ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಇನ್ನು ಒಂದು ಬದಿಗೆ 120 ರೂಪಾಯಿ ಟೋಲ್, ಯಾವ ವಾಹನಕ್ಕೆ ಎಷ್ಟು ದರ
Bengaluru Airport Road Toll Hike: ಬೆಂಗಳೂರು ವಿಮಾನ ನಿಲ್ದಾಣ ಪ್ರಯಾಣ ಏಪ್ರಿಲ್ 1 ರಿಂದ ತುಸು ದುಬಾರಿಯಾಗಲಿದೆ. ಒಂದು ಬದಿ ಪ್ರಯಾಣಕ್ಕೆ 120 ರೂಪಾಯಿ ಟೋಲ್ ಶುಲ್ಕ ಪಾವತಿಸಬೇಕು. ಸಾದಹಳ್ಳಿ ಟೋಲ್ ಪ್ಲಾಜಾ, ಹುಲಿಕುಂಟೆ, ನಲ್ಲೂರು ದೇವನಹಳ್ಳಿ ಟೋಲ್ ಪ್ಲಾಜಾಗಳಲ್ಲೂ ಸುಂಕ ಏರಿಕೆಯಾಗಲಿದೆ.

Bengaluru Airport Road Toll Hike: ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಪ್ರಯಾಣ ಏಪ್ರಿಲ್ 1 ರಿಂದ ತುಸು ದುಬಾರಿಯಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವಾಗ ಅಥವಾ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನಲ್ಲಿ ಸಂಚರಿಸಿದರೆ ಪ್ರಯಾಣ ದುಬಾರಿಯಾಗಲಿದೆ. ವಾರ್ಷಿಕವಾಗಿ ನಡೆಯುವ ಶುಲ್ಕ ಪರಿಷ್ಕರಣೆಯು ರಸ್ತೆ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದೆ. ಅದೇ ರೀತಿ ಸರಕು ಸಾಗಣೆಯ, ಸಾರ್ವಜನಿಕ ಸಾರಿಗೆ ಮುಂತಾದವುಗಳ ಮೇಲಿನ ಸುಂಕದ ಹೊರೆ ಅಂತಿಮವಾಗಿ ಜನರ ಮೇಲೆಯೇ ಬೀಳಲಿದೆ.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರಗಳನ್ನು ಪರಿಷ್ಕರಿಸಿದ್ದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದೆ. ಈ ದರ ಪರಿಷ್ಕರಣೆಯು ಎನ್‌ಎಚ್ 7ರ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್ ಪ್ಲಾಜಾ, ರಾಷ್ಟ್ರೀಯ ಹೆದ್ದಾರಿ 648ರ ಹುಲಿಕುಂಟೆ, ನಲ್ಲೂರು ದೇವನಹಳ್ಳಿ ಟೋಲ್ ಪ್ಲಾಜಾಗಳಿಗೂ ಅನ್ವಯವಾಗಲಿದೆ ಎಂದು ಡೆಕ್ಕನ್ ಹೆರಾಲ್ಡ್ ತಿಳಿಸಿದೆ.
ಪರಿಷ್ಕೃತ ಟೋಲ್ ದರ ವಿವರ
ಸಾದಹಳ್ಳಿ ಟೋಲ್ ಪ್ಲಾಜಾದಲ್ಲಿ ಕಾರು, ಜೀಪು ಹಾಗೂ ಇತರೆ ಲಘು ಮೋಟಾರು ವಾಹನಗಳು ಒಂದು ಬದಿ ಪ್ರಯಾಣಕ್ಕೆ 120 ರೂಪಾಯಿ ಪಾವತಿಸಬೇಕಾಗುತ್ತದೆ. ಅದೇ ದಿನ ವಾಪಸಾಗುತ್ತಿದ್ದರೆ 180 ರೂಪಾಯಿ ಪಾವತಿಸಬೇಕಾಗುತ್ತದೆ. 50 ಸಿಂಗಲ್ ಟ್ರಿಪ್‌ಗಳ ತಿಂಗಳ ಪಾಸ್ ಪಡೆಯುವುದಾದರೆ 3,970 ರೂಪಾಯಿ ಪಾವತಿಸಬೇಕು ಎಂದು ವರದಿ ವಿವರಿಸಿದೆ.
ಲಘು ವಾಣಿಜ್ಯವಾಹನಗಳು ಹಾಗೂ ಮಿನಿ ಬಸ್‌ಗಳು ಒಂದು ಬದಿ ಪ್ರಯಾಣಕ್ಕೆ 185 ರೂಪಾಯಿ ಪಾವತಿಸಬೇಕು. ದ್ವಿಮುಖ ಸಂಚಾರಕ್ಕೆ 275 ರೂಪಾಯಿ ಪಾವತಿಸಬೆಕು. ಇನ್ನು ತಿಂಗಳ ಪಾಸ್ ಬೇಕಾದರೆ 6,100 ರೂಪಾಯಿ ಪಾವತಿಸಬೇಕು. ಇದೇ ರೀತಿ ಬಸ್, ಟ್ರಕ್‌ಗಳಿಗೆ ಹೊಸ ದರ ಪ್ರಕಾರ ಒಂದು ಬದಿ ಪ್ರಯಾಣಕ್ಕೆ 370 ರೂಪಾಯಿ, ರಿಟರ್ನ್ ಟ್ರಿಪ್ ಇದ್ದರೆ 550 ರೂಪಾಯಿ ಪಾವತಿಸಬೇಕು. ತಿಂಗಳ ಪಾಸ್ 12,265 ರೂಪಾಯಿ ಎಂದು ವರದಿ ಹೇಳಿದೆ.
ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನಲ್ಲಿ ಕೂಡ ಟೋಲ್ ಶುಲ್ಕ ಏರಿಕೆಯಾಗಲಿದ್ದು, ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ದಾಬಸ್‌ಪೇಟೆ - ದೊಡ್ಡಬಳ್ಳಾಪುರ ರಸ್ತೆಯ 42 ಕಿಮೀ. ವ್ಯಾಪ್ತಿಗೆ ಕಾರು, ಜೀಪು ಮತ್ತು ಇತರೆ ಲಘುವಾಹನಗಳು ಒಂದು ಬದಿಗೆ 110 ರೂಪಾಯಿ ಪಾವತಿಸಬೇಕು. ದ್ವಿಮುಖ ಸಂಚಾರವಾದರೆ 165 ರೂಪಾಯಿ, ತಿಂಗಳ ಪಾಸ್ 3,165 ರೂಪಾಯಿ ಆಗಲಿದೆ.
ಇದೇ ರೀತಿ ನಲ್ಲೂರು ದೇವನಹಳ್ಳಿ ಟೋಲ್ ಪ್ಲಾಜಾದಲ್ಲಿ ದೊಡ್ಡಬಳ್ಳಾಪುರ ಬೈಪಾಸ್ ಹೊಸಕೋಟೆ ರಸ್ತೆಯಲ್ಲಿ 34.15 ಕಿಮೀ ವ್ಯಾಪ್ತಿಗೆ ಕಾರು, ಜೀಪು ಮತ್ತು ಇತರೆ ಲಘುವಾಹನಗಳು ಒಂದು ಬದಿಗೆ 85 ರೂಪಾಯಿ, ಅದೇ ದಿನದ ದ್ವಿಮುಖ ಸಂಚಾರಕ್ಕೆ 125 ರೂಪಾಯಿ ಪಾವತಿಸಬೇಕು.
ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಪ್ರಯಾಣ ದುಬಾರಿ
ಬೆಂಗಳೂರು ವಿಮಾನ ನಿಲ್ದಾಣದ ರಸ್ತೆ ಸಂಚಾರ ನಿತ್ಯವೂ ಸಂಚರಿಸುವ ಸಾವಿರಾರು ನಿತ್ಯ ಪ್ರಯಾಣಿಕರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ತರಕಾರಿ ಮತ್ತು ಅಗತ್ಯ ವಸ್ತುಗಳ ಸಾಗಣೆ ಮೇಲೂ ಪರಿಣಾಮ ಬೀರಲಿದ್ದು, ಅದರ ಹೊರೆ ನೇರವಾಗಿ ಗ್ರಾಹಕರಾಗಿರುವ ಜನಸಾಮಾನ್ಯರ ಮೇಲೆ ಬೀರಲಿದೆ. ಸಾರ್ವಜನಿಕ ಸಾರಿಗೆ, ಕ್ಯಾಬ್, ಟ್ಯಾಕ್ಸಿ ಬಳಕೆದಾರರಿಗೂ ಟೋಲ್ ದರ ಏರಿಕೆಯ ಬಿಸಿತಟ್ಟಲಿದೆ.
