Bengaluru: ಹೆಲ್ಮೆಟ್ ಇಲ್ಲದೇ ಬೆಂಗಳೂರು ಪೊಲೀಸ್ ಸಂಚಾರ; ಇವರಿಗೆ ರೂಲ್ಸ್ ರೆಗ್ಯುಲೇಶನ್ ಇಲ್ವಾ ಎಂದವರಿಗೆ ಟ್ರಾಫಿಕ್ ಪೊಲೀಸ್ ಹೀಗಂದ್ರು
Bengaluru Traffic Rules Violation: ಮೋಟಾರು ವಾಹನಗಳ ಕಾಯಿದೆಯ ಸೆಕ್ಷನ್ 129ರ ಪ್ರಕಾರ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವುದು ಅಥವಾ ಸವಾರಿ ಮಾಡುವುದು ಸಂಚಾರ ಉಲ್ಲಂಘನೆ ಮಾತ್ರವಲ್ಲ, ಇದು ಭಾರತದಲ್ಲಿ ಕಾನೂನುಬಾಹಿರ ಅಪರಾಧ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮವನ್ನು (Traffic Rules) ಕಟ್ಟುನಿಟ್ಟಾಗಿ ಪಾಲಿಸಬೇಕು. ದ್ವಿಚಕ್ರ ವಾಹನದ ಹಿಂಬದಿ ಸವಾರರೂ
(Pillion) ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸಿದವರಿಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ ಪೊಲೀಸರೇ ನಿಯಮ ಪಾಲಿಸದಿದ್ದರೆ ನೋಡಿದ ಜನರು ಸುಮ್ಮನಿರ್ತಾರಾ? ಇದರ ಫೋಟೋ, ವಿಡಿಯೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ವೈರಲ್ ಮಾಡ್ತಾರೆ. ಇದೀಗ ಬೆಂಗಳೂರು ಪೊಲೀಸ್ (Bengaluru Police) ಒಬ್ಬರು ಬೈಕ್ ಹಿಂಬದಿ ಕುಳಿತು ಹೆಲ್ಮೆಟ್ ಇಲ್ಲದೇ ಸಂಚರಿಸಿ ಸಿಕ್ಕಿಬಿದ್ದಿದ್ದಾರೆ.
ಮೋಟಾರು ವಾಹನಗಳ ಕಾಯಿದೆಯ ಸೆಕ್ಷನ್ 129ರ ಪ್ರಕಾರ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವುದು ಅಥವಾ ಸವಾರಿ ಮಾಡುವುದು ಸಂಚಾರ ಉಲ್ಲಂಘನೆ ಮಾತ್ರವಲ್ಲ, ಇದು ಭಾರತದಲ್ಲಿ ಕಾನೂನುಬಾಹಿರ ಅಪರಾಧ. ಇಂತಹ ಪ್ರಕರಣಗಳಲ್ಲಿ ದಂಡ ವಿಧಿಸುವುದು, ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವುದು ಅಥವಾ ರದ್ದುಗೊಳಿಸುವುದು, ಗಂಭೀರ ಪ್ರಕರಣಗಳಲ್ಲಿ, ಮೂರು ತಿಂಗಳವರೆಗೆ ಜೈಲು ಶಿಕ್ಷೆ ಕೂಡ ವಿಧಿಸಬಹುದು.
ಇತ್ತೀಚೆಗೆ, ಟ್ವಿಟರ್ ಬಳಕೆದಾರರೊಬ್ಬರು ಬೆಂಗಳೂರಿನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಹೆಲ್ಮೆಟ್ ಇಲ್ಲದೇ ಬೈಕ್ ಹಿಂಬದಿ ಕುಳಿತು ಸಂಚರಿಸಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಮೇ 13 ರಂದು ಬೆಂಗಳೂರಿನ ಕ್ವೀನ್ಸ್ ಸರ್ಕಲ್‌ನಲ್ಲಿ ತೆಗೆದ ಫೋಟೋ ಇದಾಗಿದೆ. ಇವರಿಗೆ ರೂಲ್ಸ್ ರೆಗ್ಯುಲೇಶನ್ ಇಲ್ವಾ, ಇವರು ಸ್ಪೆಷಲ್ಲಾ, ಇವರಿಗೆ ಹಾಕಿ ಫೈನ್. ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಫೋಟೋ ಶೇರ್ ಮಾಡಿದ ಮೊಹಮ್ಮದ್ ಇರ್ಷಾದ್ ಕೆಎಸ್ ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ ಅನ್ನು ಬೆಂಗಳೂರು ನಗರ ಸಂಚಾರಿ ಪೊಲೀಸರು, ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಮೊಹಮ್ಮದ್ ಇರ್ಷಾದ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಸಂಚಾರ ಪೊಲೀಸರು, ''ಇದರ ಬಗ್ಗೆ ನಮಗೆ ತಿಳಿಸಿದ್ದಕ್ಕಾಗಿ ನಾವು ನಿಮ್ಮನ್ನು ಪ್ರಶಂಸಿಸುತ್ತೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸಂಚಾರ-ಸಂಬಂಧಿತ ಉಲ್ಲಂಘನೆಗಳನ್ನು ವರದಿ ಮಾಡಲು ನೀವು ಪಬ್ಲಿಕ್ ಐ ಪೋರ್ಟಲ್ (Public eye portal) ಅನ್ನು ಬಳಸಬಹುದು, ಇದು ಸಂಚಾರ ಉಲ್ಲಂಘನೆಗಳನ್ನು ಜಾರಿಗೊಳಿಸಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ'' ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ ಸ್ಟಾರ್ಗಳಾದ ಅಮಿತಾಭ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರಿಗೆ ನಗರದ ರಸ್ತೆಗಳಲ್ಲಿ ಲಿಫ್ಟ್ ನೀಡುವಾಗ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಇಬ್ಬರು ಬೈಕ್ ಸವಾರರಿಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದರು.
ನಟ ಅಮಿತಾಬ್ ಬಚ್ಚನ್ ತಮ್ಮ ಶೂಟಿಂಗ್ ಸ್ಥಳಕ್ಕೆ ತಲುಪಲು ಅಪರಿಚಿತರ ಬೈಕ್ನಲ್ಲಿ ಹಿಂಬದಿ ಕುಳಿತು ಸವಾರಿ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅನುಷ್ಕಾ ಶರ್ಮಾ ಕೂಡ ರೋಡ್ ಬ್ಲಾಕ್ ಆದ ಕಾರಣ ತಮ್ಮ ಅಂಗರಕ್ಷಕನೊಂದಿಗೆ ಬೈಕ್ ರೈಡ್ ಮಾಡುತ್ತಿರುವುದು ಕಂಡುಬಂದಿತ್ತು. ಎರಡೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.