ಬೆಂಗಳೂರು: ಕರ್ನಾಟಕದ 10 ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್, 5000 ಕೋವಿಡ್ ಟೆಸ್ಟ್ ಕಿಟ್ ಖರೀದಿಗೆ ಕ್ರಮ
ಕರ್ನಾಟಕದಲ್ಲಿ ಕೋವಿಡ್ ಕೇಸ್‌ಗಳ ಸಂಖ್ಯೆ 100ರ ಸಮೀಪ ತಲುಪಿದೆ. ಕರ್ನಾಟಕ ಸರ್ಕಾರ ರಾಜ್ಯದ 10 ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡುವುದಕ್ಕೆ ಸೂಚಿಸಿದ್ದಲ್ಲದೆ, 5000 ಕೋವಿಡ್ ಟೆಸ್ಟ್ ಕಿಟ್ ಖರೀದಿಗೆ ಕ್ರಮ ಜರುಗಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ವಿಚಾರ ದೃಢೀಕರಿಸಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ 9 ಕೋವಿಡ್ 19 ಕೇಸ್‌ಗಳು ವರದಿಯಾಗಿದ್ದು, ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 100ರ ಸಮೀಪ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಪಾಸಿಟಿವಿಟಿ ದರ ಶೇಕಡ 8.65 ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ನಡುವೆ, ರಾಜ್ಯದ 10 ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡುವುದಕ್ಕೆ ಸೂಚಿಸಿದ್ದಲ್ಲದೆ, 5000 ಕೋವಿಡ್ ಟೆಸ್ಟ್ ಕಿಟ್ ಖರೀದಿಗೆ ಕ್ರಮ ಜರುಗಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೃಢೀಕರಿಸಿದ್ದಾರೆ.
ಒಂದೇ ದಿನ 100ಕ್ಕೂ ಹೆಚ್ಚು ಕೋವಿಡ್ ಟೆಸ್ಟ್; 47 ಸಕ್ರಿಯ ಕೇಸ್
ಪ್ರಸ್ತುತ ರಾಜ್ಯದಲ್ಲಿ 47 ಸಕ್ರಿಯ ಕೋವಿಡ್ ಕೇಸ್‌ಗಳಿದ್ದು, 46 ಸೋಂಕಿತರನ್ನು ಮನೆಯಲ್ಲೇ ಐಸೋಲೇಟ್ ಆಗಿ ಇರುವಂತೆ ಸೂಚಿಸಲಾಗಿದೆ. ಒಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 104 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಇದರಲ್ಲಿ ಆರ್‌ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜನ್ ಟೆಸ್ಟ್ (ಆರ್‌ಎಟಿ) ಕೂಡ ಒಳಗೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೋವಿಡ್ ಟೆಕ್ನಿಕಲ್ ಅಡ್ವೈಸರಿ ಕಮಿಟಿ ನೀಡಿದ ಸೂಚನೆ ಮೇರೆಗೆ ಕರ್ನಾಟಕದಲ್ಲಿ ಕೊರೊನಾ ವೈರಸ್ ಮೇಲೆ ನಿಗಾ ಇರಿಸಲಾಗಿದ್ದು, ಆರ್‌ಟಿ-ಪಿಸಿಆರ್ ಟೆಸ್ಟ್ ಅನ್ನು ರಾಜ್ಯದಲ್ಲಿ 150 ರಿಂದ 200ಕ್ಕೆ ಏರಿಸಲು ಕ್ರಮ ಜರುಗಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
5000 ಕೋವಿಡ್ ಟೆಸ್ಟ್ ಕಿಟ್ ಖರೀದಿಗೆ ಕ್ರಮ
ಕರ್ನಾಟಕದಲ್ಲಿ ಕೋವಿಡ್ -19 ಟೆಸ್ಟಿಂಗ್ ಮಾಡುವುದಕ್ಕೆ ಅಗತ್ಯ ಟೆಸ್ಟಿಂಗ್ ಕಿಟ್‌ಗಳು ಲಭ್ಯ ಇವೆ. SARI ಪ್ರಕರಣಗಳಲ್ಲಿ ಇಂದಿನಿಂದ ಟೆಸ್ಟಿಂಗ್ ನಡೆಸುವುದಕ್ಕೆ ಸೂಚಿಸಲಾಗಿದೆ. ಸದ್ಯಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದರಿಂದ VRDL ಟೆಸ್ಟಿಂಗ್ ಸೌಲಭ್ಯ ಇರುವ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, NIV ಕೇಂದ್ರ ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ಟೆಸ್ಟಿಂಗ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ತಿಂಗಳಿಗಾಗುವಷ್ಟು ಅಂದರೆ ಸುಮಾರು 5000 ಆರ್‌ಟಿ-ಪಿಸಿಆರ್ ಟೆಸ್ಟಿಂಗ್ ಕಿಟ್‌ಗಳನ್ನು ಖರೀದಿಸುವುದಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ, ಸೂಕ್ತ ಆರೋಗ್ಯ ಸೇವೆ ಒದಗಿಸಲು ಸನ್ನದ್ಧವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಕರ್ನಾಟಕದ 10 ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್
ಕರ್ನಾಟಕದ 10 ಕಡೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮಾಡುವುದಕ್ಕೆ ಕ್ರಮ ಜರುಗಿಸಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಈ 10 ಟೆಸ್ಟಿಂಗ್ ಸೆಂಟರ್ ಜತೆಗೆ ಜೋಡಿಸಲಾಗಿದೆ. ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗುವ ಮಾದರಿ, ಮಾಹಿತಿಗಳನ್ನು ಈ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಅಲ್ಲಿಂದ ಅದರ ವಿವರಗಳು ಸಂಬಂಧಪಟ್ಟವರಿಗೆ ತಲುಪಿಸಲಾಗುತ್ತದೆ. ಈ ಕೇಂದ್ರಗಳ ಮೂಲಕ ಲಭ್ಯ ಇರುವ ಟೆಸ್ಟ್ ಕಿಟ್‌ಗಳ ವಿವರವನ್ನೂ ಸಚಿವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಲಗತ್ತಿಸಿದ್ದಾರೆ.
ಸಚಿವ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಸರ್ಕಾರದಂತೆ ಈ ಬಾರಿಯೂ ಅವ್ಯವಹಾರಗಳಾಗದಂತೆ ಗಮನಹರಿಸಿ ಎಂಬಿತ್ಯಾದಿ ಮನವಿಗಳೂ ಅದರಲ್ಲಿವೆ.
“ಜನರನ್ನು ಅವರ ಪಾಡಿಗೆ ಬಿಟ್ಟು ಬಿಡಿ. ಅವರ ಆರೋಗ್ಯ ಅವರು ನೋಡಿಕೊಳ್ಳಬಲ್ಲರು ಹಿಂದಿನ ಸರ್ಕಾರ ಮಾಡಿರುವ ಅವಾಂತರನೇ ಸಾಕು ಕರೋನ ಚುಚ್ಚುಮದ್ದು ನೀಡಿದ ನಂತರ ಹೈದಯಸ್ತಂಭನದ ಸಾವು ಅಧಿಕವಾಗಿವೆ ಇದಕ್ಕೆಲ್ಲ ಯಾರು ಹೊಣೆ” ಎಂದು ಒಬ್ಬರು ಪ್ರಶ್ನಿಸಿರುವುದು ಗಮನಸೆಳೆದಿದೆ.