ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು; ಫಲಾನುಭವಿಗಳ ಸಂಖ್ಯೆ 1.28 ಕೋಟಿ, ಮನೆಯೊಡತಿ ಖಾತೆಗೆ ವರ್ಗಾವಣೆಯಾದ ಮೊತ್ತ ಇಷ್ಟು ಕೋಟಿ
ಕನ್ನಡ ಸುದ್ದಿ  /  ಕರ್ನಾಟಕ  /  ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು; ಫಲಾನುಭವಿಗಳ ಸಂಖ್ಯೆ 1.28 ಕೋಟಿ, ಮನೆಯೊಡತಿ ಖಾತೆಗೆ ವರ್ಗಾವಣೆಯಾದ ಮೊತ್ತ ಇಷ್ಟು ಕೋಟಿ

ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು; ಫಲಾನುಭವಿಗಳ ಸಂಖ್ಯೆ 1.28 ಕೋಟಿ, ಮನೆಯೊಡತಿ ಖಾತೆಗೆ ವರ್ಗಾವಣೆಯಾದ ಮೊತ್ತ ಇಷ್ಟು ಕೋಟಿ

ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು ಪೂರ್ಣಗೊಂಡಿವೆ. ಕೆಲವು ತಿಂಗಳುಗಳಿಂದ ಖಾತೆಗೆ ಹಣ ಜಮೆ ಆಗಿಲ್ಲ ಎಂಬ ಆರೋಪ ಮಹಿಳೆಯರದ್ದು. ಈ ನಡುವೆಯೂ ಸರ್ಕಾರದ ಬೊಕ್ಕಸದಿಂದ ಕೋಟಿ ಕೋಟಿ ಹಣ ಯೋಜನೆಗಾಗಿ ವ್ಯಯಿಸಲಾಗಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)

ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು; ಫಲಾನುಭವಿಗಳ ಸಂಖ್ಯೆ 1.28 ಕೋಟಿ
ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು; ಫಲಾನುಭವಿಗಳ ಸಂಖ್ಯೆ 1.28 ಕೋಟಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಕಾರಣವಾದ ಐದು ಗ್ಯಾರಂಟಿಗಳ ಪೈಕಿ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು ಕಳೆದಿವೆ. ಆಗೊಮ್ಮೆ ಈಗೊಮ್ಮೆ ಮಾಸಿಕ 2000 ರೂ ಬ್ಯಾಂಕ್‌ ಖಾತೆಗೆ ಜಮಾ ಆಗುವುದು ತಡವಾದರೂ, ಕಳೆದ ಕೆಲವು ತಿಂಗಳುಗಳಿಂದ ಖಾತೆಗೆ ಹಣವೇ ಬಂದಿಲ್ಲ ಎಂದು ಮಹಿಳೆಯರು ದೂರುತ್ತಿದ್ದರೂ, ಈ ಯೋಜನೆಗೆ ಮಹಿಳೆಯರು ಫಿದಾ ಆಗಿರುವುದು ಸುಳ್ಳಲ್ಲ. ಪ್ರತಿ ತಿಂಗಳು ಈ ಯೋಜನೆಯ ಫಲಾನುಭವಿ ಮಹಿಳೆಯರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ.

ಈ ಯೋಜನೆ 2023ರ ಜುಲೈ 19ರಂದು ಆರಂಭವಾಗಿದ್ದು 2023ರ ಆಗಸ್ಟ್‌ 30ರಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. 2024-25ನೇ ಸಾಲಿನ ಪೂರ್ಣ 12 ತಿಂಗಳಿಗೆ ಈ ಯೋಜನೆಗೆ 28,604.40 ಕೋಟಿ ರೂ. ಮೀಸಲಿಡಲಾಗಿದೆ. ಯೋಜನೆ ಆರಂಭವಾಗಿ ಆರ್ಥಿಕ ವರ್ಷ ಪೂರ್ಣಗೊಳ್ಳಲು 6 ತಿಂಗಳು ಮಾತ್ರ ಬಾಕಿ ಇದ್ದುದರಿಂದ 2023-24ನೇ ಸಾಲಿಗೆ ಈ ಯೋಜನೆಗೆ ಸರ್ಕಾರ 17 ಸಾವಿರ ಕೋಟಿ ರೂ ಮೀಸಲಿಟ್ಟಿತ್ತು.

ಪ್ರಸ್ತುತ 2025 ಜನವರಿವರೆಗೆ 1.28 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. 2024ರ ಜುಲೈ ಅಂತ್ಯದವರೆಗೆ 1.25 ಕೋಟಿ ಫಲಾನುಭವಿಗಳಿದ್ದರು. ಪ್ರತಿ ತಿಂಗಳೂ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಾಹಿತಿ ಪ್ರಕಾರ 22,63,894 ಪರಿಶಿಷ್ಟ ಜಾತಿ, 8,83,547 ಪರಿಶಿಷ್ಟ ಪಂಗಡದ ಫಲಾನುಭವಿಗಳಿದ್ದಾರೆ. 94 ಲಕ್ಷದಷ್ಟು ಫಲನುಭವಿಗಳು ಸಾಮಾನ್ಯ ಮತ್ತು ಇತರ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಯೋಜನೆಗೆ ವಾರ್ಷಿಕ 32 ಸಾವಿರ ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು.

ನಿರೀಕ್ಷೆ ಮೀರಿ ಯಶಸ್ವಿಯಾದ ಯೋಜನೆಗಳಲ್ಲಿ ಇದೂ ಒಂದು ಮತ್ತು ಈ ಯೋಜನೆ ಸರ್ಕಾರಕ್ಕೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ರಾಜ್ಯದಲ್ಲಿ ನಿಗದಿಪಡಿಸಿದ್ದ ಗುರಿ ಪೈಕಿ ಶೇಕಡಾ 97ರಷ್ಟು ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳು 2000 ರೂ. ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2023ರ ಜೂನ್‌ 6ರಂದು ರಾಜ್ಯಾದ್ಯಂತ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಿತ್ತು.

ಆಗುತ್ತಲೇ ಇವೆ ಹೊಸ ನೋಂದಣಿ

ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಕಾಲಮಿತಿ ನಿಗದಿಯಾಗಿಲ್ಲ. ಹೀಗಾಗಿ ಮಹಿಳೆಯರು ಹೆಸರು ನೋಂದಣಿ ಮಾಡಿಸುತ್ತಲೇ ಇದ್ದಾರೆ. ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಹೆಸರಿಸಿದ ಮಹಿಳೆ ಗೃಹಲಕ್ಷ್ಮೀ ಯೋಜನೆ ಫಲಾನುಭವಿಯಾಗಲು ಅರ್ಹಳಾಗಿರುತ್ತಾಳೆ. ರಾಜ್ಯಾದ್ಯಂತ ಇಂತಹ 1,33,61,915 ಕೋಟಿ ಮನೆ ಯಜಮಾನಿಯರಿದ್ದು, ಅವರನ್ನು ಯೋಜನೆ ವ್ಯಾಪ್ತಿಗೆ ತರುವ ಗುರಿ ಸರ್ಕಾರದ ಮುಂದಿದೆ. ಉಳಿದ ಕೆಲವೇ ಲಕ್ಷ ಮಹಿಳೆಯರನ್ನು ಶೀಘ್ರವೇ ಈ ಯೋಜನೆ ವ್ಯಾಪ್ತಿಗೆ ತರುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. ಯೋಜನೆ ಆರಂಭವಾದ ಒಂದೂವರೆ ವರ್ಷದೊಳಗೆ ಶೇ.94ರಷ್ಟು ಮಹಿಳೆಯರನ್ನು ಯೋಜನೆ ವ್ಯಾಪ್ತಿಗೆ ಸೇರಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿಗಳ ಪ್ರಕಾರ, ಅಂತ್ಯೋದಯ, ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿ ಹೊಂದಿರುವ ಎಲ್ಲ ಮಹಿಳೆಯರೂ ಅರ್ಹರಾಗಿರುತ್ತಾರೆ. ದ್ವಿಲಿಂಗಿಗಳಿಗೂ ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸಿರುವುದು ಮತ್ತೊಂದು ವಿಶೇಷ.

ಮಾಸಿಕ ವೆಚ್ಚ 2500 ಕೋಟಿ ರೂ.

ಮನೆಯ ಮುಖ್ಯಸ್ಥ ಅಥವಾ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿಸುತ್ತಿದ್ದರೆ ಗೃಹಲಕ್ಷ್ಮೀ ಯೋಜನೆಗೆ ಅರ್ಹರಾಗಿರುವುದಿಲ್ಲ. ಗೃಹಲಕ್ಷ್ಮೀ ಯೋಜನೆ ಆರಂಭವಾದ 2024ರ ಆಗಸ್ಟ್‌ ತಿಂಗಳವರೆಗೆ ಒಟ್ಟು 13 ಕಂತುಗಳಲ್ಲಿ 40 ಸಾವಿರ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಹಾಲಿ ಇರುವ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಗೃಹಲಕ್ಷ್ಮೀ ಯೋಜನೆಯ ಮಾಸಿಕ ವೆಚ್ಚ 2500 ಕೋಟಿ ರೂ. ಆಗಲಿದೆ.

ಈ ಯೋಜನೆಗೆ ಕರ್ನಾಟಕ ಒನ್‌, ಬೆಂಗಳೂರು ಒನ್‌, ಗ್ರಾಮ ಒನ್‌ ಮತ್ತು ಸೇವಾಸಿಂಧು ಪೋರ್ಟಲ್ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಸಹಾಯವಾಣಿ 181ರ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸಮಸ್ಯೆ / ಅಹವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸಲಾಗುತ್ತಿದೆ.

  • ವರದಿ: ಎಚ್.‌ ಮಾರುತಿ, ಬೆಂಗಳೂರು

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner