ಬೆಂಗಳೂರು: ಡಿಜಿಟಲ್ ಅರೆಸ್ಟ್ ವಂಚನೆಗೆ 1.78 ಕೋಟಿ ರೂ ಕಳೆದುಕೊಂಡ ವ್ಯಕ್ತಿ; ಮೈಕ್ರೊಫೈನಾನ್ಸ್ ಕಂಪನಿಗೆ 50 ಲಕ್ಷ ವಂಚಿಸಿದ ಉದ್ಯೋಗಿಗಳು
ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಮೂಲಕ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು 1.17 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಇದೇ ವೇಳೆ ಮೈಕ್ರೊಫೈನಾನ್ಸ್ ಕಂಪನಿಗೆ ಅದರ ಉದ್ಯೋಗಿಗಳೇ 50 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಇತರ ಅಪರಾಧ ಸುದ್ದಿಗಳು ಇಲ್ಲಿವೆ. (ವರದಿ: ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಸೈಬರ್ ವಂಚನೆಗಳ ಕುರಿತು ಪ್ರತಿದಿನ ವರದಿಗಳು ಪ್ರಕಟವಾಗುತ್ತಲೇ ಇವೆ. ಪೊಲೀಸರು ಕೂಡಾ ಇಂತಹ ವಂಚನೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಆದರೂ ಸಾರ್ವಜನಿಕರು ಮಾತ್ರ ಮೋಸ ಹೋಗುತ್ತಿರುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬೆಂಗಳೂರಿನ ನಿವಾಸಿಯೊಬ್ಬರಿಗೆ ವಂಚಕರು ಹೆದರಿಸಿ 1.78 ಕೋಟಿ ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹದೇವಪುರದ ಕೆಜಿಎಫ್ ಮುನಿರೆಡ್ಡಿ ಪಾಳ್ಯದ ನಿವಾಸಿ ಎಲ್.ಪರಮಶಿವಂ, ಸೈಬರ್ ವಂಚಕರ ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಂಡ ಸಂತ್ರಸ್ತರಾಗಿದ್ದಾರೆ. ಸದ್ಯ ದೂರು ಆಧರಿಸಿ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜನವರಿ 3ರಂದು ಪರಮಶಿವಂಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ಕ್ರೆಡಿಟ್ ಕಾರ್ಡ್ ಬಿಲ್ 1.20 ಲಕ್ಷ ರೂ. ಪಾವತಿ ಮಾಡಿಲ್ಲ. ಈ ಬಗ್ಗೆ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಖಾತೆ ಪರಿಶೀಲನೆ ಮಾಡುವ ಅವಶ್ಯಕತೆ ಇದ್ದು, ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಆರ್‌ಬಿಐಗೆ ವರ್ಗಾವಣೆ ಮಾಡಬೇಕು ಎಂದು ಬೆದರಿಸಿದ್ದಾನೆ. ಆತನ ಸೂಚನೆ ಅನುಸರಿಸಿ ಡಿಜಿಟಲ್ ಅರೆಸ್ಟ್ ಆದ ಪರಮಶಿವಂ ಅವರು, ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ರೂ. 1.17 ಕೋಟಿ ಹಣವನ್ನು ವಂಚಕ ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ವರ್ಗಾವಣೆ ಮಾಡಿದ್ದಾರೆ. ಪರಮಶಿವಂ ವಂಚಕ ಹೇಳಿದ್ದ ಎಲ್ಲವನ್ನೂ ಕೇಳಿ ಡಿಜಿಟಲ್ ಅರೆಸ್ಟ್ ಆಗಿದ್ದಾರೆ. ಹಣ ಎಲ್ಲಾ ಕಳೆದುಕೊಂಡ ನಂತರ, ಪರಮಶಿವಂ ಅವರಿಗೆ ತಾನು ಮೋಸ ಹೋದ ಅನುಮಾನವಾಗಿದೆ. ಈ ಸಂಬಂಧ ವಿಚಾರಿಸಲು ಅವರು ಕರೆ ಮಾಡಿದಾಗ ಆರೋಪಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೈಕ್ರೊಫೈನಾನ್ಸ್ ಕಂಪನಿಗೆ 50 ಲಕ್ಷ ರೂ. ವಂಚಿಸಿದ ಉದ್ಯೋಗಿಗಳು
ದುಬಾರಿ ಬಡ್ಡಿ ಮತ್ತು ಹಣ ವಸೂಲಿ ಹೆಸರಿನಲ್ಲಿ ಮೈಕ್ರೊಫೈನಾನ್ಸ್ ಕಂಪನಿಗಳು ಸಾರ್ವಜನಿಕರನ್ನು ವಂಚಿಸುತ್ತಿದ್ದರೆ, ಮೈಕ್ರೊಫೈನಾನ್ಸ್ ಕಂಪನಿಗಳ ಉದ್ಯೋಗಿಗಳೇ ಕೆಲಸ ಮಾಡುತ್ತಿದ್ದ ಕಂಪನಿಗೆ ವಂಚನೆ ಮಾಡಿರುವ ಪ್ರಕರಣವೊಂದು ಮಾಗಡಿಯಲ್ಲಿ ನಡೆದಿದೆ. ಭಾರತ್ ಫೈನಾನ್ಷಿಯಲ್ ಇನ್‌ಕ್ಲೂಜನ್ ಮೈಕ್ರೊಪೈನಾನ್ಸ್ ಕಂಪನಿಗೆ ಅಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಉದ್ಯೋಗಿಗಳೇ 53.26 ಲಕ್ಷ ರೂ. ವಂಚಿಸಿ ತಲೆ ಮರೆಸಿಕೊಂಡಿದ್ದಾರೆ.
ಸಾಲಗಾರರಿಂದ ವಸೂಲಿ ಮಾಡಿದ್ದ ರೂ. 53.26 ಲಕ್ಷವನ್ನು ಕಂಪನಿ ಖಾತೆಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ನಾಲ್ವರು ಸಿಬ್ಬಂದಿ ವಿರುದ್ಧ ಕಂಪನಿಯ ಏರಿಯಾ ಮ್ಯಾನೇಜರ್ ಎನ್.ಎಸ್. ಸ್ವಾಮಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ. ಕಂಪನಿಯ ಮಾಗಡಿ ಶಾಖೆಯ ವ್ಯವಸ್ಥಾಪಕ ಎಂ.ಎನ್. ಮಂಜುನಾಥ 4839115 ರೂ, ಬ್ರಾಂಚ್ ಕ್ರೆಡಿಟ್ ಮ್ಯಾನೇಜರ್ ತೇಜಸ್ ಜೆ.ಎ. 1.20 ಲಕ್ಷ ರೂ., ಕ್ಷೇತ್ರ ಸಹಾಯಕರಾದ ಅಭಿಷೇಕ್ 2.57 ಲಕ್ಷ ರೂ. ಹಾಗೂ ಶ್ರೀನಿವಾಸ.ಕೆ 1.08 ಲಕ್ಷ ರೂ. ಸಂಗ್ರಹಿಸಿದ್ದರು. ಈ ನಾಲ್ವರ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿ ಬಸ್ ಹರಿದು ಸಾಫ್ಟ್‌ವೇರ್ ಎಂಜಿನಿಯರ್ ಸಾವು
ಎಚ್‌ಎಎಲ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಕ್ಕೆ ಕೇಬಲ್ ಸುತ್ತಿಕೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಬೊಮ್ಮನಹಳ್ಳಿ ನಿವಾಸಿ ರೋಹಿತ್ ಆರ್.ಪಾಟೀಲ್ (26) ಮೃತ ಸವಾರ. ಐಟಿಪಿಎಲ್ ರಸ್ತೆಯ ರಾಮೇಶ್ವರಂ ಕೆಫೆ ಸಮೀಪದ ಪಾಸ್‌ಪೋರ್ಟ್ ಕಚೇರಿ ಬಳಿ ಘಟನೆ ಸಂಭವಿಸಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರೋಹಿತ್ ಮೃತ ದುರ್ದೈವಿ. ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಹಾದು ಹೋಗಿದ್ದ ಕೇಬಲ್ ದ್ವಿಚಕ್ರ ವಾಹನದ ಚಕ್ರಕ್ಕೆ ಸುತ್ತಿಕೊಂಡು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅದೇ ವೇಳೆಗೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ರೋಹಿತ್ ಅವರ ಮೇಲೆ ಹರಿದಿದೆ. ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಎಚ್‌ಎಎಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಎಚ್. ಮಾರುತಿ, ಬೆಂಗಳೂರು
