ಮಾರಾಟಕ್ಕೆ ನೀಡಿದ್ದ 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ನೌಕರ ಪರಾರಿ; ಬೆಂಗಳೂರು ಅಪರಾಧ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಾರಾಟಕ್ಕೆ ನೀಡಿದ್ದ 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ನೌಕರ ಪರಾರಿ; ಬೆಂಗಳೂರು ಅಪರಾಧ ಸುದ್ದಿ

ಮಾರಾಟಕ್ಕೆ ನೀಡಿದ್ದ 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ನೌಕರ ಪರಾರಿ; ಬೆಂಗಳೂರು ಅಪರಾಧ ಸುದ್ದಿ

ಮಾರಾಟ ಮಾಡಲು ನೀಡಿದ್ದ 8 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಮಾರಾಟ ಪ್ರತಿನಿಧಿ ಪರಾರಿಯಾಗಿರುವ ಪ್ರಕರಣ ವರದಿಯಾಗಿದೆ. ಇದೇ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಾಮರಾಜಪೇಟೆಯ ಟಿಪ್ಪುನಗರ ಮಸೀದಿ ಸಮಿತಿ ಅಧ್ಯಕ್ಷ ಹಾಗೂ 40 ಮಂದಿ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಅಪರಾಧ ಸುದ್ದಿಗಳು ಇಲ್ಲಿವೆ. (ವರದಿ: ಎಚ್.ಮಾರುತಿ, ಬೆಂಗಳೂರು)

ಮಾರಾಟಕ್ಕೆ ನೀಡಿದ್ದ 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ನೌಕರ ಪರಾರಿ (ಸಾಂದರ್ಭಿಕ ಚಿತ್ರ)
ಮಾರಾಟಕ್ಕೆ ನೀಡಿದ್ದ 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ನೌಕರ ಪರಾರಿ (ಸಾಂದರ್ಭಿಕ ಚಿತ್ರ) (PTI)

ಬೆಂಗಳೂರು: ಕೆಲಸ ನಿರ್ವಹಿಸುತ್ತಿದ್ದ ಅಂಗಡಿ ಹಾಗೂ ಪರಿಚಿತ ಚಿನ್ನಾಭರಣ ಮಳಿಗೆಗಳ ಮಾಲೀಕರು ಮಾರಾಟ ಮಾಡಲು ನೀಡಿದ್ದ 8 ಕೋಟಿ ರೂಪಾಯಿ ಮೌಲ್ಯದ 9 ಕೆಜಿ 462 ಗ್ರಾಂ ಚಿನ್ನಾಭರಣದೊಂದಿಗೆ ಮಾರಾಟ ಪ್ರತಿನಿಧಿಯೊಬ್ಬ ಪರಾರಿಯಾಗಿರುವ ಪ್ರಕರಣ ವರದಿಯಾಗಿದೆ. ಈ ಸಂಬಂಧ ವಿಕ್ರಮ್ ಜ್ಯುವೆಲರ್ಸ್ ಮಾಲೀಕ ವಿಕ್ರಮ್ ಕಾರ್ಯ ಅವರು ದೂರು ನೀಡಿದ್ದಾರೆ. ದೂರಿನ ಮೇರೆಗೆ ಹಲಸೂರು ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಿಕ್ರಮ್ ಅವರ ಅಂಗಡಿಯಲ್ಲಿ ಆರೋಪಿ, ಚೆನ್ನೈನ ನರೇಶ್ ಶರ್ಮಾ ಎಂಬಾತ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದ. ಈತನ ಮೂಲಕ ವಿಕ್ರಮ್ ಅವರು ಹಲವು ಗ್ರಾಹಕರಿಗೆ ಮತ್ತು ವಿವಿಧ ಚಿನ್ನದ ಅಂಗಡಿಗಳಿಗೆ ಚಿನ್ನಾಭರಣ ಮಾರಾಟ ಮಾಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಕ್ರಮ್ ಅವರು ವಾರದ ಹಿಂದೆ ಬೇರೆ ಬೇರೆ ಅಂಗಡಿಗಳಿಂದ ಸುಮಾರು 7 ಕೆ.ಜಿ. 732 ಗ್ರಾಂ ತೂಕದ ಚಿನ್ನಾಭರಣ ಖರೀದಿಸಿ ಮಾರಾಟ ಮಾಡಿಕೊಂಡು ಬರಲು ಜನವರಿ 2ರಂದು ನರೇಶ್ ಶರ್ಮಾಗೆ ಸೂಚಿಸಿದ್ದರು. ಅದರಂತೆ ನರೇಶ್ ಶರ್ಮಾ ಚಿನ್ನಾಭರಣ ತೆಗೆದುಕೊಂಡು ಕೊಯಮತ್ತೂರಿಗೆ ಹೋಗಿ ಕೆಲವು ಆಭರಣ ಮಾರಾಟ ಮಾಡಿ ಹಿಂತಿರುಗಿದ್ದ. ಮತ್ತೆ ಜನವರಿ 8ರಂದು ಉಳಿದ

ಚಿನ್ನಾಭರಣ ಮಾರಾಟ ಮಾಡಲು ನೆರೆ ರಾಜ್ಯಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವ ಸಂಪರ್ಕಕ್ಕೆ ಸಿಕ್ಕಿಲ್ಲ. ಆತನ ಮೊಬೈಲ್ ಸ್ವಿಚ್‌ ಆಫ್ ಆಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಆರೋಪಿಗಳ ಪತ್ತೆಗೆ ತಂಡ ರಚನೆ

ನಂತರ ವಿಕ್ರಮ್ ಅವರು ನರೇಶ್ ಕುರಿತು ಪರಿಚಿತರ ಅಂಗಡಿಗಳಲ್ಲಿ ವಿಚಾರಿಸಿದ್ದಾರೆ. ರಬಿ ಶಂಕರ್ ಪಾಲ್ ಅವರ ಪಾಲ್ ಗೋಲ್ಡ್ ಶಾಪ್‌ನಿಂದ 676 ಗ್ರಾಂ ಚಿನ್ನ ಹಾಗೂ ಜನವರಿ 5 ರಂದು 1.53 ಕೆಜಿ ಚಿನ್ನವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ. ಹೀಗೆ ಆರೋಪಿಯು ಒಟ್ಟು 8 ಕೋಟಿ ರೂಪಾಯಿ ಮೌಲ್ಯದ 9 ಕೆಜಿ 462 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ ಎಂದು ವಿಕ್ರಂ ದೂರು ನೀಡಿದ್ದಾರೆ.

ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಆರೋಪಿಯ ಸುಳಿವು ಕುರಿತು ಮಾಹಿತಿ ಲಭ್ಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗದಲ್ಲಿ ಅಡಗಿಕೊಂಡಿರುವ ಬಗ್ಗೆ ತಿಳಿದು ಬಂದಿದೆ. ಅಲ್ಲಿಗೂ ಒಂದು ತಂಡವನ್ನು ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಟಿಪ್ಪು ನಗರ ಮಸೀದಿ ಸಮಿತಿ ಅಧ್ಯಕ್ಷರ ವಿರುದ್ಧ ಎಫ್‌ಐಆರ್

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಚಾಮರಾಜಪೇಟೆಯ ಟಿಪ್ಪುನಗರ ಮಸೀದಿ ಸಮಿತಿ ಅಧ್ಯಕ್ಷ ಮೆಹಬೂಬ್ ಖಾನ್ ಮತ್ತಿತರ 40 ಮಂದಿ ವಿರುದ್ಧ ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಚಾಮರಾಜಪೇಟೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ಅನಿಲ್ ಕುಮಾರ್‌ ಅವರು ನೀಡಿದ ದೂರಿನ ಆಧಾರದಲ್ಲಿ ಟಿಪ್ಪು ನಗರ ಮಸೀದಿ ಸಮಿತಿ ಅಧ್ಯಕ್ಷ ಮೆಹಬೂಬ್‌ ಖಾನ್ ಸೇರಿದಂತೆ 40 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಜನವರಿ 14ರಂದು ಪ್ರಕರಣವೊಂದರ ತನಿಖೆಯ ಅಂಗವಾಗಿ ದೂರದಾರರಾದ ನಯಾಮತ್ ಪಾಷಾ ಮತ್ತು ಸಿಬ್ಬಂದಿ ಜತೆ ಕೃತ್ಯ ನಡೆದ ಟಿಪ್ಪು ನಗರದ ಖುದಾದತ್ ಮಸೀದಿ ಬಳಿ ಹೋಗಿ ಮಹಜರು ನಡೆಸಿ ಮರಳಿ ಬೇರೆ ಕರ್ತವ್ಯಕ್ಕೆ ತೆರಳಿದ್ದೆ. ಆ ಸಂದರ್ಭದಲ್ಲಿ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಶರಣಬಸು ಪೂಜಾರಿ ಅವರು ಕರೆ ಮಾಡಿ, ಟಿಪ್ಪು ನಗರದ ಮಹಿಳೆಯರು ಸೇರಿ ಸುಮಾರು 40 ಮಂದಿ ಠಾಣೆಗೆ ಬಂದು, ನಯಾಮತ್ ಅವರನ್ನು ಏಕೆ ಬಂಧಿಸಿಲ್ಲ? ನೀವೇ

ಬಿಟ್ಟು ಕಳುಹಿಸಿದ್ದೀರಾ ಎಂದು ಗಲಾಟೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ನಾನು ಠಾಣೆಗೆ ಮರಳಿದಾಗ ನನ್ನನ್ನೂ ಜೋರಾಗಿ ಪ್ರಶ್ನಿಸಿದರು. ಸಮಜಾಯಿಷಿ ನೀಡಿದರೂ ಕೇಳದೆ, ನನ್ನನ್ನು ಮತ್ತು ಸಿಬ್ಬಂದಿಯನ್ನು ತಳ್ಳಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಸಬ್ಇನ್‌ಸ್ಪೆಕ್ಟರ್‌ ಅನಿಲ್ ಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

ವರದಿ: ಎಚ್.ಮಾರುತಿ, ಬೆಂಗಳೂರು

Whats_app_banner