ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕರಗ ಮೆರವಣಿಗೆಗೆ ಮೊದಲು ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನದ ಬಳಿ 17 ವರ್ಷದ ಬಾಲಕನ ಹತ್ಯೆ

ಬೆಂಗಳೂರು ಕರಗ ಮೆರವಣಿಗೆಗೆ ಮೊದಲು ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನದ ಬಳಿ 17 ವರ್ಷದ ಬಾಲಕನ ಹತ್ಯೆ

ಬೆಂಗಳೂರು ಕರಗ ಮೆರವಣಿಗೆಗೆ ಮೊದಲು ಮೆಜೆಸ್ಟಿಕ್‌ ಅಣ್ಣಮ್ಮ ದೇವಸ್ಥಾನದ ಬಳಿ 17 ವರ್ಷದ ಬಾಲಕನ ಹತ್ಯೆ ಆಗಿದೆ. ಶೇಷಾದ್ರಿಪುರ ವಿವಿ ಗಿರಿ ಕಾಲನಿಯ ಬಾಲಕ ಸಾರಥಿ ಕೊಲೆಗೀಡಾದನಾಗಿದ್ದು, ಕರಗ ಮೆರವಣಿಗೆ ನೋಡಲು ಬಂದಿದ್ದ. ಈ ಕುರಿತು ಉಪ್ಪಾರಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇಲ್ಲಿದೆ ವಿವರ.

ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರು ಕರಗ ಮೆರವಣಿಗೆಗೆ ಮೊದಲು ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನದ ಬಳಿ 17 ವರ್ಷದ ಬಾಲಕನ ಹತ್ಯೆ ನಡೆದಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರು ಕರಗ ಮೆರವಣಿಗೆಗೆ ಮೊದಲು ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನದ ಬಳಿ 17 ವರ್ಷದ ಬಾಲಕನ ಹತ್ಯೆ ನಡೆದಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರಗ ಮೆರವಣಿಗೆ ಹೋಗುವ ಮೊದಲು ಮೆಜೆಸ್ಟಿಕ್ ಸಮೀಪದ ಅಣ್ಣಮ್ಮ ದೇವಸ್ಥಾನದ ಎದುರು ನೃತ್ಯ ಮಾಡುತ್ತಿದ್ದಾಗ ಆಗಿರುವ ಗಲಾಟೆಯಲ್ಲಿ ಹದಿನೇಳು ವರ್ಷದ ಬಾಲಕನೊಬ್ಬನ ಕೊಲೆ ನಡೆದಿದೆ. ಏಪ್ರಿಲ್ 24ರ ನಸುಕಿನಲ್ಲಿ ಈ ಹತ್ಯೆ ಜರುಗಿದೆ ಎಂದು ಉಪ್ಪಾರಪೇಟೆ ಪೊಲೀಸರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಾಲಕರ ಗುಂಪು ನೃತ್ಯಮಾಡುತ್ತಿದ್ದಾಗ ತಳ್ಳಾಟ ನಡೆದಿತ್ತು. ಆಗ ಈ ಬಾಲಕನ ಕೊಲೆಯಾಗಿದೆ. ಕೊಲೆಗೀಡಾದ ಬಾಲಕನನ್ನು ಶೇಷಾದ್ರಿಪುರದ ವಿವಿಗಿರಿ ಕಾಲನಿ ನಿವಾಸಿ ಡಿ. ಸಾರಥಿ (17) ಎಂದು ಗುರುತಿಸಲಾಗಿದೆ. ಈ ಕೊಲೆ ಪ್ರಕರಣ ಸಂಬಂಧ ಕೇಸ್ ದಾಖಲಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕರಗ ಮೆರವಣಿಗೆ ಮೊದಲು ನಡೆದ ಕೊಲೆ ಪ್ರಕರಣದ ಹಿನ್ನೆಲೆ

ಬೆಂಗಳೂರು ಕರಗ ಮಹೋತ್ಸವದ ಮೆರವಣಿಗೆ ಏಪ್ರಿಲ್ 24ರಂದು ತಡರಾತ್ರಿ ಮೆಜೆಸ್ಟಿಕ್‌ ಅಣ್ಣಮ್ಮ ದೇವಸ್ಥಾನ ಸಮೀಪ ಹಾದು ಹೋಗುವುದಿತ್ತು. ಅದನ್ನು ನೋಡುವುದಕ್ಕೆ ಎಂದು ಶೇಷಾದ್ರಿಪುರದ ವಿವಿಗಿರಿ ಕಾಲನಿಯ ಸಾರಥಿ ಮೆಜೆಸ್ಟಿಕ್‌ ಅಣ್ಣಮ್ಮ ದೇವಸ್ಥಾನ ಸಮೀಪ ಬಂದಿದ್ದ. ಅಲ್ಲಿ ರಸ್ತೆಯಲ್ಲಿ ಭಾರಿ ಸಂಖ್ಯೆಯ ಜನ ಸೇರಿದ್ದರು. ಕೆಲವು ಬಾಲಕರು ಅಣ್ಣಮ್ಮನ ಡ್ಯಾನ್ಸ್ ಮಾಡುತ್ತಿದ್ದರು. ಸಾರಥಿ ಕೂಡ ನೃತ್ಯ ಮಾಡಲು ಸೇರಿದ್ದ. ನಸುಕಿನ 3.30ರ ಸುಮಾರಿಗೆ ನೃತ್ಯ ಮಾಡುವಾಗ ಸಾರಥಿಯ ಕೈ ನೃತ್ಯ ಮಾಡುತ್ತಿದ್ದ ಇನ್ನೊಬ್ಬನ ಮೈಗೆ ತಾಗಿತ್ತು. ಇದರಿಂದ ಪರಸ್ಪರ ತಳ್ಳಾಟ ನಡೆಯಿತು. ವಾಕ್ಸಮರದೊಂದಿಗೆ ಶುರುವಾಗಿದ್ದ ಸಂಘರ್ಷ ಬಾಲಕ ಸಾರಥಿಯ ಕೊಲೆಯಲ್ಲಿ ಕೊನೆಯಾಗಿದೆ. ನಾಲ್ವರು ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರೋಪಿಗಳು ಸಾರಥಿ ಮೇಲೆ ಹಲ್ಲೆ ನಡೆಸುವಾಗ ಅಲ್ಲೇ ಹೂವು ಕತ್ತರಿಸಲು ಇರಿಸಿದ್ದ ಎರಡು ಇಂಚಿನ ಕಟರ್ ಬಳಸಿದ್ದರು. ಅದನ್ನು ಸಾರಥಿಯ ಎದೆ ಹಾಗೂ ದೇಹದ ಹಲವೆಡೆ ಇರಿದಿದ್ದರು. ಗಂಭೀರ ಗಾಯಗೊಂಡಿದ್ದ ಸಾರಥಿಯನ್ನು ಸ್ಥಳೀಯರು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಸಾರಥಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಮೆಜೆಸ್ಟಿಕ್‌ ಅಣ್ಣಮ್ಮ ದೇವಸ್ಥಾನ ಸಮೀಪ ಬಾಲಕ ಸಾರಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ಕೂಡ ಬಾಲಕರು ಎಂಬುದು ಗೊತ್ತಾಗಿದೆ. ಆ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ಬಾಲಕರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಕೃತ್ಯವೆಸಗಿದವರ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 30 ವರ್ಷದ ಆರೋಪಿ ಬಂಧನ

ಬೆಂಗಳೂರಿನ ಕೆ ಆರ್ ಪುರ ವ್ಯಾಪ್ತಿಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಕೋಲ್ಕತ ಮೂಲದ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೂಲಿ ಕಾರ್ಮಿಕ ಮಂಜುಮ್ (30) ಎಂದು ಗುರುತಿಸಲಾಗಿದೆ. ಈತ ಕೆಲವು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ. ಬಾಲಕಿಯ ಪಾಲಕರು ನೀಡಿದ್ದ ದೂರು ಆಧರಿಸಿ ಈತನನ್ನು ಸೆರೆ ಹಿಡಿಯಲಾಗಿದೆ’ ಎಂದು ಕೆಆರ್ ಪುರ ಠಾಣೆ ಪೊಲೀಸರು ಹೇಳಿದರು.

ಆರೋಪಿ ಮತ್ತು ಬಾಲಕಿ ಒಂದೇ ಪ್ರದೇಶದವರು. ಏಪ್ರಿಲ್ 18ರಂದು ಬಾಲಕಿಯ ಪಾಲಕರು ಹೊರ ಹೋಗಿದ್ದ ಸಂದರ್ಭದಲ್ಲಿ ಆರೋಪಿ, ಮನೆಗೆ ನುಗ್ಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಪಾಲಕರು ಮನೆಗೆ ಬಂದಾಗ ಅಸ್ವಸ್ಥಳಾಗಿ ಬಿದ್ದುಕೊಂಡಿದ್ದ ಬಾಲಕಿಯನ್ನು ನೋಡಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದಾಗಿ ತಿಳಿಸಿದ್ದರು.

ಇದರಂತೆ ಬಾಲಕಿಯ ಪಾಲಕರು ಪೊಲೀಸ್ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿ ಮಂಜುಮ್‌ ಅನ್ನು ಬಂಧಿಸಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಪ್ರಕರಣ ದಾಖಲಿಸಿದರು.

IPL_Entry_Point