ಏರೋ ಇಂಡಿಯಾ 2025 : ಜನವರಿ 23 ರಿಂದ 4 ವಾರ ಯಲಹಂಕ ವಾಯುನೆಲೆಯ 13 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ
Aero India 2025: ಏರೋ ಇಂಡಿಯಾ 2025 ಭಾಗವಾಗಿ ಬೆಂಗಳೂರಿನ ಯಲಹಂಕ ವಾಯುನೆಲೆಯ ಪ್ರದೇಶದಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ.

Aero India 2025: ಬೆಂಗಳೂರಿನಲ್ಲಿ ಏರೋ ಇಂಡಿಯಾ 2025 ಕ್ಕೆ ಸಿದ್ದತೆಗಳು ಸಾಗಿರುವ ನಡುವೆಯೇ ಏರೋ ಇಂಡಿಯಾ ಶೋ ನಡೆಯುವ ಬೆಂಗಳೂರಿನ ಯಲಹಂಕ ಭಾಗದಲ್ಲಿ ಮಾಂಸ ಮಾರಾಟ ಹಾಗೂ ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಫೆಬ್ರವರಿ 10 ರಿಂದ ಫೆಬ್ರವರಿ 14 ರವರೆಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ಆರಂಭವಾಗುವ ಮುನ್ನವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಆದೇಶ ಜಾರಿ ಹೊರಡಿಸಿದ್ದು ಸುಮಾರು ನಾಲ್ಕು ವಾರಗಳ ಕಾಲ ಈ ಆದೇಶ ಜಾರಿಯಲ್ಲಿರಲಿದೆ.2025 ರ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಯಲಹಂಕ ವಾಯುನೆಲೆಯ 13 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಕತ್ತರಿಸುವುದನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಜಾರಿ ಮಾಡಿದೆ.
ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ -2025 ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಯಲಹಂಕ ವಾಯುನೆಲೆಯ 13 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ಮಾಂಸ, ಕೋಳಿ, ಮೀನು ಅಂಗಡಿಗಳನ್ನು ಮುಚ್ಚಲು ಮತ್ತು ಮಾಂಸಾಹಾರಿ ಭಕ್ಷ್ಯಗಳ ಸೇವೆ ಮತ್ತು ಮಾರಾಟವನ್ನು ನಿಷೇಧಿಸಲು ಸಾರ್ವಜನಿಕರು ಮತ್ತು ಮಾಂಸದ ಅಂಗಡಿಗಳು, ಮಾಂಸಾಹಾರಿ ಹೋಟೆಲ್ಗಳು ಮತ್ತು ರೆಸ್ಟೋರೆಂಟ್‌ಗಳ ಮಾಲೀಕರ ಗಮನಕ್ಕೆ ತರಲಾಗಿದೆ.
ಸೂಚನೆಯನ್ನು ಪಾಲಿಸದಿದ್ದರೆ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಆದೇಶದಲ್ಲಿ ಎಚ್ಚರಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ವಿಮಾನ ನಿಯಮಗಳು 1937 ನಿಯಮ 91 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದೂ ಬೃಹತ್ ಮಹಾನಗರಪಾಲಿಕೆ ತಿಳಿಸಿದೆ.
ಏರೋ ಇಂಡಿಯಾ 2025 ರಂತಹ ಏರ್ ಶೋಗಳ ಸಮಯದಲ್ಲಿ ವಾಯುಪಡೆಯ ನಿಲ್ದಾಣಗಳ ಸುತ್ತಲೂ ಮಾಂಸದ ನಿಷೇಧವನ್ನು ಪಕ್ಷಿಗಳ ದಾಳಿಯನ್ನು ತಡೆಗಟ್ಟಲು ಜಾರಿಗೆ ತರಲಾಗಿದೆ. ಏಕೆಂದರೆ ಎಸೆಯಲ್ಪಟ್ಟ ಮಾಂಸ ಮತ್ತು ಆಹಾರ ತ್ಯಾಜ್ಯವು ಹದ್ದು ಸಹಿತ ಇತರೆ ಮಾಂಸಾಹಾರಿ ಪಕ್ಷಿಗಳನ್ನು ಆಕರ್ಷಿಸುತ್ತದೆ, ಇದು ವಿಮಾನಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ. ವಾಯುನೆಲೆಗಳ ಬಳಿ ಪಕ್ಷಿ ಚಟುವಟಿಕೆಯು ಸಂಕೀರ್ಣ ವೈಮಾನಿಕ ಚಟುವಟಿಕೆಗೆ ಅಡ್ಡಿಯಾಗಬಹುದು, ಪೈಲಟ್‌ಗಳು, ವಿಮಾನಗಳು ಮತ್ತು ಪ್ರೇಕ್ಷಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎನ್ನುವ ಕಾರಣದಿಂದ ಈ ಆದೇಶ ಹೊರಡಿಸಲಾಗಿದೆ.
ವಿಮಾನ ಹಾರಾಟದ ಸಮಯದಲ್ಲಿ ಯಾವುದೇ ಹಕ್ಕಿ ಹಾರಿ ಬರುವುದು ಇಲ್ಲವೇ ಡಿಕ್ಕಿಯಾಗುವುದರಿಂದ ಅಪಾಯವೇ ಹೆಚ್ಚು. ಈ ಕಾರಣದಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಏರೋ ಇಂಡಿಯಾ ಶೋ ವೇಳೆ ಮಾಂಸ ಮಾರಾಟವನ್ನು ಯಲಹಂಕ ಭಾಗದಲ್ಲಿ ನಿಷೇಧಿಸಲು ಕೋರಲಾಗುತ್ತದೆ. ಅದರಂತೆ ಬಿಬಿಎಂಪಿ ಆದೇಶ ಹೊರಡಿಸುತ್ತದೆ. ಮಾಂಸಾಹಾರವನ್ನು ಹೊರ ಭಾಗದಿಂದ ತಂದರೂ ತ್ಯಾಜ್ಯವನ್ನು ಕಂಡ ಕಂಡಲ್ಲಿ ಎಸೆಯುವ ಬದಲು ಸರಿಯಾಗಿ ನಿರ್ವಹಣೆ ಮಾಡಬೇಕು ಎನ್ನುವುದು ಅಧಿಕಾರಿಗಳ ಮನವಿ.
ಇದರೊಟ್ಟಿಗೆ ಏರೋ ಇಂಡಿಯಾ ವೇಳೆ ಯಾವುದೇ ಇಂತಹ ಸಣ್ಣ ಪುಟ್ಟ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಂಡವನ್ನೂ ರಚಿಸಲಾಗಿದೆ. ಆ ತಂಡವೂ ಯಲಹಂಕ ಭಾಗದಲ್ಲಿ ಮಾಂಸ ತ್ಯಾಜ್ಯದ ನಿರ್ವಹಣೆಯಿಂದ ಆಗುವ ಗೊಂದಲ, ನಿಷೇಧದ ನಂತರವೂ ಮಾರಾಟ ಮಾಡುತ್ತಿದ್ದರೆ ಅದನ್ನು ಗಮನಿಸಿ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಿಬಿಎಂಪಿ ಮೂಲಕವೂ ಕ್ರಮ ಆಗಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ ಆಯೋಜಿಸಿರುವ ಏರೋ ಇಂಡಿಯಾ 2025 ಏಷ್ಯಾದ ಅತಿದೊಡ್ಡ ಏರ್ ಶೋ ಎಂದು ಗುರುತಿಸಿಕೊಂಡಿದೆ. ಈ ಕಾರ್ಯಕ್ರಮವು ಐದು ದಿನಗಳ ಕಾಲ ನಡೆಯಲಿದ್ದು, ಮೊದಲ ಮೂರು ದಿನಗಳನ್ನು ವ್ಯಾಪಾರ ಸಂದರ್ಶಕರಿಗೆ ಕಾಯ್ದಿರಿಸಲಾಗಿದೆ. ಕೊನೆಯ ಎರಡು ದಿನಗಳಲ್ಲಿ ಸಾರ್ವಜನಿಕರು ಬೆರಗುಗೊಳಿಸುವ ವೈಮಾನಿಕ ಪ್ರದರ್ಶನಗಳಿಗೆ ಸಾಕ್ಷಿಯಾಗಬಹುದು.
ಕಾರ್ಯಕ್ರಮವು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು, ಬೆಂಗಳೂರು ಅಧಿಕಾರಿಗಳು ಈಗಾಗಲೇ ಸಂಚಾರ ಸಲಹೆಗಳನ್ನು ನೀಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ದಟ್ಟಣೆಯನ್ನು ತಪ್ಪಿಸಲು ಹೆಣ್ಣೂರು-ಬಾಗಲೂರು ರಸ್ತೆಯಂತಹ ಪರ್ಯಾಯ ಮಾರ್ಗಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತಿದೆ.

ವಿಭಾಗ