ಬೆಂಗಳೂರು ನಗರಕ್ಕೆ ಟನಲ್ ರಸ್ತೆ ಯೋಜನೆ: ಜಿಲ್ಲಾ ಉಸ್ತುವಾರಿ ಸಚಿವರಿಗೊಂದು ಬಹಿರಂಗ ಪತ್ರ ಬರೆದ ರಾಜೀವ ಹೆಗಡೆ
ಬೆಂಗಳೂರು ನಗರಕ್ಕೆ ಟನಲ್ ರಸ್ತೆಯ ಯೋಜನೆಯನ್ನು ಮುಂದಿಟ್ಟ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ರಾಜೀವ ಹೆಗಡೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಸಂಚಾರ-ಸಾರಿಗೆಯನ್ನು ಸರಿಪಡಿಸುವತ್ತ ಯಾವುದೇ ಆಸಕ್ತಿಯನ್ನು ತೋರದೇ ಏಕಾಏಕಿ ಟನಲ್ ಯೋಜನೆಗೆ ಮುಂದಾಗಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜೀವ ಹೆಗಡೆ ಲೇಖನ: ಬೆಂಗಳೂರು ನಗರವನ್ನು ಸಿಂಗಾಪುರ್ ರೀತಿಯಲ್ಲಿ ಅಭಿವೃದ್ಧಿ ಮಾಡಲು ಹೊರಟಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ. "ತಲೆಬುಡವಿಲ್ಲದೇ ಓತಪ್ರೋತವಾಗಿ ಬೆಂಗಳೂರು ನಗರವನ್ನು ನಾವೆಲ್ಲೆರೂ ಬೆಳೆಸಿದ್ದೇವೆ ಹಾಗೂ ಅಲ್ಲಿಯೇ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದೇವೆ. ಹೀಗಾಗಿ ಬೆಂಗಳೂರು ನಗರದ ಹಾಲಿ ಸಂಚಾರ ದಟ್ಟಣೆಯನ್ನು ನಿಭಾಯಿಸಲು ಸಾಕ್ಷಾತ್ ದೇವರು ಪ್ರತ್ಯಕ್ಷವಾಗಿ ಬಂದರೂ ಅಸಾಧ್ಯ ಎನ್ನುವ ಸ್ಥಿತಿಯಿದೆ. ಇದಕ್ಕೆ ಯಾರು ಕಾರಣವೆಂದು ಮೂಲ ಹುಡುಕಿಕೊಂಡು ಹೋದರೆ ಸಾರ್ವಜನಿಕರ ಬುಡಕ್ಕೇ ಬರುತ್ತದೆ. ಏಕೆಂದರೆ ರಾಜಕಾರಣಿಗಳಿಗೆ ಬೇಕಾದಂತೆ ನಗರವನ್ನು ಬೆಳೆಯಲು ಬಿಟ್ಟವರು ನಾವಲ್ಲವೇ, ಹೀಗಿರುವಾಗ ಇಂತಹ ರಾಜಕಾರಣಿಗಳನ್ನು ಸಹಿಸಿಕೊಂಡಿದ್ದಕ್ಕೆ ನಮಗೆ ನಾವೇ ಶಾಪ ಹಾಕಿಕೊಳ್ಳಬೇಕು.
ಹೀಗಿರುವಾಗ ಮುಖ್ಯಮಂತ್ರಿಯಾಗಲು ಹೊರಟಿರುವ ನೀವು ಬೆಂಗಳೂರು ನಗರಕ್ಕೆ ಟನಲ್ ರಸ್ತೆಯ ಯೋಜನೆಯನ್ನು ಮುಂದಿಡುತ್ತಿದ್ದೀರಿ. ಒಟ್ಟು 40 ಕಿ.ಮೀ ಯೋಜನೆಗೆ ಸುಮಾರು 40 ಸಾವಿರ ಕೋಟಿ ರೂಪಾಯಿ ಖರ್ಚಾಗಬಹುದು. ಪ್ರಾಥಮಿಕವಾಗಿ ಸುಮಾರು 18 ಕಿ.ಮೀ ರಸ್ತೆಗೆ 15 ಸಾವಿರ ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ನಮ್ಮ ದೇಶದ ಯೋಜನಾ ವೇಗವನ್ನು ಆಧರಿಸಿ ಕಾಮಗಾರಿ ವೆಚ್ಚವು ಇನ್ನೊಂದಿಷ್ಟು ಸಾವಿರ ಕೋಟಿ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾವುದೇ ಕೆಲಸದ ಬಗ್ಗೆ ನಿಮಗಿರುವ ಹಠವನ್ನು ನೋಡಿದಾಗ, ಕೈ ಹಾಕಿದ ಕೆಲಸವನ್ನು ಸಾಮಾನ್ಯವಾಗಿ ಬಿಡುವುದಿಲ್ಲ. ಹೀಗಾಗಿ ಟನಲ್ ಯೋಜನೆಯ ಬಗೆಗಿನ ನಿಮ್ಮ ಬದ್ಧತೆ ನೋಡಿದಾಗ ನೈಸ್ ರಸ್ತೆ ಶುರು ಮಾಡುವಾಗ ಇದ್ದ ಕಾಳಜಿಯೇ ಎದ್ದು ಕಾಣಿಸುತ್ತದೆ. ಅಂದ್ಹಾಗೆ ಜಾಗತಿಕವಾಗಿ ಬೆಂಗಳೂರು ನಗರವು ಬೆಳೆಯಲು ಇಂತಹ ರಸ್ತೆಗಳು ಅನಿವಾರ್ಯ ಎನ್ನುವುದನ್ನು ನಾನು ಖಂಡಿತ ಒಪ್ಪುತ್ತೇನೆ. ಭಾರತ ಹಾಗೂ ಕರ್ನಾಟಕವು ಕಾಣದ ಇಂತಹ ಯೋಜನೆಯನ್ನು ಮಾಡಲು ಹೊರಟಿರುವ ನಿಮ್ಮ ಕನಸ್ಸನ್ನು ನೋಡಿದಾಗ, ಬೆಂಗಳೂರು ನಗರದ ಮೂಲಸೌಕರ್ಯವನ್ನು ಯಾವ ಎತ್ತರಕ್ಕೆ ಕೊಂಡೊಯ್ಯಬಲ್ಲಿರಿ ಎನ್ನುವುದನ್ನು ಒಂದು ಕ್ಷಣಕ್ಕೆ ಕಲ್ಪಿಸಿಕೊಳ್ಳುವುದು ಕೂಡ ಕಷ್ಟವಾಗಬಹುದು.
ಅಂದ್ಹಾಗೆ ನಿಮ್ಮ ಕನಸಿನ ಟನಲ್ ಯೋಜನೆಗೆ ಒಂದು ಕಿ.ಮೀಗೆ ಸುಮಾರು ಸಾವಿರ ಕೋಟಿ ರೂಪಾಯಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹಾಲಿ ಲೆಕ್ಕಾಚಾರಗಳ ಪ್ರಕಾರ ಈ ರಸ್ತೆಗೆ ಪ್ರತಿ ಕಿ.ಮೀ 16 ರೂಪಾಯಿ ಟೋಲ್ ಸಂಗ್ರಹಿಸಲಾಗುತ್ತದೆಯಂತೆ. ಈ ಯೋಜನೆ ಜಾರಿಗೆ ಬಂದು ರಸ್ತೆ ಉದ್ಘಾಟನೆ ವೇಳೆಗೆ 20 ರೂ ತಲುಪಿದರೂ ಆಶ್ಚರ್ಯವಿಲ್ಲ. ಆದರೆ ನೈಸ್ ರಸ್ತೆಗಿಂತ ಅರ್ಧದಷ್ಟು ರಿಯಾಯಿತಿ ದರದಲ್ಲಿ ದೊರೆಯಲಿದೆ ಎನ್ನುವ ಖುಷಿಯಿದೆ. ಇದೇ 18 ಕಿ.ಮೀ ದೂರವನ್ನು ಚಲಿಸಲು ಸುಮಾರು 150 ರೂಪಾಯಿ ಪೆಟ್ರೋಲ್ ಖರ್ಚಾಗಬಹುದು. ಅಲ್ಲಿಗೆ ಈ ಸಣ್ಣ ಸುಂದರ ಪ್ರಯಾಣವು ಕೇವಲ 450 ರೂ.ನಲ್ಲಿ ಮುಗಿಯಬಹುದು. ನೀವು ಪ್ರತಿಭಟಿಸಿದ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್‌ಗಿಂತ ಹೆಚ್ಚಿನ ಹಣವನ್ನು ಅದರ ಶೇ.10ರಷ್ಟು ದೂರಕ್ಕೆ ನೀಡಬೇಕಿರುವುದರಿಂದ, ಜನಸಾಮಾನ್ಯರಿಗೆ ಈ ಟನಲ್ ರಸ್ತೆ ಮೈಸೂರಿನ ರೀತಿಯಲ್ಲಿ ದೊಡ್ಡ ಪ್ರವಾಸಿ ತಾಣ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದಾಗ್ಯೂ ಪ್ರತಿದಿನ ಸಾವಿರಾರು ವಾಹನಗಳು ಇಲ್ಲಿ ಓಡಾಡುವುದರಿಂದ ಒಂದಿಷ್ಟು ಸಂಚಾರ ದಟ್ಟಣೆ ಕಡಿಮೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಂತಹ ದೊಡ್ಡ ದೊಡ್ಡ ಕನಸುಗಳನ್ನು ಬೆಂಗಳೂರಿಗರಲ್ಲಿ ಬಿತ್ತಿರುವ ನಿಮ್ಮ ಮುಂದೆ, ಒಬ್ಬ ಸಾಮಾನ್ಯ ಮತದಾರನ ದೈನಂದಿನ ದುಃಸ್ವಪ್ನವನ್ನು ಹೇಳುವ ಮನಸ್ಸಾಗುತ್ತಿದೆ.
ನಿಮಗೆ ಬೇಕಿರುವ, ಅಗತ್ಯವಿರುವ ಸಾವಿರಾರು ಕೋಟಿಯ ಬೃಹತ್ ಯೋಜನೆಗಳನ್ನು ಖಂಡಿತವಾಗಿಯೂ ಅನುಷ್ಠಾನಕ್ಕೆ ತನ್ನಿ. ಅದರ ಎಲ್ಲ ಹೊರೆಯನ್ನು ಹೊರಲು ನಾವು ತೆರಿಗೆದಾರರು ಸಿದ್ಧರಿದ್ದೇವೆ. ಆದರೆ ನಮ್ಮದು ನೂರಾರು ಕೋಟಿಯ ಕೆಲವೇ ಕೆಲವು ಮನವಿಗಳಿವೆ. ನಿಮ್ಮ ಸಾವಿರ ಕೋಟಿ ಯೋಜನೆಯ ರಸ್ತೆಯಲ್ಲಿ ಚಲಿಸುವ ಭಾಗ್ಯ ಹಾಗೂ ಸ್ಥಿತಿವಂತಿಕೆ ಬರುವರೆಗೆ ಬೆಂಗಳೂರು ನಗರದ ಉಳಿದ ಅತ್ಯಲ್ಪ ಕೋಟಿಯ ದೌರ್ಭಾಗ್ಯಗಳನ್ನು ದಯವಿಟ್ಟು ಗಮನಿಸಿ. ಓದಿನ ಸಹಾಯಕ್ಕಾಗಿ ಮೊದಲೇ ಹೇಳುತ್ತೇನೆ, ಇಲ್ಲಿ ಸಾರಿಗೆ ಹಾಗೂ ಸಂಚಾರ ಎನ್ನುವ ಎರಡು ವಿಷಯ ಪ್ರಸ್ತಾಪಿಸುತ್ತೇನೆ.
ಮಹಾನಗರ ಸಾರಿಗೆ
ಬೆಂಗಳೂರು ನಗರವು ಕಳೆದೊಂದು ದಶಕದಲ್ಲಿ ಹಿಗ್ಗಾಮುಗ್ಗಾ ಬೆಳೆದಿದೆ. ಆದರೆ ಬಿಎಂಟಿಸಿ ಬಸ್‌ಗಳ ಸಂಖ್ಯೆಯಲ್ಲಿ ಆ ಪ್ರಮಾಣದ ಹೆಚ್ಚಳವೇ ಆಗಿಲ್ಲ. ಸರಿಸುಮಾರು ಒಂದೂವರೆ ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರಕ್ಕೆ ಕೇವಲ 6500 ಬಸ್‌ಗಳಿವೆ. ಇಂದಿಗೂ ಸಾರ್ವಜನಿಕ ಸಾರಿಗೆಯನ್ನು ಬಳಸುವ ಪ್ರಮಾಣ ಶೇ.35ರ ಆಸುಪಾಸಿನಲ್ಲೇ ಇದೆ. ಮೆಟ್ರೋ ಸೇವೆ ಶುರುವಾದರೂ ಸಾರ್ವಜನಿಕ ಸಾರಿಗೆ ಬಳಕೆ ಪ್ರಮಾಣದಲ್ಲಿ ಯಾವುದೇ ದೊಡ್ಡ ಬದಲಾವಣೆ ಕಾಣಿಸುತ್ತಿಲ್ಲ. ಇನ್ನೆರಡು ವರ್ಷಗಳಲ್ಲಿ ಇದಕ್ಕೆ ಸಬರ್ಬನ್ ರೈಲು ಕೂಡ ಸೇರಬಹುದು. ಅಷ್ಟಾದರೂ ಜಗತ್ತಿನ ಉತ್ಕೃಷ್ಟ ಸಾರ್ವಜನಿಕ ಸಾರಿಗೆಯನ್ನಾಗಿಸವತ್ತ ಯಾವುದೇ ಪ್ರಮುಖ ಹೆಜ್ಜೆ ಇರಿಸಿದ ಲಕ್ಷಣವೇ ಕಾಣಿಸುತ್ತಿಲ್ಲ.
ಈ ಟನಲ್ ಮಾಡಲು ರೂಪಿಸಿರುವ ಡಿಪಿಆರ್ ಪ್ರಕಾರ ಈ ಯೋಜನೆ ಜಾರಿಯಾಗಬಹುದಾದ ಸಮಯಕ್ಕೆ ಪೀಕ್ ಅವಧಿಯಲ್ಲಿ ಸುಮಾರು 23 ಲಕ್ಷ ಟ್ರಿಪ್‌ಗಳು ಬೆಂಗಳೂರು ನಗರದಲ್ಲಿ ಆಗಲಿವೆ. ಆದರೆ ಈ ಪ್ರಸ್ತಾಪಿತ ರಸ್ತೆಯು ಇದರ ಶೇ.1ರಷ್ಟು ಸಂಚಾರ ದಟ್ಟಣೆಯನ್ನು ಕೂಡ ನಿಭಾಯಿಸುವುದಿಲ್ಲ ಎನ್ನುವುದು ಅಷ್ಟೇ ಅಚ್ಚರಿ ವಿಚಾರವಾಗಿದೆ. ಸಾರಿಗೆ ತಜ್ಞರು ಹೇಳುವಂತೆ ಟನಲ್ ರಸ್ತೆಯು ಒಂದು ಗಂಟೆಗೆ ಸರಿಸುಮಾರು 1800-2000 ಪ್ರಯಾಣಿಕರನ್ನು ನಿಭಾಯಿಸಿದರೆ, ಮೆಟ್ರೋ ಹಾಗೂ ಸಬರ್ಬನ್‌ಗಳು 69000-89000 ಪ್ರಯಾಣಿಕರನ್ನು ಸ್ಥಳಾಂತರಿಸುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಕಿ.ಮೀ ಮೆಟ್ರೋ ನಿರ್ಮಾಣ ಮಾಡಲು 500 ಕೋಟಿ ರೂ ಬೇಕಿದ್ದರೆ, ಅದ ಪ್ರಮಾಣದ ಸಬರ್ಬನ್ ರೈಲು ಯೋಜನೆ ನಿರ್ಮಾಣಕ್ಕೆ 110 ಕೋಟಿ ರೂ ಬೇಕಾಗುತ್ತದೆಯಂತೆ. ಅಂದರೆ ಸಬರ್ಬನ್‌ನ ಹತ್ತು ಪಟ್ಟು ಖರ್ಚು ಮಾಡಿ ಅದರ ಶೇ.5ರಷ್ಟು ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯುವ ಸಾಮರ್ಥ್ಯದ ಯೋಜನೆ ಇದಾಗಿದೆ. ಇದರ ಜತೆಗೆ ಸಾರ್ವಜನಿಕರ ಜೇಬಿಗೂ ತುಸು ಖುಷಿ ಕೊಡಬಹುದಾದ ಸಾರಿಗೆ ವ್ಯವಸ್ಥೆಯಿದು.
ಇಷ್ಟಾಗಿಯೂ ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ ಪ್ರಮಾಣ ಹೆಚ್ಚದಿರುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ತಲೆಯಲ್ಲಿ ಮೂಡುತ್ತದೆ. ಬೆಂಗಳೂರಿನಲ್ಲಿ ಜನರಿಗೆ ಪೂರಕವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಇಲ್ಲ. ಬದಲಾಗಿ ಅವರು ಸಾರಿಗೆ ವ್ಯವಸ್ಥೆ ಮಾಡಿರುವಲ್ಲಿ ಜನರು ಹೋಗಬೇಕಿದೆ. ಬೆಂಗಳೂರು ಕೇಂದ್ರ ಭಾಗದ ಸುತ್ತಲಿನ ಕೆಲ ಪ್ರಮುಖ ದಾರಿಗಳನ್ನು ಹೊರತುಪಡಿಸಿ, ಉಳಿದೆಡೆ ಇಂದಿಗೂ ಬಿಎಂಟಿಸಿ ಬಸ್ ಸಂಚಾರ ಮಾಡುವುದೇ ಇಲ್ಲ. ಇನ್ನಷ್ಟು ಸರಳವಾಗಿ ಹೇಳಬೇಕು ಎಂದರೆ ಬೆಂಗಳೂರು ಸಂಚಾರದ ಜೀವನಾಡಿ ಎಂದೆನೆಸಿಕೊಳ್ಳುವ ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳು ಪರಸ್ಪರ ಸ್ಪರ್ಧೆಗಿಳಿದು ಒಂದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವ ಬದಲು ಶತ್ರು ಸಂಸ್ಥೆಗಳಂತೆ ಕೆಲಸ ಮಾಡುತ್ತಿವೆ. ಮೆಟ್ರೋ ಮಾರ್ಗದ ಕೆಳಗೆ ಬಿಎಂಟಿಸಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆಯೆಂದರೆ, ಇದನ್ನು ನಿಭಾಯಿಸುತ್ತಿರುವವರ ತಲೆಯಲ್ಲಿ ಸಗಣಿ ಕೂಡ ಇಲ್ಲ ಎನ್ನುವುದನ್ನು ಒಬ್ಬ ಸಾಮಾನ್ಯ ಕೂಡ ಹೇಳಬಹುದು.
ಇವೆರಡು ಸಂಸ್ಥೆಗಳು ಎಷ್ಟು ವೈರುಧ್ಯದಿಂದ ಕೆಲಸ ಮಾಡುತ್ತಿವೆ ಎನ್ನುವುದಕ್ಕೆ ಕೇವಲ ಒಂದು ಉದಾಹರಣೆ ನೀಡುತ್ತೇನೆ. ಕೆ.ಆರ್ ಮಾರುಕಟ್ಟೆಯಿಂದ ಬನಶಂಕರಿ ಮಾರ್ಗವಾಗಿ ಜೆ.ಪಿ ನಗರಕ್ಕೆ ಮೆಟ್ರೋ ಸೇವೆಯಿದೆ. ಅದೇ ಮಾರ್ಗದಲ್ಲಿ ಪ್ರತಿ ಐದು ನಿಮಿಷಕ್ಕೊಂದು ನೇರ ಬಸ್ ಸೇವೆಯೂ ಇದೆ. ಇದರ ಬದಲಾಗಿ ಮೆಟ್ರೋ ನಿಲ್ದಾಣದಿಂದ ಸುತ್ತಲಿನ ಇತರ ಜನವಸತಿ ಪ್ರದೇಶಗಳಿಗೆ ಬಸ್ ಸೇವೆ ಒದಗಿಸಿದರೆ ರಸ್ತೆಗಿಳಿಯಬಹುದಾದ ವಾಹನಗಳ ಸಂಖ್ಯೆಯಲ್ಲಿ ಭಾರಿ ಕಡಿತವಾಗುತ್ತದೆ. ಬಿಎಂಟಿಸಿಯು ಈ ಸಂಬಂಧ ಮೆಟ್ರೋ ಫೀಡರ್‌ಗಾಗಿ ಬಿಎಂಆರ್‌ಸಿಎಲ್‌ನಿಂದ ಹಣ ಪಡೆದು ಅದೇ ಮೆಟ್ರೋ ಲೇನ್ ಕೆಳಗೆ ಬಸ್ ಓಡಿಸುತ್ತಿದೆ. ನಿಮಗೆ ಫೀಡರ್ ಹೆಸರಿನ ಬಸ್‌ಗಳು ಮೆಟ್ರೋ ಹಳಿಯ ಕೆಳಗೆ ಓಡಾಡುತ್ತಿರುವುದು ಕಂಡಿರಬಹುದು. ಇಂತಹ ಅವ್ಯವಸ್ಥೆ ಬದಲಾಗಿ ಬೆಂಗಳೂರಿನ ಸಣ್ಣ ಪುಟ್ಟ ರಸ್ತೆಗಳಿಗೂ ಮಿನಿ ಬಸ್ ಸೇವೆ ಆರಂಭಿಸಿದರೆ, ಮೆಟ್ರೋದಲ್ಲಿ ಓಡಾಡುವ ಜನರ ಸಂಖ್ಯೆ ಹೆಚ್ಚಲಿದೆ. ಇದರ ಜತೆಗೆ ರಸ್ತೆಗೆ ಇಳಿಯಬಹುದಾದ ಖಾಸಗಿ ವಾಹನಗಳ ಸಂಖ್ಯೆ ಕೂಡ ಕುಸಿಯಲಿದೆ. ಇದೆಲ್ಲದರ ಪರಿಣಾಮವಾಗಿ ಮೆಟ್ರೋ ರೈಡರ್‌ಗಳ ಸಂಖ್ಯೆ ವೃದ್ಧಿಯಾಗಿ, ಈಗಿನ ಟಿಕೆಟ್ ಬೆಲೆಯನ್ನು ಕೂಡ ಕಡಿಮೆ ಮಾಡಬಹುದು. ಆದರೆ ಇಂತಹ ಸಣ್ಣದೊಂದು ಕೆಲಸ ಮಾಡಲಾಗದ ರಾಜ್ಯ ಸರ್ಕಾರವು, ಬಿಎಂಆರ್‌ಸಿಎಲ್‌ನಿಂದ ಹಣವನ್ನೂ ಪಡೆದು ಮಜಾ ನೋಡುತ್ತಿದೆ. ಅತ್ತ ನಷ್ಟದಲ್ಲಿರುವ ಬಿಎಂಆರ್‌ಸಿಎಲ್ ದರ ಏರಿಕೆ ಮಾಡಲು ಹೊರಟಿದೆ. ಇದ್ಯಾವುದೂ ಆಗದೇ ನಾವು ಕಿ.ಮೀಗೆ ಸರಿಸುಮಾರು 30 ರೂ ನೀಡಿ ಟನಲ್‌ನಲ್ಲಿ ಹೊರಟು ಸಿಂಗಾಪುರದ ಅನುಭವ ಪಡೆಯಲು ಹೊರಟಿದ್ದೇವೆ.
ಈ ಸುಖಕ್ಕಾಗಿ ಬೆಂಗಳೂರಿನಾದ್ಯಂತ ಮೆಟ್ರೋ ಕಾಮಗಾರಿ ಮಾಡುವುದೇಕೆ ಎನ್ನುವುದೇ ಅರ್ಥವಾವುದಿಲ್ಲ. ಮೆಟ್ರೋ ನಿಲ್ದಾಣಗಳಿಗೆ ಹೋಗಲು ಜನರಿಗೆ ಅನುಕೂಲ ಮಾಡುವ ಸಂಸ್ಥೆಯನ್ನಾಗಿ ಬಿಎಂಟಿಸಿಯನ್ನು ರೂಪಿಸದೇ, ಇನ್ನೊಂದು ಸ್ಪರ್ಧಾತ್ಮಕ ಕಂಪೆನಿಯಂತೆ ನೋಡಿದರೆ ಜನರನ್ನು ರಕ್ಷಿಸುವವರು ಯಾರು? ಆ ಮೆಟ್ರೋಗೂ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಲಾಗಿದ್ದೂ, ಅದರ ಹೊರೆಯನ್ನೂ ನಾವೇ ಅನುಭವಿಸುತ್ತಿದ್ದೇವೆ. ಸಾವಿರ ಸಾವಿರ ಕೋಟಿ ಸಾಲ ಮಾಡಿ ನಿಷ್ಪ್ರಯೋಜಕ ಸಂಸ್ಥೆ ಮಾಡವುದಿದ್ದರೆ ಇಂದೇ ಮೆಟ್ರೋ ಬೇಡವೆಂದು ಕೇಂದ್ರಕ್ಕೆ ಪತ್ರವನ್ನಾದರೂ ಬರೆದರೆ ಒಂದಿಷ್ಟು ಸಾವಿರ ಕೋಟಿ ಉಳಿಸಬಹುದು. ಮೆಟ್ರೋ ಯೋಜನೆ ಕಾರ್ಯಸಾಧುವಲ್ಲ ಎಂದು ಈಗಾಗಲೇ ಸಾಕಷ್ಟು ವಾದಗಳಿವೆ. ಆದರೆ ಇಷ್ಟೊಂದು ನಿಷ್ಪ್ರಯೋಜಕ ಮಾಡುವುದನ್ನು ಬೆಂಗಳೂರಿನಿಂದ ಕಲಿತುಕೊಳ್ಳಬೇಕು.
ಮಹಾನಗರದ ರಸ್ತೆ
ಬೆಂಗಳೂರಿನ ವೈಭವವನ್ನು ಪರಿಚಯಸಲು ನಮಗೆ ಟನಲ್ ರಸ್ತೆಗಳು ಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಭೂಮಿಯೊಳಗೆ ರಸ್ತೆ ಕೊರೆಯುವ ಮುನ್ನ ಭೂಮಿ ಮೇಲಿರುವ ರಸ್ತೆಗಳ ಕಥೆ ಸುಧಾರಿಸುವವರು ಯಾರು ಎನ್ನುವ ಪ್ರಶ್ನೆಗೂ ಉತ್ತರಿಸಬೇಕು. ವಿಧಾನಸೌಧ, ಎಂ.ಜಿ ರಸ್ತೆ ಸುತ್ತಲಿನ ರಸ್ತೆಗಳನ್ನು ಹೊರತುಪಡಿಸಿ ಬೆಂಗಳೂರಿನ ಇನ್ಯಾವುದೇ ಪ್ರದೇಶಗಳಲ್ಲಿ ಸರಿಯಾದ ಒಂದು ಕಿ.ಮೀ ರಸ್ತೆ ಸಿಗುವುದು ಕಷ್ಟ ಎನ್ನುವ ಪರಿಸ್ಥಿತಿಯಿದೆ. ಸಿಲ್ಕ್ ಬೋರ್ಡ್ ದಾಟಿದ ಬಳಿಕ ಇರುವ ಐಟಿ ಜಗತ್ತಿನ ಬೆಂಗಳೂರಿನ ರಸ್ತೆಗಳಂತೂ ನರಕ ಸದೃಶವಾಗಿವೆ. ಬೆಂಗಳೂರು ಹೊರವಲಯದ ರಸ್ತೆಗಳಲ್ಲಿ ಓಡಾಡಲು ಸಣ್ಣ ಪುಟ್ಟ ಧೈರ್ಯ ಸಾಕಾಗುವುದಿಲ್ಲ. ಬೆಂಗಳೂರಿನ ಈ ನೂರಾರು ಕಿ.ಮೀ ರಸ್ತೆಯನ್ನು ಸರಿಪಡಿಸಿ, ಸದ್ಯಕ್ಕೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಒಂದು ಸಾವಿರ ಕೋಟಿ ರೂಪಾಯಿ ಬೇಕಾಗಬಹುದು. ಅಂದರೆ ಟನಲ್ ಯೋಜನೆಯ ಒಂದು ಕಿ.ಮೀ ವೆಚ್ಚಕ್ಕೆ ಇದು ಸರಿಯಾಗುತ್ತದೆ. ವಿಪರ್ಯಾಸವೆಂದರೆ ಸರ್ಕಾರದ ಬಳಿ ಈ ದುರಸ್ಥಿ ಕಾಮಗಾರಿಗೆ ಹಣವಿರದ ದುಸ್ಥಿತಿ ನಿರ್ಮಾಣವಾಗಿದೆ.
ಡಿಕೆಶಿಯವರೇ, ಟನಲ್ ಯೋಜನೆಯನ್ನು ನಿಮ್ಮ ಜತೆ ಸಮರ್ಥಿಸುತ್ತಲೇ ಹತ್ತಿಪ್ಪತ್ತು ಕೋಟಿ ಕಾರಣದಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೆಲವು ರಸ್ತೆಗಳನ್ನು ನೆನಪಿಸುವ ಕೆಲಸ ಮಾಡುತ್ತೇನೆ. ಸಾವಿರ ಕೋಟಿ ಯೋಜನೆಗೆ ಬಲಬರಬೇಕು ಎಂದಾದರೆ ಇಂತಹ ಪುಟಗೋಸಿ ಯೋಜನೆಯನ್ನು ಮುಗಿಸಿದರೆ, ನಿಮ್ಮ ಹಠಕ್ಕೂ ಒಂದು ಮರ್ಯಾದೆ ಬರುತ್ತದೆ. ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ರಸ್ತೆಗೆ ಕೇವಲ ಬೆರಳೆಣಿಕೆಯ ಪಿಲ್ಲರ್ ಮಾಡಿ ಜೋಡಿಸುವ ಕಾರ್ಯ ವರ್ಷಗಳಿಂದ ಕುಂಟುತ್ತ ಸಾಗಿದೆ. ಸಿಲ್ಕ್ ಬೋರ್ಡ್‌ವರೆಗೆ ರಸ್ತೆ ಕಾಮಗಾರಿ ಮುಗಿದಿದ್ದರೂ ಅಲ್ಲಿ ಮೆಟ್ರೋ ಸ್ಟೇಷನ್ ಬಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದೆ. ಕನಕಪುರ ರಸ್ತೆಯ ನೈಸ್ ಜಂಕ್ಷನ್ ಬಳಿ ಎರಡು ವರ್ಷಗಳಿಂದ ರಸ್ತೆ ಬಂದಾಗಿದೆ. ಹೊಸಕೇರೆಹಳ್ಳಿ ಪಿಇಎಸ್ ಕಾಲೇಜಿನ ಬಳಿಯ ಫ್ಲೈ ಓವರ್ ಕಾಮಗಾರಿ ತಾಣವನ್ನು ಯುನೆಸ್ಕೋ ಸೈಟ್‌ನ್ನಾಗಿ ಘೋಷಿಸಲು ಮೊನ್ನೆ ಸಮೀಕ್ಷೆ ಮಾಡಲಾಗಿದೆಯೆಂದು ಪುರಾತತ್ವ ಇಲಾಖೆಯಿಂದ ಮಾಹಿತಿ ಬಂದಿದೆ. ಸಿಲ್ಕ್ ಬೋರ್ಡ್, ಮಡಿವಾಳ ಜಂಕ್ಷನ್ ಸುತ್ತಲಿನ ಪ್ರದೇಶ ಹಾಗೂ ಸರ್ವಿಸ್ ರಸ್ತೆಗಳನ್ನು ಜಗತ್ತಿನ ಅದ್ಭುತಗಳಲ್ಲೊಂದು ಎಂದು ಘೋಷಿಸುವ ಪ್ರಯತ್ನ ನಡೆದಿದೆಯಂತೆ. ಮಾರತಹಳ್ಳಿಯಿಂದ ವರ್ತೂರಿಗೆ ಹೋಗುವಾಗ ಸಿಗುವ ಪಣತ್ತೂರು ಅಂಡರ್ ಪಾಸ್‌ನ್ನು ಟಾಟಾ ಕಂಪೆನಿಯವರು ಖರೀದಿಸಿ, ವರ್ಷದ ಎಲ್ಲ ಸೀಸನ್‌ನಲ್ಲೂ ಆಫ್ ರೋಡ್ ಟ್ರ್ಯಾಕ್ ಆಗಿ ಘೋಷಿಸಿದ್ದಾರೆ ಎಂದು ಮೊನ್ನೆ ಮುಂಬೈನಿಂದ ಹೊಸ ಸುದ್ದಿ ಬಂದಿತ್ತು. ಉತ್ತರಹಳ್ಳಿ-ಕೆಂಗೇರಿ ರಸ್ತೆ ಅಗಲೀಕರಣ ಯೋಜನೆ ಯಶಸ್ಸನ್ನು ನೋಡಲು ಸಿಂಗಾಪುರದ ಪ್ರಧಾನಿ ಬರುವ ಸಾಧ್ಯತೆಯಿದೆಯೆಂದು ಮೊನ್ನೆ ಬೆಂಗಳೂರಿಗೆ ಜೈಶಂಕರ್ ಬಂದಾಗ ತಿಳಿಸಿದ್ದರಂತೆ.
ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಇಂತಹ ಸ್ಮಾರಕಗಳು ಇರುವಾಗ, ಯಾವ ಧೈರ್ಯದಲ್ಲಿ ಟನಲ್ ಯೋಜನೆ ಮಾಡಲು ಹೋಗುತ್ತಿದ್ದೀರಿ ಎಂದು ಪ್ರಾಮಾಣಿಕ ಉತ್ತರವನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀಡಬೇಕಿದೆ. ಈಗಿರುವ ರಸ್ತೆಯನ್ನು ಸರಿಪಡಿಸುವುದು ಅಸಾಧ್ಯ ಎಂದು ಟನಲ್ ಯೋಜನೆ ಮಾಡುತ್ತಿಲ್ಲ. ಇದಕ್ಕೆ ಪೂರಕವಾಗಿ ಆ ರಸ್ತೆ ಇರಬೇಕು ಎನ್ನುವುದು ಎಲ್ಲರ ಆಶಯ. ಆದರೆ ಈ ರಸ್ತೆಯನ್ನು ಸರಿಪಡಿಸದೇ, ಸಂಚಾರಕ್ಕೆ ಅಯೋಗ್ಯ ಮಾಡಿ, ಸಂಚಾರ-ಸಾರಿಗೆಯನ್ನು ಸರಿಪಡಿಸುವತ್ತ ಯಾವುದೇ ಆಸಕ್ತಿಯನ್ನು ತೋರದೇ ಏಕಾಏಕಿ ಟನಲ್ ಯೋಜನೆಯೆಂದರೆ ನಮ್ಮ ಜೇಬಿನಿಂದ ಲೂಟಿ ಮಾಡುವ ಇನ್ನೊಂದು ಯೋಜನೆ ಎಂದು ಸಣ್ಣ ಸಂದೇಹವೂ ಇಲ್ಲದೇ ಹೇಳಬೇಕಾಗುತ್ತದೆ.
ಕೊನೆಯದಾಗಿ: ಮಾನ್ಯ ಡಿ.ಕೆ ಶಿವಕುಮಾರ್ ಅವರೇ, ನನ್ನನ್ನೂ ಸೇರಿಸಿ ಬೆಂಗಳೂರಿನ ಹೆಚ್ಚಿನ ಜನರ ಸಹಮತವಿರದಿದ್ದರೂ ನಿಮ್ಮ ಯೋಜನೆಯಲ್ಲಿ ಮುಂದುವರಿಯುತ್ತೀರಿ ಎನ್ನುವುದು ನಿಮ್ಮ ರಾಜಕೀಯ ವೈಖರಿ ಸಾರಿ ಹೇಳುತ್ತದೆ. ಹಾಗೆಯೇ ಅಭಿವೃದ್ಧಿಯ ಕನಸು ಕಾಣುವುದು ತಪ್ಪು ಕೂಡ ಅಲ್ಲ. ಬೆಂಗಳೂರು ಅಭಿವೃದ್ಧಿ ಬಗ್ಗೆ ನೀವು ದೂರದೃಷ್ಟಿ ಹೊಂದಿದ್ದೀರಿ ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ. ಆದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇರಿಸಿರುವ ನಿಮ್ಮಲ್ಲಿ ಬೆಂಗಳೂರಿನ ನಾಗರಿಕ ಹಾಗೂ ಮತದಾರನಾಗಿ ಒಂದೇ ಒಂದು ಮನವಿಯಿದೆ. ಈ ಲೇಖನದಲ್ಲಿ ಉಲ್ಲೇಖಿಸಿದ ಅಂಶಗಳತ್ತ ಒಮ್ಮೆ ಪ್ರಾಮಾಣಿಕವಾಗಿ ಕಣ್ಣು ಹಾಯಿಸಿ. ಬಿಎಂಟಿಸಿ ಬಸ್-ಮೆಟ್ರೋ-ಸಬರ್ಬನ್‌ನ್ನು ಒಂದಕ್ಕೊಂದು ಪೂರಕವಾಗಿ ಸಮಗ್ರ ಸಂಚಾರ ವ್ಯವಸ್ಥೆಯನ್ನಾಗಿ ಬದಲಾಯಿಸಿ. ಈಗಿರುವ ರಸ್ತೆಗಳ ಗುಣಮಟ್ಟವನ್ನು ಸಿಂಗಾಪುರದ ಹಂತಕ್ಕೆ ಬೇಡ, ಬೆಂಗಳೂರಿನ ವಿಧಾನಸೌಧದ ಗುಣಮಟ್ಟಕ್ಕಾದರೂ ತರುವ ಪ್ರಯತ್ನ ಮಾಡಿ. ಆ ಬಳಿಕ ನಿಮ್ಮಲ್ಲಿ ನಿಜವಾಗಿಯೂ ಬೆಂಗಳೂರು ಅಭಿವೃದ್ಧಿಯ ನಿಷ್ಠೆ ಇದೆ ಎನ್ನುವುದು ಖಾತ್ರಿಯಾಗುತ್ತದೆ. ಆಗ ನೀವು ಮಾಡುವ ಯೋಜನೆಗೆ ಯಾವುದೇ ವಿಘ್ನ ಎದುರಾಗುವುದಿಲ್ಲ. ಒಂದು, ಹತ್ತು, ನೂರು ಕೋಟಿ ಯೋಜನೆಯಲ್ಲಿ ಜನರಿಗೆ ಸರಣಿ ಮೋಸಗಳನ್ನು ಮಾಡಿರುವ ಇತಿಹಾಸವಿರುವಾಗ ಸಾವಿರ ಕೋಟಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮಹಾ ಮೋಸ ಮಾಡುವುದಿಲ್ಲ ಎನ್ನುವ ನಂಬಿಕೆಯಿದೆ. ಏಕೆಂದರೆ ನೀವು ಈ ರಾಜ್ಯದಲ್ಲಿ ಇನ್ನೊಂದಿಷ್ಟು ವರ್ಷಗಳ ಕಾಲ ರಾಜಕೀಯವಾಗಿ ಆಳುವ ಕನಸು ಕಾಣುತ್ತಿದ್ದೀರಿ. ಅದಕ್ಕೆ ಬೆಂಗಳೂರಿನ ಅಭಿವೃದ್ಧಿಯ ನಿಮ್ಮ ಕನಸು, ನಮಗೆ ದುಸ್ವಪ್ನವಾಗದಂತೆ ನೋಡಿಕೊಳ್ಳುತ್ತೀರಿ ಎನ್ನುವ ಅಪರೂಪದ ನಂಬಿಕೆಯೊಂದಿಗೆ. ಧನ್ಯವಾದಗಳು.
- ಲೇಖನ: ರಾಜೀವ ಹೆಗಡೆ
