ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ; ಪಬ್ ಬಾರ್‌ಗಳಲ್ಲಿ ಅಪ್ರಾಪ್ತರಿಗೂ ಮದ್ಯ ಸರಬರಾಜು: ಆತಂಕ ಮೂಡಿಸಿದ ಬೆಳವಣಿಗೆ
ಉದ್ಯಮ ಉಳಿಸಿಕೊಳ್ಳಲು ಮತ್ತು ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಕಣ್ಣಿದ್ದೂ ಕುರುಡರಂತೆ ವಿದ್ಯಾರ್ಥಿಗಳಿಗೆ ಮದ್ಯ ಪೂರೈಕೆ ಮಾಡುತ್ತಿರುವ ಬೆಂಗಳೂರು ನಗರದ ಪಬ್‌ಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. (ವರದಿ: ಎಚ್.ಮಾರುತಿ)
ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಮದ್ಯದ ಬೆಲೆ, ಅಬಕಾರಿ ಶುಲ್ಕ ಹಾಗೂ ಪರವಾನಗಿ ಶುಲ್ಕವನ್ನು ಏರಿಕೆ ಮಾಡುತ್ತಲೇ ಇರುವುದರಿಂದ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದ್ದು, ಬೆಂಗಳೂರಿನಲ್ಲಿ ಸುಮಾರು 40 ಪಬ್ ಮತ್ತು ಬಾರ್‌ಗಳು ಬಾಗಿಲು ಹಾಕಿವೆ. ಇದಕ್ಕೆ ಪರ್ಯಾಯ ಎನ್ನುವಂತೆ ಮದ್ಯಪಾನ ಮಾಡುವ ಅಪ್ರಾಪ್ತ ವಯಸ್ಕರ ಸಂಖ್ಯೆಯೂ ಹೆಚ್ಚುತ್ತಿದೆ. ಸರ್ಕಾರವೇನೋ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಮದ್ಯ ಮಾರಾಟಕ್ಕೆ ಸಂಬಂಧಪಟ್ಟ ವಿವಿಧ ಶುಲ್ಕಗಳನ್ನು ಹೆಚ್ಚಿಸುತ್ತಿದೆ. ಇದು ಮದ್ಯ ಮಾರಾಟಗಾರರಿಗೆ ಹೊರೆಯಾಗುತ್ತಿದೆ. ಹಾಗಾಗಿ ಮದ್ಯ ಮಾರಾಟಗಾರರಿಗೆ ಪ್ರತಿಯೊಬ್ಬ ಗ್ರಾಹಕನೂ ದೇವರಂತೆ ಕಂಡು ಬರುತ್ತಿದ್ದಾನೆ. ಆತ ಅಪ್ರಾಪ್ತ ವಯಸ್ಕನಾದರೇನಂತೆ ಎನ್ನುವ ವಾತಾವರಣ ಸೃಷ್ಟಿಯಾಗಿದೆ.
ಕರ್ನಾಟಕದಲ್ಲಿ ಮದ್ಯಪಾನ ಮಾಡುವ ವಯಸ್ಸಿನ ಮಿತಿ 21 ವರ್ಷ. ಆದರೆ 16-18 ವರ್ಷದೊಳಗಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ನಕಲಿ ಗುರುತಿನ ಚೀಟಿಗಳೊಂದಿಗೆ ಆಗಮಿಸುತ್ತಿದ್ದಾರೆ. ಗ್ರಾಹಕರ ಕೊರತೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾರ್ ಪಬ್‌ಗಳಲ್ಲಿ ಅಪ್ರಾಪ್ತರನ್ನು ಕಠಿಣವಾಗಿ ಪರಿಶೀಲನೆ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. 2023 ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಗ್ರಾಹಕರನ್ನು ಆಕರ್ಷಿಸುವ ದೃಷ್ಟಿಯಿಂದ ಮದ್ಯಪಾನ ಮಾಡುವ ವಯೋಮಿತಿಯನ್ನು 18 ವರ್ಷಗಳಿಗೆ ಇಳಿಸಲು ಪ್ರಸ್ತಾವನೆ ಮುಂದಿಟ್ಟಿತ್ತು. ಆದರೆ ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈ ಬಿಟ್ಟಿತ್ತು. ವೀಕೆಂಡ್ ದಿನಗಳಲ್ಲಿ ಕೋರಮಂಗಲ, ಇಂದಿರಾನಗರ, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆಗಳಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ ಕನಿಷ್ಠ ವಯೋಮಿತಿಯನ್ನೂ ಮರೆತು ಅಪ್ರಾಪ್ತ ವಯಸ್ಕರು ಎಗ್ಗಿಲ್ಲದೆ ಪಬ್ ಬಾರ್‌ಗಳನ್ನು ಪ್ರವೇಶಿಸುತ್ತಿದ್ದರು. ಕೆಲವು ಸ್ಥಳಗಳಲ್ಲಿ ಪರಿಶೀಲನೆ ಮಾಡಲಾಗುತ್ತಿತ್ತಾದರೂ ಬಹುತೇಕ ಕಡೆ ಗಭೀರವಾಗಿ ಪರಿಶೀಲನೆ ಮಾಡುತ್ತಿರಲಿಲ್ಲ. ಏಕೆಂದರೆ ಅವರಿಗೆ ಗ್ರಾಹಕರು ಮುಖ್ಯವಾಗಿದ್ದರು.
ಇನ್ನು ಕಾಲೇಜುಗಳ ಸಮೀಪವಿರುವ ಬಾರ್‌ಗಳಲ್ಲಿ ಅಪ್ರಾಪ್ತರು ಎಂದು ತಿಳಿದಿದ್ದರೂ ಮದ್ಯ ಸರಬರಾಜು ಮಾಡಲಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಬಾರ್ ಮತ್ತು ಪಬ್‌ಗಳಲ್ಲಿ 18-20 ವರ್ಷದೊಳಗಿನ ಕಾಲೇಜು ಯುವಕರನ್ನು ನಿಯಂತ್ರಿಸುತ್ತಿರಲೇ ಇಲ್ಲ. ಬಾರ್ ಮತ್ತು ಪಬ್‌ಗಳನ್ನು ಪ್ರವೇಶಿಸಲೆಂದೇ ನಕಲಿ ದಾಖಲೆಗಳನ್ನು ಸಿದ್ದಪಡಿಸಿಟ್ಟುಕೊಂಡಿರುತ್ತೇವೆ. ಮೊಬೈಲ್‌ನಲ್ಲೇ ಆಧಾರ್‌ನ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿಕೊಂಡಿರುತ್ತೇವೆ. ಎಂಜಾಯ್ ಮಾಡಲು ಯಾವುದೇ ಕಷ್ಟವಾಗದು ಎಂದು ಅನೇಕ ಕಾಲೇಜು ಯುವಕರು ಹೇಳುತ್ತಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಯಾವುದೇ ದಾಖಲೆಗಳನ್ನು ಕೇಳುವುದೇ ಇಲ್ಲ ಎನ್ನುತ್ತಾರೆ. ಕಾಲೇಜುಗಳ ಸಮೀಪ ಇರುವ ಬಾರ್ ಮತ್ತು ಪಬ್‌ಗಳಿಗೆ ಕಾಲೇಜು ಯುವಕರೇ ಪ್ರಮುಖ ಗ್ರಾಹಕರಾಗಿರುತ್ತಾರೆ. ಹಾಗಾಗಿ ಎಲ್ಲಿಯೂ ಪ್ರಶ್ನಿಸುವುದೇ ಇಲ್ಲ, ಒಂದು ರೀತಿ ʼಕೇಳಬೇಡಿ ಹೇಳಬೇಡಿʼ ಎಂಬ ಒಪ್ಪಂದ. ಬಾರ್ ಮತ್ತು ಪಬ್‌ಗಳಲ್ಲಿ ಗುರುತಿನ ಚೀಟಿ ಕೇಳುವುದಿಲ್ಲ. ಆದರೆ ಕ್ಲಬ್‌ಗಳಲ್ಲಿ ಬೌನ್ಸರ್‌ಗಳಿರುತ್ತಾರೆ. ಅವರು ನಿಯಮವನ್ನು ಕಠಿಣವಾಗಿ ಪಾಲಿಸುತ್ತಾರೆ ಎಂದು ಹೇಳುತ್ತಾರೆ.
ಪೋಷಕರು ಮಕ್ಕಳಿಗೆ ಬುದ್ದಿ ಹೇಳಬೇಕು. 21 ವರ್ಷವಾಗುವವರೆಗೆ ವಿದ್ಯಾರ್ಥಿಗಳು ದುಡಿಯುವುದಿಲ್ಲ. ಅವರು ಆರ್ಥಿಕವಾಗಿ ಪರಾವಲಂಬಿಯಾಗಿರುತ್ತಾರೆ. ಪೋಷಕರು ಹಣ ಕೊಡುತ್ತಾರೆ. ಮಕ್ಕಳು ಹೇಗೆ ಖರ್ಚು ಮಾಡುತ್ತಾರೆ ಎಂದು ನೋಡುವ ಗೋಜಿಗೆ ಹೋಗುವುದಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. ಬೆಂಗಳೂರಿನ ಎಂಟು ಅಬಕಾರಿ ಜಿಲ್ಲೆಗಳಲ್ಲಿ ಜುಲೈ 2024 ರಿಂದ ಮಾರ್ಚ್ 2025 ರವರೆಗೆ ಸುಮಾರು 40,000 ತಪಾಸಣೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸುತ್ತಾರೆ. ವಯಸ್ಸನ್ನು ಪರಿಶೀಲಿಸಲು ಇಲಾಖೆಯ ಬಳಿ ಡಿಜಿಟಲ್ ಅಥವಾ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ. ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದರೆ ರೂ. 5,000 ದಿಂದ ರೂ. 15,000ದವರೆಗೆ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದರೆ ಪರವಾನಗಿ ರದ್ದುಗೊಳಿಸಲು ಸಾಧ್ಯವಿಲ್ಲ.
ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ ಎಂದು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಪದಾಧಿಕಾರಿಗಳು ಹೇಳುತ್ತಾರೆ. ನಮ್ಮ ಗ್ರೂಪ್‌ಗಳಲ್ಲಿ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡದಂತೆ ನೆನಪಿಸುತ್ತಲೇ ಇರುತ್ತೇವೆ. ಆದಾಯ ಮುಖ್ಯವಾದರೂ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವುದು ಒಳ್ಳೆಯ ಲಕ್ಷಣವಲ್ಲ. ಹಣ ಸಂಪಾದನೆಗೆ ಅಡ್ಡ ದಾರಿ ಹಿಡಿಯಬಾರದು ಎಂದು ಸಲಹೆ ನೀಡುತ್ತೇವೆ ಎನ್ನುತ್ತಾರೆ.