ಪರೀಕ್ಷೆಗೆ ಓದು, ಮೊಬೈಲ್ ಬಿಡು ಎಂದು ಅಮ್ಮ ಹೇಳಿದ್ದಕ್ಕೆ 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಆನೇಕಲ್‌ನಲ್ಲಿ ಮರ್ಯಾದಾ ಹತ್ಯೆ ಶಂಕೆ
ಬೆಂಗಳೂರಿನ ಕಾಡುಗೋಡಿಯಲ್ಲಿ ಪರೀಕ್ಷೆಗೆ ಓದು, ಮೊಬೈಲ್ ಬಿಡು ಎಂದು ಅಮ್ಮ ಹೇಳಿದ್ದಕ್ಕೆ 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ವರದಿಯಾಗಿದೆ. ಇನ್ನೊಂದೆಡೆ, ಆನೇಕಲ್‌ನಲ್ಲಿ ಯುವತಿ ಸಾವು ಮರ್ಯಾದಾ ಹತ್ಯೆ ಶಂಕೆಗೆ ಕಾರಣವಾಗಿದೆ. (ವರದಿ-ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವಂತೆ ತಾಯಿ ಗದರಿಸಿದ್ದಕ್ಕೆ 15 ವರ್ಷದ ಬಾಲಕಿಯೊಬ್ಬಳು ಅಪಾರ್ಟ್ ಮೆಂಟ್ ನ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಡುಗೋಡಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು 15 ವರ್ಷದ ಅವಂತಿಕಾ ಚೌರಾಸಿಯಾ ಎಂದು ಗುರುತಿಸಲಾಗಿದ್ದು, ವೈಟ್ ಫೀಲ್ಡ್ ನ ಖಾಸಗಿ ಶಾಲೆಯಲ್ಲಿ ಸಿಬಿಎಸ್ ಇ ಪಠ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆಯ ತಂದೆ ಸಾಫ್ಟ್ ವೇರ್ ಇಂಜಿನಿಯರ್ ಉದ್ಯೋಗದಲ್ಲಿದ್ದಾರೆ.
10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ- ಏನಿದು ಕಳವಳಕಾರಿ ಘಟನೆ
ಅವಂತಿಕಾ ಪರೀಕ್ಷೆ ಫೆ.15ರಿಂದ ಆರಂಭವಾಗುತ್ತಿದ್ದು ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯದಂತೆ ತಾಯಿ ಬುದ್ದಿ ಹೇಳಿದ್ದಾರೆ. ನಂತರ ತಾಯಿ ಮನೆಯಲ್ಲಿ ಇರುವಾಗಲೇ ಅವಂತಿಕಾ 20ನೇ ಮಹಡಿಗೆ ಹೋಗಿ ಕೆಳಗೆ ಹಾರಿದ್ದಾಳೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ದುರಂತ ಕಾಡುಗೋಡಿಯ ಅಸೆಟ್ಜ್ ಮಾರ್ಕ್ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗೆ 11,.30ರ ವೇಳೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆ ಹತ್ತಿರ ಬರುತ್ತಿದ್ದ ಕಾರಣ ಓದಿಕೊಳ್ಳುವಂತೆ ತಾಯಿ ಗದರಿಸಿ ಬುದ್ದಿಮಾತು ಹೇಳಿದ್ದಾರೆ. ಇದರಿಂದ ಕೋಪಗೊಂಡ ಬಾಲಕಿ ತಮ್ಮ ಅಪಾರ್ಟ್ ಮೆಂಟ್ ನ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇವರು ಮಧ್ಯಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.
ಆನೇಕಲ್ ನಲ್ಲಿ ಮರ್ಯಾದಾ ಹತ್ಯೆ ಶಂಕೆ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಕೆರೆಯಲ್ಲಿ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಂದೆ, ಮಗಳು ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಕೆರೆಗೆ ಬೈಕ್ ಬಿದ್ದಿದೆ. ಈಜಿ ದಡ ಸೇರಿದ ತಂದೆ ರಾಮಮೂರ್ತಿ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಆದರೆ, ಮಗಳು ಸಹನಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಗಳನ್ನು ರಕ್ಷಿಸದೆ ದೂರು ಸಲ್ಲಿಸಲು ಠಾಣೆಗೆ ರಾಮಮೂರ್ತಿ ಆಗಮಿಸಿದ್ದಾರೆ. ಇದೊಂದು ಮರ್ಯಾದಾ ಹತ್ಯೆ ಎಂದು ಆಕೆಯ ಪ್ರಿಯಕರ ನಿತಿನ್ ಆರೋಪ ಮಾಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಒಂದು ವರ್ಷದಿಂದ ನಿತಿನ್ ಮತ್ತು 21 ವರ್ಷದ ಸಹನಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ದಿನದ ಹಿಂದೆ ಪೋಷಕರಿಗೆ ಮಗಳ ಪ್ರೀತಿಯ ವಿಚಾರ ಗೊತ್ತಾಗಿದೆ. ಅಂದು ರಾತ್ರಿ ಪ್ರಿಯಕರ ನಿತಿನ್ಗೆ ಕರೆ ಮಾಡಿದ್ದ ಸಹನಾ ತಂದೆ, ಬೆಳಿಗ್ಗೆ ಮಾತುಕತೆಗೆ ಬರುವಂತೆ ತಿಳಿಸಿದ್ದಾರೆ. ಸಹನಾ ತಂದೆಯ ಸ್ನೇಹಿತರ ಮನೆಯಲ್ಲಿ ನ್ಯಾಯ ಪಂಚಾಯಿತಿ ನಡೆದಿದೆ. ಈ ವೇಳೆ ಪುತ್ರಿ ಮೇಲೆ ರಾಮಮೂರ್ತಿ ಹಲ್ಲೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಈ ಪ್ರೀತಿಗೆ ಒಪ್ಪುವುದಿಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ನಿತಿನ್ನನ್ನೇ ಮದುವೆಯಾಗುವುದಾಗಿ ಸಹನಾ ಹಠ ಹಿಡಿದಿದ್ದಳು. ಆದರೆ ಪೋಷಕರು ಅಕ್ಕನ ಮಗನ ಜೊತೆ ವಿವಾಹಕ್ಕೆ ಮುಂದಾಗಿದ್ದರು. ಇದೇ ವಿಚಾರಕ್ಕೆ ಅಪ್ಪ ಮಗಳ ನಡುವೆ ಜೋರು ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಪ್ಪಿಕೊಳ್ಳುವಂತೆ ನಿತಿನ್ ತಾಯಿ ಕೇಳಿಕೊಂಡರೂ ರಾಮಮೂರ್ತಿ ಇವರ ಮದುವೆಗೆ ಒಪ್ಪಿಲ್ಲ. ಕೊನೆಗೆ ಎರಡು ದಿನ ಸಮಯ ಕೇಳಿದ್ದಾರೆ. ಇಂದು ಮಗಳನ್ನು ರಾಮಮೂರ್ತಿ ಬೈಕ್ ನಲ್ಲಿ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಪುತ್ರಿ ಸಹನಾರನ್ನು ರಾಮಮೂರ್ತಿ ಕೆರೆಗೆ ತಳ್ಳಿದ್ದಾರೆ ಎಂದು ನಿತಿನ್ ಆಪಾದಿಸಿದ್ದಾರೆ.
ದೂರಿನ ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸದ್ಯ ಯುವತಿ ಸಾವಿನ ಸುತ್ತ ಅನುಮಾನ ಕಾಡುತ್ತಿದೆ. ಆಕಸ್ಮಿಕವಾಗಿ ಕೆರೆಗೆ ಬಿದ್ದರೇ ಅಥವಾ ಅಪ್ಪನೇ ಕೆರೆಗೆ ತಳ್ಳಿದರೇ ಎಂಬ ಅನುಮಾನ ಕಾಡುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.
(ವರದಿ-ಎಚ್. ಮಾರುತಿ, ಬೆಂಗಳೂರು)
