Leopard in Bengaluru: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ, ಬೆನ್ನಟ್ಟಿದ ನಾಯಿಗಳು -Video
ಚಿರತೆ ಪತ್ತೆಯಾದ ಸಮೀಪದಲ್ಲಿ ಪ್ರತಿಷ್ಠಿತ ಇಂಟರ್ ನ್ಯಾಶನಲ್ ಶಾಲೆ ಇದ್ದು ಮಕ್ಕಳನ್ನು ಕಳುಹಿಸಲು ಪೋಷಕರು ಅತಂಕಪಟ್ಟಿದ್ದಾರೆ.
ಬೆಂಗಳೂರು: ನಗರದ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ಚಿರತೆಯೊಂದು ಪತ್ತೆಯಾಗಿದೆ. ಶನಿವಾರ ತಡರಾತ್ರಿ ಚಿರತೆಯು ಓಡಾಡುತ್ತಿರುವ ಅನೇಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಚಿರತೆಯು ವೈಟ್‌ಫೀಲ್ಡ್‌ನ ವಿವಿಧ ಭಾಗಗಳಲ್ಲಿ ಸಂಚರಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿರುವ ಸಾರ್ವಜನಿಕರು ಹೇಳುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಈ ಪ್ರದೇಶ ವೈಟ್‌ಫೀಲ್ಡ್ ಅಲ್ಲ, ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಸಿಂಗಸಂದ್ರ ಎಂದು ಸ್ಪಷ್ಟನೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜು, ನಮ್ಮ ನೌಕರರು ಚಿರತೆಯ ಹುಡುಕಾಟದಲ್ಲಿದ್ದಾರೆ. ವಿಡಿಯೋಗಳಲ್ಲಿ ಕಂಡು ಬರುತ್ತಿರುವ ದೃಶ್ಯ ಬನ್ನೇರುಘಟ್ಟ ಸಮೀಪದ ಸಿಂಗಸಂದ್ರ ಎಂದು ತಿಳಿದ್ದಾರೆ. ವೈರಲ್ ಆಗಿರುವ ದೃಶ್ಯದಲ್ಲಿ ಮೊದಲು ನಾಯಿಯೊಂದು ರಸ್ತೆಯ ಮೂಲೆಯಲ್ಲಿ ಹಾದುಹೋಗುತ್ತದೆ. ನಂತರ ನಾಯಿಗಳ ಗುಂಪೊಂದು ಚಿರತೆಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಇವೆ. ಚಿರತೆ ಪತ್ತೆಯಾದ ಸಮೀಪದಲ್ಲಿ ಪ್ರತಿಷ್ಠಿತ ಇಂಟರ್ ನ್ಯಾಶನಲ್ ಶಾಲೆ ಇದ್ದು ಮಕ್ಕಳನ್ನು ಕಳುಹಿಸಲು ಪೋಷಕರು ಅತಂಕಪಟ್ಟಿದ್ದಾರೆ.
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸಿಂಗಸಂದ್ರ, ಕೂಡ್ಲು ಗೇಟ್, ಎಇಸಿಎಸ್ ಲೇಔಟ್ ಸೇರಿದಂತೆ ಬೆಂಗಳೂರಿನ ಆಗ್ನೇಯ ಭಾಗದಲ್ಲಿ ಹುಡುಕಾಟ ಮುಂದುವರೆಸಿದ್ದಾರೆ. ಚಿರತೆ ಕಂಡು ಬಂದಿರುವ ಪ್ರದೇಶ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರವಾಗಿದೆ. ಈ ಪ್ರದೇಶದ ಸುತ್ತಮುತ್ತ ಇನ್ ಫೋಸಿಸ್ ಬಯೋಕಾನ್ ಸೇರಿದಂತೆ ಅನೇಕ ಐಟಿ ಬಿಟಿ ಕಂಪನಿಗಳಿವೆ.
'ಚಿರತೆಯನ್ನು ಹಿಡಿಯಲು ಶನಿವಾರ ತಡರಾತ್ರಿಯಿಂದಲೇ ಪ್ರಯತ್ನ ನಡೆಸಿದ್ದೇವೆ. ಆದರೆ ಎಲ್ಲಿಯೂ ಚಿರತೆಯ ಕುರುಹು ಕಂಡು ಬಂದಿಲ್ಲ. ಒಮ್ಮೆ ಗಾಬರಿಯಾದರೆ ಚಿರತೆಗಳು ಆ ಪ್ರದೇಶವನ್ನು ಬಿಟ್ಟು ತೆರಳುತ್ತವೆ. ಆದ್ದರಿಂದ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ' ಎಂದು ಅರಣ್ಯ ಇಲಾಖೆ ತಿಳಿಸಿದೆ. ಪರಪ್ಪನ ಅಗ್ರಹಾರ ಪೊಲೀಸರು ಚಿರತೆ ಸಂಚಾರವನ್ನು ಖಚಿತಪಡಿಸಿದ್ದು, ಪೊದೆಯೊಳಗಿನಿಂದ ತಪ್ಪಿಸಿಕೊಂಡು ಹೋಗಿರಬಹುದು ಎಂದು ಶಂಕಿಸಿದ್ದಾರೆ. ವೈಟ್‌ಫೀಲ್ಡ್‌ಗೆ ಹೊಂದಿಕೊಂಡಂತೆ ಅರಣ್ಯ ಪ್ರದೇಶವಿದ್ದು ತಡರಾತ್ರಿ ಮತ್ತು ಕತ್ತಲು ಪ್ರದೆಶದಲ್ಲಿ ಚಿರತೆಗಳು ಸಂಚಾರ ನಡೆಸುವುದು ಸರ್ವೇ ಸಾಮಾನ್ಯ.
ಬೆಂಗಳೂರಿನಲ್ಲಿ ಚಿರತೆ ಕಂಡು ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ ಚಿರತೆ ಸಂಚರಿಸಿರುವ ಕುರುಹುಗಳು ಕಂಡು ಬಂದಿದ್ದವು. ಚಿರತೆ ಓಡಾಡಿರುವ ಗುರುತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ನೌಕರರು ಮತ್ತು ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ರಾತ್ರಿ ವೇಳೆ ಸಂಚರಿಸದಂತೆ ಸುತ್ತೋಲೆ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ತುರಹಳ್ಳಿ ಅರಣ್ಯದ ಸಮೀಪ ಇರುವ ಕೆಂಗೇರಿ, ಕುಂಬಳಗೋಡು ಮತ್ತು ಕೋಡಿಪಾಳ್ಯ ಹಾಗೂ ದೇವನಹಳ್ಳಿಯಲ್ಲಿ ಚಿರತೆ ಸಂಚಾರ ನಡೆಸಿರುವುದು ಕಂಡು ಬಂದಿತ್ತು. ಒಟ್ಟಿನಲ್ಲಿ ವರ್ಷಕ್ಕೆ ಒಂದೆರಡು ಬಾರಿ ಚಿರತೆಗಳು ಬೆಂಗಳೂರು ನಗರವನ್ನು ಪ್ರವೇಶಿಸಿ ಸಾರ್ವಜನಿಕರ ನೆಮ್ಮದಿಯನ್ನು ಕೆಡಿಸುವ ಪರಿಪಾಠ ಮುಂದುವರೆಸಿವೆ.