ಬೆಂಗಳೂರು: ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಬಳಿಕ ಯುಪಿಐ ಮೂಲಕವೇ ನಿತ್ಯ 1 ಕೋಟಿ ರೂಪಾಯಿ ಸಂಗ್ರಹ
BMTC Fare Hike Impact: ಬಿಎಂಟಿಸಿ ಡಿಜಿಟಲ್ ಮೈಲಿಗಲ್ಲು ಸಾಧಿಸಿದ್ದು, ಫೆ.3 ರಂದು ಒಂದೇ ದಿನ ಯುಪಿಐ ಮೂಲಕವೆ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಹಾಗೆ ಬಿಎಂಟಿಸಿಯ ದೈನಂದಿನ ಆದಾಯ ಯುಪಿಐ ಮೂಲಕ 1 ಕೋಟಿ ರೂಪಾಯಿ ಗಡಿ ದಾಟಿದ ದಾಖಲೆ ಸೃಷ್ಟಿಯಾಗಿದೆ.

BMTC Fare Hike Impact: ಬೆಂಗಳೂರು ನಗರ ಸಾರಿಗೆ ಸಂಸ್ಥೆ ಬಿಎಂಟಿಸಿ ಡಿಜಿಟಲ್ ಮೈಲಿಗಲ್ಲು ಸಾಧಿಸಿದ್ದು, ಫೆ.3 ರಂದು ಒಂದೇ ದಿನ ಯುಪಿಐ ಮೂಲಕವೆ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಹಾಗೆ ಬಿಎಂಟಿಸಿಯ ದೈನಂದಿನ ಆದಾಯ ಯುಪಿಐ ಮೂಲಕ 1 ಕೋಟಿ ರೂಪಾಯಿ ಗಡಿ ದಾಟಿದ ದಾಖಲೆ ಸೃಷ್ಟಿಯಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಮೂಲಕ ಟಿಕೆಟ್ ಖರೀದಿಸುವ ಸೌಲಭ್ಯ ಕಲ್ಪಿಸಲಾಗಿದೆ. ವಿವಿಧ ಕಡೆ ಸಂಚರಿಸುವ ನಗದು ಹಣದ ಬದಲಾಗಿ ಬಹುತೇಕರು ಯುಪಿಐ ಮೂಲಕ ಟಿಕೆಟ್ ಪಡೆಯುತ್ತಿದ್ದಾರೆ.
ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಬಳಿಕ ಯುಪಿಐ ಮೂಲಕವೇ ನಿತ್ಯ 1 ಕೋಟಿ ರೂ ಸಂಗ್ರಹ
ಬಿಎಂಟಿಸಿ ದಾಖಲೆಗಳ ಪ್ರಕಾರ, ದೈನಂದಿನ ಯುಪಿಐ ವಹಿವಾಟಿನ ಮೊತ್ತವು ಜನವರಿ 9 ರಂದು 56.6 ಲಕ್ಷ ರೂಪಾಯಿ ಇತ್ತು. ಜನವರಿ 13 ರಂದು 60.05 ಲಕ್ಷ ರೂಪಾಯಿ, ಜನವರಿ 20 ರಂದು 80.1 ಲಕ್ಷ ರೂಪಾಯಿ, ಜನವರಿ 27 ರಂದು 90.9 ಲಕ್ಷ ರೂಪಾಯಿ ತಲುಪಿತ್ತು. ಈಗ ಫೆಬ್ರವರಿ 3 ರಂದು 1.03 ಕೋಟಿ ರೂಪಾಯಿ ದಾಟಿದೆ. ದಿನೇದಿನೆ ಹೆಚ್ಚು ಪ್ರಯಾಣಿಕರು ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುತ್ತಿರುವುದು ಈ ಮೂಲಕ ದೃಢಪಟ್ಟಿದೆ.
ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಜ.5ರಂದು ಏರಿಸಲಾಗಿತ್ತು. ಈ ದಿನದಿಂದ ಅನ್ವಯವಾಗುವಂತೆ ಕರ್ನಾಟಕದ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿತು. ಇದಾದ ನಂತರ ಯುಪಿಐ ಮೂಲಕ ಟಿಕೆಟ್ ಪಡೆಯುವ ಗ್ರಾಹಕರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ಬಿಎಂಟಿಸಿ ಬಸ್ ಟಿಕೆಟ್ ನೀಡುವಾಗ ಚಿಲ್ಲರೆ ಸಮಸ್ಯೆ ಇಲ್ಲ
ಬೆಂಗಳೂರು ನಗರದ ಆಯ್ದ ಬಿಎಂಟಿಸಿ ಬಸ್‌ಗಳಲ್ಲಿ ಕ್ಯೂಆರ್ ಕೋಡ್‌ನ್ನು 2023 ರಿಂದ ಪರಿಚಯಿಸಲಾಗಿತ್ತು. ಬಸ್ ಟಿಕೆಟ್ ದರ ಏರಿಕೆಗೆ ಮೊದಲು ಯುಪಿಐ ಮೂಲಕ ಶೇ.10ರಷ್ಟು ಆದಾಯ ಬರುತ್ತಿತ್ತು. ಈಗ ಟಿಕೆಟ್ ದರ ಏರಿಕೆ ಬಳಿಕ ಶೇ.32ರಷ್ಟು ಆದಾಯ ಯುಪಿಐ ಮೂಲಕ ಬರುತ್ತಿದೆ. ಪ್ರತಿಯೊಂದು ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಮೂಲಕ ಹಣವನ್ನು ಪಾವತಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಡಿಜಿಟಲ್ ಹಣ ಪಾವತಿಯಿಂದ ಪ್ರಯಾಣಿಕರ ಮತ್ತು ನಿರ್ವಾಹಕರ ನಡುವಿನ ಚಿಲ್ಲರೆ ಸಮಸ್ಯೆ ನಿವಾರಣೆಯಾಗಿದೆ ಎಂದು ಸಂಸ್ಥೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಶುಲ್ಕ ಹೆಚ್ಚಳದ ನಂತರದಲ್ಲಿ ಚಿಲ್ಲರೆ ಸಮಸ್ಯೆ ಎದುರಾಗುತ್ತಿದ್ದಂತೆ ಸಮಸ್ಯೆಯನ್ನು ಪರಿಹರಿಸಲು ಅನೇಕ ಪ್ರಯಾಣಿಕರು ಯುಪಿಐಗೆ ಬದಲಾಗಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 5 ರಿಂದ ಅನ್ವಯವಾಗುವಂಥೆ ಬಸ್ ದರಗಳು ಶೇಕಡಾ 15 ರಷ್ಟು ಏರಿಕೆಯಾಗಿದೆ. ಕನಿಷ್ಠ ಶುಲ್ಕವು 5 ರೂಪಾಯಿಯಿಂದ 6 ರೂ.ಗೆ ಏರಿತು. ಎಸಿಯೇತರ ಬಸ್‌ಗಳಲ್ಲಿ ಗರಿಷ್ಠ ಪ್ರಯಾಣ ದರ 32 ರೂಪಾಯಿ. ಶಕ್ತಿ ಯೋಜನೆಯ ಕಾರಣ ಎಸಿಯೇತರ ಬಸ್‌ಗಳಲ್ಲಿ ಮತ್ತು ಅಂತರಾಜ್ಯ ಬಸ್‌ಗಳನ್ನು ಬಿಟ್ಟು ಉಳಿದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿದೆ.
