ದುಪ್ಪಟ್ಟು ಲಾಭದ ಆಸೆ ಹುಟ್ಟಿಸಿ 25 ಕೋಟಿ ರೂ ವಂಚನೆ ಆರೋಪ; ರಾಹುಲ್ ತೋನ್ಸೆ ವಿರುದ್ಧ ಎಫ್‌ಐಆರ್, ಯಾರು ಈ ವ್ಯಕ್ತಿ?
ಕನ್ನಡ ಸುದ್ದಿ  /  ಕರ್ನಾಟಕ  /  ದುಪ್ಪಟ್ಟು ಲಾಭದ ಆಸೆ ಹುಟ್ಟಿಸಿ 25 ಕೋಟಿ ರೂ ವಂಚನೆ ಆರೋಪ; ರಾಹುಲ್ ತೋನ್ಸೆ ವಿರುದ್ಧ ಎಫ್‌ಐಆರ್, ಯಾರು ಈ ವ್ಯಕ್ತಿ?

ದುಪ್ಪಟ್ಟು ಲಾಭದ ಆಸೆ ಹುಟ್ಟಿಸಿ 25 ಕೋಟಿ ರೂ ವಂಚನೆ ಆರೋಪ; ರಾಹುಲ್ ತೋನ್ಸೆ ವಿರುದ್ಧ ಎಫ್‌ಐಆರ್, ಯಾರು ಈ ವ್ಯಕ್ತಿ?

ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಪ್ರಕರಣದ ಆರೋಪಿ ರಾಹುಲ್ ತೋನ್ಸೆ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಬರೋಬ್ಬರಿ 25 ಕೋಟಿ ರೂ ವಂಚನೆ ಮಾಡಿದ ಆರೋಪದ ಮೇಲೆ ತೋನ್ಸೆ ಹಾಗೂ ಆತನ ಕುಟುಂಬದ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)

ದುಪ್ಪಟ್ಟು ಲಾಭದ ಆಸೆ ಹುಟ್ಟಿಸಿ 25 ಕೋಟಿ ರೂ ವಂಚನೆ ಆರೋಪ; ರಾಹುಲ್ ತೋನ್ಸೆ ವಿರುದ್ಧ FIR
ದುಪ್ಪಟ್ಟು ಲಾಭದ ಆಸೆ ಹುಟ್ಟಿಸಿ 25 ಕೋಟಿ ರೂ ವಂಚನೆ ಆರೋಪ; ರಾಹುಲ್ ತೋನ್ಸೆ ವಿರುದ್ಧ FIR

ಬೆಂಗಳೂರು: 2020ರ ಸೆಪ್ಟಂಬರ್‌‌ನಲ್ಲಿ ಕನ್ನಡ ಚಿತ್ರರಂಗದ ಸ್ಯಾಂಡಲ್‌ವುಡ್ ಡ್ರಗ್ ಕೇಸ್ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದಲ್ಲಿ ಉದ್ಯಮಿ ರಾಹುಲ್ ತೋನ್ಸೆ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ನಂತರ ಈ ಪ್ರಕರಣ ಸಾರ್ವಜನಿಕರ ನೆನಪಿನಿಂದ ಕಣ್ಮರೆಯಾಗುವುದರ ಜತೆಗೆ ಆರೋಪಿಗಳೂ ಶಿಕ್ಷೆಯಿಂದ ಪಾರಾಗಿದ್ದರು. ಇದೇ ಪ್ರಕರಣದ ಕಿಂಗ್‌ಪಿನ್‌ ರಾಹುಲ್ ತೋನ್ಸೆ ಇದೀಗ ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಬರೋಬ್ಬರಿ 25 ಕೋಟಿ ರೂ ವಂಚನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ತೋನ್ಸೆ ಮತ್ತು ಅವರ ಕುಟುಂಬದ ಐವರ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕ್ಯಾಸಿನೋದಲ್ಲಿ ಹೂಡಿಕೆ ಮಾಡಿದರೆ ಅತಿಯಾದ ಲಾಭ ಬರಲಿದೆ ಎಂಬ ಆಸೆ ತೋರಿಸಿ ಬಸವೇಶ್ವರ ನಗರದ ನಿವಾಸಿ, ಉದ್ಯಮಿ ವಿವೇಕ್ ಹೆಗ್ಡೆ ಮತ್ತು ಅವರ ಸ್ನೇಹಿತರಿಗೆ 25.5 ಕೋಟಿ ರೂ. ವಂಚನೆ ಮಾಡಿದ್ದಾನೆ. ರಾಹುಲ್ ತೋನ್ಸೆ, ಆತನ ತಂದೆ ರಾಮಕೃಷ್ಣ ರಾವ್, ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈಗಾಗಲೇ ರಾಮಕೃಷ್ಣ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿವೇಕ್‌ ತೋನ್ಸೆ ಹೂಡಿಕೆ‌ ನೆಪದಲ್ಲಿ ತನಗೆ ವಂಚನೆ ಮಾಡಿದ್ದಾನೆ ಎಂದು ನಟಿ ಸಂಜನಾ ಗಲ್ರಾನಿ ಈ ಹಿಂದೆ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಕ್ಯಾಸಿನೋದಲ್ಲಿ ಹೂಡಿಕೆ‌ ಮಾಡುವುದಾಗಿ ನಂಬಿಸಿ ವಿವೇಕ್ ಹೆಗ್ಡೆ ಅವರಿಗೆ ವಂಚಿಸಿದ್ದಾನೆ.

2023ರಲ್ಲಿ ಸ್ನೇಹಿತರ ಮೂಲಕ‌ ವಿವೇಕ್‌ ಹೆಗ್ಡೆ ಅವರ ಪರಿಚಯವಾಗಿತ್ತು. ವಿವೇಕ್‌ ಹೆಗ್ಡೆ ಅವರ ಕಚೇರಿಯಲ್ಲಿ ಸಾಲ ನೀಡುವ ಬಗ್ಗೆ ಹಲವಾರು ಬಾರಿ ಚರ್ಚೆಗಳೂ ನಡೆದಿದ್ದವು. ಶ್ರೀಲಂಕಾ, ದುಬೈನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ತಮ್ಮ ಕುಟುಂಬದ ಇತರ ಸದಸ್ಯರನ್ನು ಕ್ಯಾಸಿನೊ ನಡೆಸುತ್ತಿದ್ದಾರೆ ಎಂದು ನಂಬಿಸಿ ಅವರಲ್ಲಿ ಮೊಬೈಲ್ ಮೂಲಕ ಮಾತನಾಡಿಸಿದ್ದ. ಸಾಲದ ರೂಪದಲ್ಲಿ ನೀಡುವ ಹಣಕ್ಕೆ ಶೇ.4 ರಷ್ಟು ಬಡ್ಡಿ ನೀಡುವುದಾಗಿ ತೋನ್ಸೆ ನಂಬಿಸಿದ್ದ.

ಶ್ರೀಲಂಕಾ ಪ್ರವಾಸದ ವೇಳೆ ವಂಚನೆ

ತನ್ನ ಮಗಳು ಮತ್ತು ಅಳಿಯ ಶ್ರೀಲಂಕಾದ ಕ್ಯಾಸಿನೋದಲ್ಲಿ ಟೇಬಲ್‌ ಹೊಂದಿದ್ದಾರೆ. ರಾಹುಲ್ ತೋನ್ಸೆ ಆ ವ್ಯವಹಾರ ನಿರ್ವಹಿಸುತ್ತಿದ್ದಾರೆ ಎಂದು ರಾಮಕೃಷ್ಣರಾವ್ ನಂಬಿಸಿದ್ದರು. ಹಲವು ಬಾರಿ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಇವರ ಬಣ್ಣದ ಮಾತುಗಳನ್ನು ನಂಬಿದ ವಿವೇಕ್‌ ಹೆಗ್ಡೆ ಅವರು ಆರಂಭದಲ್ಲಿ ರಾಹುಲ್ ಬ್ಯಾಂಕ್ ಖಾತೆಗೆ 30 ಲಕ್ಷ ರೂ. ಜಮೆ ಮಾಡಿದ್ದಾರೆ. ನಂತರ ಅವರು ಆರೋಪಿಗಳ ಜತೆ ಶ್ರೀಲಂಕಾ ದೇಶಕ್ಕೂ ಹೋಗಿ ಬಂದಿದ್ದಾರೆ. ಆರೋಪಿಗಳು ಅಲ್ಲಿ ಅವರಿಗೆ ಟಿಕೆಟ್, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಬೆಲ್ಲಾ, ಜಿಯೋ ಕ್ಯಾಸಿನೋಗೆ ಕರೆದೊಯ್ದು ನಮ್ಮದೆ ಮಾಲೀಕತ್ವ ಎಂದು ನಂಬಿಸಿದ್ದಾರೆ.

ಹೀಗೆ ವಿವೇಕ್‌ ಹೆಗ್ಡೆ ಅವರಿಂದ 3.5 ಕೋಟಿ ರೂ. ಹಣ ಹೂಡಿಕೆ ಮಾಡಿಸಿ ವಂಚಿಸಿದ್ದಾರೆ. ಇಷ್ಟೇ ಅಲ್ಲದೆ ವಿವೇಕ್‌ ಹೆಗ್ಡೆ ಅವರು ತಮ್ಮ ಸ್ನೇಹಿತರಿಂದ 22 ಕೋಟಿ ರೂ. ಹೂಡಿಕೆ ಮಾಡಿಸಿದ್ದಾರೆ. ನಂತರದ ದಿನಗಳಲ್ಲಿ ಆರೋಪಿಗಳು ಅಂತರ ಕಾಯ್ದುಕೊಂಡಿದ್ದಾರೆ. ಸಂಶಯಗೊಂಡ ಹೆಗ್ಡೆ ಮತ್ತು ಅವರ ಸ್ನೇಹಿತರು ತಾವು ನೀಡಿದ್ದ ಹಣವನ್ನು ಮರಳಿಸುವಂತೆ ಒತ್ತಡ ಹೇರಿದಾಗ ಆರೋಪಿಗಳೂ ಮೊಬೈಲ್ ನಂಬರ್ ಬ್ಲಾಕ್ ಮಾಡಿಕೊಂಡಿದ್ದಾರೆ.

ಇದೀಗ ಉದ್ಯಮಿ ವಿವೇಕ್ ಹೆಗ್ಡೆ ಅವರು ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಸಿಕೊಂಡು ಪ್ರಮುಖ ಆರೋಪಿ ರಾಮಕೃಷ್ಣರಾವ್ ಬಂಧಿಸಿದ್ದು, 10 ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Whats_app_banner