ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್ ಭೋಗ್ಯಕ್ಕೆ ನೀಡಿ 40 ಲಕ್ಷ ರೂ ವಂಚನೆ, ಎಸ್‌ಬಿಐ ಆಸ್ತಿವಶಕ್ಕೆ ಮುಂದಾದಾಗ ಪ್ರಕರಣ ಬೆಳಕಿಗೆ, ದೂರು ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್ ಭೋಗ್ಯಕ್ಕೆ ನೀಡಿ 40 ಲಕ್ಷ ರೂ ವಂಚನೆ, ಎಸ್‌ಬಿಐ ಆಸ್ತಿವಶಕ್ಕೆ ಮುಂದಾದಾಗ ಪ್ರಕರಣ ಬೆಳಕಿಗೆ, ದೂರು ದಾಖಲು

ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್ ಭೋಗ್ಯಕ್ಕೆ ನೀಡಿ 40 ಲಕ್ಷ ರೂ ವಂಚನೆ, ಎಸ್‌ಬಿಐ ಆಸ್ತಿವಶಕ್ಕೆ ಮುಂದಾದಾಗ ಪ್ರಕರಣ ಬೆಳಕಿಗೆ, ದೂರು ದಾಖಲು

ಅಪಾರ್ಟ್‌ಮೆಂಟ್ ಭೋಗ್ಯಕ್ಕೆ ನೀಡಿ 40 ಲಕ್ಷ ರೂ ವಂಚನೆ ಮಾಡಿದ ಪ್ರಕರಣ ಎಸ್‌ಬಿಐ ಆಸ್ತಿವಶಕ್ಕೆ ಮುಂದಾದಾಗ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ಯುವತಿಯರನ್ನು ಚುಡಾಯಿಸುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಬೆಂಗಳೂರು ಪೊಲೀಸರು ಭರವಸೆ ನೀಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ:ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್ ಭೋಗ್ಯಕ್ಕೆ ನೀಡಿ 40 ಲಕ್ಷ ರೂ ವಂಚನೆ ಎಸಗಿದ ಪ್ರಕರಣದ ವಿರುದ್ಧ ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ:ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್ ಭೋಗ್ಯಕ್ಕೆ ನೀಡಿ 40 ಲಕ್ಷ ರೂ ವಂಚನೆ ಎಸಗಿದ ಪ್ರಕರಣದ ವಿರುದ್ಧ ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಅಪಾರ್ಟ್ ಮೆಂಟ್ ಮೇಲಿನ ಸಾಲ ತೀರಿಸದೆ ಅದೇ ಅಪಾರ್ಟ್ ಮೆಂಟ್ ಅನ್ನು ಮತ್ತೊಬ್ಬರಿಗೆ 40 ಲಕ್ಷ ರೂಪಾಯಿಗೆ ಭೋಗ್ಯಕ್ಕೆ ನೀಡಿ ವಂಚಿಸಿರುವ ಸಂಬಂಧ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರತಿಷ್ಠಿತ ಬಡಾವಣೆ ಗಳಲ್ಲಿ ಒಂದಾದ ಲ್ಯಾಂಗ್‌ಫೋರ್ಡ್ ರಸ್ತೆಯ ಬೈಡ್‌ ಸ್ಟ್ರೀಟ್‌ನಲ್ಲಿರುವ ವಸತಿ ಸಮುಚ್ಚಯದಲ್ಲಿ ಅಪಾರ್ಟ್‌ಮೆಂಟ್‌ ವೊಂದನ್ನು ಮೊಹಮ್ಮದ್ ಅಲೀಮುದ್ದೀನ್ ಎಂಬಾತ ಖರೀದಿಸಿರುತ್ತಾರೆ.

ಇವರು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದಿಂದ ಭಾರಿ ಪ್ರಮಾಣದ ಸಾಲ ಪಡೆದಿರುತ್ತಾರೆ. ಆದರೆ ಕಂತು ಪಾವತಿ ಮಾಡಲು ವಿಫಲರಾಗುತ್ತಾರೆ. ಈ ವಿಷಯವನ್ನು ಮರೆಮಾಚಿ ರೋಹನ್ ಎಂಬುವರಿಗೆ 40 ಲಕ್ಷ ರೂಪಾಯಿಗೆ ಭೋಗ್ಯಕ್ಕೆ ನೀಡಿರುತ್ತಾರೆ. ಆರೋಪಿ ಅಲೀಮುದ್ದೀನ್ ಈತ ಹೈದರಾಬಾದ್‌ನ ಉದ್ಯಮಿ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ

ಅಲೀಮುದ್ದೀನ್‌ಗೆ ಸೇರಿದ ಈ ಮನೆಯನ್ನು ಜಪ್ತಿ ಮಾಡಲು ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದಿಂದ ಆದೇಶ ಪಡೆದುಕೊಂಡಿರುತ್ತದೆ. ಅದರಂತೆ ಜಪ್ತಿ ಮಾಡಲು ಬ್ಯಾಂಕ್ ಅಧಿಕಾರಿಗಳು ಬಂದಾಗಲೇ ರೋಹನ್ ಅವರಿಗೆ ತಾವು ಮೋಸ ಹೋಗಿರುವುದು ತಿಳಿದು ಬರುತ್ತದೆ. ನಂತರ ರೋಹನ್ ವಂಚನೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದಾರೆ. ಕೋರ್ಟ್ ನೀಡಿರುವ ನಿರ್ದೇಶನದಂತೆ, ಫ್ಲ್ಯಾಟ್‌ ಮಾಲೀಕ 32 ವರ್ಷದ ಮೊಹಮ್ಮದ್ ಅಲೀಮುದ್ದೀನ್ ವಿರುದ್ಧ ದಾಖಲಿಸಿಕೊಳ್ಳಲಾಗಿದೆ. ಅಲೀಮುದ್ದೀನ್ ಬಂಧನಕ್ಕೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಭೋಗ್ಯದ ಹಣ 40 ಲಕ್ಷ ರೂಪಾಯಿ ಕೈಗೆ ಬಂದ ನಂತರ ಅಲೀಮುದ್ದೀನ್ ಬೆಂಗಳೂರಿನಿಂದ ಪರಾರಿಯಾಗಿದ್ದಾನೆ. ಎಸ್‌ಬಿಐ ಅಧಿಕಾರಿಗಳು, ಹಲವು ಬಾರಿ ನೋಟಿಸ್‌ ನೀಡಿದ್ದರೂ ಅಲೀಮುದ್ದೀನ್ ಯಾವುದೇ ಉತ್ತರ ನೀಡಿರಲಿಲ್ಲ. ಆದ್ದರಿಂದ ಆಸ್ತಿ ಜಪ್ತಿ ಮಾಡಲು ನ್ಯಾಯಾಲಯದಿಂದ ಆದೇಶ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿಯರನ್ನು ಚುಡಾಯಿಸುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ

ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಪಿ.ಜಿ ಕಟ್ಟಡಗಳಲ್ಲಿ ವಾಸವಿರುವ ಯುವತಿಯರನ್ನು ಚುಡಾಯಿಸುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಭರವಸೆ ನೀಡಿದ್ದಾರೆ.

ಬೆಂಗಳೂರು ಪೊಲೀಸ್ ಕಮಿಷನರೇಟ್‌ ವತಿಯಿಂದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಮನವಿಗೆ ಸ್ಪಂದಿಸಿದರು. ನಗರದ ವಿವಿಧ ಭಾಗಗಳ ಸಾರ್ವಜನಿಕರು ಈ ವಿಷಯ ಪ್ರಸ್ತಾಪಿಸಿ ಹೆಣ್ಣು ಮಕ್ಕಳು ರಸ್ತೆಗಳಲ್ಲಿ ಓಡಾಡಲು ಭಯಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪಿ.ಜಿ. ಕಟ್ಟಡಗಳು ಇರುವ ಪ್ರದೇಶಗಳಲ್ಲಿ ಹೊಯ್ಸಳ ವಾಹನಗಳ ಗಸ್ತು ಹೆಚ್ಚಿಸಬೇಕು ಎಂದು ಆಗ್ರಹಪಡಿಸಿದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಆಯುಕ್ತರು ಬೆಂಗಳೂರಿನ ಬಹುತೇಕ ಕಡೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಿಡಿಗೇಡಿಗಳ ಕೃತ್ಯಗಳು ಕಂಡುಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಪಿಜಿ ಕಟ್ಟಡಗಳು ಇರುವ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಗರದ ಪ್ರಮುಖ ರಸ್ತೆಗಳು ಹಾಗೂ ಒಳ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಮ್ ಕೂಡಾ ಹೆಚ್ಚಾಗುತ್ತಿದೆ ಎಂದು ಆಯುಕ್ತರ ಗಮನ ಸೆಳೆದರು. ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಚಾರ ಪೊಲೀಸರಿಗೆ ಸೂಚಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಎಚ್‌. ಶೇಖರ್, ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ ಹಾಜರಿದ್ದರು.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner