ಬೆಂಗಳೂರು: ಬರ್ತ್‌ಡೇ ಪಾರ್ಟಿಯಲ್ಲಿ ಮೈಮರೆತ ಕುಟುಂಬ; 30 ಗ್ರಾಂ ಚಿನ್ನಾಭರಣ ಮತ್ತು ನಗದು ಕಳವು; ಕಳ್ಳತನ ಹೀಗೂ ಮಾಡ್ತಾರೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಬರ್ತ್‌ಡೇ ಪಾರ್ಟಿಯಲ್ಲಿ ಮೈಮರೆತ ಕುಟುಂಬ; 30 ಗ್ರಾಂ ಚಿನ್ನಾಭರಣ ಮತ್ತು ನಗದು ಕಳವು; ಕಳ್ಳತನ ಹೀಗೂ ಮಾಡ್ತಾರೆ

ಬೆಂಗಳೂರು: ಬರ್ತ್‌ಡೇ ಪಾರ್ಟಿಯಲ್ಲಿ ಮೈಮರೆತ ಕುಟುಂಬ; 30 ಗ್ರಾಂ ಚಿನ್ನಾಭರಣ ಮತ್ತು ನಗದು ಕಳವು; ಕಳ್ಳತನ ಹೀಗೂ ಮಾಡ್ತಾರೆ

ಬೆಂಗಳೂರು ಮದೀನಾ ನಗರದಲ್ಲಿ ಸರಣಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬರ್ತ್‌ಡೇ ಪಾರ್ಟಿಯಲ್ಲಿ ಕುಟುಂಬ ಮೈಮರೆತ ಸಂದರ್ಭದಲ್ಲಿ 30 ಗ್ರಾಂ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಪ್ರಕರಣ ಗಮನಸೆಳೆದಿದೆ. ಕಳ್ಳತನ ಮಾಡುವ ಕ್ರಮವೂ ಬಹಿರಂಗವಾಗಿದೆ. ಈ ಘಟನೆಯ ವಿವರ ಇಲ್ಲಿದೆ.

ಬೆಂಗಳೂರು ಮದೀನಾ ನಗರದಲ್ಲಿ ಕಳೆದ ವಾರ ಸರಣಿ ಮನೆಗಳ್ಳತನ ನಡೆದಿದೆ. ಬರ್ತ್‌ಡೇ ಪಾರ್ಟಿಯಲ್ಲಿ ಮೈಮರೆತ ಕುಟುಂಬದ ಮನೆಯಿಂದ 30 ಗ್ರಾಂ ಚಿನ್ನಾಭರಣ ಮತ್ತು ನಗದು ಕಳವಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಮದೀನಾ ನಗರದಲ್ಲಿ ಕಳೆದ ವಾರ ಸರಣಿ ಮನೆಗಳ್ಳತನ ನಡೆದಿದೆ. ಬರ್ತ್‌ಡೇ ಪಾರ್ಟಿಯಲ್ಲಿ ಮೈಮರೆತ ಕುಟುಂಬದ ಮನೆಯಿಂದ 30 ಗ್ರಾಂ ಚಿನ್ನಾಭರಣ ಮತ್ತು ನಗದು ಕಳವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬರ್ತ್‌ಡೇ ಪಾರ್ಟಿ ಆಚರಿಸುವುದರಲ್ಲಿ ಮೈಮರೆತ ಕುಟುಂಬಕ್ಕೆ ಅದು ಮುಗಿಯುವ ಹೊತ್ತಿಗೆ ಭಾರಿ ಆಘಾತ ಕಾದಿತ್ತು. ಮನೆ ಒಳಗಿದ್ದ 30 ಗ್ರಾಂ ಚಿನ್ನಭಾರಣ, 2.3 ಲಕ್ಷ ರೂಪಾಯಿ ನಗದು ಹಣ ಕಳವು ಆಗಿರುವ ವಿಚಾರ ಗಮನಕ್ಕೆ ಬಂತು. ಕಳೆದ ವಾರ ಈ ಘಟನೆ ನಡೆದಿದ್ದು, ಅದೇ ದಿನ ಆ ಏರಿಯಾದ ಕೆಲವು ಮನೆಗಳಲ್ಲಿ ಕಳವು ನಡೆದಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವರದಿ ಪ್ರಕಾರ, ಬೆಂಗಳೂರಿನ ಮದೀನಾ ನಗರದಲ್ಲಿ ಈ ಕಳವು ನಡೆದಿದೆ. ಶಂಕಿತ ಕಳ್ಳರು ಸ್ಕೂಟರ್‌ನಲ್ಲಿ ಆಗಮಿಸಿದ್ದು, ಅದರ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ಈ ಕಳ್ಳರು ಬರ್ತ್‌ಡೇ ಪಾರ್ಟಿ ಆಚರಿಸುತ್ತಿದ್ದ ಕುಟುಂಬದವರ ಮನೆಗೆ ನುಗ್ಗಿ ಕಳವು ಮಾಡುವ ಮೊದಲು ಹಲವು ಮನೆಗಳಿಗೆ ನುಗ್ಗಿ ಹೊರಬಂದಿರುವ ದೃಶ್ಯಗಳು ಅಲ್ಲಿ ಕೆಲವು ಕಡೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

30 ಗ್ರಾಂ ಚಿನ್ನಾಭರಣ ಮತ್ತು ನಗದು ಕಳವು ಹೀಗಾಯಿತು

ಬರ್ತ್‌ಡೇ ಪಾರ್ಟಿಯಲ್ಲಿ ಕುಟುಂಬ ಮೈಮರೆತ ವೇಳೆ ಈ ಕಳ್ಳರು ಮೊದಲ ಮಹಡಿಯಲ್ಲಿದ್ದ ಮನೆಗೆ ಬಂದಿದ್ದರು. ಬಾಗಿಲು ತೆರೆದಿಟ್ಟಿದ್ದ ಕಾರಣ ಒಳನುಗ್ಗಿದ್ದ ದೃಶ್ಯ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಲ್ಲಿಂದ ಹೊರಗೆ ಬರುವಾಗ ಅವರ ಕೈಯಲ್ಲಿ ಬೆನ್ನಿಗೆ ಹಾಕುವ ಬ್ಯಾಗ್ ಇತ್ತು. ಅದರಲ್ಲಿ ಅವರು ಚಿನ್ನ ಮತ್ತು ನಗದು ಹಣವನ್ನು ತುಂಬಿಕೊಂಡಿದ್ದರು ಎಂದು ಶಂಕಿಸಲಾಗಿದೆ. ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದ ಸಂದರ್ಭದಲ್ಲಿ ಪವರ್‌ ಕಟ್ ಆಗಿತ್ತು. ಈ ಕುರಿತು ಬರ್ತ್‌ಡೇ ಪಾರ್ಟಿ ಮಾಡಿದ್ದ ಅಕ್ಬರ್ ಷರೀಫ್ ದೂರು ದಾಖಲಿಸಿದ್ದಾರೆ.

ಈ ಕಳ್ಳತನ ಎಸಗಿ ಹೊರಬರುವಾಗ ಅವರಿಗೆ ಷರೀಫ್ ಅವರ ಸಂಬಂಧಿಯೊಬ್ಬರು ಎದುರಾಗಿದ್ದರು. ಯಾರನ್ನು ಹುಡುಕುತ್ತಿದ್ದೀರಿ ಎಂದು ಈ ಕಳ್ಳರನ್ನು ಅವರು ಪ್ರಶ್ನಿಸಿದ್ದರು. ಅದಕ್ಕೆ ಅವರು ಗೋಪಾಲ ಅವರ ಮನೆ ಅಲ್ವ ಇದು ಎಂದೇನೋ ಕೇಳಿದ್ದಾರೆ. ಷರೀಫ್‌ ಅವರ ಸಂಬಂಧಿ, ಅಂಥವರು ಯಾರೂ ಇಲ್ಲ ಇಲ್ಲಿ ಎಂದು ಬರ್ತ್‌ಡೇ ಪಾರ್ಟಿ ಕಡೆಗೆ ಹೋಗಿದ್ದರು. ಕಳ್ಳರು ಕೂಡ ಅಲ್ಲಿಂದ ಪರಾರಿಯಾಗಿದ್ದರು.

ಬರ್ತ್‌ಡೇ ಪಾರ್ಟಿ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಬ್ಯಾಗ್‌ ಕಾಣಿಸಿಲ್ಲ. ಚಿನ್ನ ಮತ್ತು ನಗದು ಹಣ ಕಾಣೆಯಾಗಿರುವುದು ಗಮನಕ್ಕೆ ಬಂತು. ಅಕ್ಬರ್ ಷರೀಫ್ ಅವರಿಗೆ ಇದು ಕಳ್ಳರ ಕೃತ್ಯ ಎಂಬುದು ಅರಿವಿಗೆ ಬಂದ ಕೂಡಲೇ ಅವರು ಪೊಲೀಸ್ ಠಾಣೆಗೆ ತಲುಪಿದ್ದರು.

ಪೊಲೀಸ್ ಠಾಣೆಗೆ ಬಂದ ಷರೀಫ್‌ಗೆ ಅಚ್ಚರಿ

ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದ ಅಕ್ಟರ್ ಷರೀಫ್ ಅವರಿಗೆ ನೆರೆಹೊರೆಯವರನ್ನೂ ಅಲ್ಲಿ ಕಂಡು ಅಚ್ಚರಿಯಾಗಿದೆ. ಏನು ಎಂದು ವಿಚಾರಿಸಿದಾಗ ಅವರ ಮನೆಯಲ್ಲೂ ಕಳವು ಆಗಿರುವುದು ಗಮನಕ್ಕೆ ಬಂದಿದೆ. ಎಲ್ಲರಿಂದ ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದಾರೆ.

ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾ ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿದಾಗ ಇಬ್ಬರು ಶಂಕಿತ ಕಳ್ಳರು ಸ್ಕೂಟರ್‌ನಲ್ಲಿ ಬೇರೆ ಬೇರೆ ಮನೆಗಳ ಎದುರು ನಿಂತಿರುವುದು ಕಂಡು ಬಂದಿದೆ. ಅಲ್ಲದೆ, ಮನೆಗಳ ಬಾಗಿಲು ಬಡಿದು ಒಳಗೆ ಹೋಗಿರುವುದು ಕೂಡ ದಾಖಲಾಗಿದೆ.

ಕಳ್ಳರು ಮೊದಲಿ ಮನೆಯ ಬಾಗಿಲು ಬಡಿಯುತ್ತಿದ್ದರು. ಬಾಗಿಲು ತೆರೆದಿದ್ದರೆ ಯಾರದ್ದೋ ಹೆಸರು ಹಿಡಿದು ಕೂಗುತ್ತಿದ್ದರು. ಮನೆಯ ಒಳಗಿನಿಂದ ಯಾವುದೆ ಸ್ಪಂದನೆ ಅಥವಾ ಪ್ರತಿಕ್ರಿಯೆ ಬಾರದೇ ಇದ್ದರೆ ಅಂತಹ ಮನೆಯ ಒಳಗೆ ಹೋಗುತ್ತಿದ್ದರು. ಅಲ್ಲಿಂದ ಹೊರ ಬರುವಾಗ ಅವರ ಬಳಿ ಬೆನ್ನಿಗೆ ಹಾಕುವ ಚೀಲ ಇರುತ್ತಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪೊಲೀಸ್ ತನಿಖೆ ಸ್ಥಳ ಮಹಜರು ನಡೆಸುವಾಗ ಒಂದು ಕಡೆ ಪಾರ್ಕ್‌ನಲ್ಲಿ ಶಾಲಾ ಬ್ಯಾಗ್ ಒಂದು ಪೊಲೀಸರಿಗೆ ಸಿಕ್ಕಿದೆ. ಅದರಲ್ಲಿದ್ದ ಆಧಾರ್ ಕಾರ್ಡ್‌ ನೋಡಿ ವ್ಯಕ್ತಿಯನ್ನು ಸಂಪರ್ಕಿಸಿದಾಗ ಅವರ ಮನೆಯಲ್ಲಿ ಕೂಡ ಕಳ್ಳತನ ಆಗಿರುವುದು ಗಮನಸೆಳೆದಿತ್ತು. ಅವರಿಗೆ ಬ್ಯಾಗ್ ಮತ್ತು ಆಧಾರ್ ಕಾರ್ಡ್ ಅನ್ನು ಪೊಲೀಸರು ವಾಪಸ್ ಕೊಟ್ಟಿದ್ಧಾರೆ. ಉಳಿದಂತೆ ಶಂಕಿತ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಶುರುಮಾಡಿದ್ದಾರೆ ಎಂದು ವರದಿ ವಿವರಿಸಿದೆ.

Whats_app_banner