ಬೆಂಗಳೂರು: ಸಹಕಾರ ಮಹಾ ಮಂಡಲಕ್ಕೆ 19 ಕೋಟಿ ರೂ ವಂಚನೆ; ಮೂವರ ಬಂಧನ; ಡ್ರಗ್ಸ್ ಮಾರಾಟ ಆರೋಪದಲ್ಲಿ ವಿದ್ಯಾರ್ಥಿ ಅರೆಸ್ಟ್
ಬೆಂಗಳೂರಿನ ಸಹಕಾರ ಮಹಾಮಂಡಲದಲ್ಲಿ 19 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಆಶಾಲತಾ ಹಾಗೂ ಅವರ ಪತಿ ಎನ್ ಸೋಮಶೇಖರ್ ಬ್ಯಾಂಕಾಕ್‌ಗೆ ಪರಾರಿಯಾಗಿದ್ದಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳವು ಬೆಂಗಳೂರು ಮಹಾ ನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಮತ್ತು ಅಪೆಕ್ಸ್ ಬ್ಯಾಂಕ್ ಗಳಲ್ಲಿ ಇರಿಸಿದ್ದ ನಿಗದಿತ ಠೇವಣಿ ಖಾತೆಗಳಿಂದ 19.34 ಕೋಟಿ ರೂ. ಹಣವನ್ನು ಕೆಲವು ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ವರ್ಗಾಯಿಸಿ ವಂಚಿಸಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮಹಾಮಂಡಳದ ಅಧ್ಯಕ್ಷ ರಾಜು ವಿ. ಅಕ್ಟೋಬರ್‌ನಲ್ಲಿ ದೂರು ಸಲ್ಲಿಸಿದ್ದರು. ಇವರ ದೂರು ಆಧರಿಸಿ, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ, ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಶಾಲತಾ ಪಿ, ಅವರ ಪತಿ ಸೋಮಶೇಖರ್, ವಿಜಯ್ ಕಿರಣ್, ಜೆ. ಮಂಜುನಾಥ್, ಸುಜಯ್, ಬಿಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ಹಾಗೂ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಲೆಕ್ಕಪರಿಶೋಧಕರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.
ನಂದಿನಿ ಲೇಔಟ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ಮೊದಲ ಆರೋಪಿ ಆಶಾಲತಾ ಅವರ ಸಹೋದರನ ಪುತ್ರ ಜೆ.ಮಂಜುನಾಥ್, ಆತನ ಸ್ನೇಹಿತರಾದ ವಿಜಯ್‌ಕಿರಣ್ ಮತ್ತು ಸುಜಯ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಜೆ.ಮಂಜುನಾಥ್, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದರೆ, ವಿಜಯ್‌ಕಿರಣ್ ಸಾಫ್ಟ್‌ವೇರ್ ಎಂಜಿನಿಯರ್ ಎಂದು ತಿಳಿದು ಬಂದಿದೆ. ಆಶಾಲತಾ ಹಾಗೂ ಅವರ ಪತಿ ಎನ್.ಸೋಮಶೇಖರ್ ಬ್ಯಾಂಕಾಕ್‌ಗೆ ಪರಾರಿಯಾಗಿದ್ದಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದ್ದರೂ ಹಾಜರಾಗಿಲ್ಲ. ಹೀಗಾಗಿ, ಅವರ ಪತ್ತೆಗೆ ಇಂಟರ್‌ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ಸಿಐಡಿ ನಿರ್ಧರಿಸಿದೆ. ಪ್ರಥಮ ದರ್ಜೆ ಸಹಾಯಕಿ ಕಂ ಅಕೌಂಟೆಂಟ್ ಹುದ್ದೆಗೆ ನೇಮಕಗೊಂಡಿದ್ದ ಆಶಾಲತಾ 2017 ರಿಂದ 2023ರವರೆಗೂ ಮಹಾಮಂಡಳದ ಪ್ರಭಾರ ಸಿಇಒ ಆಗಿದ್ದರು. ಈ ಅವಧಿಯಲ್ಲಿ ಸಂಸ್ಥೆಯು ಬಿಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ ಶಾಖೆಗಳಲ್ಲಿ ನಿಗದಿತ ಠೇವಣಿಯಲ್ಲಿ ಇರಿಸಿದ್ದ ಮೊತ್ತವನ್ನು ತನ್ನ ಪತಿ ಮತ್ತು ಇತರರ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಜಂಟಿ ಖಾತೆಯಾಗಿದ್ದು ಅಧ್ಯಕ್ಷರ ಸಹಿ ಇರಲೇಬೇಕು. ಆದರೂ ಆಶಾಲತಾ ಅವರೊಬ್ಬರೇ ನಕಲಿ ಸಹಿ ಮಾಡಿ, ಪತಿ ಹಾಗೂ ಇತರೆ ಆರೋಪಿಗಳ ಖಾತೆಗೆ ಮಹಾಮಂಡಳದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು. ನಿಶ್ಚಿತ ಠೇವಣಿ ಇರಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಲೆಕ್ಕಪರಿಶೋಧಕರಿಗೂ ಸಲ್ಲಿಸಿದ್ದರು.
ಮಂಜುನಾಥ್, ವಿಜಯ್‌ಕಿರಣ್ ಮತ್ತು ಸುಜಯ್ ತಮ್ಮ ಖಾತೆಗೆ ಜಮೆಯಾಗಿದ್ದ ಹಣವನ್ನು ಡ್ರಾ ಮಾಡಿ ಆಶಾಲತಾ ಅವರಿಗೆ ಮರಳಿಸಿದ್ದರು. ಪ್ರತಿ ವ್ಯವಹಾರಕ್ಕೆ ಇವರಿಗೆ 15 ಸಾವಿರ ರೂ. ಕಮಿಷನ್ ನೀಡಲಾಗುತ್ತಿತ್ತು. ಆಗಸ್ಟ್ 9ರಂದು ಸಹಕಾರ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾ ಅದಿಕಾರಿಗಳ ಸಭೆ ನಡೆದಾಗ ಈ ವಂಚನೆ ಪ್ರಕರಣ ಬಯಲಿಗೆ ಬಂದಿತ್ತು.
ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿ ಬಂಧನ, 10 ಲಕ್ಷ ರೂ.ಮೌಲ್ಯದ ಡ್ರಗ್ಸ್ ಜಪ್ತಿ
ಕೇಂದ್ರ ಅಪರಾಧ ವಿಭಾಗ ಮತ್ತು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಆನಂತಪುರ ನಿವಾಸಿ ಅರುಣ್ ಎಂ. ಜಾಕೋಬ್ (27) ಎಂಬ ವಿದ್ಯಾರ್ಥಿಯನ್ನು ಬಂಧಿಸಿ, ರೂ.10 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ಸ್, ಎಂಡಿಎಂಎ ಮಾತ್ರೆಗಳು, ಹೈಡೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಅರುಣ್ ಸ್ನೇಹಿತ, ಡ್ರಗ್ಸ್ ಪೆಡ್ಲರ್ ಪ್ರತ್ಯೂಷ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಲಿಂಗಧೀರನಹಳ್ಳಿಯ ಡಿ ಗ್ರೂಪ್ ಲೇಔಟ್‌ನಲ್ಲಿ ವಾಸವಾಗಿರುವ ಅರುಣ್ ಹಾಗೂ ಪ್ರತ್ಯೂಷ್ ನಗರದ ಕಾಲೇಜೊಂದರಲ್ಲಿ ಬಿಬಿಎ ಸಹಪಾಠಿಗಳಾಗಿದ್ದರು. 2023ರಲ್ಲಿ ಎಂಬಿಎ ಕೋರ್ಸ್‌ಗೆ ಸೇರಿದ ಅರುಣ್‌ಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುವುದರಿಂದ ಹೆಚ್ಚು ಹಣ ಗಳಿಸಬಹುದು ಎಂದು ಪ್ರತ್ಯೂಷ್ ಗೆ ಆಮಿಷವೊಡ್ಡಿದ್ದ. ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಉದ್ಯಮಿಗಳಿಗೆ ಅರುಣ್ ಮೂಲಕ ಡ್ರಗ್ಸ್ ತಲುಪಿಸುತ್ತಿದ್ದ.
ಗ್ರಾಹಕರು ಡಿಜಿಟಲ್ ಆ್ಯಪ್ ಮೂಲಕ ಹಣ ಪಾವತಿ ಮಾಡುತ್ತಿದ್ದರು. ಅರುಣ್ ಮನೆ ಮೇಲೆ ದಾಳಿ ನಡೆಸಿದ ವೇಳೆ 52 ಗ್ರಾಂ ಎಂಡಿಎಂಎ, 98 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪ್ರತ್ಯೂಷ್ ವಾಟ್ಶಾಪ್ ನಲ್ಲಿ ಮೊಬೈಲ್ ನಂಬರ್ ಕಳುಹಿಸುತ್ತಿದ್ದ. ನಾನು ಅವರಿಗೆ ಡ್ರಗ್ಸ್ ತಲುಪಿಸುತ್ತಿದ್ದೆ. ಇದಕ್ಕೆ ನನಗೆ ಕಮಿಷನ್ ಸಿಗುತ್ತಿತ್ತು ಎಂದು ಅರುಣ್ ತಿಳಿಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
