ತಾಯಿಯೊಂದಿಗೆ ಸೇರಿ ಗಂಡನನ್ನೇ ಕತ್ತು ಸೀಳಿ ಕೊಂದ ಪತ್ನಿ; ಅಕ್ರಮ ವ್ಯವಹಾರ, ಅಕ್ರಮ ಸಂಬಂಧ ಆರೋಪ: ಬೆಂಗಳೂರಲ್ಲಿ ಘಟನೆ
Bengaluru Crime: ಅಕ್ರಮ ಸಂಬಂಧ ಹಾಗೂ ಅಕ್ರಮ ವ್ಯವಹಾರಗಳಲ್ಲಿ ತೊಡಗಿರುವ ಕಾರಣ ಪತ್ನಿಯೇ ತನ್ನ ತಾಯಿಯೊಂದಿಗೆ ಸೇರಿ ಪತಿಯ ಕತ್ತು ಸೀಳಿ ಕೊಂದಿರುವ ಘಟನೆ ಬೆಂಗಳೂರಿನ ಚಿಕ್ಕಬಾಣವಾರ ಬಳಿ ನಡೆದಿದೆ. ಕೊಲೆಯಾದವರು ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್.

ಬೆಂಗಳೂರು: ಪತಿಯು ಹಲವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಮತ್ತು ವ್ಯವಹಾರದಲ್ಲಿ ವಂಚನೆ ಮಾಡಿದ್ದಾರೆ ಎಂಬ ವಿಚಾರ ತಿಳಿದ ಪತ್ನಿ ತನ್ನ ತಾಯಿಯೊಂದಿಗೆ ಸೇರಿ ಗಂಡನನ್ನೇ ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯ ಶವ ಕಾರಿನಲ್ಲಿ ಪತ್ತೆಯಾದ ಹಿನ್ನೆಲೆ ಈ ಘಟನೆ ಬೆಳಕಿಗೆ ಬಂದಿದೆ. 37 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಹೆಂಡತಿಯಿಂದಲೇ ಕೊಲೆಯಾದವರು.
ಈ ಪ್ರಕರಣದ ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಗಳು ಲೋಕನಾಥ್ ಅವರಿಗೆ ಆಹಾರದಲ್ಲಿ ನಿದ್ದೆ ಮಾತ್ರೆ ಮಿಶ್ರಣ ಮಾಡಿ ಕೊಟ್ಟಿದ್ದರು. ಆತ ನಿದ್ದೆ ಮಾಡಿದ ಬಳಿಕ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಾರ್ಚ್ 22 ರಂದು ಲೋಕನಾಥ್ ಅವರ ಶವ ಇರುವ ಕಾರನ್ನು ಚಿಕ್ಕಬಾಣಾವರ ಬಳಿ ಜನರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
‘ಶನಿವಾರ ಸಂಜೆ 5.30ರ ಸುಮಾರಿಗೆ ನಮಗೆ 112ಗೆ ತುರ್ತು ಕರೆ ಬಂದಿತ್ತು ಮತ್ತು ಕಾರಿನಲ್ಲಿರುವ ಮೃತದೇಹದ ಬಗ್ಗೆ ಮಾಹಿತಿ ನೀಡಲಾಗಿತ್ತು. ಕೊಲೆ ಆರೋಪದ ಮೇಲೆ ಲೋಕನಾಥ್ ಅವರ ಪತ್ನಿ ಹಾಗೂ ಅತ್ತೆಯನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ‘ ಎಂದು ಬೆಂಗಳೂರಿನ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸೈದುಲ್ ಅದಾವತ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಉಲ್ಲೇಖಿಸಿದೆ.
ಪತಿಯ ಆಕ್ರಮ ಸಂಬಂಧದ ಹಿನ್ನೆಲೆ ಕೊಲೆ
ಪತಿಯು ಅಕ್ರಮ ಸಂಬಂಧಗಳನ್ನು ಇರಿಸಿಕೊಂಡಿದ್ದಾರೆ ಮತ್ತು ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಾರ ತಿಳಿದ ಪತ್ನಿ ಲೋಕನಾಥ್ ಅವರನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಲೋಕನಾಥ್ ಅವರ ಅಕ್ರಮ ಸಂಬಂಧ ಹಾಗೂ ಅಕ್ರಮ ವ್ಯವಹಾರಗಳ ವಿಚಾರ ತಿಳಿದ ಮೇಲೆ ಪತಿ–ಪತ್ನಿಯ ನಡುವೆ ಸಂಬಂಧ ಹದಗೆಟ್ಟಿತ್ತು. ಅಲ್ಲದೇ ಈ ವಿಚಾರವಾಗಿ ಕೇಳಿದಾಗ ಲೋಕನಾಥ್ ಅತ್ತೆ–ಮಾವನಿಗೆ ಬೆದರಿಕೆ ಹಾಕಿದ್ದರು. ಪರಿಸ್ಥಿತಿ ಇನ್ನಷ್ಟು ಬಿಕ್ಕಟ್ಟಿಗೆ ತಲುಪಿದಾಗ ಅತ್ತೆ ಹಾಗೂ ಹೆಂಡತಿ ಸೇರಿ ಆತನ ಕೊಲೆಗೆ ಸಂಚು ರೂಪಿಸಿದ್ದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಅಪರಾಧ ಶಾಖೆಯು ಲೋಕನಾಥ್ ಅವರಿಗೆ ತನಿಖೆ ನಡೆಸುತ್ತಿತ್ತು ಎನ್ನುವ ವಿಚಾರವೂ ಬಹಿರಂಗವಾಗಿದೆ.
