ಬೆಂಗಳೂರು: 6 ತಿಂಗಳಲ್ಲಿ ಜಪ್ತಿ ಮಾಡಲಾದ 38 ಕೋಟಿ ರೂ ಮೌಲ್ಯದ ಡ್ರಗ್ಸ್ ನಾಶ; ವೃದ್ಧರನ್ನು ದೋಚುತ್ತಿದ್ದ ಆರೋಪಿಯ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: 6 ತಿಂಗಳಲ್ಲಿ ಜಪ್ತಿ ಮಾಡಲಾದ 38 ಕೋಟಿ ರೂ ಮೌಲ್ಯದ ಡ್ರಗ್ಸ್ ನಾಶ; ವೃದ್ಧರನ್ನು ದೋಚುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು: 6 ತಿಂಗಳಲ್ಲಿ ಜಪ್ತಿ ಮಾಡಲಾದ 38 ಕೋಟಿ ರೂ ಮೌಲ್ಯದ ಡ್ರಗ್ಸ್ ನಾಶ; ವೃದ್ಧರನ್ನು ದೋಚುತ್ತಿದ್ದ ಆರೋಪಿಯ ಬಂಧನ

Bengaluru Crime: ಬೆಂಗಳೂರು ನಗರದ ವಿವಿಧೆಡೆ 6 ತಿಂಗಳಲ್ಲಿ ಜಪ್ತಿ ಮಾಡಲಾದ 38.11 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ, ವೃದ್ಧರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.(ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ನಗರದ ವಿವಿಧೆಡೆ 6 ತಿಂಗಳಲ್ಲಿ ಜಪ್ತಿ ಮಾಡಲಾದ 38.11 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಕಳವು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಗರದ ವಿವಿಧೆಡೆ 6 ತಿಂಗಳಲ್ಲಿ ಜಪ್ತಿ ಮಾಡಲಾದ 38.11 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಕಳವು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Bengaluru Crime: ಬೆಂಗಳೂರಿನ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ವಶಪಡಿಸಿಕೊಂಡ ಸುಮಾರು 38.11 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ಬೆಂಗಳೂರು ನಗರ ಪೊಲೀಸರು ನಾಶಪಡಿಸಿದ್ದಾರೆ.

2024ರ ಜೂನ್ 27 ರಿಂದ 2025ರ ಜನವರಿ 10 ರವರೆಗೆ ನಗರದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಒಟ್ಟು 745.769 ಕೆ.ಜಿ. ತೂಕದ ವಿವಿಧ ಬಗೆಯ ಮಾದಕ ವಸ್ತುಗಳನ್ನು ದಾಬಸ್‌ಪೇಟೆಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್ ಡಿವಿಷನ್ ಆಫ್ ರಿ-ಸಸ್ಟೇನಬೆಲಿಟಿ ಲಿಮಿಟೆಡ್‌ ನಲ್ಲಿ ನಾಶಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಶಪಡಿಸಲಾದ ಮಾದಕ ವಸ್ತುಗಳ ವಿವರ ಹೀಗಿದೆ: 699.29 ಕೆ.ಜಿ ಗಾಂಜಾ; 1.970 ಕೆಜಿ ಹ್ಯಾಶಿಶ್ ಆಯಿಲ್; 702 ಗ್ರಾಂ ಚರಸ್; 163 ಗ್ರಾಂ ಕೊಕೇನ್; 19.557 ಕೆ.ಜಿ. ಎಕ್ಸಟಸಿ ಪುಡಿ; 287 ಎಕ್ಸ್‌ಟಸಿ ಮಾತ್ರೆಗಳು; 38 ಗ್ರಾಂ ಎಕ್ಸ್‌ ಟಸಿ ಯಾಬಾ; 12.450 ಕೆ.ಜಿ. ಎಂಎಸ್‌ಎಂ; 842 ಟಪೆಂಟಾಡೋಲ್ ಮಾತ್ರೆಗಳು; 5.100 ಕೆ.ಜಿ. ಪವರ್ ಮುನಕ್ಕಾವತಿ; 60 ಟೈಡಾಲ್ ಮಾತ್ರೆಗಳು; 260 ಬಾಟಲ್ ಎಸ್ಕಫ್ ಸಿರಪ್; 4.900 ಕೆ.ಜಿ ಸೋಡಿಯಂ ಹೈಡ್ರಾಕ್ಸೆಡ್.

ನ್ಯಾಯಾಲಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಮಾದಕ ವಿಲೇವಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಡ್ರಗ್ಸ್ ನಾಶಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವೃದ್ಧರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ವೃದ್ಧರನ್ನು ಮಾತ್ರ ಗುರಿಯಾಗಿಸಿಕೊಂಡು ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಹುಳಿಮಾವು ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದೊಡ್ಡಕಮ್ಮನಹಳ್ಳಿಯ ನಿವಾಸಿ ಸಹೀದಾ ಭಾನು ಬಂಧಿತ ಆರೋಪಿ ಮಹಿಳೆ. ಈಕೆಯಿಂದ ರೂ.9 ಲಕ್ಷ ಮೌಲ್ಯದ 136 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈಕೆಯ ವಿರುದ್ಧ ಕಾಮಾಕ್ಷಿ ಲೇಔಟ್‌ ಗೊಟ್ಟಿಗೆರೆಯ ನಿವಾಸಿಯೊಬ್ಬರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವೃದ್ದೆ ಸಣ್ಣ ಪ್ರಮಾಣದ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯ ಪಕ್ಕದಲ್ಲಿಯೇ ಅವರ ಮನೆಯಿತ್ತು. ಅಂಗಡಿಗೆ ಬರುತ್ತಿದ್ದ ಆರೋಪಿ ಮಹಿಳೆ ವೃದ್ಧೆಯನ್ನು ಪರಿಚಯಿಸಿಕೊಂಡಿದ್ದಳು. ವೃದ್ಧೆಗೆ ನೆರವಾಗುವ ನೆಪದಲ್ಲಿ ಅಂಗಡಿಗೆ ತರಕಾರಿ ಹಾಗೂ ಇತರೆ ಸಾಮಾನುಗಳನ್ನು ತಂದುಕೊಡುತ್ತಿದ್ದಳು. ಅಂಗಡಿಗೆ ಬಂದಾಗ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಮನೆಯ ಬೀಗದ ಕೀ ತೆಗೆದುಕೊಂಡು ಹೋಗಿ ವಾಪಸ್‌ ತಂದು ಕೊಡುತ್ತಿದ್ದಳು. ಹಾಗೆ ಬೀಗ ತೆಗೆದುಕೊಂಡು ಹೋದ ಸಮಯದಲ್ಲಿ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕಳವು ಮಾಡಿದ್ದ ಚಿನ್ನಾಭರಣದದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಉಳಿದ ಚಿನ್ನವನ್ನು ಮಾವಳ್ಳಿಯ ಚಿನ್ನಾಭರಣ ಅಂಗಡಿಯಲ್ಲಿ ಅಡ ಇಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಮಾಡುತ್ತಿದ್ದ ಬಾಲಕನ ಬಂಧನ

ಮನೆಗಳಿಗೆ ಪ್ರವೇಶಿಸಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಾಲಕನಿಂದ 2.50 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬಾಗಲಕುಂಟೆ ಪೊಲೀಸ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕಾಳಹಸ್ತಿನಗರದಲ್ಲಿ ವಾಸವಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ಡಿ.20ರಂದು 20 ಸಾವಿರ ರೂಪಾಯಿ ನಗದು ಹಾಗೂ 40 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ತನಿಖೆ ನಡೆಸಿ ಬಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೆಸರಘಟ್ಟ ರಸ್ತೆಯ ಶೆಟ್ಟಿಹಳ್ಳಿ ರೈಲ್ವೆಗೇಟ್ ಬಳಿ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮನೆಗಳನ್ನು ಪ್ರವೇಶಿಸಿ ಚಿನ್ನಾಭರಣ ಕಳ್ಳತನ ಮಾಡಿದ್ದೇನೆ ಎಂದು ವಿಚಾರಣೆ ಸಂದರ್ಭದಲ್ಲಿ ಬಾಲಕ ತಪ್ರೊಪ್ಪಿಕೊಂಡಿದ್ದಾನೆ. ಕಳ್ಳತನ ಮಾಡಿರುವ ಚಿನ್ನಾಭರಣವನ್ನು ಲಗ್ಗೆರೆಯ ಅಂಗಡಿಯಲ್ಲಿ ಅಡ ಇಟ್ಟಿದ್ದ. ಆ ಅಂಗಡಿಯಿಂದ 40 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಮಡಿವಾಳದ ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner