ಬೆಂಗಳೂರು ನಗರದಲ್ಲಿ ನಗದು ಕಳವು ಮಾಡುತ್ತಿದ್ದ ಓಜಿಕುಪ್ಪಂ ಗ್ಯಾಂಗ್‌ನ ಮೂವರ ಬಂಧನ; 31 ಮನೆಗಳಲ್ಲಿ ಕಳ್ಳತನ ಮಾಡಿದ್ದ ಮಹಿಳೆ ಅರೆಸ್ಟ್
Bengaluru Crime: ಬೆಂಗಳೂರು ನಗರದಲ್ಲಿ ನಗದು ಕಳವು ಮಾಡುತ್ತಿದ್ದ ಓಜಿಕುಪ್ಪಂ ಗ್ಯಾಂಗ್‌ನ ಮೂವರು ಸದಸ್ಯರ ಬಂಧನವಾಗಿದೆ. ಇನ್ನೊಂದು ಪ್ರಕರಣದಲ್ಲಿ 31 ಮನೆಗಳಲ್ಲಿ ಕಳ್ಳತನ ಮಾಡಿದ್ದ ಮಹಿಳೆ ಅರೆಸ್ಟ್ ಆಗಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

Bengaluru Crime: ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆದು ನಗದು ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಓಜಿಕುಪ್ಪಂ ಗ್ಯಾಂಗ್‌ನ ಮೂವರು ಸದಸ್ಯರನ್ನು ಕೆ.ಆರ್.ಪುರ ಮತ್ತು ಕೊತ್ತನೂರು ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓಜಿಕುಪ್ಪಂನ ಗೋಪಿ (35), ಅಭಿಷೇಕ್(36) ಮತ್ತು ಅಖಿಲ್ (36) ಬಂಧಿತ ಆರೋಪಿಗಳು. ಇವರಿಂದ 46 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ.
ಓಜಿಕುಪ್ಪಂ ಗ್ಯಾಂಗ್ ಕಳವು ಪ್ರಕರಣ
ದೇವಸಂದ್ರದ ನಿವಾಸಿಯೊಬ್ಬರು ನವೆಂಬರ್ 29ರಂದು ಬ್ಯಾಂಕ್‌ನಿಂದ 4 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಕಾರಿನಲ್ಲಿ ತೆರಳುತ್ತಿದ್ದರು. ಟಿ.ಸಿ.ಪಾಳ್ಯದ ಸಮೀಪ ಎರಡು ದ್ವಿಚಕ್ರ ವಾಹನಗಳಲ್ಲಿ ಕಾರು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು, ಕಾರಿನ ಟೈಯರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದರು. ಬಳಿಕ ಪಂಕ್ಚರ್ ಹಾಕಿಸಿಕೊಂಡು ಹಣ ಕೊಡಲು ಹೋದಾಗ ಕಾರಿನ ಡ್ಯಾಶ್‌ಬೋರ್ಡ್ ನಲ್ಲಿದ್ದ ಹಣವನ್ನು ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಕಾರಿನ ಮಾಲೀಕರು ನೀಡಿದ ದೂರನ್ನು ಆಧರಿಸಿ, ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯೊಬ್ಬರು ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತೆಗೆದುಕೊಂಡು ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿ ಆಗಿದ್ದರು. ಆ ಆರೋಪಿಗಳು ಓಜಿಕುಪ್ಪಂ ಗ್ಯಾಂಗ್ ನ ಸದಸ್ಯರು ಎನ್ನುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
31 ಮನೆಗಳಲ್ಲಿ ಕಳ್ಳತನ ಮಾಡಿದ್ದ ಮಹಿಳೆ ಬಂಧನ
ಮನೆ ಪ್ರವೇಶಿಸಿ ಚಿನ್ನದ ಆಭರಣಗಳು ಹಾಗೂ ನಗದನ್ನು ಕಳ್ಳತನ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ಹೊರಗಡೆಯ ಶೂ ಬಾಕ್ಸ್ ಹಾಗೂ ಶೂಗಳಲ್ಲಿ ಅಡಗಿಸಿ ಇಟ್ಟಿರುತ್ತಿದ್ದ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಣ್ಣೂರು ನಿವಾಸಿ ಜಯಂತಿ (35) ಬಂಧಿತ ಆರೋಪಿ. ಈಕೆಯಿಂದ 7.80 ಲಕ್ಷ ರೂ. ಮೌಲ್ಯದ 110 ಗ್ರಾಂ. ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಈಕೆಯ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 31 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮಹಿಳೆಗೆ ಮದುವೆಯಾಗಿದ್ದು, ನಾಲ್ವರು ಹೆಣ್ಣು ಮಕ್ಕಳು ಇದ್ದಾರೆ. ಮನೆ ಕೆಲಸಕ್ಕೆ ಹೋಗುವ ನೆಪದಲ್ಲಿ ಅಕ್ಕಪಕ್ಕದ ಮನೆಗಳಿಗೆ ಭೇಟಿ ನೀಡಿ ಶೂಗಳಲ್ಲಿ ಮತ್ತು ಶೂ ಬಾಕ್ಸ್ ಗಳಲ್ಲಿ ಕೀ ಇಟ್ಟಿರುವುದನ್ನು ಈಕೆ ಕಂಡುಕೊಂಡಿದ್ದಳು. ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಕೀ ಬಳಸಿ ಕಳ್ಳತನ ಮಾಡುತ್ತಿದ್ದಳು. ಈ ಹಿಂದೆ ಭಾರತಿನಗರದಲ್ಲಿ ವಾಸವಾಗಿದ್ದ ಜಯಂತಿ, ಅಲ್ಲಿಯೂ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಳು. ಕೆಲವು ತಿಂಗಳ ಹಿಂದೆ ಹೆಣ್ಣೂರಿಗೆ ಕುಟುಂಬ ಸಮೇತ ಸ್ಥಳಾಂತರಗೊಂಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
