ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್ ಲಾಕರ್‌ಗೆ ಕನ್ನ, ಕದ್ದವರು ಯಾರು ಅನ್ನೋದು ನಿಗೂಢ; ಹೆಸರಘಟ್ಟ ಸುತ್ತಮುತ್ತ ಶುರುವಾಗಿದೆ ಚಿರತೆ ಕಾಟ
ಬೆಂಗಳೂರಿನ ಬಸವೇಶ್ವರ ನಗರದ ಬ್ಯಾಂಕ್‌ವೊಂದರಲ್ಲಿ ಮ್ಯಾನೇಜರ್ ಲಾಕರ್‌ನಲ್ಲಿದ್ದ ಚಿನ್ನಾಭರಣಗಳನ್ನೇ ಕಳವು ಮಾಡಲಾಗಿದೆ. ಕದ್ದವರು ಯಾರು ಎನ್ನುವುದು ನಿಗೂಢವಾಗಿದೆ. ಬೆಂಗಳೂರಿನ ಹೊರವಲಯದ ಹೆಸರುಘಟ್ಟ ಸುತ್ತಮುತ್ತ ಮತ್ತೆ ಚಿರತೆ ಕಾಟ ಶುರುವಾಗಿದ್ದು, ಐದಾರು ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಯಾರಿಗೆ ತಾನೆ ಗೊತ್ತಿಲ್ಲ? ಅಂತಹುದೇ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಂಕ್ ವ್ಯವಸ್ಥಾಪಕಿಯೊಬ್ಬರು ತಾವು ಕಾರ್ಯನಿರ್ವಹಿಸುತ್ತಿದ್ದ ತಮ್ಮದೇ ಬ್ಯಾಂಕ್ ಶಾಖೆಯ ಲಾಕರ್‌ನಲ್ಲಿ ಇರಿಸಿದ್ದ ಚಿನ್ನದ ಆಭರಣಗಳು ಕಳುವಾಗಿವೆ ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
32 ವರ್ಷದ ಬ್ಯಾಂಕ್ ಮ್ಯಾನೇಜರ್ ಅಪರ್ಣಾ (ಹೆಸರು ಬದಲಾಯಿಸಲಾಗಿದೆ) ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನದೇ ಶಾಖೆಯಲ್ಲಿ ಬ್ಯಾಂಕ್ ಲಾಕರ್ ಅನ್ನು ಬಾಡಿಗೆಗೆ ಪಡೆದು 250 ಗ್ರಾಂ ಚಿನ್ನಾಭರಣ ಮತ್ತು ಚೆಕ್ ಬುಕ್ ಮತ್ತು ಇತರ ದಾಖಲೆಗಳನ್ನು ಲಾಕರ್‌ನಲ್ಲಿ ಇಟ್ಟಿದ್ದುದಾಗಿ ವಿವರಿಸಿದ್ದಾರೆ. ಕಳೆದ ಬಾರಿ ಅಂದರೆ 2024 ಮೇ ತಿಂಗಳಲ್ಲಿ ಪರಿಶೀಲಿಸಿದಾಗ ಎಲ್ಲವೂ ಸರಿಯಾಗಿಯೇ ಇತ್ತು. ಮತ್ತೊಮ್ಮೆ ಅಕ್ಟೋಬರ್‌ನಲ್ಲಿ ಪರಿಶೀಲಿಸಲು ನೋಡಿದಾಗ ಬೀಗದ ಕೀ ನಾಪತ್ತೆಯಾಗಿತ್ತು. ಬ್ಯಾಂಕ್‌ನ ಮೂಲೆ ಮೂಲೆಯಲ್ಲಿ ಹುಡುಕಿದಾಗಲೂ ಕಂಡು ಬಂದಿರಲಿಲ್ಲ. ನಂತರ ಡಿಸೆಂಬರ್ 30ರಂದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಲಾಕರ್ ಅನ್ನು ಒಡೆದು ನೋಡಿದಾಗ ಚೆಕ್ ಬುಕ್ ಬಿಟ್ಟು ಚಿನ್ನಾಭರಣ ಕಳುವಾಗಿತ್ತು. ಅವರು ಈ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಆಗಿರುವ ಅಪರ್ಣಾ ಅವರಿಗೆ ಬ್ಯಾಂಕ್ ಲಾಕರ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ತಿಳಿದಿರುತ್ತದೆ. ಸಾಮಾನ್ಯವಾಗಿ ಗ್ರಾಹಕರ ಬಳಿ ಇರುವ ಕೀ ಮತ್ತು ಬ್ಯಾಂಕ್ ನಲ್ಲಿರುವ ಮಾಸ್ಟರ್ ಕೀ ಬಳಸಿದರೆ ಮಾತ್ರ ಲಾಕರ್ ಅನ್ನು ತೆರೆಯಲು ಸಾಧ್ಯ. ಬೇರೆ ಯಾರೊಬ್ಬರಿಗೂ ಲಾಕರ್ ತೆರೆಯುವ ಅವಕಾಶ ಇರುವುದಿಲ್ಲ. ಲಾಕರ್ ತೆರೆಯಬೇಕೆಂದರೆ ಲಾಕರ್ ಮಾಸ್ಟರ್ ಕೀ ಮತ್ತು ಕಬ್ಬಿಣದ ಸುರಕ್ಷತಾ ಬಾಗಲಿನ ಕೀ ಇದ್ದರೆ ಮಾತ್ರ ಸಾಧ್ಯ.
ಮಾಸ್ಟರ್ ಕೀ ಮತ್ತು ಕಬ್ಬಿಣದ ಬಾಗಿಲಿನ ಕೀಗಳನ್ನು ಕ್ಯಾಷ್ ಬಾಕ್ಸ್‌ನಲ್ಲಿ ಇರಿಸಲಾಗುತ್ತದೆ. ಲಾಕರ್‌ನ ಕೀಯನ್ನು ಅಪರ್ಣಾ ಅವರು ತಮ್ಮ ಬ್ಯಾಗ್‌ನಲ್ಲಿಯೇ ಇರಿಸಿಕೊಳ್ಳುತ್ತಿದ್ದರು. ಆಭರಣಗಳನ್ನು ಕದಿಯುವ ಉದ್ದೇಶದಿಂದಲೇ ಕಳ್ಳರು ಅಪರ್ಣಾ ಅವರ ಬ್ಯಾಗ್‌ನಿಂದ ಕೀಯನ್ನು ಕಳವು ಮಾಡಿ ಆಭರಣಗಳನ್ನು ಕದ್ದಿದ್ದಾರೆ ಎಂದು ಶಂಕಿಸಲಾಗಿದೆ.
ಆದರೂ ಅವರು ತಡವಾಗಿ ದೂರು ನೀಡಿದ್ದಾರೆ. ಬ್ಯಾಂಕ್‌ನಲ್ಲಿ ಆಂತರಿಕ ತಪಾಸಣೆ ನಡೆಯುತ್ತಿದ್ದರಿಂದ ದೂರು ನೀಡಲು ತಡವಾಗಿದೆ ಎಂದು ಅಪರ್ಣಾ ತಿಳಿಸಿದ್ದಾರೆ. ಇವರ ಬ್ಯಾಗ್‌ನಿಂದ ಕೀ ಕದಿಯುವ ಸಿಸಿಟಿವಿ ದೃಶ್ಯಗಳೂ ಲಭ್ಯವಿಲ್ಲ. ಕಳುವಾದ ಅಭರಣಗಳ ಮೌಲ್ಯ ಸುಮಾರು 20 ಲಕ್ಷ ರೂ ಎಂದು ಅಂದಾಜು ಮಾಡಲಾಗಿದೆ. ಬಿಎನ್ಎಸ್ 306ರ
ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬ್ಯಾಂಕ್ ಉದ್ಯೋಗಿಗಳನ್ನು ಈ ಸಂಬಂಧ ಪ್ರಶ್ನಿಸಲಾಗುತ್ತದೆ. ಕೀ ಕಳುವಾದ ಕೂಡಲೇ ದೂರು ದಾಖಲಿಸಿದ್ದರೆ ಶಂಕಿತರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.
ಬೆಂಗಳೂರಿನ ಹೊರವಲಯದಲ್ಲಿ ಮತ್ತೆ ಚಿರತೆ ಕಾಟ, ಆತಂಕದಲ್ಲಿ ಐದಾರು ಗ್ರಾಮಗಳ ನಿವಾಸಿಗಳು
ಹೆಸರಘಟ್ಟ ವ್ಯಾಪ್ತಿಯ ಶಿವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಳ್ಳಿಪುರ, ಮಧುಗಿರಿಹಳ್ಳಿ, ಕಾಳೇನಹಳ್ಳಿ, ಶಿವಕೋಟೆ ಮತ್ತು ಲಿಂಗನಹಳ್ಳಿ ಮೊದಲಾ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು ನಾಯಿಯೊಂದನ್ನು ಕೊಂದು ಹಾಕಿದೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಮತ್ತು ದನ, ಕುರಿ ಮೇಯಿಸುವವರು ಭಯಪಡುತ್ತಿದ್ದಾರೆ.
ಮಾವಳ್ಳಿಪುರ ಗ್ರಾಮದ ಕೆರೆ ಅಂಗಳದಲ್ಲಿ ಚಿರತೆಯು ಬೀದಿನಾಯಿಯ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಬುಧವಾರ ಮುಂಜಾನೆ ಕಾಳೇನಹಳ್ಳಿ ಗ್ರಾಮದ ನಿವಾಸಿ ಚೇತನ್ ರೆಡ್ಡಿ ಅವರ ಸಾಕು ನಾಯಿಯ ಮೇಲೂ ಚಿರತೆ ದಾಳಿ ಮಾಡಿದೆ. ಸದ್ದು ಕೇಳಿಸಿಕೊಂಡು ರೆಡ್ಡಿ ಅವರು ಹೊರಬರುವ ವೇಳೆಗೆ ಗಾಬರಿಗೊಂಡ ಚಿರತೆ ಓಡಿಹೋಗಿದೆ. ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಚಿರತೆಯ ಸಂಚಾರದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಬೀತರಾಗಿದ್ದಾರೆ.
ಮಕ್ಕಳು, ಸ್ತ್ರೀಯರು ಆತಂಕಗೊಂಡಿದ್ದು ಆದಷ್ಟು ಬೇಗ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಈ ಗ್ರಾಮಗಳ ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅರಣ್ಯಾಧಿಕಾರಿಗಳು ರಾತ್ರಿ ವೇಳೆ ಸಾರ್ವಜನಿಕರು ಓಡಾಡದಂತೆ ಎಚ್ಚರಿಕೆ ನೀಡಿದ್ದಾರೆ. ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ರೂಪಿಸುತ್ತಿದ್ದು, ಗುರುವಾರ ಬೋನು ಇರಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
