ಸಿಂಡಿಕೇಟ್ ಬ್ಯಾಂಕ್ ಗೆ 12.63 ಕೋಟಿ ರೂ. ವಂಚನೆ; ಇಬ್ಬರು ಬ್ಯಾಂಕ್ ಸಿಬ್ಬಂದಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದ ಸಿಬಿಐ ನ್ಯಾಯಾಲಯ
Bengaluru Crime: ಸಿಬಿಐ ನ್ಯಾಯಾಲಯ ಸಿಂಡಿಕೇಟ್ ಬ್ಯಾಂಕ್‌ಗೆ 12.63 ಕೋಟಿ ರೂ. ವಂಚನೆ ಎಸಗಿದ ಪ್ರಕರಣದಲ್ಲಿ ಇಬ್ಬರು ಬ್ಯಾಂಕ್ ಸಿಬ್ಬಂದಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದೆ. ಪ್ರತ್ಯೇಕ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿ ವಿದ್ಯಾರ್ಥಿಗಳ ಸುಲಿಗೆಗೆ ಯತ್ನಿಸಿದ ರೆಂಟ್ ಎ ಕಾರ್‌ನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಸಾಲ ವಿತರಣೆಯಲ್ಲಿ 12.63 ಕೋಟಿ ರೂಪಾಯಿ ವಂಚನೆ ಎಸಗಿದ್ದ ಆರೋಪದಡಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ನ ಇಬ್ಬರು ವ್ಯವಸ್ಥಾಪಕರು ಸೇರಿ ಮೂವರಿಗೆ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 52 ಲಕ್ಷ ರೂ. ದಂಡ ವಿಧಿಸಲಾಗಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮತ್ತು ಅನರ್ಹ ವ್ಯಕ್ತಿಗಳಿಗೆ ಸಾಲ ವಿತರಣೆ ಮಾಡಿದ ಸಂಬಂಧ 2009ರಲ್ಲಿ ಪ್ರಕರಣ ದಾಖಲಾಗಿತ್ತು. ಸಿಂಡಿಕೇಟ್ ಬ್ಯಾಂಕ್‌ನ ಮಂಡ್ಯ ಶಾಖೆಯ ಅಂದಿನ ವ್ಯವಸ್ಥಾಪಕ ಎಚ್.ಎಂ.ಸ್ವಾಮಿ, ಕೊಳ್ಳೇಗಾಲ ಶಾಖೆಯ ಅಂದಿನ ವ್ಯವಸ್ಥಾಪಕ ವಿಠಲ ದಾಸ್ ವಿರುದ್ಧ ಬ್ಯಾಂಕ್‌ನ ಮುಖ್ಯ ಜಾಗೃತ ಅಧಿಕಾರಿ ಸಿಬಿಐಗೆ ದೂರು ನೀಡಿ ಸಿಂಡಿಕೇಟ್ ಜೈ ಕಿಸಾನ್ ಸಾಲ ಯೋಜನೆ ಮತ್ತು ಇತರೆ ಸಾಲ ಯೋಜನೆಗಳಲ್ಲಿ ಇಬ್ಬರು ವ್ಯವಸ್ಥಾಪಕರು ಅಕ್ರಮ ಎಸಗಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅನರ್ಹರಿಗೆ ಸಾಲ ನೀಡುವ ಮೂಲಕ ಬ್ಯಾಂಕ್‌ಗೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. 2009 ರಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿತ್ತು.
ಸಿಂಡಿಕೇಟ್ ಬ್ಯಾಂಕ್ ಗೆ 12.63 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಯೂ ಬಾಗಿ
ಸಿಂಡಿಕೇಟ್ ಬ್ಯಾಂಕ್ ಗೆ 12.63 ಕೋಟಿ ರೂ. ವಂಚನೆ ಅಕ್ರಮ ವ್ಯವಹಾರದಲ್ಲಿ ಮತ್ತೊಬ್ಬ ಖಾಸಗಿ ವ್ಯಕ್ತಿ ಬಾಗಿಯಾಗಿರುವುದು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿತ್ತು. 2010ರ ಡಿಸೆಂಬರ್ ನಲ್ಲಿ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು. ಪ್ರಕರಣ ನಡೆಸಿದ ವಿಶೇಷ ನ್ಯಾಯಾಲಯ ಈಚೆಗೆ ತೀರ್ಪು ನೀಡಿತ್ತು. ಇದೀಗ ಶಿಕ್ಷೆಯನ್ನೂ ಪ್ರಕಟಿಸಿದೆ.
ಸಿಂಡಿಕೇಟ್ ಬ್ಯಾಂಕ್ ಮಂಡ್ಯ ಶಾಖೆಯ ಅಂದಿನ ವ್ಯವಸ್ಥಾಪಕ ಎಚ್. ಸ್ವಾಮಿ ಅವರಿಗೆ 3 ವರ್ಷ ಜೈಲು ಮತ್ತು 1.50 ಲಕ್ಷ ರೂ. ದಂಡ ವಿದಿಸಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಕೊಳ್ಳೆಗಾಲ ಶಾಖೆಯ ಅಂದಿನ ವ್ಯವಸ್ಥಾಪಕ ವಿಠ್ಠಲ ದಾಸ್ ಅವರಿಗೆ 1 ವರ್ಷ ಜೈಲು ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ಮತ್ತೊಬ್ಬ ಖಾಸಗಿ ವ್ಯಕ್ತಿ ಅಸಾದುಲ್ಲಾ ಖಾನ್ ಎಂಬಾತನಿಗೆ 3 ವರ್ಷ ಜೈಲು ಮತ್ತು 50 ಲಕ್ಷ ರೂ. ದಂಡ ವಿಧಿಸಲಾಗಿದೆ.
ಸುಳ್ಳು ಆರೋಪ; ವಿದ್ಯಾರ್ಥಿಗಳ ಸುಲಿಗೆಗೆ ಯತ್ನಿಸಿದ ಮೂವರ ಬಂಧನ
ಕಾರನ್ನು ಬಾಡಿಗೆಗೆ ಪಡೆದು ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದ ವಿದ್ಯಾರ್ಥಿಗಳು ವೇಗವಾಗಿ ಕಾರು ಚಾಲನೆ ಮಾಡಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕಾರನ್ನು ಬಾಡಿಗೆ ನೀಡಿದ್ದ ಕಂಪನಿಯವರು ಆರೋಪಿಸಿ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿ ನಂತರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮತ್ತಿಕೆರೆಯ ಐದನೇ ಸೆಮಿಸ್ಟರ್ ಬಿಬಿಎ ವಿದ್ಯಾರ್ಥಿ ನೀಡಿದ ದೂರನ್ನು ಆಧರಿಸಿ ಚಂದ್ರ ಲೇಔಟ್ ಪೊಲೀಸರು ವಿನೋದ್, ಶಶಾಂಕ್ ಮತ್ತು ನಿತಿನ್ ಎಂಬುವರನ್ನು ಬಂಧಿಸಿ ಅವರಿಂದ 30 ಸಾವಿರ ರೂ. ನಗದು ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ. ಮತ್ತಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ನಾಗರಬಾವಿಯಲ್ಲಿರುವ ಕಂಪನಿಯೊಂದರಿಂದ ರೆಂಟ್ ಎ ಕಾರ್' ಅಡಿಯಲ್ಲಿ ಕಾರು ಬಾಡಿಗೆಗೆ ಪಡೆದು ಐವರು ವಿದ್ಯಾರ್ಥಿಗಳು ಭಾನುವಾರ ಮಡಿಕೇರಿಗೆ ಪ್ರವಾಸಕ್ಕೆ ಹೋಗಿದ್ದರು. ಕಾರು 120 ಬಾರಿ 100 ಕಿಲೋ ಮೀಟರ್ ವೇಗ ದಾಟಿದೆ ಎಂದು ಹೇಳಿ ಕಾರು ಬಾಡಿಗೆಗೆ ನೀಡಿದ್ದ ಕಂಪನಿಯ ನೌಕರರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಬೆದರಿಸಿ 50 ಸಾವಿರ ವಸೂಲು ಮಾಡಿ ಲ್ಯಾಪ್‌ಟಾಪ್ ಕಿತ್ತುಕೊಂಡಿದ್ದರು ಎಂದು ವಿದ್ಯಾರ್ಥಿಗಳು ದೂರು ನೀಡಿದ್ದರು.
120 ಬಾರಿ ವೇಗ ಮಿತಿಯನ್ನು ಮೀರಿ ಕಾರು ಓಡಿಸಿರುವುದರಿಂದ 1.20 ಲಕ್ಷ ದಂಡ ಕಟ್ಟಬೇಕು ಎಂದು ಆರೋಪಿಗಳು ಬೆದರಿಸಿದ್ದರು. ಸಂಚಾರ ನಿಯಮ ಉಲ್ಲಂಘನೆಯ ಪುರಾವೆ ಅಥವಾ ಚಲನ್ ತೋರಿಸುವಂತೆ ವಿದ್ಯಾರ್ಥಿಗಳು ಕೇಳಿದಾಗ, ಆರೋಪಿಗಳು ಮೂರು ಉಲ್ಲಂಘನೆಗಳ ಸ್ಕ್ರೀನ್ ಶಾಟ್ ಮಾತ್ರ ತೋರಿಸಿದ್ದರು. ಉಳಿದ ಉಲ್ಲಂಘನೆಯ ದಾಖಲೆಗಳನ್ನು ತೋರಿಸಲು ನಿರಾಕರಿಸಿದ್ದರು ಎಂದು ವಿದ್ಯಾರ್ಥಿಗಳು ದೂರಿನಲ್ಲಿ ಹೇಳಿದ್ದಾರೆ. ನಿತಿನ್ ಹಾಗೂ ಮತ್ತೊಬ್ಬ ವ್ಯಕ್ತಿ, ಹಣ ಪಾವತಿಸುವಂತೆ ವಿದ್ಯಾರ್ಥಿಗಳಿಗೆ ಬೆದರಿಸಿದ್ದರು.
ವಿದ್ಯಾರ್ಥಿಗಳು ಬಂಧುಗಳು ಹಾಗೂ ಸ್ನೇಹಿತರಿಂದ ಕರೆ ಮಾಡಿ 50 ಸಾವಿರ ಸಾಲ ಪಡೆದುಕೊಂಡು ಪಾವತಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬಾತ ಮೊಬೈಲ್ ಫೋನ್ ಅಂಗಡಿಯೊಂದಕ್ಕೆ ವಿದ್ಯಾರ್ಥಿಯೊಬ್ಬನನ್ನು ಕರೆದೊಯ್ದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿ, 35 ಸಾವಿರ ಹಣವನ್ನು ಅಂಗಡಿ ಮಾಲೀಕನ ಖಾತೆಗೆ ವರ್ಗಾಯಿಸಿ ನಂತರ ಅಂಗಡಿ ಮಾಲೀಕನಿಂದ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಮೂರು ಬಾರಿ ಮಾತ್ರ ವೇಗದ ಮಿತಿ ಮೀರಿದ್ದರು. ಹಣ ಸುಲಿಗೆ ಮಾಡುವ ಉದ್ಧೇಶದಿಂದ ಆರೋಪಿಗಳು ಸುಳ್ಳು ಆರೋಪ ಮಾಡಿದ್ದರು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)