ಬೆಂಗಳೂರು ಕ್ರೈಮ್: ಅತ್ಯಾಚಾರ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ; ಡಿಕೆ ಸುರೇಶ್ ನಕಲಿ ಸಹೋದರಿ ವಿರುದ್ಧ 3ನೇ ಎಫ್‌ಐಆರ್
ಬೆಂಗಳೂರು ಅಪರಾಧ ಸುದ್ದಿ: ಸಹಾಯ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೇ ವೇಳೆ ಡಿಕೆ ಸುರೇಶ್ ನಕಲಿ ಸಹೋದರಿ ಎಂದು ಬಿಂಬಿಸಿ ವೈದ್ಯೆಯೊಬ್ಬರಿಗೆ 2.52 ಕೋಟಿ ರೂಪಾಯಿ ವಂಚಿಸಿದ್ದ ಐಶ್ವರ್ಯಾಗೌಡ ವಿರುದ್ಧ 3ನೇ ಎಫ್ಐಆರ್ ದಾಖಲಾಗಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ಬಿಜೆಪಿ ಮುಖಂಡನೊಬ್ಬನ ವಿರುದ್ಧ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಜೆಪಿ ಮುಖಂಡ ಜಿಮ್ ಸೋಮ ಅಲಿಯಾಸ್ ಸೋಮಶೇಖರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮದುವೆಗೆ ಸಾಲ ಕೊಡುವುದಾಗಿ ನಂಬಿಸಿ ಲ್ಯಾಂಗ್ ಫೋರ್ಡ್ ರಸ್ತೆಯ ಫ್ಲ್ಯಾಟ್‌ಗೆ ಕರೆದೊಯ್ದು ಮದ್ಯ ಕುಡಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ 26 ವರ್ಷದ ಯುವತಿ ದೂರು ನೀಡಿದ್ದರು.
ಸಂತ್ರಸ್ತೆ ಯುವತಿಗೆ ಮತ್ತೊಬ್ಬ ಸ್ನೇಹಿತೆ ಮೂಲಕ ಸೋಮಶೇಖರ್ ಪರಿಚಯವಾಗಿತ್ತು. ಕಳೆದ ವರ್ಷ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಈ ಸಮಯದಲ್ಲಿ ಯುವತಿ ಮದುವೆಗಾಗಿ ಸೋಮಶೇಖರ್ ಬಳಿ ಸುಮಾರು 6 ಲಕ್ಷ ರೂಪಾಯಿ ಸಾಲವಾಗಿ ಕೇಳಿದ್ದರು. ಆಗ ಜಿಮ್ ಸೋಮ ಯುವತಿಯನ್ನು ಅಪಾರ್ಟ್‌ಮೆಂಟ್‌ಗೆ ಕರೆಯಿಸಿಕೊಂಡಿದ್ದ. ಈ ಪ್ರಕರಣ ನಡೆದು ಮೂರು ತಿಂಗಳ ಬಳಿಕ ಸಂತ್ರಸ್ತೆ ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಮತ್ತು ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಿಮ್ ಸೋಮ, ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಪರಾಭವಗೊಂಡಿದ್ದ. ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕೆ ಸುರೇಶ್ ನಕಲಿ ಸಹೋದರಿ ಐಶ್ವರ್ಯಾಗೌಡ ವಿರುದ್ಧ 3ನೇ ಎಫ್‌ಐಆರ್
ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ವಂಚನೆ ನಡೆಸಿದ ಆರೋಪದಡಿಯಲ್ಲಿ ಐಶ್ವರ್ಯಾಗೌಡ ವಿರುದ್ಧ ಮೂರನೇ ಎಫ್‌ಐಆರ್ ದಾಖಲಾಗಿದೆ. ಈಕೆ ಖ್ಯಾತ ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್ ಅವರಿಂದ 2.52 ಕೋಟಿ ರೂ ಹಣ ಹಾಗೂ 2.350 ಕೆಜಿ ಚಿನ್ನಾಭರಣ ಪಡೆದುಕೊಂಡು ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವೈದ್ಯರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಚಂದ್ರಾ ಲೇಔಟ್ ಮತ್ತು ಆರ್‌ಆರ್ ನಗರ ಪೊಲೀಸ್ ಠಾಣೆಗಳಲ್ಲಿ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.
ವೈದ್ಯೆ ಮಂಜುಳಾ ಪಾಟೀಲ್ ಅವರ ಕ್ಲಿನಿಕ್‌ಗೆ ಆಗಮಿಸುತ್ತಿದ್ದ ಐಶ್ವರ್ಯಾ ಗೌಡ, ತಾನು ಮಾಜಿ ಸಂಸದ ಡಿಕೆ ಸುರೇಶ್ ಅವರ ಸಹೋದರಿ ಎಂದು ಪರಿಚಯಿಸಿಕೊಂಡಿದ್ದಳು. ಜೊತೆಗೆ ತಾನು ಚಿನ್ನ, ಕ್ಯಾಸಿನೊ, ಹಾಗೂ ಇತರ ದೊಡ್ಡ ದೊಡ್ಡ ವ್ಯವಹಾರಗಳನ್ನು ನಡೆಸುತ್ತಿರುವುದಾಗಿ ಹೇಳಿಕೊಂಡು ನಂಬಿಸಿದ್ದಳು. ಐಶ್ವರ್ಯಾ ಗೌಡ ಹೂಡಿಕೆ ಮಾಡುವುದಾಗಿ ಡಾ. ಮಂಜುಳಾ ಅವರಿಂದ 2022ರಿಂದ ಹಂತ ಹಂತವಾಗಿ ಒಟ್ಟು ರೂ. 2.52 ಕೋಟಿ ಹಣ ಹಾಗೂ 2.350 ಕೆಜಿ ಚಿನ್ನಾಭರಣ ಪಡೆದುಕೊಂಡಿದ್ದಾಳೆ.
ಐಶ್ವರ್ಯಾ ಗೌಡ ವಿರುದ್ಧ ಚಂದ್ರಾ ಲೇಔಟ್ ಮತ್ತು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾದ ನಂತರ ಡಾ.ಮಂಜುಳಾ ಅವರಿಗೆ ತಾನು ಮೋಸ ಹೋಗಿರುವುದು ಖಚಿತವಾಗಿದೆ. ತಾನು ನೀಡಿದ್ದ ಹಣ ಮತ್ತು ಚಿನ್ನವನ್ನು ಮರಳಿಸುವಂತೆ ಡಾ.ಮಂಜುಳಾ ಒತ್ತಾಯಿಸಿದಾಗ ಐಶ್ವರ್ಯಾ ಬೆದರಿಕೆ ಹಾಕಿದ್ದಾಳೆ. ಚಿನ್ನ ಮತ್ತು ಹಣವನ್ನು ಮರಳಿಸಲು ಸಾಧ್ಯವಿಲ್ಲ. ಒಂದು ವೇಳೆ ತನ್ನ ವಿರುದ್ಧ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾಳೆ. ನಂತರ ವೈದ್ಯೆಯು ಐಶ್ವರ್ಯಾ ಗೌಡ ಮನೆಗೆ ಹೋಗಿದ್ದಾರೆ. ಅಲ್ಲಿಯೂ ತನ್ನ ವಾಹನ ಚಾಲಕರಾದ ಧನಂಜಯ ಮತ್ತು ಅಶ್ವಥ್ ಅವರ ಮೂಲಕವೂ ಬೆದರಿಕೆ ಹಾಕಿಸಿದ್ದಾಳೆ. ಅಂತಿಮವಾಗಿ ಡಾ. ಮಂಜುಳಾ ಪಾಟೀಲ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿಯೂ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ ಹಾಗು ಇಬ್ಬರು ಚಾಲಕರಾದ ಅಶ್ವಥ್ ಗೌಡ ಹಾಗೂ ಧನಂಜಯನ ವಿರುದ್ಧ ಎಫ್‌ಐಆಆರ್ ದಾಖಲಾಗಿದೆ.
ವರದಿ: ಎಚ್. ಮಾರುತಿ, ಬೆಂಗಳೂರು