ಬೆಂಗಳೂರು ಕನ್ನಡಿಗರ ಸ್ವತ್ತು: ಆ ಒಂದು ಪೋಸ್ಟ್ನಿಂದ ಕನ್ನಡಿಗರು-ಹೊರಗಿನವರು ಎಂಬ ಬಿಸಿಬಿಸಿ ಚರ್ಚೆ ಆರಂಭ
Bengaluru belongs to Kannadigas: ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಾಕಿದ 'ಬೆಂಗಳೂರು ಕನ್ನಡಿಗರಿಗೆ ಸೇರಿದ್ದು ಎಂಬ ಪೋಸ್ಟ್ವೊಂದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಸಂಚಲನ ಸೃಷ್ಟಿಸಿದೆ.
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಪೋಸ್ಟ್ವೊಂದು ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ. ಕನ್ನಡಿಗರು ಮತ್ತು ಹೊರಗಿನವರು ಎಂಬುದು ಈ ಚರ್ಚೆಯ ಪ್ರಮುಖ ವಿಷಯವಾಗಿದೆ. ಬೆಂಗಳೂರು ಕನ್ನಡಿಗರಿಗೆ ಸೇರಿದ್ದು ಎಂಬ ಪೋಸ್ಟ್ ವೈರಲ್ ಆದ ನಂತರ ಬೆಂಗಳೂರಿನಲ್ಲಿ 'ಹೊರಗಿನವರು-ಒಳಗಿನವರು' ಎಂಬ ಚರ್ಚೆ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾಗಿದೆ. ಇದು ಟೆಕ್ಕಿಗಳು, ಉದ್ಯಮಿಗಳು ಸೇರಿದಂತೆ ಎಲ್ಲಾ ವಿಭಾಗದವರ ಆಕ್ರೋಶಕ್ಕೆ ಕಾರಣವಾಗಿದೆ.
ಎಕ್ಸ್ ಖಾತೆಯಲ್ಲಿ ಲಕ್ಷ್ಮಿ ತನಯ (@ManjukBye) ಎಂಬವರ ಪೋಸ್ಟ್ ಈ ಆಕ್ರೋಶಕ್ಕೆ ಕಾರಣವಾಗಿದೆ. ‘ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ, ನೀವು ಕನ್ನಡ ಮಾತನಾಡದಿದ್ದರೆ ಅಥವಾ ಕನ್ನಡ ಮಾತನಾಡಲು ಪ್ರಯತ್ನಿಸದಿದ್ದರೆ ನಿಮ್ಮನ್ನು ಬೆಂಗಳೂರಿನಲ್ಲಿ ಹೊರಗಿನವರೆಂದೇ ಪರಿಗಣಿಸಲಾಗುತ್ತದೆ. ಅದನ್ನು ಬರೆಯಿರಿ, ಅದನ್ನು ಶೇರ್ ಮಾಡಿ. ನಿಜವಾಗಲೂ ನಾನು ಜೋಕ್ ಮಾಡುತ್ತಿಲ್ಲ. ಬೆಂಗಳೂರು ಯಾವತ್ತಿಗೂ ಕನ್ನಡಿಗರಿಗೆ ಸೇರಿದ್ದು’ ಎಂದು ಪೋಸ್ಟ್ ಹಾಕಿದ್ದಾರೆ.
ಪರ-ವಿರೋಧ ಚರ್ಚೆ ಆರಂಭ
ಇದು ಬೇರೆ ಭಾಷಿಕರಿಗೆ ಅಥವಾ ಅನ್ಯ ರಾಜ್ಯದವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಸಾಕಷ್ಟು ಕನ್ನಡಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯವನ್ನು ದೂಷಿಸಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸೃಷ್ಟಿ ಶರ್ಮಾ ಎಂಬ ಟೆಕ್ಕಿ, 'ಬೆಂಗಳೂರು ಭಾರತದಲ್ಲಿದೆ. ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವುದು ಎಲ್ಲರ ಹಕ್ಕು.ಅದು ಕೂಡ ಒಂದು ವಿಷಯ. ಆದರೆ ಅದಕ್ಕಿಂತ ಶ್ರೇಷ್ಠವಾಗಿ ವರ್ತಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಶಿವ ಎಂಬ ಇನ್ನೊಬ್ಬ ಎಕ್ಸ್ ಖಾತೆದಾರರು, 'ಸ್ಥಳೀಯ ಭಾಷೆಗಳಿಗೆ ಗೌರವ ಮುಖ್ಯ. ಆದರೆ ಭಾಷೆಯ ಆಧಾರದ ಮೇಲೆ ಜನರನ್ನು ವಿಭಜಿಸುವುದು ನಕಾರಾತ್ಮಕತೆ ಹೆಚ್ಚಿಸುತ್ತದೆ ಎಂದರೆ ಅತಿಶಯೋಕ್ತಿ ಅಲ್ಲ. ಬೆಂಗಳೂರು ಯಾವಾಗಲೂ ಎಲ್ಲವನ್ನೂ ಒಳಗೊಂಡ ನಗರವಾಗಿದೆ, ಎಲ್ಲಾ ವರ್ಗದ ಜನರನ್ನು ಸ್ವಾಗತಿಸುತ್ತದೆ. ನಾವು ವೈವಿಧ್ಯತೆಯನ್ನು ಆಚರಿಸೋಣ, ಅಡೆತಡೆಗಳನ್ನು ಸೃಷ್ಟಿಸಬಾರದು ಎಂದು ಬುದ್ದಿ ಮಾತು ಹೇಳಿದ್ದಾರೆ.
ಕೆಲವರಿಂದ ಉತ್ತಮ ಪ್ರತಿಕ್ರಿಯೆ
ಫಿಟ್ನೆಸ್ ತರಬೇತುದಾರರೊಬ್ಬರಾದ ಪ್ರಿಯಾಂಕಾ ಲಾಹ್ರಿ ಅವರು, 'ನಾನು 8 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದೇನೆ. ಕನ್ನಡ ನನಗೆ ಕಲಿಯಲು ಕಷ್ಟಕರವಾದ ಭಾಷೆ. ಆದರೆ ಭಾಷೆಯಲ್ಲಿ ನನ್ನ ಪರಾಕ್ರಮದ ಕೊರತೆಯಿಂದ ನನ್ನನ್ನು ಎಂದಿಗೂ ಕೆಟ್ಟದಾಗಿ ಅಥವಾ ಹೊರಗಿನವರಂತೆ ಪರಿಗಣಿಸಲಾಗಿಲ್ಲ. ಜನರು ತುಂಬಾ ಭಿನ್ನರಾಗಿದ್ದಾರೆ, ಸ್ವೀಕರಿಸುತ್ತಾರೆ. ನಾನು ನನ್ನ ಸ್ವಂತ ಮನೆಯಿಂದ ಹೊರಗೆ ಬರುತ್ತಿದ್ದೇನೆ ಎಂಬ ಭಾವನೆ ಬರುತ್ತದೆ. ಇಲ್ಲಿ ಒಳ್ಳೆಯ ಮತ್ತು ನಾಗರಿಕ ಕನ್ನಡಿಗರಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
ಏತನ್ಮಧ್ಯೆ, ಕೆಲವರು ಬೆಂಗಳೂರಿನಲ್ಲಿ ತಮ್ಮ ಜೀವನವನ್ನು ಸುಲಭಗೊಳಿಸಲು ಕನ್ನಡ ಕಲಿಯುವಂತೆ ಕನ್ನಡೇತರ ಭಾಷಿಕರನ್ನು ಕೇಳಿದ್ದಾರೆ. ಇದಕ್ಕೆ ಒಬ್ಬ ಪ್ರತಿಕ್ರಿಯಿಸಿದ್ದು, 'ಐಬಿಎಂನಲ್ಲಿದ್ದಾಗ ಬೆಂಗಳೂರಿನಲ್ಲಿ ಕೇವಲ 4 ತಿಂಗಳು ವಾಸವಾಗಿದ್ದೆ. ಕನ್ನಡ ಮಾತನಾಡುವವರೊಂದಿಗೆ ನಾನು ಆಲಿಸುತ್ತಿದ್ದೆ. ನಾನು ಇಂಗ್ಲಿಷ್-ಕನ್ನಡ ಪಾಕೆಟ್ ಡಿಕ್ಷನರಿಯನ್ನು ಹಿಡಿದುಕೊಂಡು ಜನರೊಂದಿಗೆ ಮಾತನಾಡಲು ಮುಂದಾದೆ. ಹಾಗಾಗಿ ನಾನು ಸುಲಭವಾಗಿ ಕನ್ನಡ ಕಲಿತೆ. ನಾನು ಸ್ವಲ್ಪ ಕನ್ನಡ ಮಾತನಾಡಬಲ್ಲೆ. ನನಗೆ ಮಾತನಾಡಲು, ಕೇಳಲು ಕುತೂಹಲ ಇದೆ. ಗೌರವ ಇದೆ ಎಂದು ಹೇಳಿದ್ದಾರೆ.
ಆದರೆ ಹೊರಗಿನವರು - ಒಳಗಿನವರು ಚರ್ಚೆ ಏಕೆ ಹುಟ್ಟಿಕೊಂಡಿತು ಎಂಬುದು ಇನ್ನೂ ನಿಗೂಢವಾಗಿದೆ. ಆದರೆ ಲಕ್ಷ್ಮಿ ತನಯ ಅವರು ಮಾಡಿದ ಪೋಸ್ಟ್ ಅಂತೂ ಬಿರುಗಾಳಿ ಎಬ್ಬಿಸಿದ್ದು, ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ಸಾಕಷ್ಟು ಮಂದಿ ಕನ್ನಡಿಗರು ಮತ್ತು ಹೊರಗಿನವರ ನಡುವೆ ಪರ-ವಿರೋಧದ ಚರ್ಚೆ ಶುರುವಾಗಿದ್ದು, ಟ್ರೆಂಡಿಂಗ್ನಲ್ಲಿದೆ.