ಬೆಂಗಳೂರು ಅಪರಾಧ ಸುದ್ದಿ: ಡ್ರಗ್ಸ್ ಕೇಸ್‌ನಲ್ಲಿ ಆಫ್ರಿಕಾ ಪ್ರಜೆ ಬಂಧನ, 4 ಕೋಟಿ ರೂ ಮಾದಕ ವಸ್ತು ವಶ; ಮೂವರು ಮನೆಗಳ್ಳರು ಅರೆಸ್ಟ್
ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡ್ತಾ ಇದ್ದ ಆಫ್ರಿಕಾ ದೇಶದ ಪ್ರಜೆಯನ್ನು ಪೊಲೀಸರು ಬಂಧಿಸಿದ್ದು, 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಹಾಡುಹಗಲೇ ಮನೆಗಳ್ಳತನ ಮಾಡಿದ್ದ ಮೂವರ ಅರೆಸ್ಟ್ ಆಗಿದ್ದು, ಅವರಿಂದ 35 ಲಕ್ಷ ರೂಪಾಯಿ ಆಭರಣ ವಶಪಡಿಸಲಾಗಿದೆ. (ವರದಿ ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ, ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆಫ್ರಿಕಾ ದೇಶದ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 4 ಕೋಟಿ ರೂ. ಮೌಲ್ಯದ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಚ್ಯುತನಗರದ ಮನೆಯೊಂದರಲ್ಲಿ ಇಬ್ಬರು ವಿದೇಶಿ ಪ್ರಜೆಗಳು ವಾಸವಾಗಿದ್ದರು. ಇವರು ಎಂಡಿಎಂಎ ಕ್ರಿಸ್ಟಲ್ ಅನ್ನು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರಿಗೆ ಲಭಿಸಿತ್ತು.
ಸಿಸಿಬಿ ಪೊಲೀಸರು ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇವರ ಮನೆ ಮೇಲೆ ದಾಳಿ ನಡೆಸಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆತನಿಂದ 2 ಕೆಜಿ 585 ಗ್ರಾಂ.ಎಂಡಿಎಂಎ ಕ್ರಿಸ್ಟಲ್, ದ್ವಿಚಕ್ರ ವಾಹನ ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಈ ಡ್ರಗ್ಸ್ ಮೌಲ್ಯ 4 ಕೋಟಿ ರೂ. ಎಂದು ತಿಳಿದು ಬಂದಿದೆ.
ಆರೋಪಿಯು ವ್ಯಾಪಾರ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದು, ಅವಧಿ ಮುಗಿದಿದ್ದರೂ ಮರಳದೆ ಇಲ್ಲಿಯೇ ನೆಲೆಸಿದ್ದ. ದಾಳಿ ವೇಳೆ ಮತ್ತೊಬ್ಬ ವಿದೇಶಿ ಪ್ರಜೆ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.
ಮನೆಗಳ್ಳತನ :ಮೂವರ ಬಂಧನ, 35 ಲಕ್ಷ ಮೌಲ್ಯದ ಆಭರಣಗಳ ಜಪ್ತಿ
ಬಸವೇಶ್ವರ ನಗರ ಠಾಣೆ ಪೊಲೀಸರು ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ.35 ಲಕ್ಷ ಮೌಲ್ಯದ 382 ಗ್ರಾಂ ಚಿನ್ನಾಭರಣ ಹಾಗೂ 286 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಯಿಬಾಬಾ ಬಡಾವಣೆಯ ಮನೆಯೊಂದರಲ್ಲಿ ನಾಲ್ಕು ಮಂದಿ ವಾಸವಿದ್ದು, ಮೂವರು ತಮ್ಮ ತಮ್ಮ ಕೆಲಸದ ನಿಮಿತ್ತ ಹೊರಹೋಗಿರುತ್ತಾರೆ.
ಒಬ್ಬರು ಬಾಲ್ಕನಿಯ ಬಾಗಿಲು ತೆರೆದು ತಮ್ಮ ಕೊಠಡಿಯಲ್ಲಿ ಲ್ಯಾಪ್ ಟಾಪ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಬಾಲ್ಕನಿಯಿಂದ ಒಳನುಗ್ಗಿದ ಕಳ್ಳರು ವಾರ್ಡ್ ರೋಬ್ ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ವಾಕಿಂಗ್ ಮುಗಿಸಿಕೊಂಡು ಬಂದ ಮನೆಯ ಸದಸ್ಯರೊಬ್ಬರು ವಾರ್ಡ್ ರೋಬ್‌ನಲ್ಲಿದ್ದ ಆಭರಣಗಳು ಕಳ್ಳತನವಾಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕುರುಬರ ಹಳ್ಳಿ ವೃತ್ತದ ಬಳಿ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತಿಬ್ಬರು ಸಹಚರರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಕಳವು ಮಾಡಿದ ಕಲವು ಆಭರಣಗಳನ್ನು ಮಣಪ್ಪುರಂ ಅಸೆಟ್ ಫೈನಾನ್ಸ್‌ನಲ್ಲಿ ಗಿರವಿಯಿಟ್ಟಿರುವುದಾಗಿ ಹಾಗೂ ಉಳಿದ ಆಭರಣಗಳನ್ನು ರಾಜಾಜಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾನೆ.
35 ಲಕ್ಷ ರೂ. ಮೌಲ್ಯದ ಪ್ಲ್ಯಾಟಿನಂ ಚೈನ್, 3 ಜೊತೆ ಚಿನ್ನದ ಓಲೆ, ಸನ್ ಗ್ಲಾಸ್, 300 ಅಮೆರಿಕನ್ ಡಾಲರ್, 1.50 ಲಕ್ಷ ರೂ. ಮೌಲ್ಯದ ವೈಲ್ ಕಂಪನಿಯ ಕೈಗಡಿಯಾರ ಸೇರಿದಂತೆ ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಬೈಲ್ ಸರ್ವೀಸ್ ಅಂಗಡಿ ದೋಚಿದ್ದ ಇಬ್ಬರ ಬಂಧನ
ತಡ ರಾತ್ರಿಯಲ್ಲಿ ಬಾಗಲೂರು ಮುಖ್ಯ ರಸ್ತೆಯ ಮೊಬೈಲ್ ಸರ್ವೀಸ್ ಅಂಗಡಿಯ ಬೀಗ ಮುರಿದು ಕಳವು ಮಾಡುತ್ತಿದ್ದ ಹೊರ ರಾಜ್ಯದ ಇಬ್ಬರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ 1.40 ಲಕ್ಷ ರೂ. ಮೌಲ್ಯದ 14 ಮೊಬೈಲ್ ಪೋನ್ ಹಾಗೂ ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೊಬೈಲ್ ಸರ್ವೀಸ್ ಅಂಗಡಿ ಮಾಲೀಕ ಕಳ್ಳತನ ಕುರಿತು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕಟ್ಟಿಗೆನಹಳ್ಳಿಯ ಪಿ.ಜಿ. ಸ್ಟ್ರೀಟ್ ನಲ್ಲಿ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅವರು ಮೊಬೈಲ್ ಸರ್ವೀಸ್ ಅಂಗಡಿಯಲ್ಲಿ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳ ಬಳಿಯಿದ್ದ 1.40 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.
(ವರದಿ ಎಚ್.ಮಾರುತಿ, ಬೆಂಗಳೂರು)