ಬೆಂಗಳೂರು: ಡಿಸೆಂಬರ್‌ನಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 18 ಆರೋಪಿಗಳ ಬಂಧನ, 1 ಕೋಟಿ ರೂ. ಮೌಲ್ಯದ ವಾಹನಗಳ ವಶ
Bengaluru Crime: ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 18 ಆರೋಪಿಗಳ ಬಂಧಿಸಿ ಅವರಿಂದ1 ಕೋಟಿ ರೂ. ಮೌಲ್ಯದ ವಾಹನಗಳ ವಶ ಪಡಿಸಲಾಗಿದೆ. ಇನ್ನೊಂದೆಡೆ, ಡಿಸೆಂಬರ್ ಕಾರ್ಯಾಚರಣೆಯಲ್ಲಿ 85 ಡ್ರಗ್ಸ್ ಪೆಡ್ಲರ್‌ಗಳ ಬಂಧಿಸಿ ಅವರಿಂದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

Bengaluru Crime: ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಡಿಸೆಂಬರ್‌ನಲ್ಲಿ ನಡೆಸಿರುವ ಕಾರ್ಯಾಚರಣೆ 1 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನ ಕಳ್ಳತನದ ಪ್ರಕರಣಗಳಿಗೆ ಸಂಬಂಧಿಸಿ 18 ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 115 ದ್ವಿಚಕ್ರ ವಾಹನ, ನಾಲ್ಕು ಆಟೊ, ಒಂದು ಕಾರನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ತಿಳಿಸಿದ್ದಾರೆ.
ಕಳ್ಳತನವನ್ನೇ ಅಭ್ಯಾಸ ಮಾಡಿಕೊಂಡಿರುವವರಿಗೆ ಖಾಯಂ ಜೈಲು ಶಿಕ್ಷೆಗೆ ಮನವಿ
ಬಂಧಿತ 18 ಆರೋಪಿಗಳ ಪೈಕಿ 10 ಮಂದಿ ಹಿಂದೆಯೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರವೂ ಮತ್ತೆ ಕಳ್ಳತನಕ್ಕೆ ಇಳಿದಿದ್ದರು.ಅವರೆಲ್ಲರನ್ನೂ ಪತ್ತೆಹಚ್ಚಿ ಬಂಧಿಸಲಾಗಿದೆ. ಪದೇಪದೆ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗುತ್ತಿರುವ ಈ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ವಕೀಲರ ಮೂಲಕ ನ್ಯಾಯಾಲಯದಲ್ಲಿ ಮನವಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
ರಾಜಗೋಪಾಲನಗರ ಠಾಣೆಯ ಪೊಲೀಸರು ವೈಟ್‌ಫೀಲ್ಡ್ ಸಮೀಪದ ಇಮ್ಮಡಿಹಳ್ಳಿಯ ನಿವಾಸಿ ಆನಂದ್ ಎಂಬಾತನನ್ನು ಬಂಧಿಸಿ ರೂ. 26.50 ಲಕ್ಷ ಮೌಲ್ಯದ 30 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ದೊಡ್ಡಬಿದರಕಲ್ಲು ಮಾರಣ್ಣ ಬಡಾವಣೆಯ ನಿವಾಸಿಯೊಬ್ಬರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶದ ಕೆಡಿಡಿಎಲ್ ಕಾರ್ಖಾನೆ ಎದುರು ದೂರುದಾರರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ಆರೋಪಿ ಕಳ್ಳತನ ಮಾಡಿದ್ದ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಕಡೆ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಂದಿನಿ ಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನಗಳ ಕಳ್ಳತನ ಮಾಡುತ್ತಿದ್ದ ಕೆಂಗೇರಿ ನಿವಾಸಿ ಮಹಮ್ಮದ್ ನಿಜಾರ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಹಗಲಿನಲ್ಲಿ ಚಹಾ ವ್ಯಾಪಾರ ಮಾಡುತ್ತಿದ್ದ. ರಾತ್ರಿ ವೇಳೆ ರಸ್ತೆ ಬದಿ ಹಾಗೂ ಮನೆಯ ಎದುರು ನಿಲುಗಡೆ ಮಾಡಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ. ಈತನಿಂದ 12 ದ್ವಿಚಕ್ರ ವಾಹನ, ಒಂದು ಆಟೊವನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ರೂ. 5.81 ಲಕ್ಷ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಮನೆಯ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನದ ಕಳ್ಳತನವಾಗಿದೆ ಎಂದು ಲಗ್ಗೆರೆಯ ನಿವಾಸಿಯೊಬ್ಬರು ನಂದಿನಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ವಿವಿಧ ಬಡಾವಣೆಗಳಲ್ಲಿ ನಿಲುಗಡೆ ಮಾಡಿದ್ದ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಿರಿನಗರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ರೂ. 9 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ ಪೊಲೀಸರು, ನಾಲ್ವರನ್ನು ಬಂಧಿಸಿ ರೂ. 8.5 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಅಲ್ಲದೇ ಎಚ್‌ಎಎಲ್, ಮಡಿವಾಳ, ಬೆಳ್ಳಂದೂರು, ಜೆ.ಪಿ. ನಗರ, ತಲಘಟ್ಟಪುರ, ಬಸವನಗುಡಿ ಪೊಲೀಸ್ ಠಾಣೆ ಪೊಲೀಸರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ದ್ವಿಚಕ್ರ ವಾಹನ ಹಾಗೂ ಆಟೊಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ ಕಾರ್ಯಾಚರಣೆ 85 ಡ್ರಗ್ಸ್ ಪೆಡ್ಲರ್‌ಗಳ ಬಂಧನ; ಅಪಾರ ಪ್ರಮಾಣದ ಡ್ರಗ್ಸ್ ಜಪ್ತಿ
ಬೆಂಗಳೂರು ನಗರದ ವಿವಿಧ ಠಾಣೆಗಳ ಪೊಲೀಸರು ಡಿಸೆಂಬರ್‌ನಲ್ಲಿ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ (ಎನ್‌ಡಿಪಿಎಸ್) ಪ್ರಕಾರ 62 ಪ್ರಕರಣ ದಾಖಲಿಸಿಕೊಂಡು, 85 ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಮೂವರು ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಬಂಧಿತರಿಂದ 241 ಕೆ.ಜಿ. ಗಾಂಜಾ, 48 ಗ್ರಾಂ. ಕೊಕೇನ್, 130 ಗ್ರಾಂ. ಚರಸ್, 12 ಕೆ.ಜಿ ಎಂಡಿಎಂಎ, 350 ಎಕ್ಸ್‌ಟೆಸಿ ಮಾತ್ರೆಗಳು, 40 ಎಲ್‌ಎಸ್‌ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇಷ್ಟೇ ಅಲ್ಲದೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದವರ ವಿರುದ್ಧವೂ ಡಿಸೆಂಬರ್ ನಲ್ಲಿ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಮಟ್ಕಾ, ಬೆಟ್ಟಿಂಗ್, ಅಕ್ರಮ ಮದ್ಯ ಮಾರಾಟ, ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ 325 ಪ್ರಕರಣ ದಾಖಲಿಸಿಕೊಂಡು, 411 ಮಂದಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ 34 ಮಂದಿಯನ್ನು ಬಂಧಿಸಿರುವುದೂ ಕಳೆದ ತಿಂಗಳ ವಿಶೇಷ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
