೂ ಅಚ್ಚರಿಯಾಗಿದೆ. ಅಷ್ಟಕ್ಕೂ ಈ ಸಾಮಾನ್ಯ ಆಟೋದಲ್ಲಿ ಏನಿದೆ ಎಂಬುದನ್ನು ನೀವೆ ನೋಡಿ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ ಬಳಕೆದಾರರಾದ ತನ್ವಿ ಗಾಯಕ್ವಾಡ್ ಎಂಬವರು ಹಂಚಿಕೊಂಡಿರುವ ಪೋಸ್ಟ್‌ ಇದು. ಬೆಂಗಳೂರಿನ “ಈ ಆಟೋಗೆ ವಿಂಡೋ (ಕಿಟಕಿ) ಇದೆ” ಎಂದು ಅವರು ಹಂಚಿಕೊಂಡಿರುವ ಪೋಸ್ಟ್, ಭಾರಿ ವೈರಲ್ ಆಗಿದೆ. ಆ ಕಿಟಕಿ ಹೇಗಿದೆ ಎಂಬುದು ಚಿತ್ರವನ್ನು ನೋಡಿದಾಗ ನಿಮಗೆ ತಿಳಿಯುತ್ತದೆ. ಈ ವೈರಲ್‌ ಫೋಟೋಗೆ ನೆಟ್ಟಿಗರು ಹಾಕಿರುವ ಬಗೆಬಗೆಯ ಕಾಮೆಂಟ್‌ ಮಾತ್ರ ತುಂಬಾ ಮಜವಾಗಿದೆ.

ಕಿಟಕಿ ವ್ಯವಸ್ಥೆ ಇರುವ ಆಟೋ ರಿಕ್ಷಾದ ಚಿತ್ರದ ಎಕ್ಸ್ ಪೋಸ್ಟ್, ಈವರೆಗೆ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. 4,200ಕ್ಕೂ ಅಧಿಕ ಜನರು ಲೈಕ್‌ ಮಾಡಿದ್ದಾರೆ.

ಈ ಫೋಟೋವನ್ನು ಒಮ್ಮೆ ಸರಿಯಾಗಿ ಗಮನಿಸಿ. ಮೇಲ್ನೋಟಕ್ಕೆ ಇದು ಎಸಿ ಬಸ್‌ನಲ್ಲಿರುವ ವಿಂಡೋದಂತೆ ಕಾಣಿಸುತ್ತದೆ. ಒಂದು ಕ್ಯಾಬಿನ್‌ನಂತೆ ಆಟೋ ರಿಕ್ಷಾದ ಒಳಗೂ ಅಚ್ಚುಕಟ್ಟಾಗಿ ಪ್ರಯಣಿಕರಿಗೆ ಕೂರಲು ಅವಕಾಶ ಮಾಡಿಕೊಡಲಾಗಿದೆ. ಗಾಜಿನ ಫಲಕಗಳೊಂದಿಗೆ ಸ್ಲೈಡಿಂಗ್ ಯುಪಿವಿಸಿ ವಿಂಡೋ ಅಳವಡಿಸಿದ್ದು, ಇಂಥಾ ಗಾಜಿನ ಕಿಟಕಿಯನ್ನು ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

ಮಜಾ ಕೊಡುತ್ತೆ ಕಾಮೆಂಟ್

ಇದು ರಿಕ್ಷಾ ಅನ್ನೋದೆ ನೆಟ್ಟಿಗರ ಅಚ್ಚರಿ. ಇಷ್ಟೆಲ್ಲಾ ಓದಿದ ಮೇಲೆ ಕಾಮೆಂಟ್‌ನಲ್ಲಿ ತಜ್ಞರ ಅಭಿಪ್ರಾಯ ಓದದೆ ಇರಲು ಸಾಧ್ಯವೇ? ಇದು ತುಂಬಾ ಮಜಾ ಕೊಡುವ ಕೆಲಸ.

ಮೊದಲೇ ನಮ್ಮ ಬೆಂಗಳೂರು, ಕರ್ನಾಟಕ ಮಾತ್ರವಲ್ಲದೆ ಉತ್ತರ ಭಾರತೀಯರಿಗೆ ಸ್ವರ್ಗ. ಗಾರ್ಡನ್‌ ಸಿಟಿಯ ಸೌಂದರ್ಯ ಮಾತ್ರವಲ್ಲದೆ ಇಲ್ಲಿನ ರಿಕ್ಷಾಗೂ ಜನರು ಮನಸೋತಿದ್ದಾರೆ. ಈ ರಿಕ್ಷಾವನ್ನು ನೋಡುತ್ತಿದ್ದಂತೆಯೇ ನೆಟ್ಟಿಗರು ತ್ವರಿತವಾಗಿ ತಮ್ಮ ಕಾಮೆಂಟ್‌ ಗೀಚಲು ಶುರು ಮಾಡಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು ಇದನ್ನು 'ಇದುವರೆಗಿನ ಅತ್ಯುತ್ತಮ ಆಟೋ' ಎಂದು ಕರೆದಿದ್ದಾರೆ. ಮತ್ತೊಬ್ಬರು ಇನ್ನೂ ಮುಂದುವರೆದು 'ರಿಕ್ಷಾ ಪ್ರೊ ಅಲ್ಟ್ರಾ' ಎಂದು ಹೊಗಳಿದ್ದಾರೆ.

ಇದು ಸಾಮಾನ್ಯ ಆಟೋ ಅಲ್ಲ. ಬೆಂಗಳೂರಿನ "ಬ್ಯುಸಿನೆಸ್ ಕ್ಲಾಸ್ ಆಟೋ" ಎಂದು ಮತ್ತೊಬ್ಬ ಮಹಾಶಯ ಕಾಮೆಂಟ್‌ ಮಾಡಿದ್ದಾರೆ. ಇದೇ ವೇಳೆ ಒಬ್ಬ ಎಕ್ಸ್‌ ಬಳಕೆದಾರನ ಪ್ರಶ್ನೆ ತಮಾಷೆಯಾಗಿದೆ. “ವಿಂಡೋ ಸೀಟಿಗೆ ಹೆಚ್ಚುವರಿ ಶುಲ್ಕಗಳಿವೆಯೇ?” ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ಆಟೊ ಮುಂಬೈನ 1 ಬಿಎಚ್‌ಕೆ ಫ್ಲಾಟ್‌ನಂತಿದೆ

ಕೆಲವರು ಆಟೋ ರಿಕ್ಷಾವನ್ನು ಮುಂಬೈನ 1 ಬಿಎಚ್ ಕೆ ಫ್ಲಾಟ್‌ಗೆ ಹೋಲಿಸಿದ್ದಾರೆ. ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ ದಿನದಿಂದ ದಿನಕ್ಕೆ ಭೂಮಿ ಬೆಲೆ ಗಗನಕ್ಕೇರುತ್ತಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಜಾಗದ ಲಭ್ಯತೆ ಕಡಿಮೆ. ಹೀಗಾಗಿ ದುಬಾರಿ ಬೆಲೆಯಿಂದಾಗಿ ಮನೆಯ ಗಾತ್ರ ಕೂಡಾ ಕಡಿಮೆಯಾಗುತ್ತಿದೆ. ಸಣ್ಣ ಫ್ಲಾಟ್‌ ಖರೀದಿಸುವುದಕ್ಕೂ ದುಬಾರಿ ಬೆಲೆ ತೆರಬೇಕು. ಇದೇ ಕಾರಣಕ್ಕೆ, ಈ ಆಟೋ ಕೂಡಾ ಮುಂಬೈನ 1 ಬಿಎಚ್‌ಕೆ ಫ್ಲಾಟ್‌ನಂತೆ ಕಾಣುತ್ತಿದೆ ಎಂದು ನೆಟ್ಟಿಗ ಹೇಳಿದ್ದಾರೆ.

“ಇದು ಮುಂಬೈನಲ್ಲಿ 1ಬಿಎಚ್ ಕೆ ಇದ್ದಂತಿದೆ,” ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಒಪ್ಪುವಂತೆ ಮತ್ತೊಬ್ಬ ಬಳಕೆದಾರ “ಆಟೊ ಚಾಲಕ ತಮ್ಮದೇ ಆದ ಕನಸಿನ ಮನೆಯನ್ನು ಮಾಡಿದ್ದಾರೆ” ಎಂದು ಬರೆದಿದ್ದಾರೆ.