ಕಾವೇರಿ ನೀರು ಸರಬರಾಜು 5ನೇ ಹಂತ, ಮನೆ ಮನೆಗೆ ಕಾವೇರಿ ನೀರು ಸಂಪರ್ಕ, ಬೆಂಗಳೂರು ಜಲ ಮಂಡಳಿಯಿಂದ ಅಭಿಯಾನ
Cauvery Water Connection: ಮನೆ ಮನೆಗೆ ಕಾವೇರಿ ನೀರು ಸಂಪರ್ಕ ಅಭಿಯಾನ ಶುರುವಾಗಿದೆ. ಕಾವೇರಿ ನೀರು ಸರಬರಾಜು 5ನೇ ಹಂತ ಜಾರಿಗೆ ಬಂದರೂ, ಸಂರ್ಪಕ ಗುರಿ ಸಾಧನೆಯಾಗಿಲ್ಲ. ಹೀಗಾಗಿ ಬೆಂಗಳೂರ ಜಲ ಮಂಡಳಿಯಿಂದ ಅಭಿಯಾನ ಶುರುವಾಗಿದೆ.
Cauvery Water Connection: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಸೇರ್ಪಡೆಗೊಂಡ 110 ಹಳ್ಳಿಗಳ ವ್ಯಾಪ್ತಿಯಲ್ಲಿ 5ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆ ಜಾರಿಗೊಂಡಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗೆ ಕಾವೇರಿ ನೀರು ಸಂಪರ್ಕ ಪಡೆಯುವಂತೆ ಬೆಂಗಳೂರು ಜಲ ಮಂಡಳಿ ಅಭಿಯಾನ ಶುರು ಮಾಡಿದೆ. ಈ ಅಭಿಯಾನದ ಮೂಲಕ ಕಾವೇರಿ ನೀರು ಸಂಪರ್ಕಕ್ಕೆ ಸಂಬಂಧಿಸಿ ಜನರ ನೀರಸ ಧೋರಣೆ ಕಡಿಮೆ ಮಾಡುವ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಕಾವೇರಿ 5ನೇ ಹಂತ; ನೀರು ಸಂಪರ್ಕ ಪಡೆಯದ ಗ್ರಾಮಸ್ಥರು
ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಗ್ರಾಮಗಳಲ್ಲಿ ಬೆಂಗಳೂರು ಜಲ ಮಂಡಳಿ ಅಕ್ಟೋಬರ್ 16 ರಂದು ಕಾವೇರಿ 5ನೇ ಹಂತದ ಯೋಜನೆ ಉದ್ಘಾಟನೆ ಮಾಡಲಾಗಿದೆ. ಇದರ ಮೂಲಕ ಮನೆ ಮನೆಗೆ ಕಾವೇರಿ ನೀರು ಸಂರ್ಪಕವನ್ನು ಪಡೆಯಲು ಗ್ರಾಮಸ್ಥರು ಆಸಕ್ತಿ ತೋರಿಲ್ಲ ಎಂಬ ಅಂಶ ಗಮನಸೆಳೆದಿದೆ. ಬಿಬಿಎಂಪಿಯ 110 ಹೊಸ ಗ್ರಾಮಗಳಲ್ಲಿ 3 ಲಕ್ಷ ಕಾವೇರಿ ನೀರು ಸಂಪರ್ಕದ ಗುರಿ ಇರಿಸಿಕೊಳ್ಳಲಾಗಿದೆ. ಅದರೆ ಈ ವರೆಗೆ ಕೇವಲ 3000 ಅರ್ಜಿಗಳಷ್ಟೇ ಸಲ್ಲಿಕೆಯಾಗಿದೆ. 30,000 ವಿಚಾರಣೆಗಳಿಗೆ ಉತ್ತರಿಸಿದ್ದೇವೆ ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.
ಕಾವೇರಿ ನೀರು ಸಂಪರ್ಕ; ನೀರಸ ಪ್ರತಿಕ್ರಿಯೆ ಯಾಕೆ
ಕಾವೇರಿ ಯೋಜನೆ 5ನೇ ಹಂತದಲ್ಲಿ ಮನೆ ಮನೆಗೆ ಕಾವೇರಿ ನೀರು ಸಂಪರ್ಕ ಒದಗಿಸುವುದಕ್ಕೆ ಅಡ್ಡಿಯಾಗಿರುವುದು ಏನು ಎಂಬ ಅನುಮಾನವನ್ನು ಬಗೆಹರಿಸುವಂತೆ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದ್ದು ಇಷ್ಟು - "ಅನೇಕರು, ವಿಶೇಷವಾಗಿ ಅಪಾರ್ಟ್‌ಮೆಂಟ್ ಕಮ್ಯೂನಿಟಿಯವರು ಕಾವೇರಿ ನೀರು ಸಂಪರ್ಕ ಪಡೆಯಲು ಮುಂದಾಗಿದ್ದಾರೆ. ಆದರೆ, ಪ್ರೊ ರಾಟಾ ಶುಲ್ಕವು ಅವರ ಅರ್ಜಿ ಸಲ್ಲಿಕೆಗೆ ಅಡ್ಡಿಯಾಗಿದೆ. ಆದಾಗ್ಯೂ, ದೀರ್ಘಾವಧಿ ವೆಚ್ಚದಲ್ಲಿ ಇದು ಪರಿಣಾಮಕಾರಿ ಎಂಬುದನ್ನು ಗಮನಿಸಬೇಕು. ವಿಶೇಷವಾಗಿ ಬೇಸಿಗೆ ಅವಧಿಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿರುವಾಗ ಪ್ರೊ ರಾಟಾ ಶುಲ್ಕ ಪ್ರಯೋಜನಕ್ಕೆ ಬರುತ್ತದೆ. ಇದನ್ನು ಅರ್ಥ ಮಾಡಿಕೊಂಡು, ಹೆಚ್ಚು ವಸತಿ ಸಮುದಾಯಗಳು ನೀರಿನ ಸಂಪರ್ಕ ಪಡೆಯುತ್ತವೆ ಎಂಬ ನಿರೀಕ್ಷೆ ಇದೆ.
ಮನೆ ಮನೆಗೂ ಕಾವೇರಿ ನೀರು ಸಂಪರ್ಕ ಅಭಿಯಾನ; ಅಹವಾಲುಗಳಿಗೆ ಪರಿಹಾರ
ಕಾವೇರಿ ನೀರು ಸಂಪರ್ಕಕ್ಕೆ ಸಂಬಂಧಿಸಿ ಲಂಚ ಮತ್ತು ನಗದು ಪಾವತಿಗೆ ಬೇಡಿಕೆ ಇರಿಸುವ ಮಧ್ಯವರ್ತಿಗಳ ಬಗ್ಗೆ ಜಾಗರೂಕರಾಗಿರಬೇಕು. ಅವರಿಂದ ಯಾರೂ ವಂಚನೆಗೆ ಒಳಗಾಗಬಾರದು. ಅಂತಹ ದೂರುಗಳು ಬರುತ್ತಿದ್ದು, ಅವುಗಳನ್ನು ಸುಗಮವಾಗಿ ಪರಿಹರಿಸಲಾಗುತ್ತಿದೆ. ಎಲ್ಲೇ ಆದರೂ ಮಧ್ಯವರ್ತಿಗಳು ಈ ರೀತಿ ವರ್ತಿಸಿದರೆ ಕೂಡಲೇ ಜಲಮಂಡಳಿಯ ವಿಜಿಲೆನ್ಸ್ ಸೆಲ್‌ಗೆ ದೂರು ಕೊಡಿ ಎಂದು ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ. ಎಲ್ಲ ದೂರುಗಳನ್ನು ಕೂಡ ಗೌಪ್ಯವಾಗಿ ನಿರ್ವಹಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಇಂತಹ ಸಮಸ್ಯೆಯನ್ನು ಎದುರಿಸಲು, ಬೆಂಗಳೂರು ಜಲ ಮಂಡಳಿಯು “ಮನೆ ಮನೆಗೂ ಕಾವೇರಿ ನೀರು - ಸಂಪರ್ಕ ಅಭಿಯಾನ”ವನ್ನು ಪ್ರಾರಂಭಿಸಿದೆ. ಈ ಉಪಕ್ರಮದ ಭಾಗವಾಗಿ, ಅಧಿಕಾರಿಗಳು ನಗರದಾದ್ಯಂತ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ಸ್ಥಾಪಿಸುತ್ತಾರೆ. ಈ ಉಪಕ್ರಮವು ಮಧ್ಯವರ್ತಿಗಳನ್ನು ದೂರ ಇಟ್ಟು, ನಿವಾಸಿಗಳೇ ನೇರವಾಗಿ ಕಾವೇರಿ ನೀರು ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. "ವಂಚನೆಯನ್ನು ತಡೆಗಟ್ಟಲು ನಿವಾಸಿಗಳು ಮಧ್ಯವರ್ತಿಗಳನ್ನು ತೊಡಗಿಸಿಕೊಳ್ಳುವುದನ್ನು ಅಥವಾ ನಗದು ಪಾವತಿಗಳನ್ನು ಮಾಡುವುದನ್ನು ತಪ್ಪಿಸಬೇಕು. ಸಂಪರ್ಕ ಶುಲ್ಕವನ್ನು ಆರ್‌ಟಿಜಿಎಸ್, ಎನ್‌ಇಎಫ್‌ಟಿ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಮಾತ್ರ ಪಾವತಿಸಬೇಕು" ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸ್ಪಷ್ಟಪಡಿಸಿದ್ದಾರೆ.