ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಮಹಿಳೆಯಿಂದ ಕಳ್ಳತನ; 34 ಲಕ್ಷ ಬೆಲೆಬಾಳುವ ವಜ್ರ, ಚಿನ್ನ, ಬೆಳ್ಳಿಯ ಆಭರಣ, ನಗದು ವಶಕ್ಕೆ

Bengaluru Crime: ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಮಹಿಳೆಯಿಂದ ಕಳ್ಳತನ; 34 ಲಕ್ಷ ಬೆಲೆಬಾಳುವ ವಜ್ರ, ಚಿನ್ನ, ಬೆಳ್ಳಿಯ ಆಭರಣ, ನಗದು ವಶಕ್ಕೆ

ಮನೆಗೆಲಸ ಮಾಡಿಕೊಂಡಿದ್ದ ಮನೆಯಿಂದಲೇ ಮಹಿಳೆಯೊಬ್ಬರು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಜೆಪಿ ನಗರದ ಒಂದನೇ ಹಂತದಲ್ಲಿ ನಡೆದಿದೆ. ಆರೋಪಿಯಿಂದ 34 ಲಕ್ಷ ಬೆಲೆಬಾಳುವ ಆಭರಣ, ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. (ವರದಿ: ಮಾರುತಿ ಎಚ್‌.)

ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಮಹಿಳೆಯಿಂದ ಕಳ್ಳತನ
ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಮಹಿಳೆಯಿಂದ ಕಳ್ಳತನ

ಬೆಂಗಳೂರು: ಹಿರಿಯ ನಾಗರಿಕರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರು 34 ಲಕ್ಷ ರೂಪಾಯಿ ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ 11 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ಬೆಂಗಳೂರಿನ ಜೆ.ಪಿ. ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಜೆ.ಪಿ.ನಗರ 1ನೇ ಹಂತದ ಅಪಾರ್ಟ್‌ಮೆಂಟ್‌ವೊಂದರ ಮನೆಯಲ್ಲಿ ಮಹಿಳೆಯೊಬ್ಬರು ಸುಮಾರು 8 ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದಳು. ಮನೆಯ ಮಾಲೀಕರಾದ ಪತಿ ಮತ್ತು ಪತ್ನಿ ಇಬ್ಬರೂ ಪಿನ್ಯಾದಿ ಹಿರಿಯ ನಾಗರೀಕರಾಗಿದ್ದು, ಅವರ ಇಬ್ಬರು ಮಕ್ಕಳು ವಿದೇಶದಲ್ಲಿರುತ್ತಾರೆ.

ಕೆಲಸದಾಕೆ ಮನೆಯಲ್ಲಿರುವ ಚಿನ್ನದ ಆಭರಣಗಳನ್ನು ಆಗಿಂದಾಗ್ಗೆ ಒಂದೊಂದೇ ಅಭರಣವನ್ನು ಮನೆಯ ಮಾಲೀಕರಿಗೆ ತಿಳಿಯದಂತೆ ಕಳವು ಮಾಡುತ್ತಿರುತ್ತಾಳೆ.

ಇತ್ತೀಚೆಗೆ ಇವರ ಮೊಮ್ಮಗನ ನಾಮಕರಣ ಕಾರ್ಯಕ್ರಮ ನಡೆದಿರುತ್ತದೆ. ಸಮಾರಂಭ ಮುಗಿದ ನಂತರ ಎಲ್ಲ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣವನ್ನು ಲೆಕ್ಕ ಹಾಕಿ ಆಫೀಸ್ ರೂಮ್‌ನಲ್ಲಿರುವ ಬೀರುವಿನಲ್ಲಿ ಇಟ್ಟಿರುತ್ತಾರೆ.

ಸ್ವಲ್ಪ ದಿನಗಳ ಬಳಿಕ ಮತ್ತೊಮ್ಮೆ ಪರಿಶೀಲನೆ ಮಾಡಿದಾಗ 4 ಚಿನ್ನದ ಬಳೆಗಳು, ಇತರೆ ಆಭರಣಗಳು ಹಾಗೂ 50 ಸಾವಿರ ರೂಪಾಯಿ ನಗದು ಇಲ್ಲದಿರುವುದು ಕಂಡುಬಂದಿರುತ್ತದೆ.

ನಾಮಕರಣ ಕಾರ್ಯಕ್ರಮ ನಡೆದ ದಿನದಿಂದ ಕಳ್ಳತನ ನಡೆದಿರುವ ದಿನದವರೆಗೆ ಕೆಲಸದಾಕೆ ಬಿಟ್ಟು ಬೇರೆ ಯಾರೂ ಮನೆಗೆ ಬಂದಿರುವುದಿಲ್ಲ. ಆದ್ದರಿಂದ ಕೆಲಸದಾಕೆಯೇ ಕಳ್ಳತನ ಮಾಡಿರಬಹುದೆಂದು ಅನುಮಾನ ವ್ಯಕ್ತಪಡಿಸಿ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ಲೋಕಸಭಾ ಚುನಾವಣೆ ಮುಗಿದ ಬಳಿಕ ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಕೆಲಸದಾಕೆಯನ್ನು ವಶಕ್ಕೆ ಪಡೆದು, ಸುದೀರ್ಘವಾಗಿ ವಿಚಾರಣೆಗೊಳಪಡಿಸಿದರು.

ವಿಚಾರಣೆ ವೇಳೆ ಕೆಲಸದಾಕೆಯು ಕಳ್ಳತನ ಮಾಡಿದ ಚಿನ್ನದ ಆಭರಣಗಳ ಪೈಕಿ 2 ಚಿನ್ನದ ಬಳೆಗಳನ್ನು ತನ್ನ ಪತಿಯ ಮುಖಾಂತರ ಮಾರಾಟ ಮಾಡಿರುವುದಾಗಿ ಹೇಳಿರುತ್ತಾರೆ. ಅಲ್ಲದೆ ಕಳುವು ಮಾಡಿದ ಇತರೆ ವಜ್ರ ಮತ್ತು ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಪದಾರ್ಥಗಳನ್ನು ಚಾಮರಾಜನಗರ ಜಿಲ್ಲೆ, ಮಳೆಯೂರು ಗ್ರಾಮದಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿರುತ್ತಾಳೆ. ಬೆಂಗಳೂರಿನಲ್ಲಿ ಮಾರಾಟ ಮಾಡಿದ್ದ 2 ಚಿನ್ನದ ಬಳೆಗಳು ಹಾಗೂ ಚಾಮರಾಜನಗರದಲ್ಲಿರುವ ಆಕೆಯ ತಾಯಿಯ ಮನೆಯಿಂದ 4 ಚಿನ್ನದ ಬಳೆಗಳು, 3 ನೆಕ್ಲಸ್, 6 ಜೊತೆ ಚಿನ್ನದ ಓಲೆ, 2 ಜೊತೆ ವಜ್ರದ ಓಲೆ, 1 ವಜ್ರದ ನೆಕ್ಲೇಸ್‌ ಮತ್ತು 3 ಚಿನ್ನದ ಉಂಗುರ, ಒಂದು ಹವಳದ ಸರ, ಒಂದು ಹವಳದ ಬಳೆ, 2 ಬೆಳ್ಳಿಯ ದೀಪಗಳು, ಒಂದು ಬೆಳ್ಳಿಯ ಚೊಂಬು, ಮತ್ತು ಇತರೆ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

363 ಗ್ರಾಂ ತೂಕದ ವಜ್ರ ಮತ್ತು ಚಿನ್ನದ ಆಭರಣಗಳು, 176 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, ಹಾಗೂ 1 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 35 ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸದಾಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸರಗಳ್ಳನ ಬಂಧನ

ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳನೊಬ್ಬನನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯು ಬೆಳಗ್ಗೆ 9 ಗಂಟೆಯ ಸಮಯದಲ್ಲಿ, ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬೈಕ್‌ನಲ್ಲಿ ಬಂದ ಸರಗಳ್ಳ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಹಲವಾರು ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರೀಶೀಲಿಸಿ ಈತನನ್ನು ಬಂಧಿಸಲಾಗಿದ್ದು, 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶ ಪಡಿಸಿಕೊಳ್ಳಲಾಗಿದೆ.

IPL_Entry_Point