ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ; ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ; ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್‌

ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ; ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್‌

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಈ ವೇಳೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಹೈಕೋರ್ಟ್‌ ಖಡಕ್ ಎಚ್ಚರಿಕೆ ನೀಡಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)

ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ; ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ಗರಂ (File)
ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ; ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ಗರಂ (File)

ಬೆಂಗಳೂರು: ಪ್ರತಿವಾದಿಗಳಾದ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳು ತುಂಬಾ ಪ್ರಭಾವಿಗಳು ಮತ್ತು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಭಾವಿಸಿಕೊಂಡು ನೀವು ಐದು ವರ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಎರಡು ವಾರ ಸಮಯ ಕೊಡುತ್ತೇನೆ. ಅಷ್ಟರೊಳಗೆ ನಿಮ್ಮ ಕೈಲಿ ಆಗುವುದಾರೆ ತಿಳಿಸಿ, ಇಲ್ಲವೇ ಅಸಮರ್ಥರು ಎಂದಾದರೂ ಹೇಳಿ. ಆಗ ನಿಮ್ಮನ್ನು ಎಲ್ಲಿಗೆ ಕಳಿಸಬೇಕೊ ಅಲ್ಲಿಗೇ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿ ಇದ್ದು ಬಂದರೆ ನೀವೆಲ್ಲರೂ ಸರಿಹೋಗುತ್ತೀರಿ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಹೈಕೋರ್ಟ್‌ ಕಠಿಣ ಮಾತುಗಳಲ್ಲಿ ಎಚ್ಚರಿಕೆ ನೀಡಿದೆ.

ಮಾಜಿ ಮುಖ್ಯಮಂತ್ರಿಯೂ ಆಗಿರುವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಬುಧವಾರ (ಜ.29) ನಡೆಯಿತು. ಈ ಸಂದರ್ಭದಲ್ಲಿ ಖುದ್ದು ಹಾಜರಿದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಹೈಕೋರ್ಟ್‌ ಈ ರೀತಿ ಎಚ್ಚರಿಕೆ ನೀಡಿತು.

ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿರಬೇಕು ಎಂದು ನ್ಯಾಯಪೀಠ ಆದೇಶಿಸಿತ್ತು. ಅದರ ಪ್ರಕಾರ ಬುಧವಾರ ರಾಜೇಂದ್ರ ಕುಮಾರ ಕಠಾರಿಯಾ ಖುದ್ದು ಹಾಜರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಲು ಮುಂದಾದಾಗ ನ್ಯಾಯಮೂರ್ತಿಗಳು ಗರಂ ಆದರು.

ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಲು ಅವಕಾಶವಿಲ್ಲ

ನ್ಯಾಯಮೂರ್ತಿ ಸೋಮಶೇಖರ್‌, ಕೆ.ವಾಸುದೇವನ್‌ ಮತ್ತು ಟಿ.ಆರ್‌.ಧನಂಜಯ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ ಆಡಳಿತಶಾಹಿಗೆ ಕಿಂಚಿತ್ತೂ ದಯೆ ತೋರಬಾರದು ಎಂದು ಉಲ್ಲೇಖವಿದೆ. ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆಯ ದೋಷಾರೋಪ ನಿಗದಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತೇನೆ. ಎಚ್ಚರಿಕೆ ಇರಲಿ. ಕುಂಟು ನೆಪ ಹೇಳಿ ನೀವು ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ವ್ಯವಸ್ಥೆ ನೋಡಿ ಜನ ನಗುತ್ತಿದ್ದಾರೆ. ನೀವೆಲ್ಲಾ ಕೋರ್ಟ್‌ ಆದೇಶಗಳನ್ನು ಪಾಲನೆ ಮಾಡುವವರೆಗೂ ನಿಮ್ಮ ಸಂಬಳಕ್ಕೆ ಕತ್ತರಿ ಹಾಕಿದರೆ ಅರಿವಾಗುತ್ತದೆ ಎಂದು ಕಿಡಿ ಕಾರಿದರು.

ಅಧಿಕಾರಿಗಳಿಗೆ ನ್ಯಾಯಾಂಗದ ಭಾಷೆ ಅರ್ಥವಾಗುತ್ತಿಲ್ಲ

ನ್ಯಾಯಮೂರ್ತಿಗಳು ಆದೇಶ ನೀಡುವಾಗ ಕಠಾರಿಯಾ ಅವರು ಮಧ್ಯೆ ಪ್ರವೇಶಿಸಿ ನ್ಯಾಯಪೀಠಕ್ಕೆ ವಿವರಣೆ ನೀಡಲು ಮುಂದಾಗುತ್ತಿದ್ದರು. ಆದರೆ ನ್ಯಾ.ಸೋಮಶೇಖರ್‌ ಅಧಿಕಾರಿಗಳಿಗೆ ನ್ಯಾಯಾಂಗದ ಭಾಷೆ ಅರ್ಥವಾಗುತ್ತಿಲ್ಲ. ನೀವು ಹೇಳಿದ್ದನ್ನೆಲ್ಲಾ ನಾನು ಬರೆದುಕೊಳ್ಳುತ್ತೇನೆ. ಸತ್ಯ ಹೇಳಿದರೂ ಸರಿ, ಸುಳ್ಳು ಹೇಳಿದರೂ ಸರಿ. ನಾನು ನಿಮ್ಮೆಲ್ಲರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬಲ್ಲೆ. ಈ ಪೀಠ ಅಷ್ಟು ಸುಲಭವಾದದ್ದಲ್ಲ. ನೆನಪಿರಲಿ. ಅವಕಾಶ ಸಿಕ್ಕರೆ ನಿಮ್ಮನ್ನೆಲ್ಲಾ ಫಿಕ್ಸ್‌ ಮಾಡಿಬಿಡುತ್ತೇನೆ ಎಂದು ಆಕ್ರೋಶ ಹೊರಹಾಕಿದರು.

ಒಂದು ಹಂತದಲ್ಲಿ ಕಠಾರಿಯಾ; ಸರ್‌, ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಆದರೂ ಸರ್ಕಾರ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ನಾವು 14 ಎಕರೆಗೂ ಹೆಚ್ಚು ಅಕ್ರಮಿತ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದ್ದೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಇ-ಖಾತಾ ಎಂಬ ವ್ಯವಸ್ಥೆಯೇ ಭ್ರಷ್ಟಾಚಾರದ ಕೂಪ

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ವಿ.ರೋಣ ಅವರೂ ಸಹ, ಹೌದು ಮಹಾಸ್ವಾಮಿ. ಇವರು ಕಂದಾಯ ಇಲಾಖೆಯ ಸುಧಾರಣೆ ಮಾಡಲೆಂದು ಇ-ಖಾತಾ ವ್ಯವಸ್ಥೆ ರೂಪಿಸಿದ್ದಾರೆ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಮತ್ತೆ ಕೆರಳಿದ ನ್ಯಾ.ಸೋಮಶೇಖರ್, ಇ-ಖಾತಾ ಎಂಬ ವ್ಯವಸ್ಥೆಯೇ ಭ್ರಷ್ಟಾಚಾರದ ಕೂಪವಾಗಿದೆ. ನಮ್ಮಲ್ಲಿ ಮಾನಸಿಕ ಭ್ರಷ್ಟಾಚಾರ, ಹಣದ ಭ್ರಷ್ಟಾಚಾರ ಎಂದೆಲ್ಲಾ ಶ್ರೇಣೀಕೃತ ವ್ಯವಸ್ಥೆಯಿದೆ. ಮೊದಲು ಪೂರ್ವಗ್ರಹಪೀಡಿತ ಭಾವನೆಗಳ ಭ್ರಷ್ಟ ಪರಿಧಿಯಿಂದ ಹೊರಬನ್ನಿ ಎಂದರು.

ಕಿರಣ್‌ ರೋಣ ಅವರು ಹೈಕೋರ್ಟ್‌ ಆದೇಶದ ಪಾಲನೆಗೆ ಮೂರು ತಿಂಗಳು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು. ಆದರೆ, ನ್ಯಾ.ಸೋಮಶೇಖರ್‌ ಅವರು ಈ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿ ವಿಚಾರಣೆಯನ್ನು ಫೆಬ್ರುವರಿ 21ಕ್ಕೆ ಮುಂದೂಡಿದರು.

ವರದಿ: ಎಚ್.ಮಾರುತಿ, ಬೆಂಗಳೂರು

Whats_app_banner