ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಕಳ್ಳತನ; ತಿಂಗಳಿಗೆ 350 ದ್ವಿಚಕ್ರ ವಾಹನ ಕಳವು; ಕಳ್ಳರಿಗೆ ಬ್ಲಾಕ್‌ ಸ್ಪಾಟ್‌ಗಳೇ ಹಾಟ್‌ ಸ್ಪಾಟ್‌!
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಕಳ್ಳತನ; ತಿಂಗಳಿಗೆ 350 ದ್ವಿಚಕ್ರ ವಾಹನ ಕಳವು; ಕಳ್ಳರಿಗೆ ಬ್ಲಾಕ್‌ ಸ್ಪಾಟ್‌ಗಳೇ ಹಾಟ್‌ ಸ್ಪಾಟ್‌!

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಕಳ್ಳತನ; ತಿಂಗಳಿಗೆ 350 ದ್ವಿಚಕ್ರ ವಾಹನ ಕಳವು; ಕಳ್ಳರಿಗೆ ಬ್ಲಾಕ್‌ ಸ್ಪಾಟ್‌ಗಳೇ ಹಾಟ್‌ ಸ್ಪಾಟ್‌!

ಬೆಂಗಳೂರಿನ ಬ್ಲಾಕ್‌ ಸ್ಪಾಟ್‌ಗಳಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣ ಹೆಚ್ಚುತ್ತಿದೆ. ಮಾಲ್‌, ಮೆಟ್ರೋ ಸ್ಟೇಷನ್‌, ಮತ್ತಿತರ ಅಕ್ಕಪಕ್ಕದ ರಸ್ತೆಗಳೇ ಇಂತಹ ಬ್ಲಾಕ್‌ ಸ್ಪಾಟ್‌‌ಗಳು ಎಂದು ತಿಳಿದುಬಂದಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಕಳ್ಳತನ; ತಿಂಗಳಿಗೆ 350 ದ್ವಿಚಕ್ರ ವಾಹನ ಕಳವು (ಸಾಂದರ್ಭಿಕ ಚಿತ್ರ)
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಕಳ್ಳತನ; ತಿಂಗಳಿಗೆ 350 ದ್ವಿಚಕ್ರ ವಾಹನ ಕಳವು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಡೆ ನೋಂದಣಿಯಾಗುತ್ತಿರುವ ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ವಾಹನಗಳ ಕಳವೂ ಹೆಚ್ಚುತ್ತಿದೆ. ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ವರದಿಯಾದ ವಾಹನಗಳ ಕಳವು ಸಂಖ್ಯೆಯಲ್ಲಿ ಶೇ. 44ರಷ್ಟು ವಾಹನಗಳ ಕಳವು ಬೆಂಗಳೂರಿನಲ್ಲೇ ವರದಿಯಾಗಿವೆ. ಪ್ರತಿ ತಿಂಗಳು 350 ದ್ವಿಚಕ್ರ ವಾಹನಗಳು ಕಳವಾಗುತ್ತಿವೆ. ಕಳವಾಗುತ್ತಿರುವ ವಾಹನಗಳ ಪೈಕಿ ದ್ವಿಚಕ್ರ ವಾಹನಗಳದ್ದೇ ಸಿಂಹಪಾಲು. ಇಡೀ ಬೆಂಗಳೂರಿನಲ್ಲಿ ಸಿಸಿಟಿವಿಗಳಿಗೇನೂ ಕೊರತೆ ಇಲ್ಲದಿದ್ದರೂ ಕಳವಾದ ವಾಹನಗಳ ಪತ್ತೆ ಮಾತ್ರ ಸರಾಸರಿಗಿಂತ ಕಡಿಮೆಯಿದೆ. ಕಳ್ಳರ ಪಾಲಿಗೆ ಬ್ಲಾಕ್‌ ಸ್ಪಾಟ್‌ಗಳು ಹಾಟ್‌ ಸ್ಪಾಟ್‌ಗಳಾಗುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ವರ್ಷದ ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ರಾಜ್ಯದಲ್ಲಿ 2,473 ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರು ಒಂದರಲ್ಲೇ 1,106 ಪ್ರಕರಣಗಳು ಸೇರಿವೆ. 2024ರಲ್ಲಿ ರಾಜ್ಯದಲ್ಲಿ 11,610 ವಾಹನ ಕಳವು ಪ್ರಕರಣಗಳು ದಾಖಲಾಗಿದ್ದರೆ ಬೆಂಗಳೂರಿನಲ್ಲಿ 5,241 ಪ್ರಕರಣಗಳು ದಾಖಲಾಗಿವೆ. ಏಪ್ರಿಲ್‌ 25 ರವರೆಗೆ ಬೆಂಗಳೂರಿನಲ್ಲಿ 1,368 ಕಳವು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,327 ದ್ವಿಚಕ್ರ ವಾಹನಗಳು, 24 ಕಾರು, 13 ಬೈಸಿಕಲ್‌, ನಾಲ್ಕು ಟ್ರಕ್‌ಗಳು ಸೇರಿವೆ. 2023ರಲ್ಲಿ 5,828 ಮತ್ತು 2024ರಲ್ಲಿ 5,241 ವಾಹನ ಕಳವು ಪ್ರಕರಣಗಳು ದಾಖಲಾಗಿವೆ.

ಯಾವ ಸ್ಥಳಗಳಲ್ಲಿ ಕಳವು ಹೆಚ್ಚು?

ಅಧ್ಯಯನದ ಪ್ರಕಾರ ಬ್ಲಾಕ್‌ ಸ್ಪಾಟ್‌ಗಳಲ್ಲಿ ದ್ವಿಚಕ್ರ ವಾಹನಗಳ ಕಳವು ಹೆಚ್ಚುತ್ತಿದೆ. ಮಾಲೀಕರು ವಾಹನ ಪಾರ್ಕಿಂಗ್‌ ಶುಲ್ಕ ತಡೆಯಲು ಇಂತಹ ಬ್ಲಾಕ್‌ಸ್ಪಾಟ್‌ಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಮಾಡುತ್ತಾರೆ. ಮಾಲ್‌, ಮೆಟ್ರೋ ಸ್ಟೇಷನ್‌, ಮತ್ತಿತರ ಅಕ್ಕಪಕ್ಕದ ರಸ್ತೆಗಳೇ ಇಂತಹ ಬ್ಲಾಕ್‌ ಸ್ಪಾಟ್‌‌ಗಳು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ನಿಯಮಿತವಾಗಿ ವಾಹನ ಕಳವು ಮಾಡುವ ಕಳ್ಳರಿಗೆ ಇಂತಹ ಸ್ಥಳಗಳ ಅರಿವಿರುತ್ತದೆ. ಜನವಸತಿ ಪ್ರದೇಶಗಳಲ್ಲೂ ಸ್ಥಳೀಯ ನಿವಾಸಿಗಳು ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡುತ್ತಾರೆ. ಇದರಿಂದಲೂ ಕಳವು ಹೆಚ್ಚುತ್ತಿದೆ. ಮೋಜಿನ ಜೀವನ ನಡೆಸಲೂ ವಾಹನಗಳನ್ನು ಕಳವು ಮಾಡಲಾಗುತ್ತಿದೆ. ಸಾಲ ತೀರಿಸಲು ಹಾಗೂ ವಿಲಾಸಿ ಜೀವನ, ಜಾಲಿ ರೈಡ್‌, ಪ್ರೇಯಸಿಗೆ ಉಡುಗೊರೆ ಕೊಡಲು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ.

ಜನ ವಸತಿ ಪ್ರದೇಶಗಳಲ್ಲಿ ಶೇ 90ರಷ್ಟು ವಾಹನಗಳ ಕಳ್ಳತನವಾಗಿದೆ. ಮನೆಗಳು ಮತ್ತು ಪಿಜಿಗಳ ಮುಂಭಾಗ ನಿಲ್ಲಿಸಿದ್ದ ವಾಹನಗಳು ಹೆಚ್ಚು ಕಳ್ಳತನವಾಗುತ್ತಿವೆ. ಕಳವು ಮಾಡಿದ ವಾಹನಗಳ ನಂಬರ್‌ ಪ್ಲೇಟ್‌ ಬದಲಾಯಿಸಿ ಆರೋಪಿಗಳು ಅಪರಾಧ ಪ್ರಕರಣಗಳಿಗೆ ಬಳಕೆ ಮಾಡುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಮಹಿಳೆಯರ ಚಿನ್ನದ ಸರ ಕಳವು, ದರೋಡೆ, ಕೊಲೆ, ಕೊಲೆ ಯತ್ನ, ಗಂಧದ ತುಂಡು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಣೆ, ಮನೆ ಕಳ್ಳತನ, ಅಪಹರಣ ಪ್ರಕರಣಗಳಿಗೆ ಬಳಸಲಾಗುತ್ತಿದೆ. ಸಂದರ್ಭ ಬಂದರೆ ಆ ವಾಹನಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ ಎಂದು ಅವರು ಹೇಳುತ್ತಾರೆ. ಬೆಂಗಳೂರಿಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದು ನಗರದಲ್ಲಿ ವಾಹನಗಳನ್ನು ಕಳ್ಳತನ ಮಾಡುತ್ತಾರೆ. ಅವುಗಳ ಬಿಡಿಭಾಗಗಳನ್ನು ಬೇರ್ಪಡಿಸಿ, ವಾಹನದ ಎಂಜಿನ್ ಮತ್ತು ಚಾಸ್ಸಿ ಸಂಖ್ಯೆಯನ್ನು ಬದಲಾಯಿಸಿ ಆನ್‌ ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕಳವು ಮಾಡಿದ ವಾಹನಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ.

ಕಳವು ತಡೆಯಲು ಹೀಗೆ ಮಾಡಿ

ನಂಬರ್‌ ಪ್ಲೇಟ್‌, ಎಂಜಿನ್ ನಂಬರ್ ಬದಲಿಸಿ, ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಜಿಪಿಎಸ್, ವ್ಹೀಲ್ ಲಾಕಿಂಗ್, ಗಟ್ಟಿಮುಟ್ಟಾದ ಹ್ಯಾಂಡಲ್ ಲಾಕಿಂಗ್ ಮತ್ತು ಕಳವು ತಡೆ ಸಾಧನ ಅಳವಡಿಸಬೇಕು. ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರುವ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಮಾಡುವುದು ಕ್ಷೇಮ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

2024ರಲ್ಲಿ 5351 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ವರದಿಯಾಗಿದ್ದು ಇವುಗಳ ಮೌಲ್ಯರೂ.26.53 ಕೋಟಿ. ಈ ಪೈಕಿ 2040 ಪ್ರಕರಣಗಳು ಪತ್ತೆಯಾಗಿದ್ದು ರೂ.13.24 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.