ಬೆಂಗಳೂರಿನಲ್ಲಿ ಗುತ್ತಿಗೆದಾರನ ಬೆತ್ತಲೆಗೊಳಿಸಿ ಹಣ ಸುಲಿಗೆ: ಮೂವರ ಬಂಧನ; ಜಮೀನು ಖರೀದಿ ವಿವಾದದಲ್ಲಿ ಮೋಸ ಹೋದ ಮುಖ್ಯ ಶಿಕ್ಷಕ ಆತ್ಮಹತ್ಯೆ
ಬೆಂಗಳೂರು: ಮೊದಲು ಪರಿಚಯ ನಂತರ ಮಗುವಿನ ಹೆಸರಲ್ಲಿ ಹಣ ಪಡೆಯುತ್ತಾಳೆ, ಅಂತಿಮವಾಗಿ ಮನೆಗೆ ಕರೆಸಿ ಸ್ನೇಹಿತರ ಮೂಲಕ ಚಿನ್ನಾಭರಣ ಹಾಗೂ 55 ಸಾವಿರ ಹಣ ಕಸಿದು ಪರಾರಿ. ಇದು ಸಿನಿಮಾ ಶೈಲಿಯಲ್ಲಿ ಮಹಿಳೆ ಮತ್ತು ಆಕೆಯ ಗ್ಯಾಂಗ್ ಬೆಂಗಳೂರಿನಲ್ಲಿ ಮಾಡಿರುವ ಕೃತ್ಯ. ಪ್ರತ್ಯೇಕ ಭೂ ವಿವಾದದಲ್ಲಿ ಮೋಸ ಹೋದ ಮುಖ್ಯ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು: ಪರಿಚಿತ ಮಹಿಳೆ ಮನೆಗೆ ಆಹ್ವಾನಿಸಿದ್ದಾಳೆ ಎಂದು ಗುತ್ತಿಗೆದಾರರೊಬ್ಬರು ಆಕೆಯ ಮನೆಗೆ ಹೋದಾಗ ತನ್ನ ಸ್ನೇಹಿತರೊಂದಿಗೆ ಸೇರಿ ನಗದು ಮತ್ತು ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಮ್ಮನ್ನು ಸುಲಿಗೆ ಮಾಡಿದ ಆರೋಪಿಗಳ ವಿರುದ್ಧ ಸಿವಿಲ್ ಗುತ್ತಿಗೆದಾರ ರಂಗನಾಥ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಂತೋಷ್, ಅಜಯ್ ಹಾಗೂ ಜಯರಾಜ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯ ಆರೋಪಿ ನಯನಾ ಹಾಗೂ ಇತರ ನಾಲ್ವರು ನಾಪತ್ತೆಯಾಗಿದ್ದು, ಇವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
"ಆರೋಪಿ ನಯನಾ ಮೊದಲು ತನ್ನ ಮಗುವಿನ ವೈದ್ಯಕೀಯ ಚಿಕಿತ್ಸೆಗೆಂದು ತನ್ನಿಂದ 5000 ರೂಪಾಯಿ ಪಡೆದುಕೊಂಡಿದ್ದಳು. ಇದರ ಕೃತಜ್ಞತೆಗಾಗಿ ಮನೆಗೆ ಬಂದು ಆತಿಥ್ಯ ಸ್ವೀಕರಿಸುವಂತೆ ಪದೇಪದೆ ಆಹ್ವಾನಿಸಿದ್ದಳು. ಡಿಸೆಂಬರ್ 9 ರಂದು ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ಆಕಸ್ಮಿಕವಾಗಿ ಸಿಕ್ಕ ನಯನಾ, ಇಲ್ಲೇ ಹತ್ತಿರ ತನ್ನ ಮನೆ ಇದೆ ಬನ್ನಿ ಚಹಾ ಕುಡಿದು ಹೋಗುವಿರಂತೆ ಎಂದು ಆಹ್ವಾನಿಸಿದ್ದಾಗಿ ರಂಗನಾಥ್ ದೂರಿನಲ್ಲಿ ತಿಳಿಸಿದ್ದಾರೆ"
ಆಕೆಯ ಮನೆಯಲ್ಲಿ ಕುಳಿತುಕೊಂಡಿದ್ದಾಗ ಏಕಾಏಕಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು, ನಾವು ಸಿಸಿಬಿ ಪೊಲೀಸರು. ನೀವು ವ್ಯಭಿಚಾರದಲ್ಲಿ ಭಾಗಿಯಾಗಿದ್ದೀರಿ ಎಂದು ಹೆದರಿಸಿ ನನ್ನ ಬಟ್ಟೆ ಬಿಚ್ಚಿಸಿ, ಬೆತ್ತಲೆಗೊಳಿಸಿ ವಿಡಿಯೊ ಚಿತ್ರೀಕರಣ ಮಾಡಿಕೊಂಡರು. ಬಳಿಕ ಎರಡು ಲಕ್ಷ ರೂಪಾಯಿ ನೀಡಬೇಕು ಎಂದು ಬೆದರಿಕೆ ಹಾಕಿದರು. ಇಲ್ಲವಾದರೆ ಅಕ್ರಮ ಸಂಬಂಧ ಕುರಿತು ನನ್ನ ಪತ್ನಿಗೆ ಹೇಳುವುದಾಗಿ ಬೆದರಿಸಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.
ನನ್ನ ಮೈಮೇಲಿದ್ದ ಚಿನ್ನದ ಸರ, ಉಂಗುರ ಹಾಗೂ 55 ಸಾವಿರ ಹಣವನ್ನು ಕಿತ್ತುಕೊಂಡು ಹೋಗಿದ್ದಾರೆ. ಆರೋಪಿಗಳ ಜತೆ ನಯನಾ ಕೂಡಾ ಹೊರಗೆ ಹೋಗಿದ್ದಳು. ಈ ಬಗ್ಗೆ ಶಂಕೆಗೊಂಡು ನಯನಾಗೆ ಮೊಬೈಲ್ ಕರೆ ಮಾಡಿ ಪೊಲೀಸರಿಗೆ ದೂರು ನೀಡಲು ಬರುವಂತೆ ಹೇಳಿದೆ. ಆದರೆ, ಆಕೆ ಪೊಲೀಸರಿಗೆ ದೂರು ನೀಡಿದರೆ ಮಗುವಿನ ಜತೆ ನಿಮ್ಮ ಮನೆಗೆ ಬಂದು ನಮ್ಮಿಬ್ಬರಿಗೆ ಅಕ್ರಮ ಸಂಬಂಧವಿದೆ ಎಂದು ಪತ್ನಿಗೆ ಹೇಳುವುದಾಗಿ ಬೆದರಿಸಿದ್ದಳು ಎಂದು ದೂರಿನಲ್ಲಿ ವಿವರಣೆ ನೀಡಿದ್ದಾರೆ.
ಗುತ್ತಿಗೆದಾರ ರಂಗನಾಥ್ ಅವರನ್ನು ಮಹಿಳೆ ತನ್ನ ಮನೆಗೆ ಆಹ್ವಾನಿಸಿ ಮೂವರು ಆರೋಪಿಗಳ ಜತೆ ಸೇರಿಕೊಂಡು ಸಿಸಿಬಿ ಪೊಲೀಸರ ಸೋಗಿನಲ್ಲಿ ಅವರನ್ನು ಹೆದರಿಸಿ, ಬೆದರಿಸಿ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ನಾಲ್ವರ ಸಂಬಂಧ ಏನು ಎಂಬ ವಿವರ ತಿಳಿದು ಬಂದಿಲ್ಲ. ಮೂವರನ್ನು ಬಂಧಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಜಮೀನು ಖರೀದಿ ವಿವಾದ; ಮೋಸಕ್ಕೆ ಒಳಗಾದ ಮುಖ್ಯ ಶಿಕ್ಷಕ ಆತ್ಮಹತ್ಯೆ
ಜಮೀನು ಖರೀದಿ ಮಾಡುವುದಾಗಿ ಹೇಳಿ ಬರೆಯಿಸಿಕೊಂಡು ಸಂಬಂಧಿಯೊಬ್ಬರು ಹಣ ನೀಡದೆ ಮೋಸ ಮಾಡಿದ್ದರಿಂದ ಬೇಸರಗೊಂಡು ಮುಖ್ಯ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೊಸಕೋಟೆ ತಾಲೂಕಿನ ಜಡಗನಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಡೆತ್ ನೋಟ್ ನಲ್ಲಿ ತಮ್ಮ ಸಂಬಂಧಿಯೇ ಆಗಿರುವ ಸತೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೊಸಕೋಟೆಯ ಜಡಗನಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿದ್ದ ನರಸಿಂಹಮೂರ್ತಿ ಅವರು 2025ರ ಜನವರಿ 15ರಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಮಾಗಡಿ ರಸ್ತೆಯ ತುಂಗಾ ನಗರದಲ್ಲಿ ನರಸಿಂಹಮೂರ್ತಿ ಅವರು 25 ಗುಂಟೆ ಜಮೀನು ಹೊಂದಿದ್ದರು. ಆ ಜಮೀನನ್ನು 10 ಕೋಟಿ ನೀಡಿ ಖರೀದಿಸುವುದಾಗಿ ಒಪ್ಪಿಕೊಂಡಿದ್ದ ಸತೀಶ್ 10 ಲಕ್ಷ ರೂಪಾಯಿ ನೀಡಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಬಾಕಿ ಹಣವನ್ನು ನೀಡದೆ ಜಮೀನು ಲಪಾಟಿಸಿದ್ದರು.
ಹಣ ಕೇಳಲು ಹೋದಾಗ ಬೆದರಿಕೆ ಹಾಕಿದ್ದಾರೆ ಎಂದು ನರಸಿಂಹಮೂರ್ತಿ ಮರಣ ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯ ಶಿಕ್ಷಕ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೃತರ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆಯಲಾಗಿದೆ. ಜಮೀನು ವಿವಾದ ಕುರಿತು ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದೆ. ಡೆತ್ ನೋಟ್ ಕುರಿತು ಸತ್ಯಾಸತ್ಯವನ್ನು ಪರಿಶೀಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.