Bengaluru Chennai Expressway: ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಲೋಕಾರ್ಪಣೆ ಮುಂದೂಡಿಕೆ, ಇನ್ನೂ 15 ತಿಂಗಳು ಕಾಯುವ ಸಮಯ
Bengaluru Chennai Expressway: ಬೆಂಗಳೂರಿನಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುವ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಉದ್ಘಾಟನೆಗೆ ಇನ್ನೂ ಮುಂದಿನ ವರ್ಷದ ಜೂನ್‌ವರೆಗೆ ಕಾಯಬೇಕು.ವರದಿ: ಎಚ್.ಮಾರುತಿ, ಬೆಂಗಳೂರು

Bengaluru Chennai Expressway: ಕರ್ನಾಟಕ ರಾಜಧಾನಿ ಬೆಂಗಳೂರು ಹಾಗೂ ತಮಿಳುನಾಡಿನ ರಾಜಧಾನಿ ಚೆನ್ನೈ ನಗರಕ್ಕೆ ಸಂಪರ್ಕಕಲ್ಪಿಸುವ ‘ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆʼ ಈ ವರ್ಷ ಲೋಕಾರ್ಪಣೆಗೊಳ್ಳುವುದಿಲ್ಲ. ಈಗಿನ ನಿರೀಕ್ಷೆಯಂತೆ ಜೂನ್ 2026 ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಆರಂಭದಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವರ್ಷದ ಆಗಸ್ಟ್ ವೇಳೆಗೆ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆ ನೀಡಿತ್ತು. ನಿಮಾಣ ವಿಳಂಬವಾಗುತ್ತಿದ್ದು ಆದರೆ ಈ ಗಡುವು ಮುಂದಿನ ವರ್ಷಕ್ಕೆ ಹೋಗಿದೆ. 262 ಕಿಮೀ ಉದ್ದದ ಈ ಎಕ್ಸ್ ಪ್ರೆಸ್ ವೇ ನ 71 ಕಿಮೀ ಸಂಚಾರಕ್ಕೆ ಸಿದ್ದವಾಗಿದ್ದು ಉಳಿದ ಮಾರ್ಗದ ನಿರ್ಮಾಣ ಸಾಗುತ್ತಿದೆ. ಕರ್ನಾಟಕದ ವ್ಯಾಪ್ತಿಗೆ ಒಳಪಡುವ 71 ಕಿಲೋಮೀಟರ್ ಸಂಪೂರ್ಣ ಕಾರ್ಯ ಮುಕ್ತಾಯವಾಗಿದ್ದು ಕಳೆದ ವರ್ಷವೇ ಅನೌಪಚಾರಿಕವಾಗಿ ಸಂಚಾರಕ್ಕೆ ತೆರೆಯಲಾಗಿದೆ. ಹೊಸಕೋಟೆಯ ಇಂಟರ್ ಚೇಂಜ್‌ನಿಂದ ಆರಂಭವಾಗುವ 280 ಕಿ.ಮೀ ಉದ್ದದ ಎಕ್ಸ್‌ಪ್ರೆಸ್ ವೇ ಇದಾಗಿದ್ದು, ಸದ್ಯ ಹೊಸಕೋಟೆ ಸ್ಯಾಟ್ ಲೈಟ್ ರಿಂಗ್ ರಸ್ತೆಯಿಂದ ಆಂಧ್ರ ಗಡಿ ಸುಂದರಪಾಳ್ಯವರೆಗೆ ಸಂಚಾರಕ್ಕೆ ರಸ್ತೆ ಸಿದ್ದವಾಗಿದೆ. ಈ ರಸ್ತೆಯಲ್ಲಿ ವೇಗದ ಮಿತಿಯನ್ನು 100 ಕಿ.ಮೀಗೆ ಸೀಮಿತಗೊಳಿಸಲಾಗಿದೆ.
ಆಂಧ್ರಪ್ರದೇಶ, ತಮಿಳುನಾಡು ಭಾಗದಲ್ಲಿ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ ಇನ್ನೂ ಮುಂದುವರೆದಿದೆ. ಈ ಎಕ್ಸ್‌ಪ್ರೆಸ್ ವೇಗೆ ಕರ್ನಾಟಕದಲ್ಲಿ ಮಾಲೂರು, ಬಂಗಾರಪೇಟೆ ಮತ್ತು ಆಂಧ್ರ ಗಡಿ ಸುಂದರ ಪಾಳ್ಯದಲ್ಲಿ ಮೂರು ಇಂಟರ್ ಚೇಂಜ್‌ಗಳಿವೆ. ಸಂಪೂರ್ಣ ಕಾಮಗಾರಿ ಮುಕ್ತಾಯದ ಬಳಿಕ ಟೋಲ್ ಸಂಗ್ರಹ ಮಾಡಲಾಗುತ್ತದೆ.
ಸರ್ವೀಸ್ ರಸ್ತೆಗಳಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇನಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ. ಯಾವುದೇ ಅಡಚಣೆಗಳಿಲ್ಲದೆ ಚೆನ್ನೈವರೆಗೆ ಈ ರಸ್ತೆಯಲ್ಲಿ ಪ್ರಯಾಣಿಸಬಹುದು. ಬೇರೆ ಹೆದ್ದಾರಿಗಳಿಗೆ ಹೋಲಿಸಿದರೆ ಈ ರಸ್ತೆಯ ಟೋಲ್ ಶುಲ್ಕ ಕೂಡ ಅಧಿಕವಾಗಿರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಗ್ರೀನ್ ಫೀಲ್ಡ್ ಯೋಜನೆ
17,000 ಕೋಟಿ ರೂ ವೆಚ್ಚದ ಈ ಯೋಜನೆಯಿಂದ ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣ ಸಮಯ ಗಣನೀಯವಾಗಿ ಕಡಿಮೆಯಾಗುವುದರ ಜತೆಗೆ ಇಂಧನ ಉಳಿತಾಯವೂ ಆಗಲಿದೆ. ಹಾಗಾಗಿ ಗ್ರೀನ್ ಫೀಲ್ಡ್ ಯೋಜನೆ ಎಂದೇ ಈ ಯೋಜನೆಯನ್ನು ಕರೆಯಲಾಗುತ್ತಿದೆ. ರಾಜ್ಯದ ಹೊಸಕೋಟೆಯಿಂದ ತಮಿಳುನಾಡಿನ ಶ್ರೀಪೆರಂಬದೂರುವರೆಗಿನ 262 ಕಿಮೀ ಉದ್ದಕ್ಕೂ ಕೈಗಾರಿಕಾ ಕಾರಿಡಾರ್ ಕೂಡ ಅಭಿವೃದ್ಧಿಯಾಗಲಿದೆ.
ಪ್ರಸ್ತುತ ಬೆಂಗಳೂರಿನಿಂದ ಚೆನ್ನೈ ತಲುಪಲು ಹೊಸೂರು, ಕೃಷ್ಣಗಿರಿ ಮತ್ತು ರಾಣಿಪೇಟ್ ಮೂಲಕ 340 ಕಿಮೀ ಸಾಗಬೇಕಾಗುತ್ತಿತು. ಈ ದೂರವನ್ನು ಕ್ರಮಿಸಲು ಕನಿಷ್ಠ 6 ಗಂಟೆಗಳು ಬೇಕಾಗಿದ್ದವು. ಈ ರಸ್ತೆಯಲ್ಲಿ ವಾಹನ ದಟ್ಟಣೆಯೂ ವಿಪರೀತವಾಗಿತ್ತು.
ಬಯಲು ಭೂಮಿಯಲ್ಲಿ ಈ ರಸ್ತೆ ನಿರ್ಮಾಣವಾಗುತ್ತಿದ್ದರಿಂದ ಭೂಸ್ವಾಧೀನ ಸುಲಭವಾಯಿತಾದರೂ ವಿದ್ಯುತ್ ಟವರ್ ಗಳನ್ನು ಸ್ಥಳಾಂತರಿಸಲು ಕಂದಾಯ ಇಲಾಖೆ ಅನುಮತಿ ಪಡೆಯುವುದು ವಿಳಂಬವಾಗಿತ್ತು.
ಈ ರಸ್ತೆ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಪರ್ಯಾಯ ರಸ್ತೆಯನ್ನು ಬಳಸಬೇಕು. ಅಲ್ಲಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯನ್ನು ಬಳಸಿದರೆ ತೊಂದರೆಗೆ ಸಿಲುಕಬೇಕಾದೀತು ಎಂದೂ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಾರೆ.
ಮೂರು ಪ್ಯಾಕೇಜ್
ಕರ್ನಾಟಕದಲ್ಲಿ ಈ ಎಕ್ಸ್ ಪ್ರೆಸ್ ವೇ ಮೂರು ಪ್ಯಾಕೇಜ್ ಗಳಲ್ಲಿ ನಿರ್ಮಾಣವಾಗುತ್ತಿದೆ. ಪ್ಯಾಕೇಜ್-1: ಹೊಸಕೋಟೆ-ಮಾಲೂರು (27.1 ಕಿಮೀ); ಪ್ಯಾಕೇಜ್-2: ಮಾಲೂರು-ಬಂಗಾರಪೇಟೆ (27.1 ) ಮತ್ತು ಪ್ಯಾಕೇಜ್-3:
ಬಂಗಾರಪೇಟೆ-ಬೇತಮಂಗಲ (17.5 ಕಿಮೀ). ಹಾಲಿ ಇರುವ ಮಾರ್ಗದಲ್ಲಿ ಚೆನ್ನೈ ಬೆಂಗಳೂರು ನಡುವೆ ಸಂಚರಿಸುವುದು ಸಾಹಸವೇ ಸರಿ. ಒಮ್ಮೆ ಈ ರಸ್ತೆ ಪೂರ್ಣಗೊಂಡರೆ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಮತ್ತು ಆರ್ಥಿಕ ಅವಕಾಶಗಳೂ ಹೆಚ್ಚುತ್ತವೆ ಎಂದು ಉದ್ಯಮಿಯೊಬ್ಬರು ಅಭಿಪ್ರಾಯಪಡುತ್ತಾರೆ.
ದ್ವಿಚಕ್ರ ವಾಹನಗಳಿಗೆ ನೋ ಎಂಟ್ರಿ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.ಈ ರಸ್ತೆಯಲ್ಲಿ ಇತ್ತೀಚೆಗೆ ಭೀಕರ ಅಪಘಾತವೊಂದು ಸಂಭವಿಸಿ ಎರಡು ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟ ನಂತರ ದ್ವಿಚಕ್ರ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
(ವರದಿ: ಎಚ್.ಮಾರುತಿ. ಬೆಂಗಳೂರು)
