ಬೆಂಗಳೂರು ಪೊಲೀಸ್ ಕಾನ್‌ಸ್ಟೆಬಲ್ ತಿಪ್ಪಣ್ಣ ಅಲಗೂರು ಆತ್ಮಹತ್ಯೆ; ಇದು ಕೂಡ 498 ಎ ಕೇಸ್‌ಗೆ ಸಂಬಂಧಿಸಿದ್ದಾ, 5 ಮುಖ್ಯ ಅಂಶಗಳು
Thippanna Alugur suicide Case; ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಪೊಲೀಸ್ ಕಾನ್‌ಸ್ಟೆಬಲ್ ತಿಪ್ಪಣ್ಣ ಅಲಗೂರು ಆತ್ಮಹತ್ಯೆ ಗಮನಸೆಳೆದಿದೆ. ಇದು ಕೂಡ 498ಎ ಕೇಸ್‌ಗೆ ಸಂಬಂಧಿಸಿದ್ದಾ? ಇಲ್ಲಿದೆ ಈ ಪ್ರಕರಣದಲ್ಲಿ ಗಮನಸೆಳೆದ 10 ಅಂಶಗಳು.
Thippanna Alugur suicide Case; ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ (34) ಆತ್ಮಹತ್ಯೆ ಪ್ರಕರಣ ದೇಶದೆಲ್ಲೆಡೆ ಚರ್ಚೆಗೆ ಒಳಗಾಗಿದೆ. ವರದಕ್ಷಿಣೆ ಕಿರಕುಳದ ಕಾನೂನು ದುರ್ಬಳಕೆ ವಿಚಾರಕ್ಕೆ ಖಂಡನೆ ವ್ಯಕ್ತವಾಗಿದೆ. ಹೀಗಿರುವಾಗಲೇ, ಬೆಂಗಳೂರು ಪೊಲೀಸ್ ಕಾನ್‌ಸ್ಟೆಬಲ್ ತಿಪ್ಪಣ್ಣ ಅಲಗೂರು (33) ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಸೆಳೆದಿದೆ. ತಿಪ್ಪಣ್ಣ ಅಲಗೂರು ಕೌಟುಂಬಿಕ ಕಲಹದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಆಗಿದ್ದ ತಿಪ್ಪಣ್ಣ ಅಲಗೂರು, ಬೈಯಪ್ಪನ ಹಳ್ಳಿ ಸಮೀಪ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ರೈಲು ಹಳಿ ಸಮೀಪ ಛಿದ್ರಗೊಂಡ ಮೃತದೇಹ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಪರಿಶೀಲನೆ ನಡೆಸಿ, ಕೇಸ್ ದಾಖಲಿಸಿಕೊಂಡ ಪೊಲೀಸರು ಮೃತದೇಹ ತಿಪ್ಪಣ್ಣ ಅಲಗೂರು ಅವರದ್ದು ಎಂಬುದನ್ನು ಖಚಿತಪಡಿಸಿಕೊಂಡರು. ಇದು ಕೂಡ 498ಎ ಕೇಸ್ ಇರಬಹುದಾ ಎಂಬ ಅಂಶವೂ ಚರ್ಚೆಗೆ ಒಳಗಾಗಿದೆ. ಏನಿದು ಪ್ರಕರಣ, ಇಲ್ಲಿದೆ ಗಮನಸೆಳೆದ ಅಂಶಗಳು
ತಿಪ್ಪಣ್ಣ ಅಲಗೂರು ಯಾರು?
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದವರು ತಿಪ್ಪಣ್ಣ ಅಲಗೂರು. ಅವರಿಗೆ 33 ವರ್ಷ ವಯಸ್ಸಾಗಿತ್ತು. 2016ರಲ್ಲಿ ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಬೆಂಗಳೂರು ಮಹಾನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಅವರು ಸೇವಾ ಹಿರಿತನದ ಪ್ರಕಾರ ಮುಂಬಡ್ತಿ ಪಡೆದು ಹುಳಿಮಾವು ಠಾಣೆಯಲ್ಲಿ ಹೆಡ್‌ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂರು ವರ್ಷ ಹಿಂದೆ ಅವರಿಗೆ ಕಲಬುರಗಿ ಜಿಲ್ಲೆಯ ಯುವತಿ ಜತೆಗೆ ವಿವಾಹವಾಗಿತ್ತು.
ಏನಿದು ಪ್ರಕರಣ, 5 ಮುಖ್ಯ ಅಂಶಗಳು
1) ಕೌಟುಂಬಿಕ ಕಲಹಕ್ಕೆ ಬೇಸತ್ತು ತಿಪ್ಪಣ್ಣ ಅಲಗೂರು ಶುಕ್ರವಾರ (ಡಿಸೆಂಬರ್ 13) ಶುಕ್ರವಾರ ಎರಡನೇ ಪಾಳಿಯದಲ್ಲಿ ಕಾರ್ಯನಿರ್ವಹಿಸಿ ಹಿಂದಿರುಗಿದ್ದರು. ಮನೆಗೆ ಹೋಗದೇ ಸೀದಾ ಹುಸ್ಕೂರು ಗೇಟ್ ಸಮೀಪ ರಾತ್ರಿ ಚಲಿಸುವ ರೈಲಿಗೆ ತಲೆಕೊಟ್ಟು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.
2) ಶನಿವಾರ ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತಿಪ್ಪಣ್ಣ ಹಾಜರಾಗಬೇಕಿತ್ತು. ಆದರೆ, ಹುಳಿಮಾವು ಠಾಣೆ ಸಹೋದ್ಯೋಗಿಗಳು ಬೆಳಗ್ಗೆ 10 ಗಂಟೆಯಾದರೂ ಕೆಲಸಕ್ಕೆ ಬಾರದ ತಿಪ್ಪಣ್ಣ ಅವರನ್ನು ಸಂಪರ್ಕಿಸಲು ಮುಂದಾದ ವೇಳೆ, ರೈಲ್ವೆ ಪೊಲೀಸರು ಕರೆ ಮಾಡಿ ಆತ್ಮಹತ್ಯೆ ವಿಚಾರ ತಿಳಿಸಿದ್ದಾರೆ.
3) ಮೂರು ವರ್ಷದ ಹಿಂದೆ ಕಲಬುರಗಿ ಜಿಲ್ಲೆ ಯುವತಿ ಜತೆಗೆ ವಿವಾಹವಾಗಿದ್ದ ತಿಪ್ಪಣ್ಣ ಅವರ ದಾಂಪತ್ಯ 3 ದಿನಕ್ಕೆ ಹಳಿ ತಪ್ಪಿತ್ತು. ಸತಿ ಪತಿ ನಡುವೆ ಮನಸ್ತಾಪ ಉಂಟಾಗಿ, ಪತ್ನಿ ತವರು ಸೇರಿದ್ದರು. ತಿಪ್ಪಣ್ಣ ಈ ವಿಚಾರವಾಗಿ ಮಾವ ಯಮುನಪ್ಪ ಕುಟುಂಬಸ್ಥರ ಜತೆಗೆ ವಾಕ್ಸಮರ ಕೂಡ ನಡೆದಿತ್ತು.
4) ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಯಮುನಪ್ಪ ಮತ್ತು ಕುಟುಂಬ ಸದಸ್ಯರು ತಿಪ್ಪಣ್ಣ ಅವರನ್ನು ಭೇಟಿ ಮಾಡಿದ್ದು, ಪತ್ನಿಯನ್ನು ಕರೆದುಕೊಂಡು ಹೋಗಿ ಸಂಸಾರ ನಡೆಸುವಂತೆ ತಾಕೀತು ಮಾಡಿದ್ದರು. ನಂತರ, ತಿಪ್ಪಣ್ಣ ವಿರುದ್ಧ ಮಹಿಳಾ ಸಹಾಯವಾಣಿ ಕೇಂದ್ರದಲ್ಲೂ ದೂರು ದಾಖಲಿಸಿದ್ದರು. ತಿಪ್ಪಣ್ಣ ಮತ್ತು ಪತ್ನಿಯನ್ನು ಕರೆಯಿಸಿ ಕೌನ್ಸೆಲಿಂಗ್ ಮಾಡಿದ್ದರು. ಒತ್ತಡಕ್ಕೆ ಮಣಿದ ತಿಪ್ಪಣ್ಣ, ಪತ್ನಿಯನ್ನು ಮನೆಗೆ ಕರೆದೊಯ್ದಿದ್ದರು.
5) ಪತ್ನಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಡಿಸೆಂಬರ್ 12 ರಂದು ಕರೆ ಮಾಡಿದ್ದ ಮಾವ ಯಮುನಪ್ಪ ಅವರು ಜೀವ ಬೆದರಿಕೆ ಹಾಕಿದ್ದಲ್ಲದೆ, ಸತ್ತು ಹೋಗು. ಆಗ ಮಗಳು ಚೆನ್ನಾಗಿರುತ್ತಾಳೆ ಎಂದಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದುದಾಗಿ ತಿಪ್ಪಣ್ಣ ಪ್ಯಾಂಟ್ ಜೇಬಿನಲ್ಲಿ ಸಿಕ್ಕ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ಕನ್ನಡ ಪ್ರಭ ವರದಿ ಮಾಡಿದೆ.
ಕೌಟುಂಬಿಕ ಕಲಹ ಮತ್ತು ಖಾಸಗಿ ವಿಚಾರ
ಮದುವೆಯಾಗಿ ಮೂರು ದಿನಕ್ಕೆ ಕೌಟುಂಬಿಕ ಕಲಹ ಶುರುವಾಗಿದೆ. ತೀರಾ ಖಾಸಗಿ ವಿಚಾರವಾಗಿ ತಿಪ್ಪಣ್ಣ ಮನನೊಂದಿದ್ದರು. ಅವರು ಈ ಸಂಗತಿಯನ್ನು ಕೌನ್ಸೆಲಿಂಗ್ ಸಂದರ್ಭದಲ್ಲಿ ಕೂಡ ಹೇಳಿದ್ದರಲ್ಲದೆ, ಲಿಖಿತವಾಗಿ ಬರೆದುಕೊಟ್ಟಿದ್ದರು.ಈ ವಿಚಾರವನ್ನು ತನ್ನ ಕುಟುಂಬ, ಮಾವನ ಕುಟುಂಬದಿಂದ ಮರೆಮಾಚಿದ್ದರು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಕನ್ನಡ ಪ್ರಭ ವರದಿ ವಿವರಿಸಿದೆ. ಅವರು ಖಿನ್ನತೆ ಅನುಭವಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾಗಿ ವರದಿ ಹೇಳಿದೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.