ಹೆಬ್ಬಾಳ-ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸುರಂಗ ಮಾರ್ಗ; 19 ಸಾವಿರ ಕೋಟಿ ರೂ ಸಾಲಕ್ಕೆ ಮುಂದಾದ ಬಿಬಿಎಂಪಿ, ಟೋಲ್‌ ದುಬಾರಿ
ಕನ್ನಡ ಸುದ್ದಿ  /  ಕರ್ನಾಟಕ  /  ಹೆಬ್ಬಾಳ-ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸುರಂಗ ಮಾರ್ಗ; 19 ಸಾವಿರ ಕೋಟಿ ರೂ ಸಾಲಕ್ಕೆ ಮುಂದಾದ ಬಿಬಿಎಂಪಿ, ಟೋಲ್‌ ದುಬಾರಿ

ಹೆಬ್ಬಾಳ-ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸುರಂಗ ಮಾರ್ಗ; 19 ಸಾವಿರ ಕೋಟಿ ರೂ ಸಾಲಕ್ಕೆ ಮುಂದಾದ ಬಿಬಿಎಂಪಿ, ಟೋಲ್‌ ದುಬಾರಿ

ಬೆಂಗಳೂರಿನ ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗಿನ 18 ಕಿಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 19 ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲು ಬಿಬಿಎಂಪಿ ಸಜ್ಜಾಗಿದೆ. ಇದರಿಂದ ಪ್ರಯಾಣದ ಸಮಯ 90 ನಿಮಿಷಗಳಿಂದ 20 ನಿಮಿಷಗಳಿಗೆ ಇಳಿಯಲಿದೆ. ಆದರೆ, ಟೋಲ್‌ ದರವೂ ದುಬಾರಿಯಾಗಲಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)

ಹೆಬ್ಬಾಳ-ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸುರಂಗ ಮಾರ್ಗ; ಸಾಲಕ್ಕೆ ಸಜ್ಜಾದ ಬಿಬಿಎಂಪಿ (ಸಾಂದರ್ಭಿಕ ಚಿತ್ರ)
ಹೆಬ್ಬಾಳ-ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸುರಂಗ ಮಾರ್ಗ; ಸಾಲಕ್ಕೆ ಸಜ್ಜಾದ ಬಿಬಿಎಂಪಿ (ಸಾಂದರ್ಭಿಕ ಚಿತ್ರ) (ANI)

ಬೆಂಗಳೂರು: ದೇಶದ ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗಿನ 18 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಒಂದು ಹಂತಕ್ಕೆ ಬಂದಿದೆ. ಈ ಯೋಜನೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ೦) ಮುಕ್ತ ಮಾರುಕಟ್ಟೆಯಲ್ಲಿ ಸಾಲ ಪಡೆಯಲು ತೀರ್ಮಾನಿಸಿತ್ತು. ಇದೀಗ 9 ಬ್ಯಾಂಕ್‌ಗಳು 19,000 ಕೋಟಿ ರೂ.ಗಳ ಸಾಲ ನೀಡಲು ಆಸಕ್ತಿ ತೋರಿವೆ. ಪ್ರಬಲ ವಿರೋಧದ ನಡುವೆಯೂ ಸರ್ಕಾರ ಈ ಯೋಜನೆಗೆ ಅತೀವ ಆಸಕ್ತಿ ತೋರಿದೆ. ನಗರ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಬಿಬಿಎಂಪಿ ಇತ್ತೀಚಿನ ವರ್ಷಗಳಲ್ಲಿ ಇದು ಅತಿ ದೊಡ್ಡ ಸಾಲದ ಮೊತ್ತ ಎಂದು ಹೇಳಲಾಗುತ್ತಿದೆ.

ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ (ಉತ್ತರ- ದಕ್ಷಿಣ ಕಾರಿಡಾರ್‌) ವರೆಗಿನ 18 ಕಿಮೀ ಮಾರ್ಗವನ್ನು ನಿರ್ಮಾಣ- ನಿರ್ವಹಣೆ- ವರ್ಗಾವಣೆ (built - operate - transfer) ಮಾದರಿಯಲ್ಲಿ ನಿರ್ಮಾಣ ಮಾಡಲಿದೆ. ಈ ಯೋಜನೆಗೆ ಬಿಡ್‌ ಸಲ್ಲಿಸಲು ಇದೇ ತಿಂಗಳ 8ರವರೆಗೆ (ಜನವರಿ) ಕಾಲಾವಕಾಶ ನೀಡಿದೆ.

ಬಿಬಿಎಂಪಿ ಮುಖ್ಯ ಇಂಜಿನಿಯರ್‌ ಬಿಎಸ್ ಪ್ರಹ್ಲಾದ್‌ ಪ್ರತಿಕ್ರಿಯಿಸಿ, 9 ಬ್ಯಾಂಕ್‌ಗಳು ಆಸಕ್ತಿ ತೋರಿಸಿವೆ. ಆದರೆ ಇನ್ನೂ ಬಡ್ಡಿ ದರ ನಿಗದಿಯಾಗಿಲ್ಲ. ಒಮ್ಮೆ ಬಿಡ್‌ಗಳು ಸಲ್ಲಿಕೆಯಾದ ನಂತರ ಸರ್ಕಾರ ಸ್ಪರ್ಧಾತ್ಮಕ ಬಿಡ್‌ ಸಲ್ಲಿಸಿದ ಬ್ಯಾಂಕ್ ಆಯ್ಕೆ ಮಾಡಲಾಗುತ್ತದೆ ಎಂದರು.

ಇಂಡಿಯನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಆರ್‌ಇಸಿ, ಸಾಲ ನೀಡಲು ಆಸಕ್ತಿ ತೋರಿಸಿರುವ ಪ್ರಮುಖ ಬ್ಯಾಂಕ್‌ ಗಳು. ಆದರೆ ಯಾವುದೇ ವಿದೇಶಿ ಬ್ಯಾಂಕ್‌ ಬಿಡ್‌ನಲ್ಲಿ ಭಾಗವಹಿಸಿಲ್ಲ ಎನ್ನುವುದು ಖಚಿತವಾಗಿದೆ. ಕರ್ನಾಟಕ ಸರ್ಕಾರ ಶೇ.40ರಷ್ಟು ಅನುದಾನ ನೀಡಲಿದ್ದು, ರಸ್ತೆಯು ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿದೆ. ಸಹಜವಾಗಿಯೇ ಈ ರಸ್ತೆಗೆ ಟೋಲ್‌ ನಿಗದಿಯಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಡಿ.ಕೆ.ಶಿವಕುಮಾರ್‌ ಕನಸಿನ ಕೂಸು

ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಸಚಿವ ಸಂಪುಟದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಈ ರಸ್ತೆ ನಿರ್ಮಾಣಕ್ಕೆ ಸಾಲ ಪಡೆಯಲು ಬಿಬಿಎಂಪಿಗೆ ಅನುಮತಿ ಮತ್ತು ಸಾಲಕ್ಕೆ ಖಾತ್ರಿ ನೀಡಲು ಸಚಿವ ಸಂಪುಟ ಸಮ್ಮತಿ ಸೂಚಿಸಿತ್ತು. ಈ ಯೋಜನೆ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕನಸಿನ ಕೂಸು.

ಈ ಯೋಜನೆಯು ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿಲ್ಲ ಎಂದಲ್ಲ. ಸುರಂಗ ರಸ್ತೆಗಳ ನಿರ್ಮಾಣದಿಂದ ಸಾರ್ವಜನಿಕರು ಸಾರ್ವಜನಿಕ ಸಾರಿಗೆಯಿಂದ ಖಾಸಗಿ ವಾಹನಗಳಿಗೆ ವರ್ಗಾವಣೆಗೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.

ಮೂರು ಕಡೆ ಆಗಮನ-ನಿರ್ಗಮನ ನಿರ್ಮಾಣ

ಸುರಂಗ ರಸ್ತೆಯಲ್ಲಿ ಮೂರು ಇಂಟರ್‌ ಮೀಡಿಯೇಟ್‌ ಸ್ಥಳಗಳಲ್ಲಿ ರ‍್ಯಾಂಪ್‌ಗಳ ಮೂಲಕ ಮೇಖ್ರಿ ಸರ್ಕಲ್‌, ರೇಸ್‌ ಕೋರ್ಸ್‌ ರಸ್ತೆ ಮತ್ತು ಲಾಲ್‌ ಬಾಗ್‌ನಲ್ಲಿ ಆಗಮನ-ನಿರ್ಗಮನ ನಿರ್ಮಾಣವಾಗಲಿದೆ. ಇದರಿಂದ ಪ್ರಯಾಣದ ಸಮಯ 90 ನಿಮಿಷಗಳಿಂದ 20 ನಿಮಿಷಗಳಿಗೆ ಇಳಿಯುತ್ತದೆ. ಬಲ್ಲ ಮೂಲಗಳ ಪ್ರಕಾರ 18 ಕಿಮೀ ದೂರ ಪ್ರಯಾಣಕ್ಕೆ 288 ರೂ. ಟೋಲ್‌ ನಿಗದಿಯಾಗುವ ಸಂಭವವಿದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner