ಬೆಂಗಳೂರು ಚಿತ್ರಸಂತೆ ನಿಮಿತ್ತ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಪ್ರಕಟಿಸಿದ ಸಂಚಾರ ಪೊಲೀಸರು; ಇಂದು-ನಾಳೆ ಏನಿರಲಿದೆ ಕಾರ್ಯಕ್ರಮ
Chitra Santhe 2025: ಬೆಂಗಳೂರು ಚಿತ್ರಸಂತೆ ಇದೇ ಭಾನುವಾರ (ಜನವರಿ 5) ನಡೆಯಲಿದ್ದು, ಕ್ಷಣಗಣನೆ ಶುರುವಾಗಿದೆ. ಜನವರಿ 4ರ ಶನಿವಾರವಾದ ಇಂದು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರಸಂತೆ ನಿಮಿತ್ತ ಸಂಚಾರ ನಿರ್ಬಂಧದ ಜೊತೆಗೆ ಪರ್ಯಾಯ ಮಾರ್ಗ ವಿವರವನ್ನು ಪೊಲೀಸರು ಪ್ರಕಟಿಸಿದ್ದಾರೆ. ಇಂದು ಮತ್ತು ನಾಳೆ ಏನೇನು ಕಾರ್ಯಕ್ರಮ, ಇಲ್ಲಿದೆ ಆ ವಿವರ.
Chitra Santhe 2025: ಬೆಂಗಳೂರಿನಲ್ಲಿ ಈ ಸಲ ಚಿತ್ರಸಂತೆ ನಾಳೆ (ಜನವರಿ 5) ನಡೆಯಲಿದ್ದು, ಪೂರ್ವಭಾವಿ ಕಾರ್ಯಕ್ರಮವಾಗಿ ಇಂದು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳು ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲೇ ನಡೆಯಲಿದೆ. ತನ್ನಿಮಿತ್ತವಾಗಿ ಚಿತ್ರಕಲಾ ಪರಿಷತ್ತಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಿಸಿದ್ದಾರೆ.
ಬೆಂಗಳೂರು ಚಿತ್ರಸಂತೆ 2025, ಇಂದು, ನಾಳೆ ಏನೇನು ಕಾರ್ಯಕ್ರಮ?
ಬೆಂಗಳೂರಿನ ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಇಂದು (ಜನವರಿ 4, ಶನಿವಾರ) ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನವದೆಹಲಿಯ ಎನ್‌ಜಿಎಂಎಯ ಗೌರವ ಮಹಾನಿರ್ದೇಶಕ ಡಾ ಸಂಜೀವ್ ಕಿಶೋರ್ ಮುಖ್ಯ ಅತಿಥಿ. ಡಾ ಎಂ.ಎಸ್ ಮೂರ್ತಿ ಅವರಿಗೆ ಡಿ. ದೇವರಾಜ ಅರಸು ಪ್ರಶಸ್ತಿ, ಎ. ರಾಮಕೃಷ್ಣಪ್ಪ ಅವರಿಗೆ ಕೆ. ಎಸ್. ನಾಗರತ್ನಮ್ಮ ಪ್ರಶಸ್ತಿ, ಜಿ. ಎಲ್. ಭಟ್ ಅವರಿಗೆ ವೈ ಸುಬ್ರಮಣ್ಯ ರಾಜು ಪ್ರಶಸ್ತಿ, ಸೂರ್ಯ ಪ್ರಕಾಶ್ ಗೌಡ ಅವರಿಗೆ ಹೆಚ್. ಕೆ. ಕೇಳ್ತಿವಾಲ್ ಪ್ರಶಸ್ತಿ, ನಿರ್ಮಲ ಕುಮಾರಿ ಸಿ. ಎಸ್. ಅವರಿಗೆ ಎಂ. ಆರ್ಯಮೂರ್ತಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ ಜಿ ಎಲ್ ಶಂಕರ್ ಅಧ್ಯಕ್ಷತೆ ವಹಿಸುವರು.
ನಾಳೆ (ಜನವರಿ 5) ಚಿತ್ರಸಂತೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ
ಕುಮಾರಕೃಪಾ ರಸ್ತೆಯಲ್ಲಿ ಈ ಭಾನುವಾರ (ಜನವರಿ 5) 22ನೇ ಚಿತ್ರಸಂತೆ ನಡೆಯುವ ಕಾರಣ, ಕುಮಾರಕೃಪಾ ರಸ್ತೆಯ ವಿಂಡ್ಸ್ರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ (ಈಶಾನ್ಯ ದಿಕ್ಕಿನಿಂದ ನೈಋತ್ಯ ದಿಕ್ಕಿನ ಕಡೆಗೆ) ಅಂದು ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಭಾನುವಾರ ಬೆಳಗ್ಗೆ 6ರಿಂದ ರಾತ್ರಿ 9 ಗಂಟೆವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಅಲ್ಲದೆ ಚಿತ್ರಸಂತೆಗೆ ಬರುವವರಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಧ್ಯವಾದಷ್ಟು ಎಲ್ಲರೂ ಸಾರ್ವಜನಿಕ ಸಾರಿಗೆ ಬಳಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಪರ್ಯಾಯ ಮಾರ್ಗದ ವ್ಯವಸ್ಥೆ ಹೀಗಿದೆ -
1) ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಕುಮಾರಕೃಪಾ ರಸ್ತೆಯ ಕಡೆಗೆ ತೆರಳುವ ವಾಹನಗಳು ರೇಸ್ ವ್ಯೂ ಜಂಕ್ಷನ್‌ನಲ್ಲಿ ಬಸವೇಶ್ವರ ವೃತ್ತಕ್ಕೆ ಸಾಗಿ ಅಲ್ಲಿಂದ ಬಸವೇಶ್ವರ ವೃತ್ತದಲ್ಲಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ಹಳೇ ಹೈಗ್ರೆಂಡ್ಸ್ ಜಂಕ್ಷನ್ ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಸಾಗಬಹುದು.
2) ಟಿ.ಚೌಡಯ್ಯ ರಸ್ತೆಯಿಂದ ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕುಮಾರಕೃಪಾ ರಸ್ತೆಗೆ ಪ್ರವೇಶ ಪಡೆಯುವ ವಾಹನಗಳು, ಹಳೇ ಹೈಗೌಂಡ್ಸ್ ಜಂಕ್ಷನ್‌ಗೆ ನೇರವಾಗಿ ಸಾಗಿ, ಎಲ್‌ಆರ್‌ಡಿಇ ಬಳಿ ಬಲಕ್ಕೆ ತಿರುವು ಪಡೆದು ಬಸವೇಶ್ವರ ವೃತ್ತ ದಾಟಿ ರೇಸ್ ಕೋರ್ಸ್ ರಸ್ತೆ ಮೂಲಕ ಮುಂದಕ್ಕೆ ಸಾಗಬಹುದು.
3) ಟಿ.ಚೌಡಯ್ಯ ರಸ್ತೆಯಲ್ಲಿ ಹೈಗ್ರೆಂಡ್ ಜಂಕ್ಷನ್‌ನಿಂದ ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕುಮಾರಕೃಪಾ ರಸ್ತೆಗೆ ಪ್ರವೇಶ ಪಡೆಯುವ ವಾಹನಗಳು ನೇರವಾಗಿ ಆರ್‌ಪಿ ರಸ್ತೆ ಮೂಲಕ ಮುಂದಕ್ಕೆ ಸಾಗಬಹುದು.
4) ನೆಹರೂ ವೃತ್ತದಿಂದ ಸ್ಟೀಲ್ ಬ್ರಿಡ್ಜ್ ಕೆಳಭಾಗದಲ್ಲಿ ಶಿವಾನಂದ ವೃತ್ತದ ಮೂಲಕ ಟ್ರಿಲೈಟ್ ಜಂಕ್ಷನ್ ಮತ್ತು ರೇಸ್ ಕೋರ್ಸ್ ಕಡೆಗೆ ಸಾಗುವ ವಾಹನಗಳು ನೆಹರು ವೃತ್ತದಿಂದ ಸ್ಟೀಲ್ ಬ್ರಿಡ್ಜ್ ಮೂಲಕ ಸಾಗಿ ಟ್ರಿಲೈಟ್ ಜಂಕ್ಷನ್ ಹಾಗೂ ರೇಸ್ ಕೋರ್ಸ್ ರಸ್ತೆ ಕಡೆಗೆ ತೆರಳಬಹುದು.
5) ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನಗಳು ಟ್ರಿಲೈಟ್ ಜಂಕ್ಷನ್ - ಬಸವೇಶ್ವರ ವೃತ್ತ - ಹಳೇ ಹೈಗ್ರೆಂಡ್ಸ್ ಜಂಕ್ಷನ್ - ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಮುಂದಕ್ಕೆ ಸಾಗಬೇಕು.
6) ಟಿ.ಚೌಡಯ್ಯ ರಸ್ತೆಯಿಂದ ಬಂದು ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕೆ.ಕೆ.ರಸ್ತೆ ಪ್ರವೇಶಿಸುವ ವಾಹನಗಳು ಟಿ.ಚೌಡಯ್ಯ ರಸ್ತೆ ಹಳೇ ಹೈಗೌಂಡ್ ಜಂಕ್ಷನ್ - ಎಲ್‌ಅರ್‌ಡಿಇ- ಬಸವೇಶ್ವರ ವೃತ್ತ ರೇಸ್ ಕೋರ್ಸ್ ರಸ್ತೆ ಮೂಲಕ ಮುಂದಕ್ಕೆ ಸಾಗಬಹುದು.
ಚಿತ್ರಸಂತೆಯ ವಾಹನ ನಿಲುಗಡೆ ವ್ಯವಸ್ಥೆ ಕುರಿತು ವಿವರ ನೀಡಿದ ಬೆಂಗಳೂರು ಸಂಚಾರ ಪೊಲೀಸರು, ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕ್ರೆಸೆಂಟ್ ರಸ್ತೆಯಲ್ಲಿ, ಗುರುರಾಜ ಕಲ್ಯಾಣ ಮಂಟಪದಿಂದ ಹೋಟೆಲ್ ಜನಾರ್ದನದವರೆಗೆ ರಸ್ತೆಯ ಪಶ್ಚಿಮಕ್ಕೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರೇಸ್‌ಕೋರ್ಸ್ ರಸ್ತೆ, ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೆ, ರಸ್ತೆಯ ಪೂರ್ವ ಭಾಗಕ್ಕೆ ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದಾರೆ.