Bengaluru Bandh Live Updates: ಬೆಂಗಳೂರು ಬಂದ್ ಯಶಸ್ವಿ; ಆದ್ರೆ ಮತ್ತೆ ತಮಿಳುನಾಡಿಗೆ ನೀರು ಬಿಡಲು ಆದೇಶ
Bengaluru News Live Updates: ಕರ್ನಾಟಕದಲ್ಲಿ ಬರಪರಿಸ್ಥಿತಿ ಸಂಕಷ್ಟದ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದು ನಾಳೆ (ಸೆ 26, ಮಂಗಳವಾರ) ರೈತ ಹಾಗೂ ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ.
Tue, 26 Sep 202302:03 PM IST
ಕಾವೇರಿ ಹೋರಾಟ : ಬೆಂಗಳೂರು ಶಾಂತಿಯುತ ಬಂದ್ ಯಶಸ್ವಿ
ಕಾವೇರಿ ನೀರು ನಿರ್ವಹಣಾ ಸಮಿತಿ ಅವೈಜ್ಞಾನಿಕ ಆದೇಶದ ವಿರುದ್ಧ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ರೈತ ಸಂಘ ಸಂಘಟನೆಗಳ ಒಕ್ಕೂಟ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಕರೆ ನೀಡಿದ ಬೆಂಗಳೂರು ಬಂದ್ ಯಶಸ್ವಿಯಾಗಿದೆ.
ವಿವಿಧ ಸಂಘಟನೆಗಳು ಕರೆ ನೀಡಿದ ಬೆಂಗಳೂರು ಬಂದ್ ಗೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ಕಾಲೇಜುಗಳಿಗೆ ರಜೆ ಘೋಷಿಸಿತು. ಇದರ ಜೊತೆಗೆ ನೆನ್ನೆ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು. .
Tue, 26 Sep 202311:41 AM IST
ಸಂಕಷ್ಟ ಹಂಚಿಕೆ ಸೂತ್ರ ರೂಪಿಸಿದ ಹೊರತು ತಮಿಳುನಾಡಿಗೆ ನೀರು ಹರಿಸಬೇಡಿ: ಹೆಚ್ಡಿಕೆ
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಸಂಕಷ್ಟ ಹಂಚಿಕೆ ಸೂತ್ರ ರೂಪಿಸಿದ ಹೊರತು ತಮಿಳುನಾಡಿಗೆ ನೀರು ಹರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ರಾಜ್ಯ ಸರಕಾರದ ವೈಫಲ್ಯಗಳನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಲಾಭ ಮಾಡಿಕೊಳ್ಳುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
Tue, 26 Sep 202310:16 AM IST
ತಮಿಳುನಾಡಿಗೆ ಮುಂದಿನ 18 ದಿನ 3000 ಕ್ಯೂಸೆಕ್ ನೀರು ಬಿಡಲು ಆದೇಶ
ಕಾವೇರಿ ನದಿ ನೀರು ವಿಚಾರದಲ್ಲಿ ತೀವ್ರ ಹೋರಾಟ ನಡೆಸುತ್ತಿರುವ ಕರ್ನಾಟಕಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಮುಂದಿನ 18 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಆದೇಶ ನೀಡಿದೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಇಂದಿನ ಸಭೆಯಲ್ಲಿ ಆದೇಶ ಹೊರಡಿಸಿದೆ.
Tue, 26 Sep 202309:53 AM IST
ಕಾವೇರಿ ವಿಚಾರದಲ್ಲಿ ದನಿ ಎತ್ತದ ಕಂಬಾರ, ಭೈರಪ್ಪ, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಸಂಬಂಧ ಇಂದು ಬೆಂಗಳೂರು ಬಂದ್ ಆಗಿದ್ದು, ಸೆ.29ಕ್ಕೆ ಕರ್ನಾಟಕ ಬಂದ್ ಆಗುತ್ತಿದೆ. ಕಾವೇರಿ ನದಿ ನೀರಿನ ವಿವಾದ ತೀವ್ರಗೊಂಡಿದ್ದರೂ ಧ್ವನಿ ಎತ್ತದೇ ಮೌನವಾಗಿರುವ ಕವಿ, ಸಾಹಿತಿಗಳ ವಿರುದ್ಧ ರಾಷ್ಟ್ರೀಯ ಚಾಲಕರ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿದೆ. ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಡಾ.ಎಸ್.ಎಲ್. ಭೈರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಎಚ್. ಎಸ್. ಶಿವಪ್ರಕಾಶ್, ದುಂಡಿರಾಜ್, ಅರಳು ಮಲ್ಲಿಗೆ ಪಾರ್ಥಸಾರಥಿ, ಬಿ.ಆರ್. ಲಕ್ಷಣ್ ರಾವ್, ಶತವಧಾನಿ ಗಣೇಶ್, ಥಟ್ ಅಂತಾ ಹೇಳಿ ಡಾ. ನಾ ಸೋಮೇಶ್ವರ, ಹಂಪಾ ನಾಗರಾಜಯ್ಯ, ಡಾ.ಎಚ್.ಎಲ್. ಪುಷ್ಪ, ಆರ್.ಜಿ. ಹಳ್ಳಿ ನಾಗರಾಜ್ ಮತ್ತು ಉಗ್ರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮತ್ತಿತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Tue, 26 Sep 202307:55 AM IST
ವಾಟಾಳ್ ಮತ್ತಿತರರು ಪೊಲೀಸ್ ವಶಕ್ಕೆ
ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹಾಗೂ ಇತರರು ಬೆಂಗಳೂರಿನಲ್ಲಿ ರಾಜಭವನ ಮುತ್ತಿಗೆ ಹಾಕಲು ಯತ್ನಿಸಿದರು.
ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಧಿಕ್ಕಾರ ಕೂಗಿದ ವಾಟಾಳ್ ನಾಗರಾಜ್ ಆಕ್ರೋಶ ಹೊರ ಹಾಕಿ ಒಳ ನುಗ್ಗಲು ಪ್ರಯತ್ನಿಸಿದರು. ಆಗ ವಾಟಾಳ್ ಹಾಗೂ ಅವರ ಸಂಗಡಿಗರನ್ನು ವಶಕ್ಕೆ ಪಡೆಯಲಾಯಿತು.
Tue, 26 Sep 202307:22 AM IST
ಕರ್ನಾಟಕದ ಹಿತರಕ್ಷಣೆಗೆ ನಮ್ಮ ಕೆಲಸ: ಡಿಕೆಶಿ
ಕಾವೇರಿ ವಿಚಾರದಲ್ಲಿ ಕರ್ನಾಟಕ ರಾಜ್ಯದ ಹಿತಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ಎಸ್ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗುತ್ತಿದೆ. ಕೆಆರ್ಎಸ್ಗೆ ಸುಮಾರು 10 ಸಾವಿರ ಕ್ಯೂಸೆಕ್ ಒಳಹರಿವು ಇದ್ದು ಒಳ್ಳೆಯದನ್ನು ನಿರೀಕ್ಷಿಸೋಣ ಎಂದು ತಿಳಿಸಿದರು.
ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಯುತ್ತಿದೆ. ಸಭೆ ತೀರ್ಮಾನಕ್ಕೆ ನಾವು ಕಾಯುತ್ತಿದ್ದೇವೆ ಎಂದರು.
Tue, 26 Sep 202311:41 AM IST
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ
ಕಾವೇರಿ ನದಿ ನೀರು ಹಂಚಿಕೆ ಆದೇಶ ವಿರೋಧಿಸಿ ಬೆಂಗಳೂರು ಬಂದ್ ನಡೆಯುತ್ತಿರುವ ನಡುವೆ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಶುರುವಾಗಿದೆ.
ಹದಿನೈದು ದಿನದ ಹಿಂದೆ ಸಭೆ ಸೇರಿ ಪ್ರತಿ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ಆದೇಶಿಸಿತ್ತು. ಕಾವೇರಿ ನೀರು ಹರಿಸಲು ಆದೇಶ ಅವಧಿ ಮುಕ್ತಾಯಗೊಂಡಿದೆ.
ಈ ಹಿನ್ನೆಲೆಯಲ್ಲಿ ವರ್ಚುವಲ್ ಮೂಲಕ ನಡೆಯುತ್ತಿರುವ ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಅಧಿಕಾರಿಗಳು ಭಾಗಿಯಾಗಿದ್ದಾರೆ. ಸಮಿತಿ ಇಂದು ನೀಡುವ ತೀರ್ಮಾನ ಏನಿರಬಹುದು ಎನ್ನುವ ಕುತೂಹಲವೂ ಇದೆ.
Tue, 26 Sep 202307:03 AM IST
ಬಿಜೆಪಿ ಟ್ವೀಟ್ ಕುಟುಕು
ಸುಪ್ರೀಂಕೋರ್ಟ್ ತೀರ್ಪು ಬರುವುದಕ್ಕೂ ಮುನ್ನವೇ I.N.D.I ಮೈತ್ರಿಕೂಟ ಮೆಚ್ಚಿಸಲು ರಾತ್ರೋ ರಾತ್ರಿ ತಂಡಿ ಬಿಟ್ಟು ಕಾವೇರಿ ನೀರು ಹರಿಸಿದ್ದೇಕೆಂದು ರೈತ ವಿರೋಧಿ, ನಾಡ ದ್ರೋಹಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನೇಕೆ ಪ್ರಶ್ನಿಸುತ್ತಿಲ್ಲ ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ.
ನಿಮ್ಮ ಹಳವಂಡಗಳನ್ನು ಸರಿಪಡಿಸಲು ಪ್ರಧಾನಿಯವರನ್ನು ಮಧ್ಯ ಪ್ರವೇಶಿಸಬೇಕೆಂದು ಪರಿಪರಿಯಾಗಿ ಬೇಡಿಕೊಳ್ಳುವ ಕಾಂಗ್ರೆಸ್ ತನ್ನ ಅಸಮರ್ಥತೆಯನ್ನು ಈ ಮೂಲಕ ಒಪ್ಪಿಕೊಂಡಿದೆ.ಸಮಸ್ಯೆ ಬಗೆಹರಿಸುವ ಸಾಮರ್ಥ್ಯವಿಲ್ಲದಿದ್ದರೆ ಸರ್ಕಾರ ವಿಸರ್ಜಿಸಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ನಿಮ್ಮ ಆಡಳಿತಕ್ಕೆ ಜನರು ಬಸವಳಿದು ಹೋಗಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಕುಟುಕಿದೆ.
Tue, 26 Sep 202307:03 AM IST
ಮೇಕೆದಾಟು ಯೋಜನೆಯಿಂದ ಪರಿಹಾರ: ಸಿದ್ದರಾಮಯ್ಯ
ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ಸಮಸ್ಯೆ ಸರಿಪಡಿಸಿ ಜಲಾಶಯ ನಿರ್ಮಿಸಿದರೆ 67 ಟಿಎಂಸಿ ನೀರು ಸಂಗ್ರಹಿಸಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ಕಾವೇರಿ ನೀರಿನ ಸಮಸ್ಯೆ ಇತ್ಯರ್ಥ ಪಡಿಸಬಹುದು. ಕರ್ನಾಟಕ-ತಮಿಳುನಾಡು ನಡುವಿನ ನೀರಿನ ಸಮಸ್ಯೆ ಬಗೆಹರಿಸಬಹುದು. ಮಳೆ ಕೊರತೆ ಸಂದರ್ಭದಲ್ಲಿ ಉಭಯ ರಾಜ್ಯಗಳು ನೀರು ಬಳಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
Tue, 26 Sep 202306:34 AM IST
ನಾನು ಸದಾ ನಿಮ್ಮೊಂದಿಗೆ ಇದ್ದೇನೆ: ಕಿಚ್ಚ ಬೆಂಬಲ
ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ ಜಲ ಭಾಷೆಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದ್ದಾರೆ,
ಮುಂಗಾರುಮಳೆಯ ಅಭಾವದಿಂದ ರೈತರಿಗೆ ಜನತೆಯ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞ ರು ಕೂಡಲೇ ಟ್ರಬಿನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕ ದ ಬರ ಪರಿಸ್ಥಿತಿ ಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ ಎಂದು ಸಲಹೆ ನೀಡಿದ್ಧಾರೆ.
ಹಿಂದಿನ ಕೆಲವು ಮುಖ್ಯಮಂತ್ರಿ ಗಳಂತೆಯೇ ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ ಮುಖ್ಯ ಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆ ಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕ ವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ -ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ದ ಪರಿಸ್ಥಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ ಆದರೆ ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ.ಆದಷ್ಟು ಬೇಗ ಈ ಸಮಸ್ಯೆ ಬಗೆ ಹರಿದು ಹೋರಾಟಕ್ಕೆ ಜಯವಾಗಲಿ, ಇದರ ಜೊತೆಗೆ ಉತ್ತರ ಕರ್ನಾಟಕದ ಕೃಷ್ಣಾ ನದಿ -ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆ ಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು ಎಂದು ನಟ ಕಿಚ್ಚ ಸುದೀಪ್ ಪ್ರತಿಪಾದಿಸಿದ್ದಾರೆ.
Tue, 26 Sep 202305:41 AM IST
ಬೆಂಗಳೂರು ಬಂದ್ ಗೆ ಐಟಿಬಿಟಿ ಕಂಪನಿಗಳು ಬೆಂಬಲ
ಬೆಂಗಳೂರು ಬಂದ್ ಗೆ ಐಟಿಬಿಟಿ ಕಂಪನಿಗಳು ಬೆಂಬಲ ಸೂಚಿಸಿವೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಹುತೇಕ ಐಟಿಬಿಟಿ ಕಂಪನಿಗಳು ಬಂದ್‌ಗೆ ಬೆಂಬಲ ನೀಡಿ ಕಚೇರಿ ಸ್ಥಗಿತಗೊಳಿಸಿವೆ.
ನಿತ್ಯ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದಂತ ಎಲೆಕ್ಟ್ರಾನಿಕ್ ಸಿಟಿ ಬಸ್ ಸ್ಟಾಂಡ್ ನಲ್ಲಿ ಜನವೇ ಇಲ್ಲದಾಗಿದೆ.
ಸದಾ ವಾಹನಗಳಿಂದ ಗಿಜುಗುಡಿತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಂದ್ ಹಿನ್ನೆಲೆ ಸಹ ಖಾಲಿ ಹೊಡೆಯುತ್ತಿರುವುದು ಕಂಡು ಬಂದಿತು.
Tue, 26 Sep 202305:34 AM IST
ಡಿಕೆಶಿ ಮನೆಗೆ ಹೆಚ್ಚಿನ ಭದ್ರತೆ
ಜಲ ಸಂರಕ್ಷಣಾ ಸಮಿತಿಯಿಂದ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟಗಾರರು ಇಲ್ಲಿಗೆ ಆಗಮಿಸಿ ಡಿಕೆಶಿ ಮನೆಗೆ ಮುತ್ತಿಗೆ ಹಾಕುವ ಸೂಚನೆ ಇರುವುದರಿಂದ ಬ್ಯಾರಿಕೇಡ್ ಹಾಕಿ ಭದ್ರತೆಯನ್ನು ಪೊಲೀಸರು ಒದಗಿಸಿದ್ದಾರೆ. ಅಲ್ಲದೇ ಹೆಚ್ಚುವರಿಯಾಗಿ 15 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
Tue, 26 Sep 202305:31 AM IST
ಬಂದ್‌ನಿಂದ ಏರ್‌ಪೋರ್ಟ್ ಪ್ರಯಾಣಿಕರಿಗೂ ಬಿಸಿ
ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರೋ ಕೆಂಪೇಗೌಡ ಏರ್ ಪೋರ್ಟ್ ನ ಪ್ರಯಾಣಿಕರಿಗೆ ಬಿಸಿ ತಟ್ಟಿದೆ.
ಟ್ಯಾಕ್ಸಿ ಬಸ್ ಸಿಗುತ್ತೋ ಇಲ್ಲವೋ ಎಂದು ತಡ ರಾತ್ರಿಯ ಏರ್ಪೋರ್ಟ್ಗೆ ಪ್ರಯಾಣಿಕರು ಆಗಮಿಸಿದ್ದಾರೆ. ಸಂಜೆಯ ವಿಮಾನಗಳಿಗೂ ತಡ ರಾತ್ರಿಯ ಆಗಮಿಸಿರುವ ಪ್ರಯಾಣಿಕರು ಟರ್ಮಿನಲ್ 1 ಬಳಿ ಮಲಗಿದ್ದಾರೆ. ಆದರೆ ಟ್ಯಾಕ್ಸಿಗಳು ಬಂದ್‌ಗೆ ಬೆಂಬಲ ಸೂಚಿಸದೇ ಸಹಜ ಸಂಚಾರ ನಡೆದಿದೆ.
Tue, 26 Sep 202304:47 AM IST
ರಾಮನಗರದಲ್ಲಿ ಸ್ಟಾಲಿನ್‌ಗೆ ಶ್ರದ್ದಾಂಜಲಿ
ಕಾವೇರಿ ಹೋರಾಟದ ವಿಚಾರವಾಗಿ ರಾಮನಗರದ ಐಜೂರು ವೃತ್ತದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗೆ ಶ್ರದ್ಧಾಂಜಲಿ ಅರ್ಪಣೆ ಕೇಕೆ ಚಳವಳಿ ನಡೆಯಿತು. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್ ಗೌಡರ ನೇತೃತ್ವದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿತ್ತು.
Tue, 26 Sep 202304:24 AM IST
ಹೋರಾಟಗಾರರ ಬಿಡುಗಡೆಗೆ ಎಚ್‌ಡಿಕೆ ಆಗ್ರಹ
ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ನಡೆಸಬಾರದೇ? ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗರನ್ನು ಬಂಧಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಸರಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ? ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಇದೇನು ಕನ್ನಡಿಗರ ಸರಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ? ಇಷ್ಟಕ್ಕೂ ಕನ್ನಡಿಗರು ಮತ ಹಾಕಿದ್ದು ಯಾರಿಗೆ? ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಂ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಟೀಕಿಸಿದ್ದಾರೆ.
Tue, 26 Sep 202304:07 AM IST
ಬಂದ್‌ಗೆ ನಾವು ಸೇರೋಲ್ಲ ಎಂದ ನಾರಾಯಣಗೌಡ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದನ್ನು ಖಂಡಿಸಿ ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ಜತೆ ನಾವು ಸೇರುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಕಾವೇರಿ ವಿಚಾರವಾಗಿ ನಮ್ಮ ಹೋರಾಟ ಈಗಾಗಲೇ ಮುಂದುವರಿದಿದೆ. ನಾಡು, ನುಡಿ, ಭಾಷೆ ವಿಚಾರದಲ್ಲಿ ನಮ್ಮ ಹೋರಾಟ ನಿರಂತರವಾಗಿರಲಿದೆ. ಈಗಲೂ ಹೋರಾಟ ಮುಂದುವರೆಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tue, 26 Sep 202304:05 AM IST
ನೇಣು ಹಾಕಿಕೊಳ್ಳಲು ಮುಂದಾದ ರೈತ
ಕಾವೇರಿ ವಿಚಾರವಾಗಿ ಹೋರಾಟ ನಡೆಸುತ್ತಿರುವ ನಾನಾ ಸಂಘಟನೆಗಳ ಪ್ರಮುಖರು ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಸೇರಿದ್ದಾರೆ.
ಈ ವೇಳೆ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಅಲ್ಲಿದ್ದವರು ತಡೆದಿದ್ದಾರೆ.
Tue, 26 Sep 202303:04 AM IST
ತಮಿಳುನಾಡು ಬಸ್ ಸ್ಥಗಿತ
ಬೆಂಗಳೂರು ಬಂದ್‌ಗೆ ಕರೆ ಹಿನ್ನಲೆಯಲ್ಲಿ ತಮಿಳುನಾಡು ಸಾರಿಗೆ ಬಸ್‌ಗಳು ಸೋಮವಾರದಿಂದಲೇ ಸಂಪೂರ್ಣ ಸಂಚಾರ ನಿಲ್ಲಿಸಿವೆ. ಅಹಿತಕರ ಘಟನೆ ನಡೆಯದಂತೆ ಈಗಾಗಲೇ ತಮಿಳುನಾಡಿನಿಂದ ನಿತ್ಯ ಬರುವ ನೂರಕ್ಕೂ ಹೆಚ್ಚು ಬಸ್‌ಗಳು ಬೆಂಗಳೂರು ಸೇವೆಯನ್ನು ನಿಲ್ಲಿಸಿದ್ದು, ಇದರಿಂದ ಬ್ಯಾಟರಾಯನಪುರ ಸೆಟಲೈಟ್ ಬಸ್ ನಿಲ್ದಾಣದಲ್ಲಿ ಬಿಕೋ ಎನ್ನುವ ವಾತಾವರಣವಿತ್ತು.
Tue, 26 Sep 202302:58 AM IST
ಬಂದ್ ಬೆಂಬಲಿಸಿ ಎಚ್‌ಡಿಕೆ ಟ್ವೀಟ್
ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್ ಗೆ ನನ್ನ ಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ, ಬಂದ್ ಯಶಸ್ವಿ ಆಗಲಿ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರು ಕೂಡ ಬಂದ್ ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Tue, 26 Sep 202302:56 AM IST
ಕುರಬೂರು ಪೊಲೀಸ್ ವಶಕ್ಕೆ
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಬೆಂಗಳೂರಿನ ಪ್ರತಿಭಟನೆಗೆ ಮುಂದಾದ ಹೋರಾಟಗಾರ ಕುರಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ರೈತರು ಪ್ರತಿಭಟನೆ ಆರಂಭಿಸಿದ್ದರು. ಈ ವೇಳೆ ಪೊಲೀಸರು ನಿಷೇಧಾಜ್ಞೆ ಇರುವಾಗ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಹೇಳಿದರು. ಇದಕ್ಕೆ ಒಪ್ಪದೇ ಇದ್ದಾಗ ಕುರುಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಸರ್ಕಾರವೇ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕುರುಬೂರು ಶಾಂತಕುಮಾರ್ ಆಕ್ರೋಶ ಹೊರ ಹಾಕಿದರು.
Tue, 26 Sep 202302:31 AM IST
ಬೆಂಗಳೂರು ಮೆಟ್ರೋ ಸೇವೆ ಯಥಾರೀತಿ
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಆಗಿರುವ ಅನ್ಯಾಯ ಖಂಡಿಸಿ ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಮೆಟ್ರೋ( Namma Metro) ನೈತಿಕ ಬೆಂಬಲ ಸೂಚಿಸಿ ಸೇವೆ ಆರಂಭಿಸಿದೆ.
ಈಗಾಗಲೇ ಬೆಳಿಗ್ಗೆಯಿಂದಲೇ ಮೆಟ್ರೋ ಸೇವೆ ಎಂದಿನಂತೆಯೇ ಶುರುವಾಗಿದ್ದು, ಮುಂದುವರಿಯಲಿದೆ.
Tue, 26 Sep 202301:49 AM IST
ಬೆಂಗಳೂರು ಬಂದ್‌ಗೆ ಭಾರೀ ಭದ್ರತೆ
ಬೆಂಗಳೂರಿನಲ್ಲಿ ಭಾರೀ ಪೋಲೀಸ್ ಭದ್ರತೆ ಮಂಗಳವಾರ ದಿನವಿಡೀ ಇರಲಿದೆ. ಕೆಎಸ್‌ಆರ್ ಪಿ 60 ಹಾಗೂ ಸಿಎಆರ್‌ನ 40 ತುಕಡಿಗಳು ಸೇರಿ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ನಗರ ಪೊಲೀಸ್ ಆಯುಕ್ತರು, ಹೆಚ್ಚುವರಿ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು ಉಸ್ತುವಾರಿ ನೋಡಿಕೊಳ್ಳುವರು. ಇದಲ್ಲದೇ ತಮಿಳುನಾಡು ಭಾಗದಿಂದ ಆಗಮಿಸುವ ಎಲ್ಲಾ ಬಸ್‌ಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುತ್ತದೆ ಎನ್ನುವುದು ಪೊಲೀಸರ ವಿವರಣೆ.
Tue, 26 Sep 202301:26 AM IST
ಬೆಂಗಳೂರು ಶಾಲಾ, ಕಾಲೇಜು ರಜೆ
ಬೆಂಗಳೂರು: ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಶಾಲಾ, ಕಾಲೇಜುಗಳು ರಜೆ ಘೋಷಿಸಲಾಗಿದೆ.
ಬೆಂಗಳೂರಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶಿಕ್ಷಕರು, ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಹಿನ್ನೆಲೆ ಸಮಸ್ಯೆ ಆಗದಂತೆ ಉಪನ್ಯಾಸಕರಿಗೂ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಡಿಸಿ ಕೆ.ಎ.ದಯಾನಂದ್ ಆದೇಶದಲ್ಲಿ ತಿಳಿಸಿದ್ದಾರೆ.
Tue, 26 Sep 202301:10 AM IST
ಬೆಂಗಳೂರು ಬಂದ್ ಆರಂಭ
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಬೆಂಗಳೂರು ಬಂದ್ ಆರಂಭವಾಗಿದೆ.
ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಇರಲಿದೆ.
ಈಗಾಗಲೇ ಬೆಂಗಳೂರಿನಲ್ಲಿ ಹಲವು ಕಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಾಲಾ ವಾಹನ ಒಕ್ಕೂಟದವರೂ ಬಂದ್‌ಗೆ ಬೆಂಬಲ ಘೋಷಿಸಿದ್ದಾರೆ. ಆಟೋ ರಿಕ್ಷಾ ಸಂಘಟನೆಗಳು ಬೆಂಬಲ ಸೂಚಿಸಿವೆ. ಇದರಿಂದ ಆಟೋರಿಕ್ಷಾ ಸೇವೆಯಲ್ಲಿ ವ್ಯತ್ಯಯವಾಗಬಹುದು. ಓಲಾ, ಉಬರ್ ಸಂಸ್ಥೆಗಳೂ ನೈತಿಕ ಬೆಂಬಲ ನೀಡಲಿದ್ದು, ಸೇವೆಯನ್ನು ನೀಡಲಿವೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಪರಿಸ್ಥಿತಿ ನೋಡಿಕೊಂಡು ರಸ್ತೆಗೆ ಇಳಿಯಲಿವೆ. ಮೆಟ್ರೋ ಯಥಾರೀತಿ ಸಂಚರಿಸಲಿದೆ.
ಬಂದ್ ಘೋಷಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಯಲ್ಲಿದೆ.
Tue, 26 Sep 202312:52 AM IST
ಬೆಂಗಳೂರು ಬಂದ್‌ಗೆ ಬೆಂಬಲ
ಬೆಂಗಳೂರು; ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ ಎಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸಂಚಾಲಕ ಕುರಬೂರು ಶಾಂತಕುಮಾರ್ ತಿಳಿಸಿದ್ಧಾರೆ.
ಇದರಲ್ಲಿ ಮುಖ್ಯವಾಗಿ ಕಬ್ಬು ಬೆಳೆಗಾರರ ಸಂಘ, ಬಿಬಿಎಂಪಿ ಕಾರ್ಮಿಕರ ಸಂಘ, ಕೆಎಸ್ಆರ್‌ಟಿಸಿ ಕನ್ನಡ ಕಾರ್ಮಿಕರ ಸಂಘ, ಓಲಾ ಉಬರ್ ಮಾಲೀಕರ ಹಾಗೂ ಚಾಲಕರ ಸಂಗ, ಚಲನಚಿತ್ರ ವಾಣಿಜ್ಯ ಮಂಡಳಿ, ಕರವೇ ಕನ್ನಡ ಸೇನೆ, ಕಾರ್ಮಿಕ ಪಡೆ, ಹೊಯ್ಸಳ ಸೇನೆ, ಒಕ್ಕಲಿಗರ ಯುವ ವೇದಿಕೆ, ಕರ್ನಾಟಕ ಮರಾಠ ಮಂಡಳ, ನಾಡಗೌಡ ಕೆಂಪೇಗೌಡ ಟ್ರಸ್ಟ್ ಬೆಂಬಲ ನೀಡಿರುವ ಸಂಘಟನೆಗಳು.
Tue, 26 Sep 202312:04 AM IST
ಬೆಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕರೆ ನೀಡಲಾಗಿರುವ ಮಂಗಳವಾರದ ಬೆಂಗಳೂರು ಬಂದ್ ಗೆ ನಿಷೇಧಾಜ್ಞೆ ಬಿಸಿ ತಟ್ಟಿದೆ.
ಬೆಂಗಳೂರು ಬಂದ್ ಗೆ ಅವಕಾಶವಿಲ್ಲ. ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಮಂಗಳವಾರ ನಡೆಯುವ ಬೆಂಗಳೂರು ಬಂದ್ ಗೆ ರೀತಿಯಲ್ಲಿ ಅವಕಾಶವಿಲ್ಲ. ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರತಿಭಟನೆ ವೇಳೆ ಆಹಿತಕರ ಘಟನೆ ನಡೆಯಬಾರದು. ಅದಕ್ಕಾಗಿ ಬೆಂಗಳೂರು ನಗರದಲ್ಲಿ ಹೆಚ್ಚು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Mon, 25 Sep 202304:09 PM IST
ಬೆಂಗಳೂರು ಬಂದ್ ಬೆಂಬಲವನ್ನ ವಾಪಸ್ ಪಡೆಯಿತಾ ಹೋಟೆಲ್ ಮಾಲೀಕರ ಸಂಘ?
ನಾಳೆ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ ನೀಡಿದ ಬೆಂಬಲವನ್ನು ಹೋಟೆಲ್ ಮಾಲೀಕರ ಸಂಘ ವಾಪಾಸು ಪಡೆದಿದ್ದು, ಬದಲಾಗಿ ಸೆ.29ರ ಕರ್ನಾಟಕ್ ಬಂದ್‌ಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ,
Mon, 25 Sep 202303:03 PM IST
ಕಾವೇರಿ ನೀರಿಲ್ಲದೇ ರಾಜ್ಯ ಸಂಕಷ್ಟದಲ್ಲಿದೆ: ಸಚಿವ ಎಸ್ ಮಧು ಬಂಗಾರಪ್ಪ
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ ಸಿಡಬ್ಲ್ಯೂಸಿ (ಕಾವೇರಿ ನದಿ ನೀರು ಪ್ರಾಧಿಕಾರ) ವಿರುದ್ಧ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರೆಯಲಾಗಿರುವ ಬಂದ್ ಮಾಡುವಂತದ್ದು, ಪ್ರತಿಭಟನೆ ನಡೆಸುವಂತದ್ದು ಅವರವರ ಅಧಿಕಾರವಾಗಿದೆ. ಸಾಮಾನ್ಯ ಜನರಿಗೆ ಹಾಗೂ ಆಸ್ತಿಗೆ ಹಾನಿಯನ್ನುಂಟು ಮಾಡದ ಹಾಗೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಕರ್ನಾಟಕ ರಾಜ್ಯ ಬಹಳ ಸಂಕಷ್ಟದಲ್ಲಿದೆ. ಸುಪ್ರಿಂ ಕೋರ್ಟ್ ನೀವೆ ತೀರ್ಮಾನ ಮಾಡಿ ಅಂತ ಹೇಳುತ್ತದೆ. ಕಾವೇರಿ ನೀರು ಹಂಚಿಕೆ ಪ್ರಾಧಿಕಾರದವರು ಮನಸ್ಸಿಗೆ ಬಂದ ಹಾಗೆ ತೀರ್ಮಾನ ಮಾಡುತ್ತಿದೆ ಎಂದರು.
Mon, 25 Sep 202301:10 PM IST
ಬಂದ್ ಹಿನ್ನೆಲೆ ಬೆಂಗಳೂರಿನ ಶಾಲೆಗಳಿಗೆ ರಜೆ ಘೋಷಣೆ
ಬೆಂಗಳೂರು ಬಂದ್ ಹಿನ್ನೆಲೆ ನಗರದ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಆದೇಶ ಹೊರಡಿಸಿದ್ದಾರೆ.
Mon, 25 Sep 202301:03 PM IST
ಅಗತ್ಯ ಸೇವೆಗಳ ವ್ಯತ್ಯಯ ಇಲ್ಲ
ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್‌ಗಳು ಮತ್ತು ಸರ್ಕಾರಿ ಕಚೇರಿಗಳು ಸೇರಿದಂತೆ ಅಗತ್ಯ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.
Mon, 25 Sep 202312:24 PM IST
ನಮ್ಮ ಮೆಟ್ರೋ ಸೇವೆ ಇದೆಯಾ?
ನಾಳೆ ಬಂದ್ ಆದರೂ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಮ್ಮ ಮೆಟ್ರೋ ಸೇವೆಗಳನ್ನು ಎಂದಿನಂತೆ ನಿರ್ವಹಿಸಲಿದೆ.
Mon, 25 Sep 202311:37 AM IST
ಓಲಾ, ಉಬರ್ ಸೇವೆ ಇಲ್ಲ
ಓಲಾ, ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ಬೆಂಗಳೂರು ಬಂದ್‌ನಲ್ಲಿ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ಮಂಗಳವಾರ ನಗರದಲ್ಲಿ ಓಲಾ, ಉಬರ್ ಸೇವೆ ಇರುವುದಿಲ್ಲ. ಅಲ್ಲದೇ ಏರ್‌ಪೋರ್ಟ್ ಟ್ಯಾಕ್ಸಿ ಸೇವೆಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.
Mon, 25 Sep 202310:45 AM IST
ಸೆ.26ರ ನಂತರ ತಮಿಳುನಾಡಿಗೆ ನೀರು ಬಿಡಲ್ಲ ಅಂತ ಕಾವೇರಿ ಪ್ರಾಧಿಕಾರಕ್ಕೆ ಹೇಳ್ತೇವೆ; ಸಿಎಂ ಸಿದ್ದರಾಮಯ್ಯ
ಬಂದ್ ಕರೆ ಹಿನ್ನೆಲೆಯಲ್ಲಿ ಕಾವೇರಿ ವಿವಾದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದು, ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅರ್ಜಿ ವಜಾಮಾಡಿರುವ ಕಾರಣ ಸೆಪ್ಟೆಂಬರ್ 26ರ ವರೆಗೆ 5,000 ಕ್ಯುಸೆಕ್ ನೀರು ಹರಿಸುವುದು ನಮಗೆ ಅನಿವಾರ್ಯವಾಗಿದೆ. ಸೆ.26ರ ನಂತರ ನೀರು ಬಿಡಲ್ಲ ಎಂದು ಮತ್ತೆ ಪ್ರಾಧಿಕಾರಕ್ಕೆ ಹೇಳ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
Mon, 25 Sep 202311:11 AM IST
ಹೆಚ್.ಡಿ ದೇವೇಗೌಡರು ಪತ್ರ ಬರೆದಿರುವುದನ್ನು ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದಿರುವುದನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
Mon, 25 Sep 202310:17 AM IST
ಕಾವೇರಿ ವಿಚಾರವಾಗಿ ಪ್ರಧಾನಿ ಮೋದಿಗೆ ಹೆಚ್ಡಿಡಿ ಪತ್ರ
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿದ್ದಾರೆ. ನೀರಿನ ಬಿಕ್ಕಟ್ಟಿನಿಂದ ಕರ್ನಾಟಕದ ಜನರನ್ನು ರಕ್ಷಿಸಬೇಕೆಂದು ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
Mon, 25 Sep 202310:15 AM IST
ಕಾವೇರಿ ವಿಚಾರದಲ್ಲಿ ದೇವೇಗೌಡರು ಭಾವುಕ; ಕೇಂದ್ರಕ್ಕೆ ಮನವಿ
ಕಾವೇರಿ ವಿವಾದದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಭಾವುಕರಾದರು. ಕರ್ನಾಟಕಕ್ಕೆ ತಂಡವನ್ನು ಕಳುಹಿಸಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ನಾನು ಬದುಕಿರುವುದು ರಾಜಕೀಯ ಅಥವಾ ಅಧಿಕಾರಕ್ಕಾಗಿ ಅಲ್ಲ. ರಾಜ್ಯದ ಜನರನ್ನು ಉಳಿಸಲು ನಾವಿದ್ದೇವೆ, ಇದಕ್ಕಾಗಿ ನನ್ನ ಪಕ್ಷ ಅಸ್ತಿತ್ವದಲ್ಲಿದೆ ಎಂದರು.
Mon, 25 Sep 202309:51 AM IST
ಕೆಎಸ್‌ಆರ್‌ಟಿಸಿ-ಬಿಎಂಟಿಸಿ ಬಸ್ ಸೇವೆ ಇರುತ್ತಾ?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ನೌಕರರ ಸಂಘವೂ ಬೆಂಬಲ ಸೂಚಿಸಿದೆ. ಹೀಗಾಗಿ ಮಂಗಳವಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರದಲ್ಲೂ ವ್ಯತ್ಯಯವಾಗಬಹುದು.
Mon, 25 Sep 202309:51 AM IST
ಶಾಲಾ-ಕಾಲೇಜು, ಸಾರಿಗೆ, ಕಾರ್ಖಾನೆ, ಕಂಪನಿಗಳ ಬೆಂಬಲಕ್ಕೆ ಮನವಿ
ರೈತ ಹಾಗೂ ಕನ್ನಡ ಪರ ಸಂಘಟನೆಗಳು ಶಾಲೆ, ಕಾಲೇಜುಗಳು, ಅಂಗಡಿ-ಮುಂಗಟ್ಟು, ವಿವಿಧ ವಾಣಿಜ್ಯ ಸಂಸ್ಥೆಗಳ ಮಾಲೀಕರು, ಕಾರ್ಖಾನೆಗಳು, ಕಂಪನಿಗಳು ಮತ್ತು ಸಾರಿಗೆಯವರಿಗೆ ತಮ್ಮ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿವೆ. ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರಬೂರು ಶಾಂತ ಕುಮಾರ್ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.
Mon, 25 Sep 202309:55 AM IST
ಮಂಗಳವಾರ ಬೆಂಗಳೂರು ಬಂದ್
ಬರ ಪರಿಸ್ಥಿತಿಗೆ ತುತ್ತಾಗಿರುವ ಕರ್ನಾಟಕದಿಂಧ ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದ್ದು, ಇದನ್ನ ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಇದನ್ನು ವಿರೋಧಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಂದ್, ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಮಂಡ್ಯವನ್ನು ಬಂದ್ ಮಾಡಿ ಹೋರಾಟ ನಡೆಸಲಾಗಿತ್ತು. ಸೆಪ್ಟೆಂಬರ್ 26 ರಂದು ( ಮಂಗಳವಾರ) ಬೆಂಗಳೂರು ಹಾಗೂ ಸೆ.29 ರಂದು ಇಡೀ ಕರ್ನಾಟಕ ಬಂದ್ ಆಗಲಿದೆ.