ಬೆಂಗಳೂರು: ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಲೈಂಗಿಕ ಕಿರುಕುಳ ಕೇಸ್; ಕಾಂಗ್ರೆಸ್ ಮಾಜಿ ಶಾಸಕ ಉಮಾಪತಿಗೆ 3 ತಿಂಗಳು ಜೈಲು, ದಂಡ
ಬೆಂಗಳೂರು: ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಲೈಂಗಿಕ ಕಿರುಕುಳ ಆರೋಪ ವ್ಯಕ್ತವಾಗಿದ್ದು, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮತ್ತೊಬ್ಬ ಕಾಂಗ್ರೆಸ್ ಮಾಜಿ ಶಾಸಕ ಉಮಾಪತಿಗೆ 3 ತಿಂಗಳು ಜೈಲು ಮತ್ತು ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ತ್ಯಾಗರಾಜನಗರದ ಶಾಲೆಯೊಂದರ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಮುಖಂಡ ಡಾ. ಗುರಪ್ಪ ನಾಯ್ಡು ಅವರ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನವೆಂಬರ್ 26ರಂದು ನಾಯ್ಡು ಅವರು ನಡೆಸುತ್ತಿರುವ ಶಾಲೆಯ ಶಿಕ್ಷಕಿಯೊಬ್ಬರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಕ್ಷಕಿಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಿಕ್ಷಕಿಯರೂ ಸೇರಿದಂತೆ 75ಕ್ಕೂ ಹೆಚ್ಚು ಮಹಿಳೆಯರು ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಗುರಪ್ಪ ನಾಯ್ಡು ಕೆಲವು ಶಿಕ್ಷಕಿಯರು ಹಾಗೂ ಸಿಬ್ಬಂದಿಯ ಗಮನಕ್ಕೆ ಬಾರದಂತೆ ಬೆತ್ತಲೆ ಹಾಗೂ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡು ಇಟ್ಟುಕೊಂಡಿದ್ದಾರೆ. ಇವುಗಳನ್ನು ಇಟ್ಟುಕೊಂಡು ಮಹಿಳಾ ಉದ್ಯೋಗಿಗಳನ್ನು ಹೆದರಿಸುತ್ತಿದ್ದಾರೆ. ಹೇಳಿದ ಹಾಗೆ ನಡೆದುಕೊಳ್ಳದಿದ್ದರೆ ವಿಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.
ಹೆಣ್ಣು ಮಕ್ಕಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ವಿವರಿಸಿದ್ದಾರೆ. ಈ ಹಿಂದೆಯೇ ಗುರಪ್ಪ ನಾಯ್ಡು ಅವರ ವಿರುದ್ಧ ದೂರು ನೀಡಲು ಕೆಲವು ಶಿಕ್ಷಕಿಯರು ಹಾಗೂ ಸಿಬ್ಬಂದಿ ನಿರ್ಧರಿಸಿದ್ದೆವು. ಆದರೆ, ಗುರಪ್ಪ ನಾಯ್ಡು ಪ್ರಭಾವಿ ಹಾಗೂ ಆರ್ಥಿಕವಾಗಿ ಬಲಾಡ್ಯರಾಗಿದ್ದು ಅವರನ್ನು ಎದುರಿಸುವುದು ಕಷ್ಟ ಎಂದು ಸುಮ್ಮನಿದ್ದೆವು ಎಂದೂ ದೂರಿನಲ್ಲಿ ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.
2021ರಿಂದ 2023ರವರೆಗೆ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಗುರಪ್ಪ ನಾಯ್ಡು ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಲೈಂಗಿಕ ಚಟುವಟಿಕೆಗೆ ಪ್ರಚೋದಿಸಿ ತಮ್ಮ ಕಚೇರಿಯಲ್ಲಿ ಕೈಹಿಡಿದು ಎಳೆದಾಡಿದ್ದರು. ನಾನು ಗೌರವಸ್ಥ ಕುಟುಂಬದಿಂದ ಬಂದಿದ್ದೇನೆ. ಸಭ್ಯವಾಗಿ ವರ್ತಿಸಬೇಡಿ ಎಂದು ಹೇಳಿದಾಗ ನನ್ನ ಮೇಲೆಯೇ ಕೋಪ ಮಾಡಿಕೊಂಡಿದ್ದರು. ಬೂಟಿನಲ್ಲಿ ಹೊಡೆಯುತ್ತೇನೆಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಘಟನೆಯಿಂದ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಆಘಾತದಿಂದ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ ಎಂದು ದೂರುದಾರರು ತಿಳಿಸಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ಉಮಾಪತಿಗೆ ಮೂರು ತಿಂಗಳು ಜೈಲು ಮತ್ತು ದಂಡ
ಕರ್ನಾಟಕ ಲೋಕಾಯುಕ್ತಕ್ಕೆ ಸಲ್ಲಿಸಲಾದ ಆಸ್ತಿ ವಿವರಗಳಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಸತ್ಯಾಂಶವನ್ನು ಮುಚ್ಚಿಟ್ಟ ಆರೋಪ ಎದುರಿಸುತ್ತಿದ್ದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ವಿ.ಉಮಾಪತಿ ಅವರಿಗೆ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಮೂರು ತಿಂಗಳ ಸಾದಾ ಶಿಕ್ಷೆ ಮತ್ತು 1 ಸಾವಿರ ರೂ ದಂಡ ವಿಧಿಸಿದೆ.
ಈ ಸಂಬಂಧ ಕರ್ನಾಟಕ ಲೋಕಾಯಕ್ತ ರಿಜಿಸ್ಟ್ರಾರ್ ದಾಖಲಿಸಿದ್ದ ಕ್ರಿಮಿನಲ್ ದೂರಿನ ವಿಚಾರಣೆ ನಡೆಸಿದ, ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಈ ಆದೇಶ ಹೊರಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆ-1860ರ ಕಲಂ 177ರ ಅಡಿಯಲ್ಲಿ ಆರೋಪಿಯು ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 255(2) ಅಡಿಯಲ್ಲಿ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 11 ಸಾವಿರ ದಂಡ ವಿಧಿಸಲಾಗುತ್ತಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಒಂದು ತಿಂಗಳ ಜೈಲು ಶಿಕ್ಷೆ ವಿಸ್ತರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಿಂದ 1989 ಮತ್ತು 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಎರಡು ಅವಧಿಗೆ ಎ.ವಿ.ಉಮಾಪತಿ ಅವರು ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. 2004-2005 ಹಾಗೂ 2005-2006ರ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಲೋಕಾಯುಕ್ತ ಪೊಲೀಸರು ಖಾಸಗಿ ದೂರು ದಾಖಲಿಸಿಕೊಂಡಿದ್ದರು. ಇದರ ಅನ್ವಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಪರಾಧವನ್ನು ಪರಿಗಣಿಸಿ ವಿಚಾರಣೆ ನಡೆಸಿತ್ತು.
(ವರದಿ- ಎಚ್. ಮಾರುತಿ, ಬೆಂಗಳೂರು)