ಬೆಂಗಳೂರಿಗೆ ಬಂದ ಬ್ರಿಟನ್ ರಾಜ 3ನೇ ಚಾರ್ಲ್ಸ್ ದಂಪತಿ, ವೈಟ್‌ಫೀಲ್ಡ್‌ಗೆ ರಹಸ್ಯ ಭೇಟಿಯ ಕಾರಣ ಇದುವೇ ನೋಡಿ
ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ದಂಪತಿ ಬೆಂಗಳೂರಿಗೆ ಬಂದಿದ್ದಾರೆ. ಕಳೆದ ಮೂರು ದಿನಗಳಿಂದ ವೈಟ್‌ಫೀಲ್ಡ್‌ನಲ್ಲಿದ್ದಾರೆ. ಅವರ ಈ ರಹಸ್ಯ ಭೇಟಿ ಈಗ ಗಮನಸೆಳೆದಿದ್ದು, ಅದರ ಕಾರಣ ಮತ್ತುಇತರೆ ವಿವರ ಇಲ್ಲಿದೆ.
ಬೆಂಗಳೂರು: ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿದ ಬಳಿಕ ಮೂರನೇ ಚಾರ್ಲ್ಸ್ ದಂಪತಿ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇದು ಅವರ ಖಾಸಗಿ ಪ್ರವಾಸವಾಗಿದ್ದು, ಅಕ್ಟೋಬರ್ 27ರಿಂದ ನಾಲ್ಕು ದಿನ ಅವರು ಬೆಂಗಳೂರಿನಲ್ಲೆ ಪ್ರಕೃತಿ ಚಿಕಿತ್ಸೆ ಪಡೆಯುವುದಕ್ಕಾಗಿ ವೈಟ್‌ಫೀಲ್ಡ್‌ನಲ್ಲಿದ್ದಾರೆ. ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ರಾಜ ಮೂರನೇ ಚಾರ್ಲ್ಸ್ ವೈಟ್‌ಫೀಲ್ಡ್‌ನ ಸೌಖ್ಯ ಇಂಟರ್‌ನ್ಯಾಷನಲ್ ಹೊಲಿಸ್ಟಿಕ್ ಹೆಲ್ತ್ ಸೆಂಟರ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ರಾಜ 3ನೇ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಅಕ್ಟೋಬರ್ 21 ರಿಂದ 26ರ ತನಕ ಸಮೋವಾದಲ್ಲಿ ಕಾಮನ್‌ವೆಲ್ತ್ ಸಭೆ ಮುಗಿಸಿ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಆಗಮನಿಸಿದ್ದಾರೆ.
3ನೇ ಚಾರ್ಲ್ಸ್ ದಂಪತಿ, ವೈಟ್‌ಫೀಲ್ಡ್‌ಗೆ ರಹಸ್ಯ ಭೇಟಿಯ ಕಾರಣ ಇದು
3ನೇ ಚಾರ್ಲ್ಸ್ ದಂಪತಿಯ ಭೇಟಿ ಖಾಸಗಿಯಾಗಿದ್ದ ಕಾರಣ ಅವರ ಆಗಮನದ ವಿವರವನ್ನು ಕರ್ನಾಟಕ ಸರ್ಕಾರಕ್ಕೆ ತಿಳಿಸಿರಲಿಲ್ಲ. ಅವರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಸಾಮಾನ್ಯರಂತೆ ಟ್ರಾಫಿಕ್‌ನಲ್ಲಿ ಹಾದು ಹೋಗಿದ್ದಾರೆ. ಬ್ರಿಟಿಷ್ ರಾಜ ದಂಪತಿ ಬೆಂಗಳೂರು ಟ್ರಾಫಿಕ್‌ನಲ್ಲಿ ಎಚ್‌ಎಎಲ್‌ನಿಂದ ವೈಟ್‌ಫೀಲ್ಡ್‌ನ ಸೌಖ್ಯ ಹೆಲ್ತ್ ಸೆಂಟರ್‌ಗೆ ಹೋಗುವ ದಾರಿಯಲ್ಲಿ ಸಂಚಾರ ನಿರ್ಬಂಧ ಇರಲಿಲ್ಲ. ಎಲ್ಲವೂ ಸಹಜವಾಗಿತ್ತು. ಹೀಗಾಗಿ ಅವರ ಆಗಮನ ಸಾರ್ವಜನಿಕರ ಗಮನಸೆಳೆದಿರಲಿಲ್ಲ ಎಂದು ವರದಿ ವಿವರಿಸಿದೆ.
ವೈಟ್‌ಫೀಲ್ಡ್‌ನ ಸೌಖ್ಯ ಆರೋಗ್ಯ ಕೇಂದ್ರದಲ್ಲಿರುವ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ದಂಪತಿ ನಾಲ್ಕು ದಿನಗಳ ಕಾಲ ಮುಂಜಾನೆ ಯೋಗಾಭ್ಯಾಸ ಮತ್ತು ನವೋಲ್ಲಾಸ ಪಡೆಯುವ ಚಿಕಿತ್ಸೆ ಪಡೆದರು ಎಂದು ವರದಿಯಾಗಿದೆ. ಅವರು ಈ ಕೇಂದ್ರದಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯವನ್ನೂ ಪಡೆದುಕೊಂಡಿದ್ದು, ಅಲ್ಲೇ ಊಟೋಪಹಾರವನ್ನೂ ಮಾಡಿದ್ದಾರೆ. ಬಿಡುವಿನ ಸಮಯವನ್ನು ದೀರ್ಘ ನಡಿಗೆಗೆ ಹೊಂದಿಸಿಕೊಂಡಿದ್ದರು. ಅವರ ಚಿಕಿತ್ಸೆ ಇಂದು (ಅಕ್ಟೋಬರ್ 30) ಮುಗಿಯಲಿದ್ದು, ಬೆಂಗಳೂರಿನಿಂದ ಊರಿಗೆ ಹೊರಡಲಿದ್ದಾರೆ ಎಂದು ವರದಿ ಹೇಳಿದೆ.
ವೇಲ್ಸ್‌ನ ರಾಜಕುಮಾರನಾಗಿದ್ದಾಗ ಬೆಂಗಳೂರಿಗೆ ಭೇಟಿ ನೀಡಿದ್ದ ಚಾರ್ಲ್ಸ್
ಬ್ರಿಟನ್ ರಾಜನಾದ ಬಳಿಕ 3ನೇ ಚಾರ್ಲ್ಸ್ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿರುವಂಥದ್ದು. ಇದಕ್ಕೂ ಮೊದಲು ಅವರು ವೇಲ್ಸ್‌ನ ರಾಜಕುಮಾರನಾಗಿದ್ದ ವೇಳೆ ಅನೇಕ ಬಾರಿ ಬೆಂಗಳೂರಿಗೆ ಬಂದು ಹೋಗಿದ್ದರು. ಆರು ವರ್ಷ ಹಿಂದೆ ಅಂದರೆ 2019ರಲ್ಲಿ ಅವರ 71ನೇ ಹುಟ್ಟುಹಬ್ಬವನ್ನು ವೈಟ್‌ಫೀಲ್ಡ್‌ನ ಸೌಖ್ಯ ಆರೋಗ್ಯ ಕೇಂದ್ರದಲ್ಲೇ ಆಚರಿಸಿದ್ದರು. 2022ರಲ್ಲಿ ರಾಣಿ ಎರಡನೇ ಎಲಿಜಬೆತ್ ಮರಣದ ಬಳಿಕ ಮೂರನೇ ಚಾರ್ಲ್ಸ್ ಅವರನ್ನೇ ರಾಜ ಎಂದು ಘೋಷಿಸಲಾಯಿತು.
ವೈಟ್‌ಫೀಲ್ಡ್‌ನ ಸಮೇತನಹಳ್ಳಿಯಲ್ಲಿರುವ ಸೌಖ್ಯ ಇಂಟರ್‌ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್ ಅನ್ನು ಡಾ. ಇಸಾಕ್ ಮಥಾಯ್ ಮತ್ತು ಡಾ. ಸುಜಾ ಐಸಾಕ್ ಸ್ಥಾಪಿಸಿ ನಡೆಸುತ್ತಿದ್ದಾರೆ. ಡಾ. ಇಸಾಕ್ ಮಥಾಯ್ ಅವರು ಬ್ರಿಟನ್ ರಾಜಮನೆತನಕ್ಕೆ ಯೋಗಕ್ಷೇಮ ಸೇವೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ 3ನೇ ಚಾರ್ಲ್ಸ್ ದಂಪತಿ ಈ ಕೇಂದ್ರಕ್ಕೆ ಹಿಂದೆಯೂ ಬಂದಿದ್ದರು. ಈ ಯೋಗ ಕ್ಷೇಮ ಕೇಂದ್ರವು ಆಯುರ್ವೇದ, ನ್ಯಾಚುರೋಪತಿ, ಆಕ್ಯುಪ್ರೆಶರ್ ಮತ್ತು ಯೋಗ, ಹೋಮಿಯೋಪತಿ ಮತ್ತು ಇತರ ಸಾಂಪ್ರದಾಯಿಕ ಚಿಕಿತ್ಸೆಯನ್ನು ನೀಡುತ್ತದೆ. ಚಾರ್ಲ್ಸ್ ಈ ಕೇಂದ್ರಕ್ಕೆ ಇದುವರೆಗೆ ಒಂಬತ್ತು ಬಾರಿ ಭೇಟಿ ನೀಡಿದ್ದರು. ಅವರ ಪ್ರತಿ ಭೇಟಿಯ ವೇಳೆ ಅವರು ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿ ವಿವರಿಸಿದೆ.