ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ, ಟಿಕೆಟ್ ತಗೊಳ್ಳೋಕೂ ಇಎಂಐ ಆಪ್ಷನ್ ಕೊಡಿ: ಬೆಂಗಳೂರು ಮೆಟ್ರೋ ವಿರುದ್ಧ ಮುಂದುವರಿದ ಜನಾಕ್ರೋಶ
ಕನ್ನಡ ಸುದ್ದಿ  /  ಕರ್ನಾಟಕ  /  ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ, ಟಿಕೆಟ್ ತಗೊಳ್ಳೋಕೂ ಇಎಂಐ ಆಪ್ಷನ್ ಕೊಡಿ: ಬೆಂಗಳೂರು ಮೆಟ್ರೋ ವಿರುದ್ಧ ಮುಂದುವರಿದ ಜನಾಕ್ರೋಶ

ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ, ಟಿಕೆಟ್ ತಗೊಳ್ಳೋಕೂ ಇಎಂಐ ಆಪ್ಷನ್ ಕೊಡಿ: ಬೆಂಗಳೂರು ಮೆಟ್ರೋ ವಿರುದ್ಧ ಮುಂದುವರಿದ ಜನಾಕ್ರೋಶ

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ದರ ಹೆಚ್ಚಳವನ್ನು ಹಗಲು ದರೋಡೆಗೆ ಹೋಲಿಸಿದ್ದಾರೆ. ಮೆಟ್ರೋ ಪ್ರಯಾಣಕ್ಕಾಗಿ ಇನ್ನು ಮುಂದೆ ಸಾಲ ಪಡೆದು ಇಎಂಐ ಆಯ್ಕೆ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ; ಬೆಂಗಳೂರು ಮೆಟ್ರೋ ವಿರುದ್ಧ ಮುಂದುವರಿದ ಜನಾಕ್ರೋಶ
ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ; ಬೆಂಗಳೂರು ಮೆಟ್ರೋ ವಿರುದ್ಧ ಮುಂದುವರಿದ ಜನಾಕ್ರೋಶ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಫೆಬ್ರುವರಿ 9ರಿಂದ ಜಾರಿಗೆ ಬಂದಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಿರ್ಧಾರದಿಂದ ಅನೇಕ ಪ್ರಯಾಣಿಕರು ನಿರಾಶೆಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆಕ್ರೋಶ ಹೊರಹಾಕುತ್ತಿದ್ದು, ಪ್ರಯಾಣ ದರವನ್ನು ಶೇ.40-45ರಷ್ಟು ಏರಿಕೆ ಮಾಡಿರುವುದಕ್ಕೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಮಾರ್ಗ ಮತ್ತು ದೂರವನ್ನು ಅವಲಂಬಿಸಿ ತಮ್ಮ ಪ್ರಯಾಣದ ವೆಚ್ಚವು 80-90 ಶೇಕಡದಷ್ಟು ಹೆಚ್ಚಾಗಿದೆ ಎಂದು ಹಲವು ಪ್ರಯಾಣಿಕರು ಹೇಳುತ್ತಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೆಚ್ಚು ದುಬಾರಿಯಾಗುತ್ತಿರುವ ಬಗ್ಗೆ ಅನೇಕ ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡುವೆ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಸಮೂಹ ಸಾರಿಗೆಗಿಂತ ಖಾಸಗಿ ವಾಹನವೇ ಉತ್ತಮ ಎಂದು ಕೆಲವರು ಯೋಚಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು, “ನಾನು ಪ್ರತಿದಿನ 70 ಕಿ.ಮೀ ಪ್ರಯಾಣಿಸುತ್ತೇನೆ, ಈಗ ಮೆಟ್ರೋ ಬಳಸುವುದಕ್ಕಿಂತ ನನ್ನ ಬೈಕ್ ಕೊಂಡೊಯ್ಯುವುದೇ ಅಗ್ಗವಾಗಿದೆ. ವೈಯಕ್ತಿಕ ವಾಹನಕ್ಕಿಂತ ಸಾರ್ವಜನಿಕ ಸಾರಿಗೆಗೆ ಹೆಚ್ಚು ವೆಚ್ಚವಾಗುತ್ತಿರುವುದು ವಿಪರ್ಯಾಸ” ಎಂದು ಹೇಳಿದ್ದಾರೆ.

ಬನಶಂಕರಿಯಿಂದ ಮೆಜೆಸ್ಟಿಕ್‌ಗೆ ಈ ಹಿಂದೆ 26 ರೂ. ಇತ್ತು. ಈಗ ಅದು 40 ರೂ. ಆಗಿದೆ. 4 ಜನರಿಗೆ ಮಿನಿ ಕಾರ್ ಕ್ಯಾಬ್ ಬೆಲೆ 173. ಅಂದರೆ ಒಬ್ಬ ವ್ಯಕ್ತಿಗೆ 43.25 ರೂ. ಮೆಟ್ರೋ ಬದಲಿಗೆ ಕಾರಿನಲ್ಲಿ ಹೋಗಬಹುದು. ಮೆಟ್ರೋ ದುಬಾರಿಯಾಗಿದೆ ಎಂದು ನಾಯಕ ಹೆಸರಿನ ಟ್ವಿಟರ್‌ ಬಳಕೆದಾರ ಬರೆದುಕೊಂಡಿದ್ದಾರೆ.

ಸಂಸದ ಪಿಸಿ ಮೋಹನ್‌ ಟ್ವೀಟ್

ನನ್ನ ಪುನರ್ವಿಮರ್ಶೆ ಮನವಿಯನ್ನು ನಿರ್ಲಕ್ಷಿಸಿ, ನಮ್ಮ ಮೆಟ್ರೋ ಪ್ರಯಾಣ ದರ ಶೇಕಡಾ 45ರಷ್ಟು ಹೆಚ್ಚಳ ಮಾಡಿರುವ ಬಿಎಂಆರ್‌ಸಿಎಲ್ ನಿರ್ಧಾರದಿಂದ ನಿರಾಶೆಗೊಂಡಿದ್ದೇನೆ ಎಂದು ಸಂಸದ ಪಿಸಿ ಮೋಹನ್‌ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಮೆಟ್ರೋ ಬೆಲೆ 100 ಪ್ರತಿಶತ ಏರಿಕೆಯಾಗಿದೆ. 5 ಶೇ ಸಂಬಳ ಹೆಚ್ಚಳ ಮಾಡಿದ ವ್ಯವಸ್ಥಾಪಕರು ಈಗ ನೂರಾರು ಕೆಲಸಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಎಕೆ ಹೆಸರಿನ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದಾರೆ. ನಮ್ಮ ಪಾಲಿಗೆ ಇನ್ನು ನಮ್ಮ ಮೆಟ್ರೋ ಕತೆ ಮುಗೀತು ಅನ್ಸುತ್ತೆ. ಬಡವರ ಪರ ಸರ್ಕಾರಕ್ಕೊಂದು ದೊಡ್ಡ ನಮಸ್ಕಾರ ಎಂದು ಮತ್ತೊಬ್ಬ ಬಳಕೆದಾರ ರವಿ ಆಲದಮರ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಕೂಡ ಬೆಲೆ ಏರಿಕೆ ತಡೆಹಿಡಿಯುವಂತೆ ಬಿಎಂಆರ್‌ಸಿಎಲ್‌ಗೆ ಹೇಳಿದೆ. ಆದರೆ ಕರ್ನಾಟಕ ಸರ್ಕಾರ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಿಸಿದೆ. ಮೆಟ್ರೋ ಗರಿಷ್ಠ ದರ 60 ಇತ್ತು. ಈಗ ಅದನ್ನು 90 ರೂ.ಗಳಿಗೆ ಹೆಚ್ಚಿಸಲಾಗಿದೆ. ಧನ್ಯವಾದಗಳು ದುಬಾರಿ ರಾಮಯ್ಯ ಎಂದು ನಿಷ್ಕಮ ಕರ್ಮ ಹೆಸರಿನ ಬಳೆಕೆದಾರ ಪೋಸ್ಟ್‌ ಮಾಡಿದ್ದಾರೆ.

30 ಕಿ.ಮೀಗೆ 90 ರೂ. ಕೊಡುವ ಬದಲಿಗೆ 60 ಕಿ.ಮೀ‌ ಮೈಲೇಜ್ ಕೊಡುವ ಬೈಕಿನಲ್ಲಿ ಹೋದರೆ 50 ರೂಪಾಯಲ್ಲಿ ಮುಗಿಯುತ್ತೆ. ಬೆಂಗಳೂರು ಮೆಟ್ರೋ ರೇಟ್ ಹೈಕ್ ಆಗ್ತಿರೋದು ನೋಡಿದರೆ, ಇನ್ನೊಂದು ಸ್ವಲ್ಪ ದಿನದಲ್ಲಿ ಮೆಟ್ರೋದಲ್ಲಿ ಓಡಾಡೋಕೆ ಈಗಿರುವ ಪ್ಲಾಸ್ಟಿಕ್ ಕಾಯಿನ್ ಬದಲಿಗೆ ಒಂದೊಂದು ಚಿನ್ನದ ಕಾಯಿನ್ ಇಟ್ಕೋಬೇಕಾಗುತ್ತೆ ಎಂದು ಕೃಷ್ಣ ಭಟ್‌ ಹೆಸರಿನ ಫೇಸ್‌ಬುಕ್‌ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಮಹಾನಗರಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಈ ಬೆಲೆ ಏರಿಕೆ ತಂತ್ರವನ್ನು ಬಳಸುತ್ತಿವೆ. ಅವರು ಪರೋಕ್ಷವಾಗಿ ಜನರನ್ನು ದ್ವಿಚಕ್ರ ವಾಹನಗಳನ್ನು ಹೆಚ್ಚು ಬಳಸುವಂತೆ ಒತ್ತಾಯಿಸುತ್ತಿರುವಂತೆ ತೋರುತ್ತಿದೆ ಎಂದು ಅಭಿಷೇಕ್ ಎಂಬ ಹೆಸರಿನ ಬಳಕೆದಾರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.‌

ದೈನಂದಿನ ಪ್ರಯಾಣಕ್ಕಾಗಿ ನಮಗೆ ಸಾಲ ಬೇಕಾಗಿದೆ. ಇದು ನಮ್ಮ ಮೆಟ್ರೊ ಅಲ್ಲ ನಿಮ್ಮ ಮೆಟ್ರೊ ಎಂದು ಪ್ರಮೋದ್ ಎಂಬವರು ಟ್ವೀಟ್‌ ಮಾಡಿದ್ದಾರೆ.

Whats_app_banner