Munirathna: ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ, ಶಂಕಿತ ಮೂವರ ಬಂಧನ, ಏನಿದು ಪ್ರಕರಣ, 5 ಮುಖ್ಯ ಅಂಶಗಳು
Munirathna Egg Attack: ಬೆಂಗಳೂರು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ. ಗುರುವಾರ ಬೆಳಗ್ಗೆ ಈ ದಾಳಿ ನಡೆದಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ, ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಗಮನಸೆಳೆದ 5 ಅಂಶಗಳ ವಿವರ ಇಲ್ಲಿದೆ.
Munirathna Egg Attack: ಬೆಂಗಳೂರು ರಾಜರಾಜೇಶ್ವರಿ ನಗರದ ಶಾಸಕ ಬಿಜೆಪಿ ನಾಯಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಘಟನೆ ನಂದಿನಿ ಲೇಔಟ್‌ನಲ್ಲಿ ಗುರುವಾರ (ಡಿಸೆಂಬರ್ 25) ಮಧ್ಯಾಹ್ನ ನಡೆದಿದೆ. ಲಕ್ಷ್ಮಿದೇವಿನಗರ ವಾರ್ಡ್ ನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ ಈ ದಾಳಿ ನಡೆದಿತ್ತು. ಈ ಪ್ರಕರಣ ರಾಜಕೀಯ ದ್ವೇಷಕ್ಕೆ ಬದಲಾಗಿದ್ದು, ಪೊಲೀಸರು ಶಂಕಿತ ಮೂವರನ್ನು ಬಂಧಿಸಿದ್ದಾರೆ. ಮುನಿರತ್ನ ಅವರು ಇನ್ನೂ ದೂರು ದಾಖಲಿಸಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಮೂವರನ್ನು ಬಂಧಿಸಲಾಗಿದೆ. ದೂರು ಬಂದ ಬಳಿಕ ಉಳಿದ ಕ್ರಮ ಜರುಗಿಸುವುದಾಗಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಹೇಗಾಯಿತು, ಸಂದರ್ಭ ಯಾವುದು
ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಅವರು ಇತ್ತೀಚೆಗಷ್ಟೆ ಜಾತಿನಿಂದನೆ ಹಾಗೂ ಲೈಂಗಿಕ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಅವರು ಇಂದು (ಡಿಸೆಂಬರ್ 25) ಬೆಳಗ್ಗೆ ನಂದಿನಿ ಲೇಔಟ್‌ನ ಲಕ್ಷ್ಮಿದೇವಿನಗರ ವಾರ್ಡ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಅಲ್ಲಿ ಬೆಂಬಲಿಗರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮೇಲಿನಿಂದ ಅವರ ತಲೆಗೆ ಮೊಟ್ಟೆ ದಾಳಿ ನಡೆದಿದೆ. ಕೂಡಲೇ ಸ್ಥಳದಲ್ಲಿ ಗೊಂದಲ ಏರ್ಪಟ್ಟಿದ್ದು, ಅವರನ್ನು ಅಲ್ಲಿಂದ ಕರೆದೊಯ್ಯಲಾಗಿದೆ. ಇದಾದ ಬಳಿಕ ಮುನಿರತ್ನ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟೇಡಿಯಂ ಬಳಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅದೇ ಸ್ಥಳದಲ್ಲಿ ಕಾಂಗ್ರೆಸ್ ಬೆಂಬಲಿಗರೂ ಸೇರಿದ್ದು, ಪ್ರತಿಭಟನೆ ನಡೆಸಿದರು. ಅಲ್ಲಿ ಉದ್ವಿಗ್ನತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮುನಿರತ್ನ ಮೇಲೆ ಮೊಟ್ಟೆ ಎಸೆತ; ಗಮನಸೆಳೆದ 5 ಅಂಶಗಳು
1) ಮುನಿರತ್ನ ಮೇಲೆ ಮೊಟ್ಟೆ ಎಸೆತ: ಇಂದು (ಡಿಸೆಂಬರ್ 25) ಬೆಳಗ್ಗೆ ನಂದಿನಿ ಲೇಔಟ್‌ನ ಲಕ್ಷ್ಮಿದೇವಿನಗರ ವಾರ್ಡ್‌ನಲ್ಲಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆಯುತ್ತಿದ್ದಾಗಲೇ ಆಸಿಡ್, ಆಸಿಡ್ ಎಂಬ ಕೂಗು ಕೇಳಿಬಂತು ಎಂದು ಟಿವಿ9 ಕನ್ನಡ ವರದಿ ಮಾಡಿದೆ. ಈ ಘಟನೆ ಬಳಿಕ ಮುನಿರತ್ನ ಅವರು ಟ್ವೀಟ್ ಮಾಡಿದ್ದು, “ಇಂದು ವಾರ್ಡ್ ನಂ 42 ಲಕ್ಷ್ಮೀದೇವಿ ನಗರದಲ್ಲಿ ಕಾಂಗ್ರೆಸ್ ಸರ್ಕಾರ, ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಮಾಜಿ ಸಂಸದರಾದ ಡಿ.ಕೆ.ಸುರೇಶ್, ಕಾಂಗ್ರೆಸ್ ಮುಖಂಡರಾದ ಹನುಮಂತರಾಯಪ್ಪ ಅವರ ನಿರ್ದೇಶನದಂತೆ ನನ್ನ ಮೇಲೆ ಆ್ಯಸಿಡ್ ದಾಳಿ ಮಾಡಿಸಿದ್ದಾರೆ ಹಾಗೂ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.
2) ಕಂಠೀರವ ಸ್ಟೇಡಿಯಂ ಬಳಿ ಪ್ರತಿಭಟನೆ: ಮೊಟ್ಟೆ ದಾಳಿ ನಡೆದ ಬಳಿಕ ಮುನಿರತ್ನ ಹಾಗೂ ಅವರ ಬೆಂಬಲಿಗರು ಕಂಠೀರವ ಸ್ಟೇಡಿಯಂ ಬಳಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅದೇ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪರಸ್ಪರ ಕೈ ಮಿಲಾಯಿಸಿ ಘರ್ಷಣೆ ನಡೆದಿದ್ದು, ಕಲ್ಲೆಸೆದು ಕಾರುಗಳನ್ನು ಜಖಂಗೊಳಿಸಿದ್ದೂ ನಡೆಯಿತು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ನಂದಿನಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
3) ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ: ಮೊಟ್ಟೆ ದಾಳಿ ಬಳಿಕ ಶಾಸಕ ಮುನಿರತ್ನ ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಯ ವಿವಿಐಪಿ ವಾರ್ಡ್‌ನಲ್ಲಿ ಎರಡು ಗಂಟೆಗೂ ಹೆಚ್ಚುಕಾಲ ಇದ್ದ ಅವರಿಗೆ ಡಾ ಪಂಕಜಾ ಅವರ ತಂಡ ಚಿಕಿತ್ಸೆ ನೀಡಿದೆ. ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಇದೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ.
4) ಮೂವರು ಶಂಕಿತರ ಬಂಧನ: ಮೊಟ್ಟೆ ದಾಳಿ ಪ್ರಕರಣ ಸಂಬಂಧ ಶಂಕಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರತ್ನ ಅವರು ಇನ್ನೂ ದೂರು ನೀಡಿಲ್ಲ. ದೂರು ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾಗಿ ಟಿವಿ 9 ಕನ್ನಡ ವರದಿ ಮಾಡಿದೆ.
5) ನಂದಿನಿ ಲೇಔಟ್ ಪೊಲೀಸರಿಗೆ ದೂರು ಸಾಧ್ಯತೆ: ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಶಾಸಕ ಮುನಿರತ್ನ ಅವರು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಿದ್ಧಾರೆ ಎಂದು ಶಾಸಕರ ಆಪ್ತ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ.